ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ದುಃಖಕ್ಕೆ ಒಳಗಾಗಿದ್ದು ಬೇಸರದಿಂದಲ್ಲ ಮೊದಲ ಬಾರೊಗೆ ರಾಜೀನಾಮೆ ವೇಳೆ ಕಣ್ಣೀರು ಹಾಕಿದ್ದರ ಬಗ್ಗೆ ಬಿಎಸ್‌ವೈ ಮಾತು
ಶಿಕಾರಿಪುರ (ಆ.30): ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ದುಃಖಕ್ಕೆ ಒಳಗಾಗಿದ್ದು ಬೇಸರದಿಂದಲ್ಲ. ಬದಲಿಗೆ ನನ್ನ ಹೋರಾಟದ ದಿನ, ಕಾರ‍್ಯಕರ್ತರ ನೆನೆದು ದುಃಖವಾಗಿತ್ತು. ಎರಡು ವರ್ಷ ಪೂರ್ಣಗೊಂಡ ಬಳಿಕ ರಾಜೀನಾಮೆ ನೀಡಿ ಮತ್ತೊಬ್ಬರಿಗೆ ಅವಕಾಶ ನೀಡಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ನನ್ನ ನಿರ್ಧಾರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ ಮಾತನ್ನು ಫ್ರೇಮ್ ಹಾಕಿಸಿ ಮನೆಯಲ್ಲಿ ಇಟ್ಟಿದ್ದೇನೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಾರು ಚುನಾಯಿತ ಸರ್ಕಾರ ಹಾಗೂ ಪಕ್ಷದ ಅಧಿಕಾರ ಅನುಭವಿಸಿದ್ದಾರೋ ಅವರು ಬೇರೆಯವರಿಗೆ ಅವಕಾಶ ಕಲ್ಪಿಸಬೇಕು. ಆಗ ಪಕ್ಷ ಬೆಳೆಯುತ್ತದೆ ಎನ್ನುವ ಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯದ ಪ್ರವಾಸ ಕೈಗೊಳ್ಳುತ್ತಿದ್ದೇನೆ. ರಾಜ್ಯ ಪ್ರವಾಸವನ್ನು ನಾನೊಬ್ಬನೇ ಮಾಡುವುದಿಲ್ಲ. ಬದಲಿಗೆ ಸಚಿವರು, ಶಾಸಕರು, ರಾಜ್ಯ ಅಧ್ಯಕ್ಷರ ಜತೆಗೂಡಿ ಪ್ರತಿ ಜಿಲ್ಲೆಯ ಪ್ರವಾಸ ಮಾಡುತ್ತೇನೆ ಎಂದರು.
ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ತಪ್ಪೇನು?: ಬೈರತಿ
ಸ್ವಂತ ಬಲದ ಮೇಲೆ ಸರ್ಕಾರ ರಚನೆ ಖಚಿತ: ಪ್ರವಾಸ ಸಂದರ್ಭದಲ್ಲಿ ರಾಜ್ಯ ಬಿಜೆಪಿಗೆ ಗೆಲ್ಲುವ ಅವಕಾಶ ಇರುವ ಕಡೆ ಸ್ಥಳೀಯ ನಾಯಕರೊಂದಿಗೆ ಮತ್ತೊಂದು ಸುತ್ತಿನ ಪ್ರವಾಸ ಮಾಡುತ್ತೇನೆ. ಮತ್ತೊಂದು ಪಕ್ಷದೊಂದಿಗೆ ಸರ್ಕಾರ ರಚಿಸಿದಾಗ ಆಗುವ ತೊಂದರೆ ಕುರಿತು ಎಲ್ಲರಿಗೂ ತಿಳಿದಿದೆ. ಹೀಗಾಗಿ ಪಕ್ಷ ಸ್ವಂತ ಬಲದ ಮೇಲೆ ಸರಕಾರ ರಚಿಸುವಂತೆ ಮಾಡುವ ನಿಟ್ಟಿನಲ್ಲಿ ನನ್ನ ಸಂಪೂರ್ಣ ಪರಿಶ್ರಮ ಹಾಕುತ್ತೇನೆ. ಮುಂದಿನ ಸರ್ಕಾರವನ್ನು ಬಿಜೆಪಿ ರಚಿಸುವುದು ನಿಶ್ಚಯ ಎಂದು ಹೇಳಿದರು.
ನಿರುದ್ಯೋಗ ದೂರ ಮಾಡುವ ಗುರಿ: ಜಿಲ್ಲೆಯ ನೀರಾವರಿ ಕೆಲಸ ನನ್ನ ಅಧಿಕಾರ ಅವಧಿಯಲ್ಲೇ ಪೂರ್ಣಗೊಳ್ಳಬೇಕು ಎನ್ನುವ ಇಚ್ಛೆ ಹೊಂದಿದ್ದೆ. ಅದಕ್ಕಾಗಿ ನಿತ್ಯ ಕಾಮಗಾರಿ ಕುರಿತು ಮಾಹಿತಿ ಪಡೆಯುತ್ತಿದ್ದೆ. ಅಧಿಕಾರ ಅವಧಿಯಲ್ಲಿ ಮಾಡಿದ ಕೆಲಸ ತೃಪ್ತಿ ಸಮಾಧಾನ ತಂದಿದೆ. ಆರು ತಿಂಗಳಲ್ಲಿ ವಿಮಾನ ನಿಲ್ದಾಣ ಕೆಲಸ ಪೂರ್ಣಗೊಳ್ಳಲಿದೆ ಅದು ಜಿಲ್ಲೆಗೆ ಕೈಗಾರಿಕೆ ಬರುವುದಕ್ಕೆ ಅನುಕೂಲ ಕಲ್ಪಿಸುವ ವಿಶ್ವಾವಿದ್ದು, ತನ್ಮೂಲಕ ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ. ಶಾಹಿ ಗಾರ್ಮೆಂಟ್ಸ್ ಇನ್ನೊಂದು ಘಟಕ ಆರಂಭಕ್ಕೆ ಕಂಪೆನಿಯೊಂದಿಗೆ ಮಾತನಾಡುತ್ತೇನೆ. ತಾಲೂಕಿನ ಐದು ಸಾವಿರ ಮಹಿಳೆಯರಿಗೆ ಕೆಲಸ ನೀಡಬೇಕು ಎನ್ನುವುದು ನನ್ನ ಇಚ್ಛೆಯಾಗಿದೆ ಎಂದರು.
ದೂರವಿರಲು ಕಾರಣ ತಿಳಿಯಬೇಕು: ಜಿಲ್ಲೆಯಲ್ಲಿ ಯಾವುದೆ ಅಭಿವೃದ್ಧಿ ಕೆಲಸ ಮಾಡಿದ್ದರೂ ಅದು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಅದಕ್ಕಾಗಿ ಜನರು ಸಭೆ ಸಮಾರಂಭದಲ್ಲಿ ನನಗೆ ಸನ್ಮಾನ ಮಾಡುವುದು ಬೇಡ. ಇಷ್ಟೊಂದು ಕೆಲಸ ಮಾಡಿದ ನಂತರವೂ ನಮ್ಮಿಂದ ಇನ್ನೂ ಜನರು ದೂರು ಇದ್ದಾರೆ. ಅದಕ್ಕೆ ಏನು ಕಾರಣ ಎಂದು ಚಿಂತನೆ ನಡೆಸಬೇಕು. ಎಲ್ಲ ವರ್ಗದ ಜನರು ಪಕ್ಷದೊಂದಿಗೆ ಬರಬೇಕು ಈ ನಿಟ್ಟಿನಲ್ಲಿ ಕಾರ‍್ಯಕರ್ತರು ಗಮನ ನೀಡಬೇಕು ಎಂದು ಹೇಳಿದರು.