*  ಪ್ರಾಣಿಗಳಿಂದ ಮನುಷ್ಯರ ಪ್ರಾಣ ಉಳಿಸುವ ಕೆಲಸವೂ ಆಗಬೇಕಿದೆ*  ಪರಿಸರ ರಕ್ಷಣೆ ಮೂಲಕ ಆಕ್ಸಿಜನ್ ಹೆಚ್ಚಿಸುವ ಕೆಲಸ ಆಗಬೇಕಿದೆ *  ಕಾಡನ್ನು ಉಳಿಸಿ ಬೆಳೆಸಲು ಸರ್ಕಾರದಿಂದ ಅಗತ್ಯ ಕ್ರಮ 

ಬೆಂಗಳೂರು(ಸೆ.11): ಇತ್ತೀಚೆಗೆ ಪರಿಸರ ನಷ್ಟ ಹೆಚ್ಚಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಪರಿಸರ ನಷ್ಟ ತಪ್ಪಿಸಬೇಕಿದೆ. ಪರಿಸರ ನಷ್ಟ ತಪ್ಪಿಸಲು ವಾರ್ಷಿಕ‌ ಅಧ್ಯಯನ ಅಗತ್ಯವಾಗಿದೆ. ಬಜೆಟ್‌ನಲ್ಲಿ ಪರಿಸರ ಕೊರತೆ ನೀಗಿಸುವ ಯೋಜನೆ‌ ತರಬೇಕು. ನಾನು ಮುಂದಿನ ಬಜೆಟ್‌ನಲ್ಲಿ ಪರಿಸರ ವೃದ್ಧಿಗೆ ಯೋಜನೆ ತರುತ್ತೇನೆ. ಇದರಿಂದ ಪರಿಸರ ನಷ್ಟವನ್ನು ಕೊಂಚ ಮಟ್ಟಿಗೆ ತಡೆಯಬಹುದಾಗಿದೆ. ಇದೇ ಮೊದಲ ಬಾರಿಗೆ ನಾವು ಪರಿಸರ ನಷ್ಟ ತಪ್ಪಿಸಲು ಯೋಜನೆಯನ್ನ ತರುತ್ತಿದ್ದೇವೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಹಿರಿಯರು ಅರಣ್ಯ ಸಂರಕ್ಷಣೆ ಮಾಡಿದ್ದಕ್ಕೆ ಇಂದು ನಾವಿದ್ದೇವೆ. ಹಿರಿಯರ ಹಾಗೆ ನಾವೂ ಮುಂದಿನ ಪೀಳಿಗೆಯವರಿಗೆ ಪರಿಸರ, ಅರಣ್ಯ ಸಂರಕ್ಷಣೆ ಮಾಡಬೇಕಿದೆ. ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗೆ ಶೇ.10 ರಷ್ಟು ಅರಣ್ಯ ವೃದ್ಧಿ ಆಗಬೇಕು. ಕಾಡನ್ನು ಉಳಿಸಿ ಬೆಳೆಸಲು ಸರ್ಕಾರ ಅಗತ್ಯ ಕ್ರಮ ವಹಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಬಂಡೀಪುರಕ್ಕೆ ಹೆದ್ದಾರಿ ಪ್ರಾಧಿಕಾರದ ರಸ್ತೆ ಅಗಲೀಕರಣ ಕಂಟಕ, ಕಾಡು ಕಡಿಸಲು ಯೋಜನೆ!

ಆನೆ ಕಾರಿಡಾರ್‌ಗಳನ್ನು ಉಳಿಸಿಕೊಂಡು ಹೋಗಬೇಕಿದೆ. ಆನೆ ಕಾರಿಡಾರ್ ನಷ್ಟ ಆದ್ರೆ ಆನೆಗಳು ನಾಡಿಗೆ ಬರುತ್ತವೆ. ಇದೇ ವೇಳೆ ಪ್ರಾಣಿಗಳಿಂದ ಮನುಷ್ಯರ ಪ್ರಾಣ ಉಳಿಸುವ ಕೆಲಸವೂ ಆಗಬೇಕಿದೆ. ಅರಣ್ಯ ಸಂರಕ್ಷಣೆ‌ ಮಾಡೋರಷ್ಟೇ ಅಲ್ಲ ಪ್ರಾಣ ಕಳೆದುಕೊಂಡ ಸಾಮಾನ್ಯ ಜನರೂ ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದಾರೆ. 

ಮಾಜಿ ಸಿಎಂ ಯಡಿಯೂರಪ್ಪನವರು ಕರ್ತವ್ಯದಲ್ಲಿದ್ದಾಗ ಪ್ರಾಣ ಕಳೆದುಕೊಂಡ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ 30 ಲಕ್ಷ ರೂ ಪರಿಹಾರ ಘೋಷಿಸಿದ್ದರು. ಅದುವರೆಗೆ ಪರಿಹಾರ ಮೊತ್ತ ಕಡಿಮೆ ಇತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪನವರಿಗೂ ಅಭಿನಂದನೆ ತಿಳಿಸುತ್ತೇನೆ. ಕೋವಿಡ್‌ ಟೈಮ್‌ನಲ್ಲಿ ಆಕ್ಸಿಜನ್ ಎಷ್ಟು ಇಂಪಾರ್ಟೆಂಟ್ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಪರಿಸರ ರಕ್ಷಣೆ ಮೂಲಕ ಆಕ್ಸಿಜನ್ ಹೆಚ್ಚಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದ್ದಾರೆ.