ಯಾರು ಏನೇ ಟೀಕೆ ಮಾಡಿದರೂ ಅವುಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಗುರಿ ತಲುಪುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮಾಜಕ್ಕೆ ಅಭಯ ನೀಡಿದರು.
ದಾವಣಗೆರೆ/ಹರಿಹರ (ಜ.15): ಯಾರು ಏನೇ ಟೀಕೆ ಮಾಡಿದರೂ ಅವುಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಗುರಿ ತಲುಪುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮಾಜಕ್ಕೆ ಅಭಯ ನೀಡಿದರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶುಕ್ರವಾರ ಹರಜಾತ್ರಾ ಮಹೋತ್ಸವ-2023ಕ್ಕೆ ಚಾಲನೆ ನೀಡಿ ಸಂಕ್ರಾಂತಿ ಹಬ್ಬದ ಶುಭ ಹಾರೈಸಿ ಅವರು ಮಾತನಾಡಿದರು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಸರಿಯಾದ ಹೆಜ್ಜೆಯನ್ನೇ ನಾವು ಇಡಬೇಕು. ತರಾತುರಿಯಲ್ಲಿ ಮೀಸಲಾತಿ ನೀಡಿದರೆ, ಅದು ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಗುತ್ತದೆ.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಗುರಿಯನ್ನು ನಾನು ತಲುಪುತ್ತೇನೆ. ಮೀಸಲಾತಿ ಬಗ್ಗೆ ನ್ಯಾಯಾಲಯ ಪೂರ್ಣ ತಡೆಯಾಜ್ಞೆ ನೀಡಿಲ್ಲ. ಮುಂದಿನ ದಿನಾಂಕದಲ್ಲಿ ಸಂಪೂರ್ಣ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿ ಮೀಸಲಾತಿಯನ್ನು ಕೊಟ್ಟೇ ಕೊಡುತ್ತೇವೆ ಎಂದು ಹೇಳಿದರು. ನಮ್ಮ ಬಗ್ಗೆ ಅನೇಕರು ಟೀಕೆ ಮಾಡುತ್ತಾರೆ. ಅಂಥವರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಕೆಲಸಗಳು ಅಂಥವರಿಗೆ ಉತ್ತರ ಕೊಡುತ್ತವೆ. ನಾನು ಯಾರೊಬ್ಬರ ಪರವಾಗಿಯೂ ಇಲ್ಲ. ನಾನು ಸಮಾಜದ ಪರ, ಪಂಚಮಸಾಲಿ ಸಮಾಜದ ಬಹು ವರ್ಷಗಳ ಬೇಡಿಕೆಯಾದ ಮೀಸಲಾತಿ ಕಲ್ಪಿಸಲು ನಾನು ಬದ್ಧ ಎಂದು ಪುನರುಚ್ಛರಿಸಿದರು
ಸ್ಮಶಾನ ಕಾರ್ಮಿಕರಿನ್ನು ಸತ್ಯ ಹರಿಶ್ಚಂದ್ರನ ಬಳಗ: ರುದ್ರಭೂಮಿ ಕಾರ್ಮಿಕರ ಸೇವೆ ಕಾಯಂಗೆ ಸಿಎಂ ಭರವಸೆ
ಜಾಗೃತಿ ಮತ್ತು ಮೀಸಲಾತಿ ಬಗ್ಗೆ ಹಳ್ಳಿ ಹಳ್ಳಿಗೆ ಹೋಗಿ, ಪಂಚಮಸಾಲಿ ಮುಖಂಡರು ಅರಿವು, ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದ ಸೇವೆ ಅನನ್ಯ. ಪ್ರತಿಯೊಬ್ಬರಿಗೂ ತಮ್ಮದೇ ಆದ ಗೌರವವಿದೆ. ತಮ್ಮದೇ ಸಮುದಾಯದವರ ಬಗ್ಗೆ ಮಾತನಾಡುವುದು ಬೇಡ, ಎಲ್ಲರಿಗೂ ತಮ್ಮದೇ ಆದ ಶಕ್ತಿ ಇರುತ್ತದೆ ಎಂದು ತಿಳಿಸಿದರು. ಹಿಂದೆಲ್ಲ ಜಮೀನ್ದಾರರಾಗಿದ್ದವರು ಇಂದು 1-2 ಎಕರೆ ಭೂಮಿಯನ್ನಷ್ಟೇ ಹೊಂದಿದ್ದಾರೆ. ಕೃಷಿಯನ್ನೇ ನಂಬಿಕೊಂಡಿರುವುದು ಇಂದಿನ ಕಾಲಘಟ್ಟದಲ್ಲಿ ಕಷ್ಟಸಾಧ್ಯ. ಅದಕ್ಕಾಗಿ ರೈತರ ಮಕ್ಕಳಿಗೆ ವಿದ್ಯಾನಿಧಿ, ರೈತರಿಗೆ ಸಬ್ಸಿಡಿ ಡೀಸೆಲ್, ಬೆಳೆ ವಿಮೆ, ಕೇಂದ್ರ-ರಾಜ್ಯ ಸರ್ಕಾರಗಳಿಂದ ರೈತರ ಖಾತೆಗೆ .10 ಸಾವಿರ ನೀಡಲಾಗುತ್ತಿದೆ. ಇದು ರೈತರಿಗಾಗಿ ನಮ್ಮ ಸರ್ಕಾರ ಮಾಡಿರುವ ಕೆಲಸ ಸಾಧನೆಗಳು ಎಂದು ಹೇಳಿದರು.
ಪಂಚಮಸಾಲಿ ಮಠ ಅರ್ಧಕ್ಕೆ ನಿಂತು ಹೋಗಿದ್ದು, ಮಠಕ್ಕೆ ಭಕ್ತರು ಬಂದಾಗ ಅನ್ನ ಇಲ್ಲದೆ ವಾಪಸಾಗುತ್ತಿದ್ದರು. ಇದನ್ನು ಗಮನಿಸಿ, ಮಠದ ಅಭಿವೃದ್ಧಿಗೆ ಅನುದಾನ ನೀಡಲಾಯಿತು. ಅದೇ ರೀತಿ ಕನಕ ಮಠ, ವಾಲ್ಮೀಕಿ ಮಠ, ವೇಮನ ಮಠಗಳಿಗೂ ಸಮಾನವಾಗಿ ಅನುದಾನ ನೀಡಿದ್ದೇವೆ. ರಾಜ್ಯದ ಅಭಿವೃದ್ಧಿಗೆ, ಜನರ ಹಿತ ಕಾಯಲು ತಮ್ಮ ಸರ್ಕಾರ ಬದ್ಧ ಎಂದು ಬೊಮ್ಮಾಯಿ ನೀಡಿದರು.
ಪಂಚಮಸಾಲಿ ಪೀಠದಲ್ಲಿ ಒಂದೇ ಒಂದು ಚೆಕ್‌ಗೆ ಸಹಿಹಾಕಿಲ್ಲ: ಪಂಚಮಸಾಲಿ ಪೀಠದಲ್ಲಿ ನಾನು ಈವರೆಗೆ ಒಂದೇ ಒಂದು ಚೆಕ್‌ಗೂ ಸಹಿ ಮಾಡಿಲ್ಲ. ಎಲ್ಲವನ್ನೂ ಟ್ರಸ್ಟ್ ನೋಡಿಕೊಳ್ಳುತ್ತದೆ. ನಮ್ಮದು ಕೇವಲ ಧಾರ್ಮಿಕ ಪ್ರಚಾರ, ಮೀಸಲಾತಿ ಕೊಡಿಸುವುದು ಮಾತ್ರ ನಮ್ಮ ಕೆಲಸ. ಪಂಚಮಸಾಲಿ ಸಮಾಜಕ್ಕೆ ಸರ್ಕಾರ ನೀಡಿರುವ 2ಡಿ ಮೀಸಲಾತಿಯನ್ನು ನಾವು ಇನ್ನೂ ಸ್ವೀಕರಿಸಿಲ್ಲ. ತಿರಸ್ಕಾರವನ್ನೂ ಮಾಡಿಲ್ಲ. ಈ ಬಗ್ಗೆ ಸರ್ಕಾರ ವಿವರಣೆ ನೀಡಿದ ನಂತರ ಅದನ್ನು ಸಮಾಜದ ಹಿರಿಯರಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳು ತಿಳಿಸಿದರು.
ಶನಿವಾರ ಇಲ್ಲಿ ನಡೆದ ಹರಜಾತ್ರೆಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಹರಜಾತ್ರೆ ಉದ್ದೇಶ ಸಮಾಜವನ್ನು ಒಗ್ಗೂಡಿಸಿ, ಎಳ್ಳುಬೆಲ್ಲ ಹಂಚಿಕೊಂಡು, ವಿಷಯಗಳ ಚಿಂತನ-ಮಂಥನ ಮಾಡುವುದಾಗಿದೆ. ನಾವು ಪೀಠಕ್ಕೆ ಬರುವ ಮೊದಲೇ ಮುಖ್ಯಮಂತ್ರಿ ಬೊಮ್ಮಾಯಿ ಪೀಠದ ಪರಮಭಕ್ತರಾಗಿದ್ದವರು. ತಮ್ಮ ಸ್ವಂತ ಹಣದಲ್ಲಿ ಹರ ಧ್ಯಾನ ಮಂದಿರ ಕಟ್ಟಿಸಿದ್ದಾರೆ. ಅದೇ ರೀತಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕನಕ, ವಾಲ್ಮೀಕಿ ಹಾಗೂ ಪಂಚಮಸಾಲಿ ಪೀಠಗಳಿಗೆ .10 ಕೋಟಿ ಅನುದಾನ ಕೊಡಿಸಿದ್ದರು ಎಂದರು.
ಸಮಾಜಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ಸಿಕ್ಕರೆ ನಮ್ಮ ಸಮಾಜದ ಮಕ್ಕಳೂ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗುತ್ತಾರೆ. ಈ ನಿಟ್ಟಿನಲ್ಲಿ ಪಂಚಮಸಾಲಿ ಸಮಾಜಕ್ಕೂ ಮೀಸಲಾತಿ ಬೇಕು. ಅದು ಅನಿವಾರ್ಯವೂ ಆಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಪಂಚಮಸಾಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕು. ಶ್ರೀಮಠದಲ್ಲಿ ಶಿಕ್ಷಣ, ಅನ್ನ ದಾಸೋಹ ಸದಾ ನಡೆಯುತ್ತದೆ. ಇದರ ಜೊತೆಗೆ ನಮ್ಮ ಸಮಾಜಕ್ಕೆ ಮೀಸಲಾತಿಯೂ ಸಿಕ್ಕರೆ ಸಮಾಜದ ಕಟ್ಟಕಡೆ ವ್ಯಕ್ತಿಯ ಮಕ್ಕಳಿಗೂ ನ್ಯಾಯ ಸಿಗುತ್ತದೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
25 ತಾಲೂಕಿನಲ್ಲಿ ಮಿನಿ ಜವಳಿ ಪಾರ್ಕ್: ಸಿಎಂ ಬೊಮ್ಮಾಯಿ
ಜಲಗೂರು ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಕನಕ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ವಾಲ್ಮೀಕಿ ಪೀಠ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಮನಗೂಳಿ ಶ್ರೀ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ, ಹಗರಿಬೊಮ್ಮನಹಳ್ಳಿ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ ನಿರಾಣಿ, ಬಿ.ಸಿ.ಪಾಟೀಲ, ಶಾಸಕ ಎಂ.ಪಿ.ರೇಣುಕಾಚಾರ್ಯ, ಶಂಕರ ಪಾಟೀಲ್ ಮುನೇನಕೊಪ್ಪ, ಬೆಂಗಳೂರಿನ ವಕೀಲ ಜಿ.ಎಸ್.ಪಾಟೀಲ್, ನಿಕಟ ಪೂರ್ವ ರಾಜ್ಯಾಧ್ಯಕ್ಷ ಡಾ.ಬಸವರಾಜ ದಿಂಡೂರು, ಮಹಿಳಾ ಘಟಕದ ಮಂಗಳಾ ಬಸವರಾಜ, ಬಿ.ಸಿ.ಉಮಾಪತಿ, ಚಂದ್ರಶೇಖರ ಪೂಜಾರ, ಬಿ.ಲೋಕೇಶ ಇತರರು ಇದ್ದರು.
