ಏರ್‌ಪೋರ್ಟ್‌ಗೆ ಕೆಂಪೇಗೌಡ ಹೆಸರಿಟ್ಟಿದ್ದು ನಾವು: ಸಿಎಂ ಬೊಮ್ಮಾಯಿ
ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡುವಲ್ಲಿ ನಮ್ಮ ಪಕ್ಷದ ಸರ್ಕಾರ ಮಹತ್ವದ ಪಾತ್ರ ನಿಭಾಯಿಸಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ನ.12): ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡುವಲ್ಲಿ ನಮ್ಮ ಪಕ್ಷದ ಸರ್ಕಾರ ಮಹತ್ವದ ಪಾತ್ರ ನಿಭಾಯಿಸಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
‘ಹುಟ್ಟುವ ಮಗುವಿಗೆಲ್ಲಾ ನಾಮಕರಣ ಮಾಡಿದ್ದು ನಾನೇ ಎನ್ನುವಂತೆ ಹೇಳಿಕೊಳ್ಳುವ ಸಿದ್ದರಾಮಯ್ಯನವರೇ, ಏರ್‌ಪೋರ್ಟ್‌ಗೆ ಕೆಂಪೇಗೌಡರ ಹೆಸರು ಇಡುವ ತೀರ್ಮಾನ ಮಾಡಿದ್ದು ಅಂದಿನ ಬಿಜೆಪಿ ಸರ್ಕಾರ. 2009ರ ಫೆ.27ರಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಯಡಿಯೂರಪ್ಪ ಸರ್ಕಾರ. ಆದರೆ ಈ ಬಗ್ಗೆ ತೀರ್ಮಾನ ಮಾಡಲು ಯುಪಿಎ ಸರ್ಕಾರ ತೆಗೆದುಕೊಂಡ ಸಮಯ ಬರೋಬ್ಬರಿ 4 ವರ್ಷ. ಟೀವಿ ಕ್ಯಾಮೆರಾ ಮುಂದೆ ಬಂದು ಒಳ್ಳೆಯದ್ದಕ್ಕೆಲ್ಲಾ ನಾನೇ ಕಾರಣ ಎನ್ನುವ ಸಿದ್ದರಾಮಯ್ಯನವರೇ, ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ 4 ವರ್ಷ ನಿಮ್ಮ ಯುಪಿಎ ಸರ್ಕಾರ ಕಾಯಿಸಿದ್ದು ಏಕೆ’ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಏಕತೆಯ ಸಂದೇಶ ಸಾರಿದ್ದ ಕನಕದಾಸರು: ಪ್ರಧಾನಿ ಮೋದಿ
2011ರವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಾರದಿದ್ದಾಗ ಪುನಃ 2011ರಲ್ಲಿ ಸದನದಲ್ಲಿ ಚರ್ಚಿಸಿ ಮತ್ತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆಯನ್ನು ಸಲ್ಲಿಸಲಾಯಿತು. ಆಗಲೂ ಅಂದಿನ ಯುಪಿಎ ಸರ್ಕಾರ ಮೌನ ವಹಿಸಿದ ಕಾರಣ, 2012ರಲ್ಲಿ ಉಭಯ ಸದನಗಳಲ್ಲಿ ನಿರ್ಣಯ ತೆಗೆದುಕೊಂಡು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು ಎಂದಿದ್ದಾರೆ.
ಹಲವಾರು ಪ್ರಯತ್ನಗಳ ನಂತರ 2013ರ ಜುಲೈನಲ್ಲಿ ರಾಜ್ಯದ ಈ ಪ್ರಸ್ತಾವನೆಯನ್ನು ಅಂದಿನ ಯುಪಿಎ ಸರ್ಕಾರ ಅನುಮೋದಿಸಿತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈಗ ಹೇಳಿ ಕೆಂಪೇಗೌಡರ ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಕಾಂಗ್ರೆಸ್ ಏಕೆ ಮೀನಮೇಷ ಎಣಿಸಿತ್ತು ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ಧಿಗೆ ಪ್ರೇರಣೆ ಆಗಲಿ ಎಂದು ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಬೊಮ್ಮಾಯಿ
ಮಳೆಗಾಲದಲ್ಲಿ ಮಾತ್ರ ಮಿನುಗುವ ಮಿಂಚುಳ್ಳಿ ಹುಳಕ್ಕೆ ಜಗತ್ತಿಗೆಲ್ಲಾ ಬೆಳಕು ನೀಡೋದು ನಾನೇ ಎನ್ನುವ ಭ್ರಮೆಯಂತೆ, ಸಿದ್ದರಾಮಯ್ಯರದು ಕೂಡ ಅದೇ ರೀತಿಯ ಭ್ರಮೆ. ಯಾರೋ ಬೆಳಕು ನೀಡಿದರೆ ರಾಜ್ಯ ನನ್ನಿಂದಲೇ ಬೆಳಗುತ್ತಿದೆ ಎಂದು ಹೇಳಿಕೊಳ್ಳುವ ಚಪಲತೆ. ಕೆಂಪೇಗೌಡರ ಹೆಸರನ್ನು ಏರ್‌ಪೋರ್ಟ್‌ಗೆ ಇಡುವ ತೀರ್ಮಾನ ಮಾಡಿದ್ದು ಬಿಜೆಪಿ ಸರ್ಕಾರ. ಆದರೆ ಅದನ್ನು ನಾವು ಮಾಡಿದ್ದು ಎನ್ನುವ ಸಿದ್ದರಾಮಯ್ಯ ಹೇಳಿಕೆ ನೋಡಿದರೆ ಮಳೆಗಾಲದ ಮಿಂಚುಳ್ಳಿ ನೆನಪಾಗುತ್ತದೆ ಎಂದು ಮೂದಲಿಸಿದ್ದಾರೆ.