ಬೆಂಗಳೂರು(ಜ.21): ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಜಂಜಾಟ ಹಾಗೂ ಕೋವಿಡ್‌-19 ಸಂಕಷ್ಟದಿಂದ ಹೊರಬಂದು ಇದೀಗ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದು, ಮುಂದುವರಿದಿರುವ ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಮತ್ತು ಹಣಕಾಸು ಉಳಿತಾಯ ದೃಷ್ಟಿಯಿಂದ ಹೊಸದಾಗಿ ಯಾವುದೇ ಕಟ್ಟಡ ಕಾಮಗಾರಿಗಳನ್ನು ಆರಂಭಿಸಬಾರದು ಎಂದು ನಿರ್ದೇಶನ ನೀಡಿದ್ದಾರೆ.

ಕೋವಿಡ್‌ನಿಂದಾಗಿ ಕಳೆದ ಒಂದೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ನಡೆಸಿದರು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸತತ 8 ತಾಸು ಸುದೀರ್ಘವಾಗಿ ರಾಜ್ಯದ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಕೋವಿಡ್‌ ಹಿನ್ನೆಲೆಯಲ್ಲಿ 10 ತಿಂಗಳ ಕಾಲ ನಷ್ಟವಾಗಿದ್ದು, ಈಗ ಅಭಿವೃದ್ಧಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಯೋಜನೆ ಅನುಷ್ಠಾನದ ಫಲಿತಾಂಶ ಕಣ್ಣಿಗೆ ಕಾಣುವಂತೆ ಸಾಧನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ಲಸಿಕೆ ಅಭಿಯಾನ, ಕೃಷಿ ಇನ್‌ಪುಟ್‌ ಸಬ್ಸಿಡಿ ವಿತರಣೆ, ಪ್ರವಾಹ ಪೀಡಿತರಿಗೆ ವಸತಿ ಸೌಕರ್ಯ, ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ಯೋಜನೆಗಳು, ಕೇಂದ್ರ ಸರ್ಕಾರದ ಯೋಜನೆಗಳ ತ್ವರಿತ ಅನುಷ್ಠಾನ ಇತ್ಯಾದಿ ಆದ್ಯತೆಯ ವಿಷಯಗಳತ್ತ ಗಮನಹರಿಸಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರಸ್ತುತ ಆರಂಭಗೊಂಡಿರುವ ಯೋಜನೆಗಳನ್ನು ಮುಂದುವರಿಸಬೇಕು. ಆದರೆ, ಹೊಸದಾಗಿ ಯಾವುದೇ ಕಟ್ಟಡ ಕಾಮಗಾರಿಗಳನ್ನು ಆರಂಭಿಸಬಾರದು. ಆರ್ಥಿಕ ಸಮಸ್ಯೆಯಿಂದಾಗಿ ಈ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸರ್ಕಾರಿ ಜಮೀನು ಒತ್ತುವರಿ ತೆರವು:

ರಾಜ್ಯದಲ್ಲಿ ಸುಮಾರು 14.18 ಲಕ್ಷ ಸರ್ಕಾರಿ ಜಮೀನಿನ ಪೈಕಿ 2.7 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಷ್ಟೇ ತೆರವುಗೊಳಿಸಲಾಗಿದೆ. ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಲು ಕ್ರಮ ವಹಿಸಿ, ಒತ್ತುವರಿ ತೆರವಾದ ಜಮೀನು ಸಂರಕ್ಷಿಸಿ ಕ್ರಮ ಕೈಗೊಳ್ಳಬೇಕು. ಆಯಾ ಪ್ರಾದೇಶಿಕ ಆಯುಕ್ತರು ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೂಡಲೇ ಪರಿಶೀಲನೆ ನಡೆಸಿ, ಒತ್ತುವರಿ ಜಮೀನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ರಾಜಧಾನಿ ಬೆಂಗಳೂರಲ್ಲಿ ಕೋಟ್ಯಂತರ ರು. ಮೌಲ್ಯದ ಭೂಮಿ ಒತ್ತುವರಿ ತೆರವುಗೊಳಿಸಿ ಹರಾಜು ಹಾಕುವಂತೆ ತಿಳಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹಣ ಸಂಗ್ರಹವಾಗಲಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೇ, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಖಾಸಗಿ ಜಮೀನಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಬದಲು ಕೆರೆಗಳ ಹೂಳೆತ್ತುವುದು ಮತ್ತು ಕಾಲುವೆಗಳನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡುವಂತೆ ನಿರ್ದೇಶಿಸಲಾಗಿದೆ ಎಂದರು.

ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ:

ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು. ಅಲ್ಲದೇ, ಜಿಲ್ಲಾಧಿಕಾರಿಗಳು ವಾರದಲ್ಲಿ ಒಮ್ಮೆ ಸಭೆ ನಡೆಸಿ ತಿಂಗಳಿಗೊಮ್ಮೆ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಬೇಕು. ಮುಖ್ಯ ಕಾರ್ಯದರ್ಶಿಗಳು ಆ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಎರಡು ವರ್ಷ ಮೇಲ್ಪಟ್ಟು ಯೋಜನೆಗಳನ್ನು ಪೂರ್ಣಗೊಳಿಸಿ, ಕ್ರಿಯಾ ಯೋಜನೆಗಳನ್ನು ತ್ವರಿತವಾಗಿ ಮಂಜೂರು ಮಾಡಬೇಕು. ಇವುಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು ಎಂದು ತಿಳಿಸಿದರು.

ಪ್ರಧಾನಮಂತ್ರಿಗಳ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ರಾಜ್ಯಮಟ್ಟದ ಬ್ಯಾಂಕರುಗಳ ಸಭೆ ನಡೆಸಲಾಗುವುದು. ಅಧಿಕಾರಿಗಳಿಗೆ ಬ್ಯಾಂಕರ್‌ಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸ್ಮಶಾನ ಭೂಮಿ ಲಭ್ಯವಿಲ್ಲದ ಪ್ರದೇಶದಲ್ಲಿ ಜಮೀನನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸ್ಥಳೀಯ ಮಟ್ಟದಲ್ಲೇ ಸಮಸ್ಯೆ ಬಗೆಹರಿಸಿ

ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಸ್ಯೆಗಳು ಆಯಾ ಮಟ್ಟದಲ್ಲಿಯೇ ಇತ್ಯರ್ಥವಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳದ್ದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಗ್ರಾಮ ಅಭಿವೃದ್ಧಿಯಿಂದಲೇ ನಾಡಿನ ಅಭಿವೃದ್ಧಿ ಸಾಧ್ಯ. ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ಸ್ಥಾಪಿಸುವುದು ನಮ್ಮ ಗುರಿ. ಮಹಾತ್ಮ ಗಾಂಧೀಜಿ ಅವರ ಕನಸೂ ಇದೇ ಆಗಿತ್ತು. ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳು ಇತ್ಯರ್ಥವಾದರೆ ರಾಜಧಾನಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಈ ದಿಸೆಯಲ್ಲಿ ತಳಮಟ್ಟದ ಆಡಳಿತಯಂತ್ರ ಸದಾ ಸ್ಪಂದನಾಶೀಲವಾಗಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳದ್ದಾಗಿದೆ ಎಂದು ಹೇಳಿದರು.

ಅನುದಾನ ವೆಚ್ಚದ ಮೇಲೆ ಕಣ್ಣಿಡಲು ಸಾಫ್ಟ್‌ವೇರ್‌

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅನುದಾನ ವೆಚ್ಚ ಕುರಿತು ಅವಲೋಕನ ತಂತ್ರಾಂಶ ಬಿಡುಗಡೆ ಮಾಡಿದರು. 39 ಇಲಾಖೆಗಳ 1800 ಯೋಜನೆಗಳಿಗಾಗಿ ಅನುಷ್ಠಾನ ಅಧಿಕಾರಿಗಳಿಗಾಗಿ ಬಿಡುಗಡೆ ಮಾಡಲಾದ ಹಣ ಮತ್ತು ವೆಚ್ಚದ ವಿವರ ಹೊಂದಿರುವ ತಂತ್ರಾಂಶ ಇದಾಗಿದೆ. ಈ ಮೂಲಕ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರಲು ಸರ್ಕಾರ ಮುಂದಾಗಿದೆ. ಅವಲೋಕನ ತಂತ್ರಾಂಶದಲ್ಲಿ ವಿಧಾನಸಭಾ ಕ್ಷೇತ್ರವಾರು ಅನುದಾನ ಬಿಡುಗಡೆ ಮತ್ತು ವೆಚ್ಚದ ವಿವರಗಳನ್ನು ದಾಖಲಿಸುವ ಕೆಲಸವನ್ನು ಮಾಡುವುದರಿಂದ ವೆಚ್ಚದ ವಿವರಗಳ ನಿರ್ವಹಣೆ ಸುಲಭವಾಗಲಿದೆ.

ಲಸಿಕೆ ಅಭಿಯಾನ ಯಶಸ್ವಿಗೊಳಿಸಿ

ಕೋವಿಡ್‌ ಲಸಿಕೆ ಅಭಿಯಾನ ಯಶಸ್ವಿಗೊಳಿಸುವ ಹೊಣೆಗಾರಿಕೆ ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳದ್ದಾಗಿದೆ. ಲಸಿಕೆ ಲೋಪದೋಷಗಳಿಗೆ ಆಸ್ಪದ ನೀಡಬೇಡಿ. ಇದರ ಬಗ್ಗೆ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸಬೇಕು. ಅಲ್ಲದೇ, ಗೋಹತ್ಯೆ ನಿಷೇಧ ಕಾಯ್ದೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕು.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ