ನಿಗಮ-ಮಂಡಳಿ ಅಧ್ಯಕ್ಷ ನೇಮಕ ರದ್ದು: ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ..!
* ಅಧಿಕಾರವನ್ನೊಮ್ಮೆ ಅನುಭವಿಸಲು ಹಲವರು ಕಾತರ
* ಸಚಿವರು ಹೆಚ್ಚು ವಿಶ್ವಾಸದಿಂದ ಇಲ್ಲ
* ನಿಷ್ಠಾವಂತರ ಕಡೆಗಣನೆಗೆ ಅಸಮಾಧಾನ
ಮಂಡ್ಯ ಮಂಜುನಾಥ
ಮಂಡ್ಯ(ಜು.13): ನಿಗಮ-ಮಂಡಳಿ, ಪ್ರಾಧಿಕಾರಕ್ಕೆ ನೇಮಕ ಮಾಡಿದ್ದ ಅಧ್ಯಕ್ಷ-ಉಪಾಧ್ಯಕ್ಷರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರದ್ದುಪಡಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲಾ ಮಟ್ಟದ ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ ಮೂಡಿದೆ. ಹಲವು ಮುಖಂಡರು ಅಧಿಕಾರ ಪಡೆಯುವುದಕ್ಕೆ ತಮ್ಮ ಬೆಂಬಲಿಗ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಎರಡು ವರ್ಷಗಳಿಂದ ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದ್ದು, ಈಗ ಬದಲಾವಣೆಗೆ ಸರ್ಕಾರ ಒಲವು ತೋರಿದ್ದು, ಇದರ ಬೆನ್ನಲ್ಲೇ ಆಕಾಂಕ್ಷಿಗಳಿಂದ ಲಾಭಿಯೂ ತೀವ್ರಗೊಂಡಿದೆ.
ಮೈಷುಗರ್ ಅಧ್ಯಕ್ಷರಾಗಲು ಬಸವರಾಜು ಯತ್ನ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರದ್ದುಪಡಿಸಿರುವ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರ ಪಟ್ಟಿಯಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರ ಹೆಸರೂ ಸೇರಿದೆ. ಕಳೆದೆರಡು ವರ್ಷಗಳಿಂದ ಮೈಷುಗರ್ ಸಕ್ಕರೆ ಕಾರ್ಖಾನೆಗೆ ಶಿವಲಿಂಗೇಗೌಡ ಅಧ್ಯಕ್ಷರಾಗಿದ್ದರು. ಆ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿಎಂ ಆಪ್ತ ಎಂದೇ ಗುರುತಿಸಿಕೊಂಡಿರುವ ಎಲೆಚಾಕನಹಳ್ಳಿ ಬಸವರಾಜು ಅಧ್ಯಕ್ಷರಾಗುವುದಕ್ಕೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ.
ಕೊನೆಗೂ ನಿಗಮ ಮಂಡಳಿ ನೇಮಕಾತಿ ರದ್ದು; ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ
ಹೂತಗೆರೆ ಪ್ರಸನ್ನ ಲಾಭಿ:
ಮದ್ದೂರು ತಾಲೂಕಿನ ಹೂತಗೆರೆ ಪ್ರಸನ್ನ ಮೈಸೂರು ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಅಧ್ಯಕ್ಷ ಅಥವಾ ಕೆಎಸ್‌ಟಿಡಿಸಿ ಉಪಾಧ್ಯಕ್ಷ ಸ್ಥಾನ ನೀಡುವಂತೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಂದ ಶಿಫಾರಸು ಪತ್ರ ಪಡೆದು ಸಿಎಂ ಬಸವರಾಜ ಬೊಮ್ಮಾಯಿಗೆ ನೀಡಿದ್ದಾರೆ. ಮೂರು ವರ್ಷದ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಎಸ್.ಎಂ.ಕೃಷ್ಣ ಅವರ ಶಿಫಾರಸ್ಸಿನ ಮೇರೆಗೆ ಮನ್‌ಮುಲ್ ನಿರ್ದೇಶಕ ಸ್ಥಾನಕ್ಕೆ ಸರ್ಕಾರದಿಂದ ಹೂತಗೆರೆ ಪ್ರಸನ್ನ ನಾಮನಿರ್ದೇಶನಗೊಂಡಿದ್ದರು. ಆದರೆ, ತಕ್ಷಣವೇ ಆ ಆದೇಶವನ್ನು ಹಿಂಪಡೆಯಲಾಗಿತ್ತು. ಈಗ ಅವರನ್ನು ಪರಿಗಣಿಸುವಂತೆ ಕೋರಿದ್ದು, ಎಸ್.ಎಂ.ಕೃಷ್ಣ ಕೋರಿಕೆಗೆ ಸಿಎಂ ಸ್ಪಂದನೆ ಹೇಗಿರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಕಾಡಾ ಮೇಲೆ ನಂಜುಂಡೇಗೌಡ ಕಣ್ಣು:
ಮೈಸೂರಿನ ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಮೇಲೆ ಕೆ.ಎಸ್.ನಂಜುಂಡೇಗೌಡ ಅವರು ದೃಷ್ಟಿನೆಟ್ಟಿದ್ದಾರೆ. ಈ ಹಿಂದೆ ಜಿಲ್ಲೆಯವರೇ ಆದ ಎನ್.ಶಿವಲಿಂಗಯ್ಯ ಅಧ್ಯಕ್ಷರಾಗಿದ್ದರು. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಶಿಫಾರಸ್ಸಿನ ಮೇರೆಗೆ ಅವರಿಗೆ ಹುದ್ದೆ ನೀಡಲಾಗಿತ್ತು. ಈಗ ಅದೇ ಹುದ್ದೆಯನ್ನು ಮಂಡ್ಯ ಜಿಲ್ಲೆಯವರಿಗೆ ನೀಡಿದಲ್ಲಿ ಕೆ.ಎಸ್.ನಂಜುಂಡೇಗೌಡರಿಗೆ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ.
ಪರಿಸರ ಮಾಲಿನ್ಯ ಮಂಡಳಿ ನಿರೀಕ್ಷೆ:
ಬಿಜೆಪಿ ಪಕ್ಷದಲ್ಲಿರುವ ಹಿರಿಯರಾದ ಡಾ.ಸಿದ್ದರಾಮಯ್ಯ ಅವರು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಅಧಿಕಾರ ಪಡೆಯುವುದಕ್ಕೆ ಸಾಕಷ್ಟುಪ್ರಯತ್ನ ನಡೆಸಿದರೂ ಈವರೆಗೂ ಸಿಕ್ಕಿಲ್ಲ. ಆದರೂ ನಿರಾಶರಾಗದೆ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ.
ನಿಷ್ಠಾವಂತರ ಕಡೆಗಣನೆಗೆ ಅಸಮಾಧಾನ
ಇನ್ನುಳಿದಂತೆ ಬಿಜೆಪಿ ಮಾಜಿ ಅಧ್ಯಕ್ಷ ಎಚ್.ಮಹೇಶ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಪ್ರಭಾಕರ್, ಮನ್‌ಮುಲ್ ಮಾಜಿ ನಿರ್ದೇಶಕ ಶೀಳನೆರೆ ಅಂಬರೀಶ್, ಬಿಜೆಪಿ ಮುಖಂಡರಾದ ಎಚ್.ಆರ್.ಅರವಿಂದ್, ಹೊಸಹಳ್ಳಿ ನಾಗೇಶ್, ಡಾ.ಸದಾನಂದ ಸೇರಿದಂತೆ ಹಲವಾರು ಮಂದಿ ನಿಗಮ-ಮಂಡಳಿಗಳ ಅಧ್ಯಕ್ಷ -ಉಪಾಧ್ಯಕ್ಷರಾಗುವ ಆಕಾಂಕ್ಷೆಯನ್ನು ಹೊಂದಿದ್ದರೂ ಇವರ ಬೇಡಿಕೆಗಳಿಗೆ ನಾಯಕರಿಂದ ಸರಿಯಾದ ಸ್ಪಂದನೆಯೇ ಸಿಗುತ್ತಿಲ್ಲ.
ಪಕ್ಷ ಸಂಘಟನೆ, ಕಾರ್ಯಕ್ರಮಗಳ ಆಯೋಜನೆಗಷ್ಟೇ ಸೀಮಿತವಾಗಿ ದುಡಿಸಿಕೊಳ್ಳುತ್ತಿರುವುದರಿಂದ ತೀವ್ರ ಬೇಸರಗೊಂಡಿದ್ದಾರೆ. ನಿಷ್ಠಾವಂತ ಮುಖಂಡರು-ಕಾರ್ಯಕರ್ತರಿಗೆ ಅಧಿಕಾರ ದೊರಕಿಸಿಕೊಡದೆ ಪಕ್ಷದ ನಾಯಕರು ಕಡೆಗಣಿಸುತ್ತಿರುವ ಬಗ್ಗೆ ಒಡಲಾಳದಲ್ಲಿ ನೋವಿದ್ದರೂ ಬಹಿರಂಗವಾಗಿ ತೋರ್ಪಡಿಸಿಕೊಳ್ಳಲಾಗುತ್ತಿಲ್ಲ. ಆದರೂ ಅಧಿಕಾರ ಸಿಗುವ ಆಶಾಭಾವನೆಯೊಂದಿಗೆ ಈಗಲೂ ಎದುರುನೋಡುತ್ತಲೇ ಇದ್ದಾರೆ.
Third Gender: ನಿಗಮ, ಮಂಡಳಿಗಳಲ್ಲೂ ತೃತೀಯ ಲಿಂಗಿಗಳಿಗೆ ಮೀಸಲಾತಿ: ಹೈಕೋರ್ಟ್
ಅಧಿಕಾರದ ಕುರ್ಚಿಯಲ್ಲಿ ಒಮ್ಮೆಯಾದರೂ ಕೂರಬೇಕೆನ್ನುವುದು ಹಲವರ ಕನಸಾಗಿದೆ. ಈ ಕನಸನ್ನು ಹೊತ್ತವರು ನಾಯಕರಿಗೆ ಬೆನ್ನುಹತ್ತಿ ಅಧಿಕಾರ ಹಿಡಿಯುವ ಸಾಹಸಕ್ಕೆ ಇಳಿದಿದ್ದಾರೆ. ಇನ್ನು ಕೆಲವರು ಈಗ ಕೊಡುವುದಾದರೆ ರಾಜ್ಯಮಟ್ಟದ ನಿಗಮ-ಮಂಡಳಿ ಕೊಡುವಂತೆ ಪಟ್ಟು ಹಿಡಿದು ಹಿರಿಯ ನಾಯಕರಿಂದ ಒತ್ತಡ ಹೇರುತ್ತಿದ್ದಾರೆ.
ಎರಡೇ ಅಧಿಕಾರದ ಅವಕಾಶ
ಮಂಡ್ಯದಲ್ಲಿ ಪ್ರಮುಖವಾಗಿ ಇರುವುದು ಮೈಷುಗರ್ ಕಾರ್ಖಾನೆ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ. ಈಗಾಗಲೇ ಎರಡು ವರ್ಷ ಮುಡಾ ಅಧ್ಯಕ್ಷ ಸ್ಥಾನದ ಅಧಿಕಾರ ಅನುಭವಿಸಿ ನಂತರದಲ್ಲಿ ಅದೇ ಸ್ಥಾನಕ್ಕೆ ನೇಮಕಗೊಂಡಿರುವ ಕೆ.ಶ್ರೀನಿವಾಸ್ ಬದಲಾವಣೆಗೆ ಜಿಲ್ಲೆಯ ಕೆಲವರು ಪಟ್ಟು ಹಿಡಿದಿದ್ದಾರೆ. ಆದರೆ, ಇತ್ತೀಚೆಗೆ ಅವರ ಮರು ನೇಮಕ ಆದೇಶ ಹೊರಬಿದ್ದಿರುವುದರಿಂದ ಬದಲಾವಣೆ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ಸರ್ಕಾರ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷ-ಉಪಾಧ್ಯಕ್ಷರನ್ನು ರದ್ದುಗೊಳಿಸಿರುವ ಪಟ್ಟಿಯಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಹೆಸರಿಲ್ಲದಿರುವುದು ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಉಳಿದ ನಿಗಮ, ಮಂಡಳಿ, ಪ್ರಾಧಿಕಾರಗಳು ಎಲ್ಲ ಹೊರ ಜಿಲ್ಲೆಗಳಲ್ಲಿರುವುದರಿಂದ ಆ ಜಿಲ್ಲೆಯವರೊಂದಿಗೆ ಹೋರಾಟ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುವುದು ಕಷ್ಟಎನ್ನಲಾಗಿದೆ.
ಸಚಿವರು ಹೆಚ್ಚು ವಿಶ್ವಾಸದಿಂದ ಇಲ್ಲ
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಗೋಪಾಲಯ್ಯ ಈ ಜಿಲ್ಲೆಯ ಬಿಜೆಪಿ ಮುಖಂಡರೊಂದಿಗೆ ಹೆಚ್ಚಿನ ವಿಶ್ವಾಸದಿಂದೇನೂ ಇಲ್ಲ. ಸಚಿವ ಕೆ.ಸಿ.ನಾರಾಯಣಗೌಡರು ಸಂಪುಟದಲ್ಲಿದ್ದರೂ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಶ್ರಮಿಸಿದ ಕೆ.ಪ್ರಭಾಕರ್, ಶೀಳನೆರೆ ಅಂಬರೀಶ್ ಅವರಿಗೇ ನಿಗಮ-ಮಂಡಳಿ, ಪ್ರಾಧಿಕಾರದಲ್ಲಿ ಸ್ಥಾನ-ಮಾನ ಕೊಡಿಸಲಾಗಲಿಲ್ಲ. ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು-ಕಾರ್ಯಕರ್ತರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪುತ್ರ ವಿಜಯೇಂದ್ರ ಜೊತೆಗೂ ಹೆಚ್ಚು ಒಡನಾಟದಿಂದ ಇಲ್ಲದ ಕಾರಣ ಇಲ್ಲಿನವರಿಗೆ ಅಧಿಕಾರ ಸಿಗುವುದು ಮರೀಚಿಕೆಯಾಗಿದೆ. ಇದರ ನಡುವೆಯೂ ಯಾರಿಗಾದರೂ ರಾಜ್ಯಮಟ್ಟದ ಅಧಿಕಾರ ಒಲಿದುಬಂದಲ್ಲಿ ಅದು ಅವರ ಅದೃಷ್ಟವೇ ಸರಿ ಎಂದು ಹೇಳಲಾಗುತ್ತಿದೆ.