ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳ ನೇರ ಹೂಡಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. 


ಬೆಂಗಳೂರು (ಆ.27): ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳ ನೇರ ಹೂಡಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಇಂಡಿಯನ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಬುಧವಾರ ಆಯೋಜಿಸಿದ್ದ ‘ಇಂಡೋ-ಜಪಾನಿಸ್‌ ಬಿಸಿನೆಸ್‌ ಫೋರಂ’ ಕಾರ್ಯಕ್ರಮಕ್ಕೆ ವಿಡಿಯೋ ಸಂವಾದ ಮೂಲಕ ಚಾಲನೆ ನೀಡಿದರು. ಈ ವೇಳೆ ಜಪಾನ್‌ ಕಂಪನಿಗಳಿಗೆ ನೇರ ಹೂಡಿಕೆಗೆ ಎಲ್ಲ ರೀತಿಯ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು. ಅಲ್ಲದೇ, ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಜಪಾನ್‌ ನಿಯೋಗಕ್ಕೆ ಮನವರಿಕೆ ಮಾಡಿದರು.

ಕರ್ನಾಟಕ ಮತ್ತು ಜಪಾನ್‌ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ ಜಪಾನ್‌ಗೆ ಸಂಬಂಧಿಸಿದಂತೆ ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್‌ ಕೈಗಾರಿಕಾ ಟೌನ್‌ಶಿಪ್‌ ಸ್ಥಾಪಿಸಲಾಗಿದೆ. ಈ ಕೈಗಾರಿಕಾ ಟೌನ್‌ಶಿಪ್‌ಗೆ 519.55 ಎಕರೆ ಭೂಮಿ ಮೀಸಲಿಟ್ಟು, ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

2020ರ ಮಾಚ್‌ರ್‍ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಹೆಚ್ಚಿನ ಸಂಖ್ಯೆಯ ಸ್ಟಾರ್ಟ್‌ಅಪ್‌ಗಳಿಗೆ ರಾಜ್ಯ ನೆಲೆಯಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ವಿಡಿಯೋ ಸಂವಾದದಲ್ಲಿ ಜಪಾನ್‌ನಲ್ಲಿರುವ ಭಾರತದ ರಾಯಭಾರಿ ಎಚ್‌.ಇ.ಸಂಜಯ್‌ ಕುಮಾರ್‌ ವರ್ಮಾ, ಜಪಾನ್‌ ರಾಯಭಾರಿ ಎಚ್‌.ಇ.ಸತೋಶಿ ಸುಜುಕಿ, ಐಸಿಸಿ ಅಧ್ಯಕ್ಷ ಮಯಾಂಕ್‌ ಜಲನ್‌, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯದ ಆರ್ಥಿಕ ಪ್ರಗತಿ ದರ ಶೇ.9.6:

ಕರ್ನಾಟಕ ಸುಮಾರು 250 ಶತಕೋಟಿ ಡಾಲರ್‌ ಆರ್ಥಿಕತೆಯ ರಾಜ್ಯವಾಗಿದ್ದು, ಶೇ.9.6ರಷ್ಟುದರದಲ್ಲಿ ಪ್ರಗತಿ ಕಾಣುತ್ತಿದೆ. ವಿವಿಧ ಶ್ರೇಣಿಯ ಕೈಗಾರಿಕೆಗಳಲ್ಲಿ ರಾಜ್ಯ ಬಹಳ ಹಿಂದಿನಿಂದಲೂ ಪ್ರಾಬಲ್ಯ ಹೊಂದಿದೆ. ಫಾರ್ಚೂನ್‌ 500 ಕಂಪನಿಗಳ ಪೈಕಿ 400 ಕಂಪನಿಗಳು, ಸುಮಾರು 400 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ (ದೇಶದ ಒಟ್ಟು ಸಂಸ್ಥೆಗಳ ಪೈಕಿ ಶೇ.44) ಬೆಂಗಳೂರು ನೆಲೆಯಾಗಿದೆ ಎಂದು ಹೇಳಿದರು.

ಹೊಸ ನೀತಿಗಳಿಂದ ಕೈಗಾರಿಕಾ ಸ್ನೇಹಿ ವಾತಾವರಣ

ರಾಜ್ಯ ಸರ್ಕಾರದ ಹೊಸ ಕೈಗಾರಿಕಾ ನೀತಿ 2020-2025 ಬೃಹತ್‌ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಸಲು ನೆರವಾಗಲಿದೆ. ಉದ್ದಿಮೆಗೆ ಪೂರಕವಾದ ಭೂ ಲಭ್ಯತೆ, ಕಾರ್ಮಿಕ ಕಾನೂನಿನ ಸುಧಾರಣೆ ಹಲವು ನಿಯಂತ್ರಕ ಸುಧಾರಣೆಗಳನ್ನು ತಂದಿದೆ. ಕೈಗಾರಿಕಾ ಸೌಲಭ್ಯ ಕಾಯ್ದೆಗೆ (2002) ತಿದ್ದುಪಡಿ ತರುವ ಮೂಲಕ ಕೈಗಾರಿಕಾ ಸ್ಥಾಪನೆಗಾಗಿ ಕೈಗಾರಿಕೋದ್ಯಮಿಗಳು ವಿವಿಧ ಇಲಾಖೆಗಳಿಗೆ ಅಲೆದಾಡಬೇಕಾದ ಪ್ರಮೇಯವಿಲ್ಲ. ಬದಲಿಗೆ ಜಿಲ್ಲಾ ಸಮಿತಿ ಮತ್ತು ರಾಜ್ಯ ಸಮಿತಿಗಳಿಂದ ಕೈಗಾರಿಕಾ ಸ್ಥಾಪನೆಗೆ ಅನುಮತಿ ಸಿಕ್ಕ ಕೂಡಲೇ ಕಾಮಗಾರಿ ಆರಂಭ ಮಾಡಿ, ಮೂರು ತಿಂಗಳಲ್ಲಿ ಇತರೆ ಎಲ್ಲ ಅನುಮತಿಗಳನ್ನು ಪಡೆದುಕೊಳ್ಳಲು ಈ ತಿದ್ದುಪಡಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.