ಬೆಂಗಳೂರು, (ಜೂನ್.02): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 7ರ ಬಳಿಕ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ? ಬೇಡವೋ? ಎನ್ನುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

"

ಇನ್ನು ಈ ಬಗ್ಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ಜೂನ್ 07ರ ಬಳಿಕವೂ ಲಾಕ್‌ಡೌನ್ ವಿಸ್ತರಣೆ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಶೇ. 64 ರಷ್ಟು ಹಳ್ಳಿಗಳಿಗೆ ಕೊರೋನಾ ಸೋಂಕು, ಈ 2 ಜಿಲ್ಲೆಗಳಲ್ಲೇ ಹೆಚ್ಚು ಸೋಂಕು

ಇಂದು (ಬುಧವಾರ) ಸಂಜೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚೆ ಮಾಡುತ್ತೇವೆ. ಲಾಕ್​ಡೌನ್​ ವಿಸ್ತರಣೆ ಮಾಡಿ ಬಿಗಿ ಕ್ರಮಗಳ ಬಗ್ಗೆಯೂ ಚರ್ಚೆ ಮಾಡಲಾಗುತ್ತದೆ. ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ. ರಫ್ತು ಮಾಡುವ ಉದ್ಯಮಗಳಿಗೆ ಗುರುವಾರದಿಂದ ಅನುಮತಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕೊರೋನಾ ಇನ್ನೂ ಸಂಪೂರ್ಣವಾಗಿ ನಿಯಂತ್ರಣ ಆಗಿಲ್ಲ. ಅದನ್ನು ಸರಿದೂಗಿಸಿಕೊಂಡು ಹೇಗೆ ಹೋಗಬೇಕೆಂದು ಚರ್ಚೆ ಮಾಡಲಾಗುತ್ತದೆ. ಮತ್ತಷ್ಟು ವಲಯಗಳಿಗೆ ವಿನಾಯಿತಿ ನೀಡಿಕೆ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.2ನೇ ಪ್ಯಾಕೇಜ್ ಇನ್ನೊಂದೆರಡು ದಿನಗಳಲ್ಲಿ ಘೋಷಣೆ ಮಾಡುತ್ತೇನೆ ಎಂದು ಹೇಳಿದರು.

3ನೇ ಅಲೆ ಎಫೆಕ್ಟ್ ಬಗ್ಗೆ ತಜ್ಞರ ಜೊತೆ ಇಂದು ಸಿಎಂ ಸಮಾಲೋಚನೆ

 ಹಳ್ಳಿಗಳಲ್ಲಿ ಈ ತಿಂಗಳಲ್ಲಿ ಹೆಚ್ಚು ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಈಗಾಗಲೇ ಜಾರಿಯಲ್ಲಿರುವ ಲಾಕ್​ಡೌನ್​ ಮುಂದುವರಿಸಬೇಕಾ? ಬೇಡವಾ ಎಂದು ಸರ್ಕಾರ ನಿರ್ಧರಿಸಲಿದೆ. ಹಲವರು ಲಾಕ್​ಡೌನ್​ ಮುಂದುವರಿಸುವುದು ಸೂಕ್ತ ಎಂದರೆ, ಇನ್ನು ಕೆಲವರು ನಿಧಾನವಾಗಿ ಸಡಿಲಿಕೆ ಮಾಡುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.