Asianet Suvarna News Asianet Suvarna News

ಪಂಚಮಸಾಲಿ ಮೀಸಲಾತಿ: ಕಾಲಾವಕಾಶ ಪಡೆದ ಸಿಎಂ ಬೊಮ್ಮಾಯಿ

ಹಿಂದುಳಿದ ವರ್ಗದ ಆಯೋಗದಿಂದ ಮಧ್ಯಂತರ ವರದಿ ಬಳಿಕ ಹೋರಾಟಗಾರರ ಜತೆ ಸಿಎಂ ಸಭೆ, ಡಿ.28ಕ್ಕೆ ಸರ್ವಪಕ್ಷ ಸಭೆ, ಡಿ.29ಕ್ಕೆ ನಿರ್ಧಾರ ಪ್ರಕಟ: ಸಿಎಂ ಭರವಸೆ

CM Basavaraj Bommai Talks Over Panchamasali Reservation grg
Author
First Published Dec 23, 2022, 3:42 AM IST

ಸುವರ್ಣಸೌಧ(ಡಿ.22): ಪಂಚಮಸಾಲಿ ಮೀಸಲಾತಿ ಸಂಬಂಧ ಗುರುವಾರ ಇಡೀ ದಿನ ಸರಣಿ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಡ್ಡಿಯಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಮುಂದಿನ ಒಂದು ವಾರದೊಳಗೆ ಪೂರಕ ತೀರ್ಮಾನ ಪ್ರಕಟಿಸುವ ಭರವಸೆಯನ್ನು ಸಮುದಾಯಕ್ಕೆ ನೀಡಿದ್ದಾರೆ. ಈ ಮೂಲಕ ಸಮುದಾಯವು ಆರಂಭಿಸಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತಾವು ನೀಡಿರುವ ಆಶ್ವಾಸನೆ ಈಡೇರಿಸುವ ದಿಸೆಯಲ್ಲಿ ಅವರು ಈ ತಿಂಗಳ 28ರಂದು ಸರ್ವಪಕ್ಷ ಸಭೆ ಕರೆದು ಪಕ್ಷಾತೀತವಾಗಿ ಎಲ್ಲರ ವಿಶ್ವಾಸ ಪಡೆಯಲು ತೀರ್ಮಾನಿಸಿದ್ದಾರೆ. ಈ ಸಭೆಯ ಬೆನ್ನಲ್ಲೇ ಅಂದರೆ ಡಿ.29ರಂದು ಮೀಸಲಾತಿ ಸಂಬಂಧ ಸರ್ಕಾರದ ನಿರ್ಧಾರವನ್ನು ಪ್ರಕಟಿಸುವುದಾಗಿ ಪಂಚಮಸಾಲಿ ನಾಯಕರಿಗೆ ಭರವಸೆ ನೀಡಿದ್ದಾರೆ.

ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರು ಬೆಳಗಾವಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರಿಂದ ಮಧ್ಯಂತರ ವರದಿ ಪಡೆದುಕೊಂಡರು. ಇದರ ಬೆನ್ನಲ್ಲೇ ಅಡ್ವೋಕೆಟ್‌ ಜನರಲ್‌ ಸೇರಿದಂತೆ ಹಿರಿಯ ಕಾನೂನು ತಜ್ಞರಿಂದ ಸಲಹೆ ಪಡೆದರು. ಅನಂತರ ಹಿರಿಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಕಾನೂನು ತೊಡಕುಗಳನ್ನು ನಿವಾರಿಸಲು ಸಮಯಾವಕಾಶ ಅವಶ್ಯಕತೆಯಿದೆ ಎಂಬುದನ್ನು ಹೋರಾಟಗಾರರಿಗೆ ಮನದಟ್ಟು ಮಾಡಿಕೊಡಲು ನಿರ್ಧರಿಸಿದರು.

ಪಂಚಮಸಾಲಿಗಳಿಗೆ 2ಎ ಸಿಕ್ಕೇ ಸಿಗುತ್ತೆ: ಯಡಿಯೂರಪ್ಪ

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಸೂಕ್ಷ್ಮವಾಗಿ ಸಂಪುಟದ ಸದಸ್ಯರಿಗೆ ಮನದಟ್ಟು ಮಾಡಿದ ಬೊಮ್ಮಾಯಿ ಅನಂತರ ಪಂಚಮಸಾಲಿ ನಾಯಕರೊಂದಿಗೆ ಸಭೆ ನಡೆಸಿ ಒಂದು ವಾರದಲ್ಲಿ ಪೂರಕ ನಿರ್ಧಾರ ಪ್ರಕಟಿಸುವ ಆಶ್ವಾಸನೆಯಿತ್ತು ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಮುಖ್ಯಮಂತ್ರಿಯವರೊಂದಿಗೆ ನಡೆದ ಸಭೆಯ ನಂತರ ಹೋರಾಟ ನಿರತರ ಬಳಿ ತೆರಳಿ ಸಭೆಯ ವಿವರ ನೀಡಿದ ಶಾಸಕ ಹಾಗೂ ಸಮುದಾಯದ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌, ಮುಖ್ಯಮಂತ್ರಿಗಳು ಆತ್ಮಸಾಕ್ಷಿ ಮತ್ತು ತಮ್ಮ ತಾಯಿಯ ಮೇಲೆ ಆಣೆ ಮಾಡಿ ಮೀಸಲಾತಿ ಪ್ರಕಟಿಸುವುದಾಗಿ ಭರವಸೆ ನೀಡಿ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಹೀಗಾಗಿ, ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನಾವು ಡಿ.29ರಂದು ಜಾತ್ರೆ ಮಾಡುತ್ತೇವೆ. ಒಂದು ವೇಳೆ ಮೀಸಲಾತಿ ನೀಡದಿದ್ದರೆ ಎಲ್ಲರನ್ನೂ ಮನೆಗೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

ಮಧ್ಯಂತರ ವರದಿ ಪಡೆದ ಸರ್ಕಾರ:

ಪಂಚಮಸಾಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರನ್ನು ಬೆಂಗಳೂರಿನಿಂದ ಕರೆಸಿಕೊಂಡು ಮಧ್ಯಂತರ ವರದಿ ಪಡೆದುಕೊಂಡಿದೆ.
ಮಧ್ಯಂತರ ವರದಿ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿಗಳು ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಅಡ್ವೋಕೇಟ್‌ ಜನರಲ್‌ ಜತೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಕೆಲವು ಕಠಿಣ ಕಾನೂನುಗಳು ಅಡೆತಡೆಗಳಿವೆ. ಅವುಗಳನ್ನು ನಿವಾರಣೆ ಮಾಡಿದರೆ ಮುಂದಿನ ಕ್ರಮ ಕೈಗೊಳ್ಳಬಹುದು ಎಂಬ ಸಲಹೆಗಳು ವ್ಯಕ್ತವಾಗಿದೆ ಎಂದು ಮೂಲಗಳು ಹೇಳಿವೆ.

ತಜ್ಞರ ಅಭಿಪ್ರಾಯಗಳನ್ನು ಪಡೆದ ಮುಖ್ಯಮಂತ್ರಿಗಳು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಕಾನೂನು ತಡೆಗಳಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅವುಗಳನ್ನು ನಿವಾರಣೆ ಮಾಡಿದ ಬಳಿಕ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಧ್ಯಂತರ ವರದಿಯನ್ನಿಟ್ಟು ಒಪ್ಪಿಗೆ ಪಡೆದುಕೊಳ್ಳುವುದಾಗಿ ಸಂಪುಟದ ಸಹದ್ಯೋಗಿಗಳಿಗೆ ತಿಳಿಸಿದರು ಎಂದ ತಿಳಿದುಬಂದಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುವರ್ಣಸೌಧದಲ್ಲಿಯೇ ಪಂಚಮಸಾಲಿ ಹೋರಾಟದ ನೇತೃತ್ವದ ವಹಿಸಿದ್ದ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ಕರೆದು ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರು. ತದನಂತರ ಹೋರಾಟಗಾರರಾದ ವಿಜಯಾನಂದ ಕಾಶಪ್ಪನವರ್‌, ವೀಣಾ ಕಾಶಪ್ಪನವರ್‌ ಸೇರಿದಂತೆ ಸಮುದಾಯದ ಇತರರ ಜತೆ ಸಮಾಲೋಚನೆ ನಡೆಸಿದರು. ಈ ವೇಳೆ ತರಾತುರಿಯಲ್ಲಿ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಕಾನೂನಿನ ತೊಡಕು ನಿವಾರಣೆಯಾಗದಿದ್ದರೆ ಸಮಸ್ಯೆಯಾಗಲಿದೆ. ಅಲ್ಲದೇ, ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ ಹೋರಾಟ ನಡೆಸಲು ಸಹ ಕಷ್ಟಕರವಾಗಲಿದೆ. ಹೀಗಾಗಿ ಎಲ್ಲಾ ಹೋರಾಟಗಾರಿಗೂ ಇದನ್ನು ಅರ್ಥ ಮಾಡಿಸಿ ಹೋರಾಟ ಕೈಬಿಡಬೇಕು ಎಂಬುದನ್ನು ಮುಖ್ಯಮಂತ್ರಿಗಳು ಮನದಟ್ಟು ಮಾಡಿದರು. ಮುಖ್ಯಮಂತ್ರಿಗಳ ಅಶ್ವಾಸನೆ ಮೇರೆಗೆ ಪ್ರತಿಟಭಟನಾ ಸ್ಥಳಕ್ಕೆ ತೆರಳಿದ ಮುಖಂಡರು ಎಲ್ಲರ ಮನವೊಲಿಕೆ ಮಾಡಿ ಹೋರಾಟವನ್ನು ಹಿಂಪಡೆಯುವಂತೆ ಮಾಡಿದರು.

2ಎಗೆ ಸೇರಿಸಿದರೆ ಸಮಸ್ಯೆ: ಆಯೋಗ ಮಧ್ಯಂತರ ವರದಿ?

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಸಂಬಂಧ 2ಎ ವರ್ಗದಲ್ಲಿನ ಸಮುದಾಯಗಳಿಗೆ ಸಮಸ್ಯೆಯಾಗಲಿದ್ದು, ಹೊಸ ದಾರಿ ಹುಡುಕುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರ ಮಧ್ಯಂತರ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪಂಚಮಸಾಲಿಗೆ ಮೀಸಲಾತಿ ಸಿಎಂ ಕೊಟ್ಟೇ ಕೊಡುತ್ತಾರೆ: ಯತ್ನಾಳ

2ಎ ಪ್ರವರ್ಗದಲ್ಲಿ 100ಕ್ಕೂ ಹೆಚ್ಚು ಜಾತಿಗಳಿವೆ. ಪಂಚಮಸಾಲಿ ಸಮುದಾಯವನ್ನು ಸೇರಿಸುವುದರಿಂದ ಆ ಸಮುದಾಯದಲ್ಲಿರುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ. 2ಎ ಪ್ರವರ್ಗದಲ್ಲಿರುವ ಸಮುದಾಯಗಳಿಗಿಂತ ಪಂಚಮಸಾಲಿ ಸಮುದಾಯ ಮುಂದುವರಿದ ಸಮುದಾಯ. ಹೊಸ ಪ್ರವರ್ಗ ರಚನೆ ಮಾಡಿ ಅದರಲ್ಲಿ ಅವಕಾಶ ನೀಡುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಹೊಸ ಪ್ರವರ್ಗದಲ್ಲಿ ಮೀಸಲಾತಿ ನೀಡುವಾಗ ಜನಸಂಖ್ಯೆ ಆಧರಿಸಿ ಹೆಚ್ಚು ಮೀಸಲಾತಿ ಪಡೆಯುತ್ತಿರುವ ಸಮುದಾಯದಿಂದ ಮೀಸಲಾತಿ ತೆಗೆದು ಹೊಸ ಪ್ರವರ್ಗಕ್ಕೆ ಹಂಚುವಂತೆ ಸಲಹೆ ಮಾಡಲಾಗಿದೆ ಎಂದು ಹೇಳಲಾಗಿದೆ.

2ಎ ಬೇಡ: ಹೆಗ್ಡೆ ಆಯೋಗ ವರದಿ?

- 2ಎ ಪ್ರವರ್ಗದಲ್ಲಿವೆ 100ಕ್ಕೂ ಹೆಚ್ಚು ಜಾತಿ, ಪಂಚಮಸಾಲಿ ಸೇರಿಸಿದರೆ ಇತರರಿಗೆ ಅನ್ಯಾಯವಾಗುತ್ತದೆ
- ಹಾಗಾಗಿ, ಹೊಸ ಪ್ರವರ್ಗನೊಂದನ್ನು ರಚಿಸಿ ಅದರಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅವಕಾಶ ನೀಡಿ
- ಜನಸಂಖ್ಯೆ ಆಧಾರದಲ್ಲಿ ಹೆಚ್ಚು ಮೀಸಲು ಪಡೆವ ಸಮುದಾಯದಿಂದ ತೆಗೆದು ಹೊಸ ಪ್ರವರ್ಗಕ್ಕೆ ಹಂಚಿ
- ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಮಧ್ಯಂತರ ವರದಿ: ಮೂಲಗಳು

2ಸಿ ಅಥವಾ 3ಸಿ ಪ್ರವರ್ಗ ಸೃಷ್ಟಿ?

- ಹಿಂದುಳಿದವರ ಮೀಸಲಾತಿ ಪ್ರವರ್ಗ 2ಎ ಅಡಿ 104 ಜಾತಿಗಳು, 2ಬಿ ಅಡಿ ಮುಸ್ಲಿಂ ಸಮುದಾಯಗಳಿವೆ
- ಪ್ರವರ್ಗ 3ಎ ಅಡಿ 3 ಹಾಗೂ 3ಬಿ ಅಡಿ 4 ಜಾತಿಗಳಿವೆ. 2ಎನಲ್ಲಿ ಬಲಾಢ್ಯ ಜಾತಿಗೆ ಮೀಸಲಾತಿ ಲಾಭ ಹೆಚ್ಚು
- 99 ಉಪಜಾತಿಗಳಿಗೆ ಸೌಲಭ್ಯವೇ ಸಿಕ್ಕಿಲ್ಲ. ಹಾಗಾಗಿ, ಪಂಚಮಸಾಲಿಗಳಿಗೆ 2ಎ ಅಡಿ ಮೀಸಲು ನೀಡುವುದು ಕಷ್ಟ
- ಹಾಗಾಗಿ, 3ಎ, 3ಬಿಯನ್ನು ವಿಭಜಿಸಿ 2ಸಿ/3ಸಿ ಪ್ರವರ್ಗ ರಚಿಸಿ ಪಂಚಮಸಾಲಿಗೆ ಮೀಸಲಾತಿ ಕಲ್ಪಿಸುವ ಚಿಂತನೆ

Follow Us:
Download App:
  • android
  • ios