Asianet Suvarna News Asianet Suvarna News

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಹಾವೇರಿಯಲ್ಲಿ ಜ.6ರಿಂದ 8ವರೆಗೆ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. 

CM Basavaraj Bommai released invitation letter of Haveri Kannada Sahitya Sammelana gvd
Author
First Published Dec 24, 2022, 1:03 PM IST

ಹಾವೇರಿ (ಡಿ.24): ಹಾವೇರಿಯಲ್ಲಿ ಜ.6ರಿಂದ 8ವರೆಗೆ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಬೇಕು. ಎಲ್ಲಡೆ ಕನ್ನಡದ ಕಂಪು ಹರಡಬೇಕು. ಇತರೆ ಸಮ್ಮೇಳನಕ್ಕಿಂತ ಈ ಸಮ್ಮೇಳನ ಉತ್ಕೃಷ್ಟವಾಗಿರುತ್ತದೆ. ಕನ್ನಡ ಭಾಷೆ, ನೆಲ,ಜಲ ಹಾಗೂ ಜನರನ್ನು ಯಾರು ಮುಟ್ಟಲು ಸಾಧ್ಯವಿಲ್ಲ. ಕನ್ನಡ ನಾಡು ಶ್ರೀಮಂತ ನಾಡು. ಕನ್ನಡ,ಕನ್ನಡಿಗರ ಸಮಸ್ಯೆಗಳನ್ನು  ಸಮ್ಮೇಳನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಇದು ಎಲ್ಲ ಕನ್ನಡಿಗರ ಕಾರ್ಯಕ್ರಮವಾಗಿದ್ದು ಎಲ್ಲರೂ ಆಗಮಿಸುವ ಮೂಲಕ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಹಾವೇರಿ ಸಮ್ಮೇಳನಕ್ಕೆ ಕೊರೋನಾತಂಕ: ಕೊರೋನಾದಿಂದಾಗಿ ಎರಡು ವರ್ಷಗಳಿಂದ ಹಲವು ಸಲ ಮುಂದೂಡುತ್ತಾ ಬಂದು, ಜ.6ರಿಂದ ಮೂರು ದಿನಗಳ ಕಾಲ ನಿಗದಿಯಾಗಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮತ್ತೆ ಕೊರೋನಾ ಕಾರ್ಮೋಡ ಕವಿದಿದೆ. ಜಾಗತಿಕ ಮಟ್ಟದಲ್ಲಿ ಮತ್ತೆ ಕೊರೋನಾ ಏರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಬೀಳುವ ಸಾಧ್ಯತೆಯಿದೆ. ಹೀಗಾಗಿ, ಲಕ್ಷಾಂತರ ಜನ ಸೇರುವ ಸಾಹಿತ್ಯ ಜಾತ್ರೆಯ ಮೇಲೆ ಕೊರೋನಾ ಕರಿನೆರಳು ಬೀಳುವ ಆತಂಕ ಸೃಷ್ಟಿಯಾಗಿದೆ.

Kannada Sahitya Sammelana: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ 32.87 ಕೋಟಿ ಬೇಡಿಕೆ

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಆರಂಭದಿಂದಲೂ ಕೊರೋನಾ ಕಾಡುತ್ತಲೇ ಬಂದಿದೆ. 2020ರ ಫೆಬ್ರವರಿಯಲ್ಲಿ ಕಲಬುರಗಿಯಲ್ಲಿ ಜರುಗಿದ 85ನೇ ಸಾಹಿತ್ಯ ಸಮ್ಮೇಳನದಲ್ಲಿ 86ನೇ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಹಾವೇರಿಗೆ ನೀಡಲಾಗಿತ್ತು. ಅದೇ ವರ್ಷಾಂತ್ಯಕ್ಕೆ ಹಾವೇರಿಯಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಚರ್ಚೆಯಾಗಿತ್ತು. ಎಲ್ಲವೂ ಸರಿಯಾಗಿದ್ದರೆ ಸಮ್ಮೇಳನ ಮುಗಿದು ಎರಡು ವರ್ಷಗಳೇ ಕಳೆದಿರುತ್ತಿತ್ತು. ಆದರೆ, ಒಂದನೇ ಅಲೆ, ಎರಡನೇ ಅಲೆಯಿಂದಾಗಿ ಸಮ್ಮೇಳನ ನಡೆಸಲು ಸಾಧ್ಯವಾಗಿರಲಿಲ್ಲ. ಕೊರೋನಾ ನಿಯಂತ್ರಣಕ್ಕೆ ಬಂದಿದ್ದರಿಂದ ಕಳೆದ ಮೇ ತಿಂಗಳಲ್ಲಿ ಸಮ್ಮೇಳನ ಆಯೋಜಿಸಲು ದಿನಾಂಕ ನಿಗದಿ ಮಾಡಲಾಗಿತ್ತು. 

ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ 1.5 ಲಕ್ಷ ಮಂದಿಗೆ ಊಟದ ವ್ಯವಸ್ಥೆ

ಬಳಿಕ, ಮಳೆಗಾಲ ಸಮೀಪಿಸಿದ್ದರಿಂದ ಅದನ್ನು ನವೆಂಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ನಂತರ, ಮತ್ತೆ ದಿನಾಂಕ ಬದಲಾವಣೆ ಮಾಡಿ ಅಂತೂ ಜನವರಿ 6, 7 ಮತ್ತು 8ರಂದು ಸಮ್ಮೇಳನಕ್ಕೆ ಮುಹೂರ್ತ ನಿಗದಿಯಾಗಿದೆ. ಅಲ್ಲದೆ, ಸಿಎಂ ತವರು ಕ್ಷೇತ್ರದಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಸಮ್ಮೇಳನಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿ ಇದ್ದು, ಎಲ್ಲ ತಯಾರಿಗಳು ಅಂತಿಮ ಹಂತದಲ್ಲಿವೆ. ಸಾಹಿತ್ಯ ಪರಿಷತ್ತು ಕೂಡ ಆಮಂತ್ರಣ ಪತ್ರಿಕೆ ಮುದ್ರಣ, ಪ್ರತಿನಿಧಿಗಳ ನೋಂದಣಿ, ಪುಸ್ತಕಗಳ ಮುದ್ರಣ ಇತ್ಯಾದಿ ತಯಾರಿ ನಡೆಸಿದೆ. ಕೊರೋನಾ ಹಿನ್ನೆಲೆಯಲ್ಲಿ ಏನಾದರೂ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಯಾದರೆ, ಸಾಹಿತ್ಯ ಜಾತ್ರೆಯ ಅದ್ಧೂರಿ ಆಚರಣೆಗೆ ತಡೆ ಬೀಳುವ ಆತಂಕವಿದೆ.

Follow Us:
Download App:
  • android
  • ios