ಸ್ಮಶಾನ ಕಾರ್ಮಿಕರಿನ್ನು ಸತ್ಯ ಹರಿಶ್ಚಂದ್ರನ ಬಳಗ: ರುದ್ರಭೂಮಿ ಕಾರ್ಮಿಕರ ಸೇವೆ ಕಾಯಂಗೆ ಸಿಎಂ ಭರವಸೆ
ಸ್ಮಶಾನ ಕಾರ್ಮಿಕರಿಗೆ ಸಂಕ್ರಾಂತಿ ಕೊಡುಗೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರನ್ನು ಇನ್ನು ಮುಂದೆ ಇವರಿಗೆ ಗೌರವ ಸೂಚಕವಾಗಿ ‘ಸತ್ಯಹರಿಶ್ಚಂದ್ರನ ಬಳಗ’ ಎಂದು ಕರೆಯಲು ಮನವಿ ಮಾಡಿದರು.

ಬೆಂಗಳೂರು (ಜ.12): ಸ್ಮಶಾನ ಕಾರ್ಮಿಕರಿಗೆ ಸಂಕ್ರಾಂತಿ ಕೊಡುಗೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರನ್ನು ಇನ್ನು ಮುಂದೆ ಇವರಿಗೆ ಗೌರವ ಸೂಚಕವಾಗಿ ‘ಸತ್ಯಹರಿಶ್ಚಂದ್ರನ ಬಳಗ’ ಎಂದು ಕರೆಯಲು ಮನವಿ ಮಾಡಿದರು. ಇದರ ಜತೆಗೆ ಸ್ಮಶಾನ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಅಶ್ವಾಸನೆ ನೀಡಿದ್ದಾರೆ.
ಗುರುವಾರ ರೇಸ್‌ಕೋರ್ಸ್ ರಸ್ತೆಯಲ್ಲಿನ ಮುಖ್ಯಮಂತ್ರಿಗಳ ನಿವಾಸದಲ್ಲಿ 200ಕ್ಕೂ ಹೆಚ್ಚು ಸ್ಮಶಾನ ಕಾರ್ಮಿಕರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಾಹಾರ ಸೇವಿಸಿದರು. ಈ ಮೂಲಕ ಅವರಿಗೆ ಗೌರವ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು, ಪೌರಕಾರ್ಮಿಕರ ಮಾದರಿಯಲ್ಲಿ ಬೆಂಗಳೂರಿನ 130 ಸ್ಮಶಾನ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ 300 ಜನರ ಸ್ಮಶಾನ ಕಾರ್ಮಿಕರ ಸೇವೆಯನ್ನೂ ಕಾಯಂ ಮಾಡಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
‘ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಸ್ಮಶಾನ ಕಾರ್ಮಿಕನೊಬ್ಬನಿಂದ ಅವರ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡೆ. ‘ನಮ್ಮದು ನೌಕರಿನೇ ಅಲ್ಲ ಸರ್’ ಎಂದು ಹೇಳಿದ ಆತನ ಮಾತುಗಳು ಕೇಳಿ ಮನಸ್ಸಿಗೆ ನೋವುಂಟಾಗಿ ಆಗಲೇ ಸ್ಮಶಾನ ಕಾರ್ಮಿಕರಿಗೆ ಏನಾದರೂ ಮಾಡಬೇಕು ಎಂದು ಭಾವಿಸಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದೆ. ಪೌರಕಾರ್ಮಿಕರ ಮಾದರಿಯಲ್ಲಿ 130 ಮಂದಿಯನ್ನು ನೇಮಕ ಮಾಡಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇನ್ನೂ 300 ಮಂದಿ ಇದ್ದು, ಅವರನ್ನೂ ಕಾಯಂ ಮಾಡುವ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಸಿದ್ದರಾಮಯ್ಯ ಸೋಲಿಗೆ ವ್ಯೂಹ ರಚಿಸುತ್ತೇವೆ: ಸಚಿವ ಸುಧಾಕರ್
ಗೌರವ ನೀಡಬೇಕು: ‘ಸ್ಮಶಾನ ಕಾರ್ಮಿಕರನ್ನು ಸತ್ಯ ಹರಿಶ್ಚಂದ್ರನ ಬಳಗ ಎಂದು ಕರೆಯಬೇಕು. ಅವರಿಗೆ ಗೌರವವನ್ನು ಸೂಚಿಸಬೇಕು. ಆರೋಗ್ಯ, ಶಿಕ್ಷಣ ಸೌಲಭ್ಯಗಳು ಲಭಿಸಲಿವೆ. ಬದ್ಧತೆ, ಬಡವರ ಬಗ್ಗೆ ಕಳಕಳಿ, ಅವರ ಸಮಸ್ಯೆಗೆ ಪರಿಹಾರ ನೀಡುವ ಸರ್ಕಾರ ನಮ್ಮದು. ತಳಸಮುದಾಯಗಳ ವಿಚಾರದಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಸತ್ಯಹರಿಶ್ಚಂದ್ರನ ಪ್ರತಿಮೆಯ ಉಡುಗೊರೆ: ಸ್ಮಶಾನ ಕಾರ್ಮಿಕರು ನೀಡಿದ ಸತ್ಯ ಹರಿಶ್ಚಂದ್ರನ ಪ್ರತಿಮೆಯನ್ನು ನೋಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು. ಈ ವೇಳೆ ನನಗೆ ಈವರೆಗೆ ಸಾಕಷ್ಟುಫಲಕಗಳು ಬಂದಿವೆ. ಇದುವರೆಗೂ ಯಾರೂ ಸತ್ಯಹರಿಶ್ಚಂದ್ರನ ಪ್ರತಿಮೆ ನೀಡಿರಲಿಲ್ಲ. ಇದು ಮನಸ್ಸಿಗೆ ಅತ್ಯಂತ ಹತ್ತಿರವಾದ ಸ್ಮರಣಿಕೆ. ನಾನು ಇದನ್ನು ಪ್ರತಿದಿನ ಪೂಜಿಸುವ ಸ್ಥಳದಲ್ಲಿ ಇಟ್ಟುಕೊಳ್ಳುತ್ತೇನೆ ಎಂದರು.
ರಾಜೀವ್ ಚಂದ್ರಶೇಖರ್‌ಗೆ ಸ್ಮಶಾನ ಕಾರ್ಮಿಕರ ಧನ್ಯವಾದ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಉಪಾಹಾರ ಸೇವಿಸಿದ ಸ್ಮಶಾನ ಕಾರ್ಮಿಕರು ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಧನ್ಯವಾದ ಅರ್ಪಿಸಿದರು. ಸ್ಮಶಾನ ಕಾರ್ಮಿಕ ರಾಜ್ ಮಾತನಾಡಿ, ‘ಕೋವಿಡ್ ಸಮಯದಲ್ಲಿ ನಮ್ಮ ಕೆಲಸ ನೋಡಿ ರಾಜೀವ್ ಚಂದ್ರಶೇಖರ್ ಅವರು ನಮ್ಮ ಮನೆಗೆ ಬಂದುಹೋದರು. ನಂತರ ನಮ್ಮ ಬೆಂಗಳೂರು ಫೌಂಡೇಷನ್‌ನಿಂದ ನನಗೆ ಪ್ರಶಸ್ತಿ ನೀಡಲಾಯಿತು. ಆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಬಂದಿದ್ದರು. ಅಗ ನಮ್ಮ ಕಷ್ಟಆಲಿಸಿ ನಮ್ಮನ್ನು ಕಾಯಂ ಮಾಡುವುದಾಗಿ ಹೇಳಿದ್ದರು.
ನಮಗೆ ಬಹಳ ಸಂತೋಷವಾಗಿದ್ದು, ಕಾಯಂ ಮಾಡಿದ್ದಾರೆ. ಇದಕ್ಕೆ ಕಾರಣರಾದ ರಾಜೀವ್ ಚಂದ್ರಶೇಖರ್ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ’ ಎಂದರು. ‘ರಾಜೀವ್ ಅವರು ನಮ್ಮ ಮನೆಗೆ ಬಂದಿದ್ದು, ನಮ್ಮ ಜತೆ ಮಾತನಾಡಿದರು. ಅಲ್ಲದೇ, ಸನ್ಮಾನ ಸಹ ಮಾಡಿದರು. ಅವರನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಮನೆಗೆ ಬರಲು ಹಿಂದೆ-ಮುಂದೆ ನೋಡುತ್ತಾರೆ. ಅಂತಹದರಲ್ಲಿ ನಮ್ಮನ್ನು ಹುಡುಕಿಕೊಂಡು ಬಂದರು’ ಎಂದು ಹರ್ಷ ವ್ಯಕ್ತಪಡಿಸಿದರು.
ಜ.16ರಂದು ಕುಮಾರಸ್ವಾಮಿ 'ರೈತ ಸಂಕ್ರಾಂತಿ': ರಾಜ್ಯದ ರೈತರ ಜತೆ ಅನ್‌ಲೈನ್ ಸಂವಾದ
ಚಿತಾಗಾರಗಳ ಹೆಚ್ಚಳಕ್ಕೆ ಕ್ರಮ: ಕೋವಿಡ್ ವೇಳೆ ಚಿತಾಗಾರಗಳ ಮುಂದೆ ಸರತಿ ಸಾಲು ನಿಂತದ್ದು ಕಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿಗೆ ವಿದ್ಯುತ್ ಚಿತಾಗಾರವನ್ನು ಹೆಚ್ಚಿಸುವುದಾಗಿ ತಿಳಿಸಿದ್ದರು. ಈ ವರ್ಷದ ಬಜೆಟ್‌ನಲ್ಲಿ ಚಿತಾಗಾರ ವ್ಯವಸ್ಥೆಯನ್ನು ಹೆಚ್ಚಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಇತರರು ಉಪಸ್ಥಿತರಿದ್ದರು. ಸ್ಮಶಾನ ಕಾರ್ಮಿಕರು ನಮಗೆ ಮುಕ್ತಿ ನೀಡುವ ಕೆಲಸ ಮಾಡುತ್ತಾರೆ. ಬದುಕುವುದು ಎಷ್ಟು ಮುಖ್ಯವೋ, ನಮ್ಮ ಸಾವು ಹೇಗೆ ಅಂತಿಮಗೊಳ್ಳುತ್ತದೆ ಎನ್ನುವುದೂ ಅಷ್ಟೇ ಮುಖ್ಯ. ಬದುಕಿದ್ದಾಗ ಅಷ್ಟೇ ನಮ್ಮ ಭೂಮಿ ಎನ್ನುತ್ತೇವೆ. ಸತ್ತ ಮೇಲೇ ನಾವು ಭೂಮಿಗೆ ಸೇರಿದವರು’ ಎಂದು ನುಡಿದರು.