Asianet Suvarna News Asianet Suvarna News

ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ 1.5 ಲಕ್ಷ ಮಂದಿಗೆ ಊಟದ ವ್ಯವಸ್ಥೆ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿ ದಿನ 1.50 ಲಕ್ಷ ಜನರಿಗೆ ಊಟ-ಉಪಾಹಾರ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಲಾಯಿತು. ಮಠಗಳು, ದಾನಿಗಳಿಂದ ಸ್ವಯಂ ಪ್ರೇರಣೆಯಿಂದ ನೆರವು ನೀಡಲು ಮನವಿ ಮಾಡಿಕೊಳ್ಳಲು ಸಮ್ಮೇಳನದ ಆಹಾರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. 

Lunch arrangement for 1.5 lakh people at Haveri Kannada Sahitya Sammelana gvd
Author
First Published Dec 10, 2022, 11:37 AM IST

ಹಾವೇರಿ (ಡಿ.10): 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿ ದಿನ 1.50 ಲಕ್ಷ ಜನರಿಗೆ ಊಟ-ಉಪಾಹಾರ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಲಾಯಿತು. ಮಠಗಳು, ದಾನಿಗಳಿಂದ ಸ್ವಯಂ ಪ್ರೇರಣೆಯಿಂದ ನೆರವು ನೀಡಲು ಮನವಿ ಮಾಡಿಕೊಳ್ಳಲು ಸಮ್ಮೇಳನದ ಆಹಾರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಸಭೆಯ ಗೌರವಾಧ್ಯಕ್ಷ, ಶಾಸಕ ಅರುಣಕುಮಾರ ಪೂಜಾರ ಅಧ್ಯಕ್ಷತೆಯಲ್ಲಿ ಜರುಗಿತು. ಮೊದಲ ದಿನ 1.50 ಲಕ್ಷ ಜನರಿಗೆ ಊಟ-ಉಪಾಹಾರದ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಲಾಯಿತು. 

ಮೊದಲ ದಿನದ ಪ್ರತಿಕ್ರಿಯೆ ನೋಡಿ ಎರಡು ಮತ್ತು ಮೂರನೇ ದಿನ ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನು ಹೆಚ್ಚು ಹಾಗೂ ಕಡಿಮೆ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಆಹಾರ ಸಮಿತಿಯ ಸದಸ್ಯ ಕಾರ್ಯದರ್ಶಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್‌ ರೋಷನ್‌ ಮಾತನಾಡಿ, ಪ್ರತಿನಿತ್ಯ 1.50 ಲಕ್ಷ ಜನರಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಗುವುದು. ಸಾಮಾನ್ಯ ವರ್ಗ, ಗಣ್ಯರು, ಅತಿಗಣ್ಯರು ಮೂರು ವರ್ಗದಲ್ಲಿ ಊಟದ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಸಮ್ಮೇಳನ ನಡೆಯುವ 128 ಎಕರೆದಲ್ಲಿ 35 ಎಕರೆ ವಿಸ್ತಾರದಲ್ಲಿ ಕಿಚನ್‌ ಮತ್ತು ಡೈನಿಂಗ್‌ ವ್ಯವಸ್ಥೆ ಮಾಡಲಾಗುವುದು. 

Grama Vastavya: ಡಿ.17ರಂದು ಸ್ವಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಗ್ರಾಮ ವಾಸ್ತವ್ಯ?

ಅಡುಗೆ ಸಾಮಗ್ರಿ ಸರಬರಾಜಿಗೆ ಪ್ರತ್ಯೇಕ ರಸ್ತೆ ಮಾರ್ಗವನ್ನು ಗುರುತಿಸಲಾಗಿದೆ. 150ರಿಂದ 200 ಕೌಂಟರ್‌ಗಳನ್ನು ತೆರೆಯಲಾಗುವುದು. ಪ್ರತಿ ಕೌಂಟರ್‌ ಉಸ್ತುವಾರಿಗೆ ಓರ್ವ ಅಧಿಕಾರಿ, ಓರ್ವ ಸಿಬ್ಬಂದಿ ಹಾಗೂ 20 ಜನ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗುವುದು. ಮಹಿಳೆಯರಿಗೆ, ವಿಶೇಷಚೇತನರಿಗೆ, 70 ವರ್ಷ ಮೇಲ್ಪಟ್ಟವೃದ್ಧರಿಗೆ, ಸಮ್ಮೇಳನದ ಸೇವಾ ನಿರತರಿಗೆ ಪ್ರತ್ಯೇಕ ಊಟದ ಕೌಂಟರ್‌ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಊಟದ ವ್ಯವಸ್ಥೆ ನಿರ್ವಹಣೆಗಾಗಿ 35 ಅಧಿಕಾರಿಗಳು, 75 ಪಿಡಿಒಗಳು, 200 ಜನ ಬಿಲ್‌ ಕಲೆಕ್ಟರ್‌ಗಳು ಸೇರಿದಂತೆ 350 ಅಧಿಕಾರಿಗಳನ್ನು ತೆಗೆದುಕೊಳ್ಳಲಾಗಿದೆ. ಎನ್‌ಸಿಸಿ, ಎನ್‌ಎಸ್‌ಎಸ್‌ ಸೇರಿದಂತೆ 1500 ಜನರು ಹಾಗೂ ಸಂಘ-ಸಂಸ್ಥೆಯವರು ಸ್ವಯಂ ಪ್ರೇರಣೆಯಿಂದ ಮುಂದೆ ಬರುವ 1500 ಜನರು ಸೇರಿದಂತೆ 3000 ಜನರನ್ನು ಸ್ವಯಂ ಸೇವಕರಾಗಿ ಬಳಸಿಕೊಳ್ಳಲಾಗುವುದು. 

ಊಟದ ವ್ಯವಸ್ಥೆ, ಬಡಿಸುವುದು ಸೇರಿದಂತೆ ಅಚ್ಚುಕಟ್ಟಾಗಿ ನಿರ್ವಹಿಸುವ ಕುರಿತಂತೆ ಎಲ್ಲರಿಗೂ ಮೂರು ದಿನ ಸಂಕ್ಷಿಪ್ತ ತರಬೇತಿ ನೀಡಲಾಗುವುದು. ಪ್ರತಿ ಕೌಂಟರ್‌ಗೆ 20 ಜನರನ್ನು ನಿಯೋಜಿಸಿ ವ್ಯವಸ್ಥಿತವಾಗಿ ಅಡುಗೆ ಮನೆ ಮತ್ತು ಊಟದ ಮನೆಯನ್ನು ನಿರ್ವಹಣೆ ಮಾಡಲು ಯೋಜಿಸಲಾಗಿದೆ ಎಂದರು. ಬೆಳಗ್ಗೆ 7-30ರಿಂದ 11-30ರ ವರೆಗೆ ಬೆಳಗಿನ ಉಪಾಹಾರ, ಮಧ್ಯಾಹ್ನ 1ರಿಂದ 4 ಗಂಟೆವರೆಗೆ ಮಧ್ಯಾಹ್ನ ಭೋಜನ, ಸಂಜೆ 7 ಗಂಟೆಯಿಂದ ರಾತ್ರಿ 10-30ರವರೆಗೆ ರಾತ್ರಿ ಊಟ, ಸಂಜೆ 5 ಗಂಟೆಗೆ ಟೀ ವ್ಯವಸ್ಥೆ ಮಾಡಲಾಗುವುದು. ಎಲ್ಲವೂ ಮುಖ್ಯ ವೇದಿಕೆಯ ಪ್ರಾಂಗಣದ ಭೋಜನಾ ಶಾಲೆಯಲ್ಲೆ ಪಡೆಯಬೇಕು. ನೋಂದಾಯಿತ ಪ್ರತಿನಿಧಿಗಳಿಗೆ ಶಾಲಾ-ಕಾಲೇಜು, ಕಲ್ಯಾಣ ಮಂಟಪದಲ್ಲಿ ಬೆಳಗಿನ ಟೀ-ಕಾಫೀ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಊಟದ ಮೆನು ನಿರ್ಧಾರ: ಸಭೆಯಲ್ಲಿ ಭಾಗವಹಿಸಿದ ಸದಸ್ಯರು ಊಟದ ಮೆನು ಕುರಿತಂತೆ ಚರ್ಚಿಸಿ ಅಂತಿಮವಾಗಿ ಸಮ್ಮೇಳನದ ಮೂರೂ ದಿನ ನಿಗದಿತ ಅವಧಿಯಲ್ಲಿ ಸಾವಯವ ಬೆಲ್ಲದ ಕಾಫಿ, ಟೀ ಪೂರೈಸಲು ನಿರ್ಧರಿಸಿದರು. ಮೊದಲ ದಿನ ಉಪಾಹಾರಕ್ಕೆ ಉಪ್ಪಿಟ್ಟು-ಶಿರಾ, ಎರಡನೇ ದಿನ ಫಲಾವ್‌, ಬೆಲ್ಲದ ಉಂಡೆ, ಮೂರನೇ ದಿನ ವಾಂಗೀಬಾತ್‌-ಮೈಸೂರಪಾಕ್‌ ನೀಡಲು ನಿರ್ಧರಿಸಲಾಯಿತು. ಮಧ್ಯಾಹ್ನದ ಊಟಕ್ಕೆ ಜೋಳದ ರೊಟ್ಟಿ, ಚಪಾತಿ, ಫಲಾವ್‌, ಪಲ್ಯ, ಚಟ್ನಿ, ಅನ್ನಸಾರು, ಪ್ರತಿ ದಿನ ಒಂದು ವಿಶೇಷ ರೈಸ್‌ ಹಾಗೂ ಪಾಯಸ, ರಾತ್ರಿ ಊಟಕ್ಕೆ ಜೋಳದ ರೊಟ್ಟಿ, ಚಪಾತಿ ಪಲ್ಯ, ಅನ್ನಸಾರು ಹಾಗೂ ಕೊನೆಯ ದಿನ ಮಧ್ಯಾಹ್ನ ಬಿರಂಜಿ ರೈಸ್‌, ಮಾದಲಿ ವಿಶೇಷ ಊಟ ತಯಾರು ಮಾಡಲು ತೀರ್ಮಾನಿಸಲಾಯಿತು.

ನೆರವು: ಸಾಹಿತ್ಯ ಸಮ್ಮೇಳನದಲ್ಲಿ ಮೂರು ದಿನ ಲಕ್ಷಾಂತರ ಜನ ಭಾಗವಹಿಸುವುದರಿಂದ ವಿವಿಧ ಮಠಗಳಿಂದ, ದಾನಿಗಳಿಂದ, ವಿವಿಧ ಸಂಘ-ಸಂಸ್ಥೆಗಳಿಂದ ನೆರವು ಪಡೆಯಲು ನಿರ್ಧರಿಸಲಾಯಿತು. ಈ ಕುರಿತಂತೆ ವಿವಿಧ ಮಠಾಧೀಶರು ಹಾಗೂ ದಾನಿಗಳನ್ನು ಆಹ್ವಾನಿಸಿ ಶೀಘ್ರವೇ ವಿಶೇಷ ಸಭೆ ನಡೆಸಲು ತೀರ್ಮಾನಿಸಲಾಯಿತು. ಮಠಾಧೀಶರು, ಸಂಘ-ಸಂಸ್ಥೆಗಳು, ವಾಣಿಜ್ಯೋದ್ಯಮಿಗಳು, ದಾನಿಗಳು ಸ್ವಯಂ ಪ್ರೇರಣೆಯಿಂದ ಜೋಳದ ರೊಟ್ಟಿಸೇರಿದಂತೆ ಭೋಜನಕ್ಕೆ ನೆರವು ಒದಗಿಸುವಂತೆ ಆಹಾರ ಸಮಿತಿಯ ಗೌರವಾಧ್ಯಕ್ಷರಾದ ಅರುಣಕುಮಾರ ಪೂಜಾರ ಅವರು ಮನವಿ ಮಾಡಿಕೊಂಡರು. ಸಾಹಿತ್ಯ ಸಮ್ಮೇಳನದ ಕೊನೆಯ ದಿನದ ಮಧ್ಯಾಹ್ನ ಊಟಕ್ಕೆ ವಿಶೇಷ ಬಿರಂಜಿ ರೈಸ್‌ ಹಾಗೂ ಮಾದಲಿ ಊಟದ ಪ್ರಾಯೋಜಕತ್ವವನ್ನು ವಹಿಸಿ ಸಂಪೂರ್ಣ ವೆಚ್ಚ ಭರಿಸುವುದಾಗಿ ಶಾಸಕ ಅರುಣಕುಮಾರ ಪೂಜಾರ ಸಭೆಗೆ ತಿಳಿಸಿದರು.

ಶಾಲಾ ಮಕ್ಕಳಿಗೆ ವಿಶೇಷ ಬಸ್‌ ಸೌಲಭ್ಯ: ಸಿಎಂ ಬೊಮ್ಮಾಯಿ

ಎಲ್ಲರೂ ಕೈ ಜೋಡಿಸಿ: ರಾಣಿಬೆನ್ನೂರು ಶಾಸಕ ಅರುಣಕುಮಾರ ಪೂಜಾರ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಸಮ್ಮೇಳನದ ಯಶಸ್ಸು ಆಹಾರ ಸಮಿತಿಯ ಮೇಲಿದೆ. ಲಕ್ಷಾಂತರ ಜನರಿಗೆ ಅಚ್ಚುಕಟ್ಟುತನದಿಂದ ಬಡಿಸುವ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಹೆಚ್ಚಿನ ಕೌಂಟರ್‌ಗಳನ್ನು ತೆರೆಯಬೇಕು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು. ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳಾದ ಎಸ್‌.ಎಸ್‌. ಬೇವಿನಮರದ, ದೊಡ್ಡನಗೌಡರ, ಆಹಾರ ಸಮಿತಿಯ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರು ಊಟದ ಮೆನು ಹಾಗೂ ವ್ಯವಸ್ಥೆಯ ಕುರಿತಂತೆ ಸಲಹೆಗಳನ್ನು ನೀಡಿದರು.

Follow Us:
Download App:
  • android
  • ios