Asianet Suvarna News Asianet Suvarna News

ಸ್ವಿಡನ್ ಭಾವ, ಅಮೆರಿಕಾ ಅತ್ತಿಗೆ, ನ್ಯೂಜಿಲೆಂಡ್ ಅತ್ತೆಯ ಕೊರೋನಾ ಕಥೆ- ವ್ಯಥೆಗಳಿವು!

ಜಾಗತೀಕರಣದಿಂದಾಗಿ ವಿಶ್ವವೇ ಒಂದು ಹಳ್ಳಿಯಾಗಿದ್ದು ಹಳೆಯ ಕತೆ. ಇದು ಕೊರೋನಾ ಕಾಲ. ವಿಶ್ವವೇನು, ಹಳ್ಳಿ ಹಳ್ಳಿಗಳೂ ದೂರವಾಗಿರುವ ಸಮಯ. ಮುಖಗವಸು ಬೆಳ್ಳಿ, ಅಂತರ ಬಂಗಾರ ಎಂಬಂಥ ಕಾಲಘಟ್ಟ. ಕಳೆದ ತಿಂಗಳು ನನ್ನ ಸೋದರತ್ತೆ ಕಾಸರಗೋಡಿನಲ್ಲಿ ಕಾಲವಾದರು. ನಾನು ಬಿಡಿ, ಅವರ ಇಬ್ಬರು ಹೆಣ್ಣಮಕ್ಕಳೇ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಅವರ ತಿಥಿ ಕಾರ್ಯಗಳನ್ನು ವಿಡಿಯೋ ಕರೆ ಮೂಲಕ ಪುರೋಹಿತರ ನಿರ್ದೇಶನದಂತೆ ನಡೆಸಬೇಕಾಯಿತು. ನಾವೆಂಥ ತುರ್ತು ಪರಿಸ್ಥಿತಿಯಲ್ಲಿದ್ದೇವೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ. ಇದು ಸ್ಥಳೀಯ ಸಂಗತಿಯಾಯಿತು. ದೇಶ-ವಿದೇಶಗಳಲ್ಲಿ ನೆಲೆಸಿರುವ ನಮ್ಮ ಬಂಧು-ಮಿತ್ರರೂ ಅವರದೇ ಆದ ಸನ್ನಿವೇಶಗಳಲ್ಲಿ ಸಿಲುಕಿದ್ದಾರೆ. ಎಲ್ಲರಿಗೂ, ಅವರವರ ಕತೆಗಳಿವೆ, ವ್ಯಥೆಗಳಿವೆ. ವಿಶ್ವದ ವಿವಿಧ ಭಾಗಗಳಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಚಿತ್ರಣ ನೀಡಲು ನನ್ನ ಪುಟ್ಟಫ್ಯಾಮಿಲಿ ಸರ್ಕಲ್ಲಿನಿಂದ ಐವರನ್ನು ಆಯ್ದು ಸಂದರ್ಶಿಸಿದ್ದೇನೆ. ನ್ಯೂಜಿಲೆಂಡ್‌ನಲ್ಲಿರುವ ಅಣ್ಣನ ಮಗ, ಸ್ವೀಡನ್‌ ನಿವಾಸಿ ಭಾವ, ಅಮೆರಿಕದ ಅತ್ತಿಗೆ, ಸ್ವಿಜರ್ಲೆಂಡ್‌ನ ಅಳಿಯ, ಕೆನಡಾದಲ್ಲಿರುವ ಸೊಸೆ ಅವರ ಅನುಭವ ಹಂಚಿಕೊಂಡಿದ್ದಾರೆ. ಅವರೇನಂತಾರೆ, ನೀವೇ ಓದಿ...

NRIs share a Covid 19 lockdown experiences in their places
Author
Bangalore, First Published Apr 12, 2020, 10:39 AM IST

- ರವಿಶಂಕರ್‌ ಭಟ್‌

ಮೊದಲೇ ನಿರ್ಬಂಧಿಸಿದ್ದರೆ ನ್ಯೂಜಿಲೆಂಡಲ್ಲಿ ಒಂದೂ ಕೇಸು ಇರುತ್ತಿರಲಿಲ್ಲ

- ಡಾ.ಪ್ರೀತಮ್‌ ಕೋಡಿಮೂಲೆ

ದಂತಮೂಳೆ ತಜ್ಞ ಆಕ್ಲೆಂಡ್‌, ನ್ಯೂಜಿಲೆಂಡ್‌

ದಕ್ಷಿಣ ಕನ್ನಡದ ನಾನು ಇರುವುದು ಆಕ್ಲೆಂಡ್‌ನಲ್ಲಿ. ಭಾರತದ ಆಗ್ನೇಯ ದಿಕ್ಕಿಗೆ ದಕ್ಷಿಣ ಧ್ರುವಕ್ಕೆ ಸಮೀಪ ಇರುವ ನ್ಯೂಜಿಲೆಂಡ್‌ ಎಂಬ ದ್ವೀಪರಾಷ್ಟ್ರದ ಉತ್ತರ ಭಾಗದ ನಗರವಿದು. ಓದು ಮುಗಿಸಿ ಔದ್ಯೋಗಿಕ ಉನ್ನತಿಗಾಗಿ ನಾನಿಲ್ಲಿಗೆ ಬಂದು 3 ವರ್ಷಗಳಾದವು. ಇನ್ನೂ ಪೂರ್ಣಪ್ರಮಾಣದ ಉದ್ಯೋಗ ದೊರೆತಿಲ್ಲ. ಅಷ್ಟರಲ್ಲಿ ಮಹಾಮಾರಿ ಕೊರೋನಾ ಇಡೀ ವಿಶ್ವವನ್ನೇ ಆಪೋಶನ ತೆಗೆದುಕೊಳ್ಳುತ್ತಿದೆ.

ಆದರೆ, ಸಾಂಕ್ರಾಮಿಕ ರೋಗ ಅಮೆರಿಕ ಹಾಗೂ ಯುರೋಪ್‌ ರಾಷ್ಟ್ರಗಳಷ್ಟುಇಲ್ಲಿ ತೀವ್ರವಾಗಿಲ್ಲ. ಈವರೆಗೆ ಸೋಂಕಿತರ ಪ್ರಮಾಣ 1000ದ ಆಜುಬಾಜಿನಲ್ಲಿದೆ. ನಾಲ್ವರು ಮೃತಪಟ್ಟಿದ್ದಾರೆ. ಹೆಚ್ಚೂಕಮ್ಮಿ 400 ಮಂದಿ ಚೇತರಿಸಿಕೊಂಡಿದ್ದಾರೆ. ಮಾಚ್‌ರ್‍ 3ನೇ ವಾರದಿಂದ ಲಾಕ್‌ಡೌನ್‌ ಘೋಷಿಸಿರುವ ನ್ಯೂಜಿಲೆಂಡ್‌ ಸರ್ಕಾರ, ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಉತ್ತಮ ಯಶಸ್ಸನ್ನೇ ಕಂಡಿದೆ. ಗ್ರಾಫ್‌ ಮಟ್ಟಸವಾಗುತ್ತಿದೆ. ಹಾಗೆಂದು ಸಂಪೂರ್ಣವಾಗಿ ನಿಗ್ರಹಿಸಲಾಗಿದೆ ಎಂದು ಈಗಲೇ ಹೇಳಲಾಗದು.

ಆಸ್ಟ್ರೇಲಿಯಾದಿಂದ ತವರಿಗೆ ವಾಪಸ್ ಆದ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ದಿಗ್ಬಂಧನ!

ಆದರೆ, ಸೂಪರ್‌ ಮಾರ್ಕೆಟ್‌, ಫಾರ್ಮಸಿಗಳಂತಹ ಅನಿವಾರ್ಯ ಸೇವೆ ಹೊರತುಪಡಿಸಿ ಎಲ್ಲವನ್ನೂ ಕಟ್ಟುನಿಟ್ಟಾಗಿ ಬಂದ್‌ ಮಾಡಲಾಗಿದೆ. ಜನರು ವಾಕಿಂಗ್‌ಗಷ್ಟೇ ಹೊರಬರಬಹುದು. ಹಾಗೆ ಬರುವವರು ದೈಹಿಕ ಅಂತರ ಕಾಪಾಡುವುದು ಕಡ್ಡಾಯ. ಸಂತಸದ ಸಂಗತಿ ಎಂದರೆ ಜನರು ಸರ್ಕಾರದ ಸೂಚನೆಯನ್ನು ಬಹುತೇಕ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ನ್ಯೂಜಿಲೆಂಡ್‌ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಿದೆ. ಆಹಾರ, ಔಷಧ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಜೊತೆಗೆ ಹಣಕಾಸಿನ ನೆರವನ್ನೂ ನೀಡುತ್ತಿದೆ. ಪೂರ್ಣಪ್ರಮಾಣದ ಉದ್ಯೋಗ ಹೊಂದಿರುವವರಿಗೆ ಶೇ.80ರಷ್ಟುವೇತನ, ಅರೆಕಾಲಿಕ ಉದ್ಯೋಗಿಗಳಿಗೆ ಶೇ.60ರಷ್ಟುವೇತನ ದೊರೆಯುವ ಯೋಜನೆಯೊಂದನ್ನು ಜಾರಿಗೊಳಿಸಿದೆ. ಆದರೆ, ಇದು ಲಾಕ್‌ಡೌನ್‌ ಅವಧಿಯವರೆಗೆ ಮಾತ್ರ. ಅದರ ನಂತರ ಏನು ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ. ಒಂದಂತೂ ಖಚಿತ, ಇಲ್ಲಿ ತಕ್ಷಣಕ್ಕೆ ಹಿಂದಿನಷ್ಟುಸುಲಭವಾಗಿ ಕೆಲಸ ಸಿಗುವುದಿಲ್ಲ. ಚೇತರಿಸಿಕೊಳ್ಳಲು ಇನ್ನೆರಡು ವರ್ಷವಾದರೂ ಬೇಕಾದೀತು.

ತಡೆಯಬಹುದಿತ್ತು ಕೊರೋನಾ ವೈರಸ್‌ ಚೀನಾದಲ್ಲಿ ಘಾತಕವೆಸಗುತ್ತಿರುವುದು ಫೆಬ್ರವರಿ ತಿಂಗಳಲ್ಲೇ ಅರಿವಿಗೆ ಬಂದರೂ, ಬಹುತೇಕ ರಾಷ್ಟ್ರಗಳಂತೆ ನ್ಯೂಜಿಲೆಂಡ್‌ ಕೂಡ ಮುನ್ನೆಚ್ಚರಿಕೆ ವಹಿಸುವುದರಲ್ಲಿ ತುಸು ವಿಳಂಬ ಮಾಡಿತು ಎಂಬುದೇ ನನ್ನ ಅನಿಸಿಕೆ. ಪ್ರವಾಸೋದ್ಯಮವನ್ನೇ ಪ್ರಮುಖವಾಗಿ ನೆಚ್ಚಿಕೊಂಡಿರುವ ಈ ದೇಶ, ಕೊರೋನಾ ಹಬ್ಬಲು ಶುರುವಾದಾಗಲೇ ಅಂತಾರಾಷ್ಟ್ರೀಯ ಆಗಮನ-ನಿರ್ಗಮನಗಳನ್ನು ನಿಲ್ಲಿಸಬೇಕಿತ್ತು. ಆದರೆ, ಹಾಗಾಗಲಿಲ್ಲ. ಇರಾನ್‌, ಚೀನಾ, ಇಟಲಿಯಂತಹ ಸೋಂಕು ತೀವ್ರಗೊಂಡಿದ್ದ ದೇಶಗಳಿಂದ ಪ್ರವಾಸಿಗರನ್ನು ನ್ಯೂಜಿಲೆಂಡ್‌ ಬರಗೊಟ್ಟಿತು. ವಲಸೆ ಸಿಬ್ಬಂದಿಯೂ ಅವರ ಬಗ್ಗೆ ಸಡಿಲ ನೀತಿ ಹೊಂದಿದ್ದರು. ಹಾಗೆ ಬಂದ ಅವರೆಲ್ಲ ದಿಗ್ಬಂಧನ ನಿಯಮಗಳನ್ನು ಉಲ್ಲಂಘಿಸಿದರು. ಇತರರಿಗೆ ಸೋಂಕು ಹಬ್ಬಿಸಿದರು. ಒಂದೆರಡು ವಾರ ಮೊದಲೇ ನಿರ್ಬಂಧಗಳನ್ನು ಹೇರಿದ್ದರೆ ನ್ಯೂಜಿಲೆಂಡ್‌ನಲ್ಲಿ ಒಂದೂ ಕೊರೋನಾ ಪ್ರಕರಣ ಇರುತ್ತಿರಲಿಲ್ಲ ಎಂಬುದು ನನ್ನ ದೃಢ ನಂಬಿಕೆ.

*

10 ಸಾವಿರ ಸೋಂಕಿತರಿದ್ದರೂ ಸ್ವೀಡನ್‌ ಲಾಕ್‌ಡೌನ್‌ ಆಗಿಲ್ಲ

ಪ್ರದೀಪ ಪಂಜಿಗದ್ದೆ

ಕ್ಯಾನ್ಸರ್‌ ಕೋಶ ವಿಜ್ಞಾನಿ ಸ್ಟಾಕ್‌ಹೋಮ್‌, ಸ್ವೀಡನ್‌

ಸುಮಾರು 10 ಸಾವಿರ ಜನರಿಗೆ ಸೋಂಕು ತಗುಲಿದೆ. 850ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಾಗಂತ ಸ್ವೀಡನ್‌ ಸರ್ಕಾರ ಇತರೆ ದೇಶಗಳಂತೆ ಲಾಕ್‌ಡೌನ್‌ ಮಾಡಿಲ್ಲ.

50 ಜನಕ್ಕಿಂತ ಹೆಚ್ಚು ಗುಂಪುಗೂಡಬಾರದು ಎಂಬುದೊಂದು ಬಿಟ್ಟರೆ ಬೇರಾವ ಕಠಿಣ ನಿರ್ಬಂಧವನ್ನೂ ಹೇರಿಲ್ಲ. ಜನರಿಗೆ ಒಂದಷ್ಟುಸಲಹೆ, ಶಿಫಾರಸು ಮಾಡಿದೆ. ಸಾರ್ವಜನಿಕರು ಅದನ್ನು ಪಾಲಿಸುತ್ತಿದ್ದಾರೆ. ಹಾಗಂತ ಎಲ್ಲರೂ ಮಾಸ್ಕ್‌ ಧರಿಸಿಕೊಂಡು ಓಡಾಡುತ್ತಿಲ್ಲ. ಏಷ್ಯನ್ನರು ಅತಿಹೆಚ್ಚು ಜಾಗರೂಕರಾಗಿದ್ದಾರೆ. ಅವರು ಮುಖಗವಸು ಧರಿಸದೆ ಹೊರಬೀಳುತ್ತಿಲ್ಲ. ಕೆಫೆ-ಬಾರು, ಶಾಲೆ, ಜಿಮ್ಮು-ಸ್ವಿಮ್ಮಿಂಗ್‌ ಪೂಲ್‌, ಮಾಲ್‌, ಸೂಪರ್‌ ಮಾರ್ಕೆಟ್‌ ತೆರೆದೇ ಇವೆ. ವಿಶೇಷವಾಗಿ ಸ್ಕೀಯಿಂಗ್‌ ರೆಸಾರ್ಟ್‌ ಎಂದಿನಂತಿವೆ.

ಸರ್ಕಾರ ಈ ನಿಲುವು ತಾಳಲು ವಿಶೇಷ ಕಾರಣಗಳಿವೆ. ಉತ್ತರ ಯುರೋಪ್‌ ದೇಶ ಸ್ವೀಡನ್‌ನಲ್ಲಿ ಸಾಕಷ್ಟುವೃದ್ಧಾಶ್ರಮಗಳಿವೆ. ವೃದ್ಧರಿಗೆ ಕೊರೋನಾ ಬೇಗನೆ ಹರಡಿಬಿಡುತ್ತದೆ ಎಂಬುದನ್ನು ಸ್ವೀಡನ್‌ ಮನಗಂಡಿದೆ. ಹಾಗಾಗಿ, ದೇಶದಲ್ಲಿ ಶೇ.20ರಷ್ಟಿರುವ ವೃದ್ಧರಿಗೆ ಸೋಂಕು ಹಬ್ಬದಂತೆ ಎಚ್ಚರಿಕೆ ವಹಿಸುತ್ತಿದೆ. ವೃದ್ಧಾಶ್ರಮಕ್ಕೆ ಜನರ ಭೇಟಿ ನಿಷೇಧಿಸಿದೆ. ಉಳಿದ ಶೇ.80 ಜನರಿಗೆ ಸೋಂಕು ತಗುಲಿದರೂ, ಅವರಿಗೆ ಸಾಮೂಹಿಕ ನಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ ಎಂಬುದು ಸ್ವೀಡನ್‌ ಸರ್ಕಾರದ ನಂಬಿಕೆ. ಆದರೆ, ಇದು ಅತ್ಯುತ್ತಮ ಮಾರ್ಗ ಎನ್ನಲಾಗದು.

ನಾನಿಲ್ಲಿಗೆ ಬಂದು 10 ವರ್ಷಗಳಾದವು. ಸ್ಟಾಕ್‌ಹೋಮ್‌ ಹೊರವಲಯದಲ್ಲಿರುವ ಕ್ಯಾರೋಲಿನ್ಸಾ$್ಕ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಾನು ಹಿರಿಯ ವಿಜ್ಞಾನಿ ಹಾಗೂ ಪ್ರಯೋಗಾಲಯದ ಉಪಮುಖ್ಯಸ್ಥ. ಚೀನಾದಲ್ಲಿ ಕೊರೋನಾ ಹಬ್ಬಿರುವ ವಿಚಾರ ನನ್ನ ಗಮನಕ್ಕೆ ಜನವರಿಯಲ್ಲೇ ಬಂದಿತ್ತು. ಅದನ್ನು ಅವರಲ್ಲೇ ಹತ್ತಿಕ್ಕಬಹುದು ಅಂದುಕೊಂಡಿದ್ದೆ. ಆದರೆ ಅವರು ವಿಫಲರಾದರು. ವೈರಸ್‌ ನಾನಿರುವಲ್ಲಿಗೂ ಬಂತು.

ಅನಿವಾರ್ಯವಾಗಿ ನಾವು ನಮ್ಮ ತಂಡವನ್ನು ಇಬ್ಭಾಗ ಮಾಡಿದ್ದೇವೆ. ಒಂದು ತಂಡ ಕಚೇರಿಯಲ್ಲಿ ಕೆಲಸ ನಿರ್ವಹಿಸಿದರೆ, ಮತ್ತೊಂದು ತಂಡ ಮನೆಯಿಂದ ಕೆಲಸ ಮಾಡುತ್ತಿದೆ. ಹೀಗಾಗಿ, ನನಗೀಗ ಸಾಕಷ್ಟುಸಮಯಾವಕಾಶ ಆಗುತ್ತಿದ್ದು, ಅದನ್ನು ನನ್ನ ಹವ್ಯಾಸಗಳಿಗೆ ಬಳಸಿಕೊಳ್ಳುತ್ತೇನೆ. ಯೋಗ, ಪ್ರಾಣಾಯಾಮ ಅಭ್ಯಸಿಸುತ್ತೇನೆ. ಪಾಠ ಮಾಡುತ್ತೇನೆ. ಅದಕ್ಕೆಂದೇ ವೆಬ್‌ಸೈಟ್‌ ಕೂಡ ಇದೆ. ಅದನ್ನು ಪರಿಷ್ಕರಿಸುತ್ತಿದ್ದೇನೆ. ನನಗೆ ಪ್ರಕೃತಿಯ ಜತೆಗೆ ಬೆರೆಯುವ ಅಭ್ಯಾಸವಿದೆ. ನಾನು ಮತ್ತು ನನ್ನ ಗೆಳೆಯ ಡ್ರೋನ್‌ ಬಳಸಿ ನಿಸರ್ಗದ ಸುಂದರ ದೃಶ್ಯಗಳನ್ನು ಸೆರೆಹಿಡಿದಿದ್ದೇವೆ. ಬಿಡುವಿನಲ್ಲಿ ಅವುಗಳನ್ನು ಸಂಕಲಿಸುತ್ತಾ ಕಾಲ ಕಳೆಯುತ್ತಿದ್ದೇವೆ. ನಾನು ಸ್ಟಾಕ್‌ಹೋಮ್‌ ನಗರಕ್ಕೆ ಹೋಗದೆ 3 ವಾರಗಳಾದವು. ನನಗೆ ತಿಳಿದಂತೆ ಅಲ್ಲಿನ ಆಸ್ಪತ್ರೆಗಳೆಲ್ಲ ತುಂಬಿ ಹೋಗಿವೆ. ತಾತ್ಕಾಲಿಕ ಶುಶ್ರೂಷಾ ಕೇಂದ್ರಗಳನ್ನು ತೆರೆಯಲಾಗಿದೆಯಂತೆ. ನನ್ನ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸ್ಥಿತಿ ಅಷ್ಟೇನೂ ಗಂಭೀರವಾಗಿಲ್ಲ. ಆದರೆ, ಟೀವಿಯಲ್ಲಿ ಬರುವ ಸುದ್ದಿ ನೋಡಿದರೆ ಭಯವಾಗುವಂತಿದೆ.

ನನ್ನ ಅಂದಾಜಿನ ಪ್ರಕಾರ ಇವೆಲ್ಲವೂ ನಿಯಂತ್ರಣಕ್ಕೆ ಬರಲು 2-3 ತಿಂಗಳು ಬೇಕಾದೀತು. ಕೊರೋನಾ ಬಿಕ್ಕಟ್ಟಿನಿಂದ ದೇಶ ಚೇತರಿಸಿಕೊಳ್ಳಲು 1 ವರ್ಷವೇ ಆದೀತು.

*

ಭಾರತದ ಮೂರು ಪಟ್ಟು ಕೇಸು ನಮ್ಮ ರಾಜ್ಯದಲ್ಲಿದೆ

ಅಂಜಲಿ ಶರ್ಮಾ

ಮಾಹಿತಿ ತಂತ್ರಜ್ಞಾನ ತಜ್ಞೆ ಆನ್‌ ಆರ್ಬರ್‌, ಅಮೆರಿಕ ಸಂಯುಕ್ತ ಸಂಸ್ಥಾನ

ದಿನಾ ಓಡುತ್ತಲೇ ಇದ್ದ ನಾವು ನಾಲ್ವರನ್ನೂ ಮನೆಯಲ್ಲಿ ಕಟ್ಟಿಹಾಕಿದಂತಾಗಿದೆ ಅಂದರೆ ತಮಾಷೆ ಅನ್ನಿಸೀತು. ಆದರಿದು ಕಟು ವಾಸ್ತವ. ಕರ್ನಾಟಕ ಕರಾವಳಿ ಮೂಲದ ನಾವು ಅಮೆರಿಕ ಸಂಯುಕ್ತ ಸಂಸ್ಥಾನದ ಉತ್ತರ ಭಾಗದ ರಾಜ್ಯವಾದ ಮಿಷಿಗನ್‌ನಲ್ಲಿ ನೆಲೆಸಿ 2 ದಶಕ ಕಳೆದವು. ನಾನು, ನನ್ನ ಪತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ. ನಮಗಿಬ್ಬರು ಹೆಣ್ಮಕ್ಕಳು. ಅವರು ಓದು, ತರಬೇತಿಗಳಲ್ಲಿ ವ್ಯಸ್ತರಾಗಿದ್ದಾರೆ. ನನಗಂತೂ 35 ಮೈಲಿ ದೂರದ ಡೆಟ್ರಾಯಿಟ್‌ ನಗರಕ್ಕೆ ನಿತ್ಯ ಕಾರು ಡ್ರೈವ್‌ ಮಾಡುತ್ತ ಹೋಗಿ ಬರಲು ತಲಾ 40 ನಿಮಿಷ ತಗಲುತ್ತಿತ್ತು. ಈ ಕೊರೋನಾ ನಮ್ಮೆಲ್ಲರ ವೇಗದ ಜೀವನಕ್ಕೆ ಬ್ರೇಕ್‌ ಹಾಕಿದೆ.

ಹಾಗೆ ಹಿಂತಿರುಗಿ ನೋಡುವುದಾದರೆ, ಕೊರೋನಾ ಮಹಾಮಾರಿಯ ಬಗ್ಗೆ ಡಿಸೆಂಬರ್‌ನಲ್ಲೇ ಕೇಳಿದ್ದೆ. ಆದರೆ, ಅದು ಅಮೆರಿಕಕ್ಕೆ ಕಾಲಿಟ್ಟೀತು ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ವಾಷಿಂಗ್ಟನ್‌ ರಾಜ್ಯದ ಸಿಯಾಟಲ್‌ ನಗರದಲ್ಲಿ ಮೊದಲ ಪ್ರಕರಣ ಪತ್ತೆಯಾದಾಗಲೇ ನಮ್ಮ ಹಡಗಿಗೂ ತೂತು ಬಿದ್ದಿದೆ ಎಂಬ ಅರಿವಾದದ್ದು. ಮಾಚ್‌ರ್‍

ಮಧ್ಯಭಾಗದಲ್ಲಿ ನಮಗೆ ವರ್ಕ್ ಫ್ರಂ ಹೋಮ್‌ ಜಾರಿಯಾಯಿತು. ತಡವಾಗಿ ಎಚ್ಚೆತ್ತ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಬಿಗಿ ನಿರ್ಬಂಧ ಹೇರಲು ಆರಂಭಿಸಿದೆ. 33 ಕೋಟಿ ಜನರಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. ನಾವಿರುವ ಮಿಷಿಗನ್‌ ರಾಜ್ಯವೊಂದರಲ್ಲೇ 23,000ಕ್ಕೂ ಮಿಗಿಲಾದ ಪ್ರಕರಣಗಳು ಬೆಳಕಿಗೆ ಬಂದಿವೆ. 130 ಕೋಟಿ ಜನರಿರುವ ಭಾರತದಲ್ಲಿ ಪತ್ತೆಯಾದುದರ 3 ಪಟ್ಟು ಪ್ರಕರಣಗಳು ನಾವಿರುವ ರಾಜ್ಯವೊಂದರಲ್ಲೇ ಬೆಳಕಿಗೆ ಬಂದಿವೆಯೆಂದರೆ ಇಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ.

ನಾವೀಗ ಮನೆಯೊಳಗೆ ಸೇರಿಕೊಂಡು 3 ವಾರಗಳೇ ಕಳೆದವು. ನಿತ್ಯವೂ ನಾವು ನಾಲ್ವರೂ ಕೂತು ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸುತ್ತೇವೆ. ಈ ಮೂಲಕ ಒತ್ತಡ ನೀಗುವ ಪ್ರಯತ್ನ ಮಾಡುತ್ತೇವೆ. ಮಕ್ಕಳು ಆನ್‌ಲೈನ್‌ ಮೂಲಕ ತರಗತಿಗಳನ್ನು ಪಡೆಯಲಾರಂಭಿಸಿದ್ದಾರೆ. ಕಷ್ಟವಾದರೂ ನಾವಿಬ್ಬರೂ ಮನೆಯಿಂದಲೇ ಕೆಲಸ ರೂಢಿಸಿಕೊಳ್ಳುತ್ತಿದ್ದೇವೆ. ಡ್ರೈವಿಂಗ್‌ ಮಾಡುವ ಚಿಂತೆ ಇಲ್ಲ. ಕುಟುಂಬಕ್ಕೆ ಹೆಚ್ಚು ಸಮಯ ಕೊಡುತ್ತಿದ್ದೇವೆ. ಹವ್ಯಾಸಗಳಿಗೆ ಮರುಜೀವ ದೊರೆತಿದೆ. ಆದರೆ, ಮನೆಗೆ ಬೇಕಾದ ಅತ್ಯಗತ್ಯ ವಸ್ತುಗಳನ್ನು ತರುವುದೇ ದೊಡ್ಡ ಸವಾಲು. ಅದಕ್ಕಿಂತ ಮಿಗಿಲಾಗಿ, ಕೋವಿಡ್‌-19 ಹೊರತಾದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ವೈದ್ಯರು ವೀಕ್ಷಿಸಿ ಔಷಧ ಸೂಚಿಸುತ್ತಾರೆ. ಇದು ಸ್ವಲ್ಪ ಆತಂಕದ ವಿಚಾರವೇ. ಅನಿವಾರ್ಯತೆ ನಮ್ಮನ್ನು ಕಟ್ಟಿಹಾಕಿದೆ. ಭವಿಷ್ಯ ಸಲೀಸಾಗಿ ಇರುವುದಿಲ್ಲ ಎಂಬುದಂತೂ ನಿಶ್ಚಿತ. ಈಗಾಗಲೇ ಹಲವು ಕಂಪನಿಗಳು ಮುಚ್ಚುವ ಆತಂಕದಲ್ಲಿವೆ. ಇನ್ನು ಕೆಲವು ಕಂಪನಿಗಳು ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುತ್ತಿವೆ. ಜನರಲ್ಲಿ ಆರೋಗ್ಯ ಸಮಸ್ಯೆಗಳು, ಖಿನ್ನತೆ ಕಾಣಿಸಿಕೊಳ್ಳತೊಡಗಿದೆ. ಇದರಿಂದ ಹೊರಬರಲು ಅದೆಷ್ಟುಕಾಲ ಬೇಕಾದೀತೋ..

*

ಪರಾವಲಂಬನೆಯೇ ಸ್ವಿಜರ್ಲೆಂಡ್‌ಗೆ ಮುಳುವಾಯಿತು

ಡಾ.ವಿಕ್ರಮ ರಾಜಾ,

ವೈದ್ಯಕೀಯ ಸಲಹೆಗಾರ, ಬಾಸೆಲ್‌, ಸ್ವಿಜರ್ಲೆಂಡ್‌

ನಾನು ಬೆಂಗಳೂರಿನವನು. ವೈದ್ಯನಾದರೂ, ವೈದ್ಯಕೀಯ ಸಲಹೆ ವೃತ್ತಿ ಆಯ್ದುಕೊಂಡು 1 ವರ್ಷ ಹಿಂದಷ್ಟೇ ಭೂಲೋಕ ಸ್ವರ್ಗ ಸ್ವಿಜರ್ಲೆಂಡ್‌ಗೆ ಪತ್ನಿ ಕಾವೇರಿ ಸಹಿತನಾಗಿ ಬಂದು ನೆಲೆಸಿದ್ದೇನೆ. ಆಕೆಯೂ ವೈದ್ಯೆ. ಕರ್ನಾಟಕದ ಐದನೇ ಒಂದು ಭಾಗದಷ್ಟಿರುವ ದೇಶ ಸ್ವಿಜರ್ಲೆಂಡ್‌. ಉತ್ತರಕ್ಕೆ ಜರ್ಮನಿ, ಪಶ್ಚಿಮಕ್ಕೆ ಫ್ರಾನ್ಸ್‌, ದಕ್ಷಿಣಕ್ಕೆ ಇಟಲಿಯೊಂದಿಗೆ ಗಡಿ ಹಂಚಿಕೊಂಡಿರುವ ದೇಶವಿದು. ಆದರೆ, ಔದ್ಯಮಿಕ, ಹಣಕಾಸು ಕ್ಷೇತ್ರಗಳಲ್ಲಿ ಜಾಗತಿಕ ಹಾಟ್‌ಸ್ಪಾಟ್‌. ಆದರೀಗ ಕೊರೋನಾ ಹಾಟ್‌ಸ್ಪಾಟ್‌ ದೇಶಗಳ ನಡುವೆ ಸಿಲುಕಿ ನಲುಗುತ್ತಿದೆ. ಅಂದಾಜು 24,500 ಸೋಂಕಿತರಿದ್ದಾರೆ. 1000 ಮಂದಿ ಅಸುನೀಗಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಸ್ವಿಜರ್ಲೆಂಡ್‌ನ ಭೌಗೋಳಿಕ ಸ್ಥಿತಿಗತಿ.

ಕಾರ್ಮಿಕ ವರ್ಗ ಸೇರಿದಂತೆ ಹೆಚ್ಚಿನೆಲ್ಲವಕ್ಕೂ ನೆರೆದೇಶಗಳನ್ನೇ ನೆಚ್ಚಿಕೊಂಡಿದೆ ಸ್ವಿಜರ್ಲೆಂಡ್‌. ಫ್ರಾನ್ಸ್‌, ಇಟಲಿ, ಜರ್ಮನಿಗಳಿಂದ ನಿತ್ಯ ಲಕ್ಷಾಂತರ ಜನರು ಗಡಿ ದಾಟಿ ಬಂದು ಹೋಗುತ್ತಾರೆ. ಅಂತೆಯೇ, ಯುರೋಪ್‌ನಲ್ಲಿ ಮೊದಲು ಅತಿ ಹೆಚ್ಚು ಸೋಂಕು, ಸಾವುಗಳನ್ನು ಕಂಡ ಇಟಲಿಯ ಉತ್ತರ ಭಾಗದಲ್ಲಿ ಕೊರೋನಾ ಬಾಧೆ ತೀವ್ರವಾಗಿದ್ದ ಕಾಲದಲ್ಲಿ ಇಟಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಿತ್ತು. ಆದರೆ, ಸ್ವಿಜರ್ಲೆಂಡ್‌ ಮಾತ್ರ ಇಟಲಿಯಿಂದ ಜನರು ಬಂದು ಹೋಗಲು ಅವಕಾಶ ನೀಡಿತ್ತು. ಫ್ರಾನ್ಸ್‌ನಿಂದಲೂ ಜನರ ಓಡಾಟ ಮುಂದುವರಿದಿತ್ತು. ಸೋಂಕು ಹೆಚ್ಚುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿತು. ಇದು ‘ಅಸಾಧಾರಣ ಪರಿಸ್ಥಿತಿ’ ಎಂದು ಘೋಷಿಸಿತು. ದಿನಸಿ, ತೈಲ, ಔಷಧ ಮತ್ತಿತರೆ ತುರ್ತು ಅಗತ್ಯಗಳನ್ನು ಹೊರತುಪಡಿಸಿ ಎಲ್ಲವನ್ನೂ ಬಂದ್‌ ಮಾಡಿತು. ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಆದೇಶಿಸಿತು. ಸರ್ಕಾರ ಹೇಳಿದ ಮೇಲೆ ಕೇಳಬೇಕೆ? ಹೆಚ್ಚಿನೆಲ್ಲ ಜನ

ನಿಯಮ ಪಾಲನೆ ಮಾಡುತ್ತಿದ್ದಾರೆ. ದೈಹಿಕ ಅಂತರ ಕಾಪಾಡುತ್ತಿದ್ದಾರೆ. ಪ್ರತಿ ಅಂಗಡಿಯ ದ್ವಾರದಲ್ಲೂ ಸ್ಯಾನಿಟೈಸರ್‌ ಇದೆ. ಜನಜಂಗುಳಿ ಆಗದಂತೆ ವ್ಯವಸ್ಥೆ ರೂಪಿಸಲಾಗಿದೆ. ಕೊರೋನಾ ಬಾಧಿತರ ನೆರವಿಗಾಗಿ ಸೇನಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಇದರ ಪರಿಣಾಮವೋ, ಸ್ವಿಜರ್ಲೆಂಡ್‌ನ ವೈದ್ಯಕೀಯ ಸೌಲಭ್ಯ ಚೆನ್ನಾಗಿರುವ ಕಾರಣವೋ, ಸೋಂಕು ಹಾಗೂ ಸಾವಿನ ಏರುಗತಿ ತಕ್ಕಮಟ್ಟಿಗೆ ತಹಬದಿಗೆ ಬರುತ್ತಿದೆ.

ಇತ್ತ ವೃತ್ತಿಪರನಾಗಿ ನನಗೆ ಅನೇಕ ಅಡಚಣೆಗಳು ಉಂಟಾಗಿವೆ. ನಮ್ಮ ಸಂಸ್ಥೆಯ ಅನೇಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ನಾನು ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‌, ದುಬೈ, ರಷ್ಯಾಗಳಿಗೆ ಹೋಗಬೇಕಿತ್ತು. ಆದರೆ, ಮಾಚ್‌ರ್‍ ಅಂತ್ಯದಿಂದ ವರ್ಕ್ ಫ್ರಂ ಹೋಮ್‌ ಮಾಡುತ್ತಿದ್ದೇನೆ. ಅದಕ್ಕಾಗಿ ತಂತ್ರಜ್ಞಾನಕ್ಕೆ ಧನ್ಯವಾದ ಹೇಳಬೇಕು.

ವೈಯಕ್ತಿಕವಾಗಿ ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ತರಕಾರಿಯನ್ನು ಉಪ್ಪು ನೀರು, ಅರಿಶಿನದಲ್ಲಿ ತೊಳೆದು, ಒಣಗಿಸಿ ಉಪಯೋಗಿಸುತ್ತಿದ್ದೇವೆ. ಹೊರಗಿನಿಂದ ತಂದ ವಸ್ತುಗಳನ್ನು ರೋಗನಾಶಕ ಬಳಸಿದ ಮೇಲೆಯೇ ಮನೆಯೊಳಕ್ಕೆ ತರುತ್ತಿದ್ದೇವೆ. ಈ ಸಂಕಷ್ಟಆದಷ್ಟುಬೇಗನೆ ಪರಿಹಾರವಾಗಬಹುದು ಎಂಬ ನಿರೀಕ್ಷೆಯಲ್ಲಿ ದಿನ

ದೂಡುತ್ತಿದ್ದೇವೆ. ಆಶಾವಾದ ಇಲ್ಲದೆ ಬದುಕೆಲ್ಲಿದೆ, ಅಲ್ಲವೆ?

---

ಕೆನಡಾದಲ್ಲಿ ಕೊರೋನಾ ಜತೆಗೆ ಕಳ್ಳರ ಕಾಟ!

ಡಾ. ಸಹನಾ ಗೋಪಾಲ್‌

ವೈದ್ಯಕೀಯ ವಿದ್ಯಾರ್ಥಿ ಟೊರೊಂಟೋ, ಕೆನಡಾ

ಇಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಎಲ್ಲರೂ ಕಟ್ಟುನಿಟ್ಟಾಗಿ ಮನೆಯಲ್ಲೇ ಇರುವಂತೆ ಮಾಡಲಾಗಿದೆ. ಸೋಂಕು ತಡೆಯಲು ಕೆನಡಾ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಆದರೇನು ಮಾಡುವುದು? ಈಗಾಗಲೇ ತಡವಾಗಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಬಾಧಿತವಾಗಿರುವ ನ್ಯೂಯಾರ್ಕ್ ರಾಜ್ಯದ ಜತೆಗೆ ಗಡಿ ಹಂಚಿಕೊಂಡಿರುವ ಕೆನಡಾದ ಆಂಟಾರಿಯೋ ಪ್ರಾಂತ್ಯದ ನಡುವಣ ಓಡಾಟ ನಿರ್ಬಂಧಿಸಲು ವಿಳಂಬಿಸಿದ್ದಕ್ಕೆ ಬೆಲೆ ತೆತ್ತಾಗಿದೆ. ಜತೆಗೆ, ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯ ಚೀನಿಯರೂ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ತತ್ಪರಿಣಾಮ, ಸುಮಾರು 22 ಸಾವಿರ ಕೆನಡಿಯನ್ನರಿಗೆ ಸೋಂಕು ತಗುಲಿದೆ. ಅಂದಾಜು 57ಸ0ರಷ್ಟುಜನರು ಅಸುನೀಗಿದ್ದಾರೆ.

ವಿಸ್ತೀರ್ಣದಲ್ಲಿ ರಷ್ಯಾ ನಂತರ ವಿಶ್ವದಲ್ಲೇ 2ನೇ ಅತಿದೊಡ್ಡ ದೇಶ ಕೆನಡಾ. ಗಾತ್ರದಲ್ಲಿ ಭಾರತದ 3 ಪಟ್ಟು ಇದೆ. ಆದರೆ, ಜನಸಂಖ್ಯೆ ಕೇವಲ 4 ಕೋಟಿ. ವಾಸಯೋಗ್ಯ ಪ್ರದೇಶ ಕಡಿಮೆ ಇರುವುದು ಮತ್ತು ತಾಪಮಾನ ಏರಿಳಿತ ಇದಕ್ಕೆ ಪ್ರಮುಖ ಕಾರಣ. ಇಂತಹ ಪ್ರದೇಶದಲ್ಲೇ ಇಷ್ಟೊಂದು ಮಂದಿಗೆ ಸೋಂಕು ತಗುಲಿದೆ ಎಂದರೆ ಕೊರೋನಾ ಅದೆಷ್ಟುಮಾರಕ ಎಂಬುದನ್ನೊಮ್ಮೆ ಊಹಿಸಿಕೊಳ್ಳಿ.

ವೆಡ್ಡಿಂಗ್ ಆ್ಯನಿವರ್ಸರಿಗೆ ದುಬಾರಿ ಗಿಫ್ಟ್; ಉಡುಗೊರೆ ಪಡೆದು ದಾಖಲೆ ಬರೆದ ಪತ್ನಿ!

ಅಂದ ಹಾಗೆ, ನಾನು ಮೂಲತಃ ಬೆಂಗಳೂರಿನವಳು. ದಂತವೈದ್ಯ ವ್ಯಾಸಂಗ ಮಾಡಿ ಹೆಚ್ಚಿನ ಓದಿಗಾಗಿ ನನ್ನ ಪತಿ ಕಾರ್ತಿಕ್‌ ಜತೆ 2 ವರ್ಷ ಹಿಂದೆ ಕೆನಡಾಕ್ಕೆ ವಲಸೆ ಬಂದಿದ್ದೇನೆ. ಟೊರೊಂಟೋದಲ್ಲಿದ್ದೇವೆ. ಅವರು ಐಟಿ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿದ್ದಾರೆ. ಕೊರೋನಾ ದೆಸೆಯಿಂದಾಗಿ ಅವರು ಮಾಚ್‌ರ್‍ 2ನೇ ವಾರದಿಂದಲೇ ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ನನಗೆ ಏಪ್ರಿಲ್‌ನಲ್ಲಿ ಪರೀಕ್ಷೆ ಇತ್ತು. ಆದರೆ, ಅದು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಒಮ್ಮೆ ದಿನಸಿ, ತರಕಾರಿಗಾಗಿ ಹೊರ ಹೋಗಿದ್ದು ಬಿಟ್ಟರೆ ಕಳೆದ 20-25 ದಿನಗಳಿಂದ ಮನೆಯಲ್ಲೇ ಇದ್ದೇವೆ. ಏತನ್ಮಧ್ಯೆ, ಸರ್ಕಾರದ ಸೂಚನೆ ಪ್ರಕಾರ ಅಗತ್ಯ ವಸ್ತುಗಳನ್ನು ಮನೆಮನೆಗೇ ತಲುಪಿಸುವ ವ್ಯವಸ್ಥೆ ಜಾರಿಯಾಗಿದೆ. ಆದರೆ, ಈ ಪರಿಸ್ಥಿತಿಯ ದುರ್ಲಾಭ ಪಡೆಯುವವರೂ ಹೆಚ್ಚಿದ್ದಾರೆ. ಸ್ಟೋರುಗಳಲ್ಲಿ ಆನ್‌ಲೈನ್‌ ಮೂಲಕ ಅಗತ್ಯ ವಸ್ತುಗಳ ಪಟ್ಟಿನೀಡಿ, ಹಣವನ್ನೂ ಪಾವತಿ ಮಾಡಿ ಮನೆಗೇ ತರಿಸಿಕೊಳ್ಳುವ ವ್ಯವಸ್ಥೆ ಇದೆ. ಆದರೆ, ಮನೆಗೆ ತಲುಪಿಸುವ ಅನೇಕರು ವಸ್ತುಗಳನ್ನು ಬೇರೆಯವರಿಗೆ ಮಾರಿಕೊಂಡು ಹಣ ಗಳಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ದೂರೋಣ ಎಂದರೆ, ಕೊರೋನಾ ಬಿಕ್ಕಟ್ಟಿನಿಂದಾಗಿ ಅದೂ ಸಾಧ್ಯವಾಗುತ್ತಿಲ್ಲ!

ಇದೆಲ್ಲದರ ನಡುವೆ ಒಂದು ಗುಣಾತ್ಮಕ ಸಂಗತಿ ಎಂದರೆ, ನಾವೆಲ್ಲ ಪರ್ಯಾಯ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಆನ್‌ಲೈನ್‌ ಮೂಲಕ ಹೆಚ್ಚಿನೆಲ್ಲಾ ಕೆಲಸಗಳನ್ನು ಮಾಡಲು ಕಲಿತಿದ್ದೇವೆ, ಕಲಿಯುತ್ತಲೇ ಇದ್ದೇವೆ. ಆದರೂ, ಸಾಮಾನ್ಯ ಜೀವನ ಅನಿರ್ದಿಷ್ಟಾವಧಿಗೆ ಅತಂತ್ರಗೊಂಡು ಆತಂಕದಿಂದ ದಿನ ದೂಡುತ್ತಿದ್ದೇವೆ.

ಹಿಂದಿನ ಸಾರ್ಸ್‌ ಹೆಮ್ಮಾರಿಯಿಂದ ಸರ್ಕಾರಗಳು ಪಾಠ ಕಲಿತಿದ್ದರೆ, ಇಷ್ಟಾಗುತ್ತಿರಲಿಲ್ಲ. ಈಗ ಅನುಭವಿಸದೆ ವಿಧಿಯಿಲ್ಲ.

Follow Us:
Download App:
  • android
  • ios