ಬೆಂಗಳೂರು(ಏ.13): ಕೊರೋನಾ ಸೋಂಕು ತಾಂಡವವಾಡುತ್ತಿರುವ ಅಮೆರಿಕದ ಅನಿವಾಸಿ ಕನ್ನಡಿಗರ ಸ್ಥಿತಿಗತಿ ಅರಿಯಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಭಾನುವಾರ ರಾತ್ರಿ ವಿಡಿಯೋ ಸಂವಾದ ನಡೆಸಿ ಅನಿವಾಸಿ ಕನ್ನಡಿಗರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ‘ಕನ್ನಡಿಗರಿಗೆ ಯಾವುದೇ ಸಮಸ್ಯೆಯಾದರೂ ನಮ್ಮ ಗಮನಕ್ಕೆ ತನ್ನಿ. ಕನ್ನಡಿಗರ ರಕ್ಷಣೆಗೆ ಸರ್ಕಾರದ ವತಿಯಿಂದ ಅಗತ್ಯ ಸಹಕಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು.

‘ಅಮೆರಿಕದಲ್ಲಿ ತುಂಬಾ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ನಿತ್ಯ ಸಾವಿರಾರು ಸಾವುಗಳು ಉಂಟಾಗುತ್ತಿರುವುದರಿಂದ ನಮ್ಮ ಕನ್ನಡಿಗರ ಸ್ಥಿತಿಗತಿ ಅರಿಯಲು ನಿಮ್ಮ ಜೊತೆ ಮಾತುಕತೆ ನಡೆಸುತ್ತಿದ್ದೇನೆ. ನಮ್ಮ ದೇಶದ ಹಾಗೂ ರಾಜ್ಯದ ಜನತೆಗೆ ಯಾವುದಾದರೂ ಸಮಸ್ಯೆ ಉಂಟಾಗಿದ್ದರೆ ಗಮನಕ್ಕೆ ತನ್ನಿ. ಸಮಸ್ಯೆಗೆ ಒಳಗಾಗಿರುವವರ ಅಂಕಿ-ಅಂಶಗಳಿದ್ದರೆ ಹಂಚಿಕೊಳ್ಳಿ’ ಎಂದು ಹೇಳಿದರು.

ಸ್ವಿಡನ್ ಭಾವ, ಅಮೆರಿಕಾ ಅತ್ತಿಗೆ, ನ್ಯೂಜಿಲೆಂಡ್ ಅತ್ತೆಯ ಕೊರೋನಾ ಕಥೆ- ವ್ಯಥೆಗಳಿವು!

ಈ ವೇಳೆ ಮಾತನಾಡಿದ ಅಮೇರಿಕಾ ಕನ್ನಡ ಕೂಟಗಳ ಸಂಘ (ಅಕ್ಕ) ಗೌರವ ಅಧ್ಯಕ್ಷ ಅಮರನಾಥ್‌ ಗೌಡ, ‘ಪ್ರಸ್ತುತ ನಮಗಿರುವ ಮಾಹಿತಿ ಪ್ರಕಾರ 5 ಮಂದಿ ಭಾರತೀಯರು ಕೊರೋನಾ ಸೋಂಕಿನಿಂದ ಇಲ್ಲಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್‌ ಕನ್ನಡಿಗರು ಯಾರೂ ಸೋಂಕಿನಿಂದ ಮೃತಪಟ್ಟಿಲ್ಲ. ಈ ಬಗ್ಗೆ ಗಮನ ಹರಿಸುತ್ತಿದ್ದು ಪರಿಸ್ಥಿತಿ ಬಗ್ಗೆ ಕಾಲ-ಕಾಲಕ್ಕೆ ತಮಗೆ ಮಾಹಿತಿ ನೀಡಲಾಗುವುದು. ನಿಮ್ಮಿಂದ ಅಗತ್ಯ ಸಹಕಾರ ಬೆಕಿದ್ದರೂ ಮನವಿ ಮಾಡಲಾಗುವುದು’ ಎಂದು ಹೇಳಿದರು ಎಂದು ತಿಳಿದುಬಂದಿದೆ.

‘ಕನ್ನಡಿಗರ ಸ್ಥಿತಿಗತಿ ಬಗ್ಗೆ ಕಾಲಕಾಲಕ್ಕೆ ನಿಗಾ ವಹಿಸುತ್ತಿದ್ದೇವೆ. ಯಾವುದೇ ಅಪಾಯ ಎದುರಾದರೂ ನಿಮ್ಮ ಗಮನಕ್ಕೆ ತರುತ್ತೇವೆ. ನೆರವು ಬೇಕಿದ್ದರೂ ಕೇಳುತ್ತೇವೆ ದಯವಿಟ್ಟು ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.

ಈ ವೇಳೆ, ‘ಕನ್ನಡಿಗರು ಸುರಕ್ಷಿತವಾಗಿರಿ. ಯಾವುದೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತನ್ನಿ. ರಾಜ್ಯ ಸರ್ಕಾರ ನಿಮಗಾಗಿ ಎಲ್ಲಾ ರೀತಿಯ ಸಹಕಾರ ನೀಡಲಿದೆ’ ಎಂದು ಸಿಎಂ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಗಲ್ಫ್‌ನಲ್ಲಿರುವ ಭಾರತೀಯರ ಬಗ್ಗೆ ಮೋದಿ ಕಾಳಜಿ, ನಾಯಕರೊಂದಿಗಿನ ಮಾತಿನ ಸಾರಾಂಶ

ವಿಡಿಯೋ ಸಂವಾದದಲ್ಲಿ ಸುತ್ತೂರು ಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಹ ಅನಿವಾಸಿ ಕನ್ನಡಿಗರೊಂದಿಗೆ ಮಾತನಾಡಿದರು. ವಿಡಿಯೋ ಸಂವಾದದಲ್ಲಿ ಅಮೆರಿಕದಿಂದ ಅಕ್ಕಾ ಅಧ್ಯಕ್ಷರಾದ ತುಮಕೂರು ದಯಾನಂದ್‌, ಕಾರ್ಯದರ್ಶಿ ವಿನೋದ್‌ ಹಾಗೂ ಪ್ರಭುದೇವ ಅವರು ಭಾಗವಹಿಸಿದ್ದರು.