ಹಲವು ದಿನಗಳ ನಂತರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ದಿನವಿಡೀ ಸಭೆ ನಡೆಸುವ ಮೂಲಕ ಪರಾಮರ್ಶೆ ನಡೆಸಿದರು.

ಬೆಂಗಳೂರು (ಅ.18): ಹಲವು ದಿನಗಳ ನಂತರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ದಿನವಿಡೀ ಸಭೆ ನಡೆಸುವ ಮೂಲಕ ಪರಾಮರ್ಶೆ ನಡೆಸಿದರು.

ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಹಲವು ಸಚಿವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಪ್ರತ್ಯೇಕವಾಗಿ ಸಭೆ ನಡೆಸಿದರು. ಈ ವೇಳೆ ಮಳೆ ಹಾನಿ, ಅಭಿವೃದ್ಧಿ ಕಾರ್ಯಗಳ ಪರಿಶೀಲನೆ, ಬಜೆಟ್‌ ಅನುಷ್ಠಾನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು. ಪ್ರವಾಹ ಪರಿಸ್ಥಿತಿ ತಲೆದೋರಿರುವ ಸ್ಥಳದಲ್ಲಿ ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಿದ್ದು ಅವಧಿಯಲ್ಲಿ ನಡೆದ ಭ್ರಷ್ಟಾಚಾರ ದೇಶದಲ್ಲೆಲ್ಲೂ ನಡೆದಿಲ್ಲ: ಸಿಎಂ ಬೊಮ್ಮಾಯಿ

ಅಧಿಕಾರಿಗಳು ಕೆಲಸ ಮಾಡಬೇಕು. ಇಲ್ಲದಿದ್ದರೆ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ನಿಮ್ಮ ಬದಲು ಬೇರೊಬ್ಬರನ್ನು ಕೂರಿಸುವುದು ಗೊತ್ತಿದೆ. ಮಳೆ ಅವಾಂತರಕ್ಕೆ ಸಮರ್ಪಕ ಪರಿಹಾರ ವಿತರಣೆ ಮಾಡಿಲ್ಲ ಎಂಬ ಆರೋಪಗಳು ಬಂದಿವೆ. ಪರಿಹಾರ ಹಂಚಿಕೆಯಲ್ಲಿಯೂ ವಿಳಂಬವಾಗುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ. ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿಲ್ಲ. ಕಚೇರಿಯಿಂದಲೇ ಕೆಲಸ ಮಾಡುವುದನ್ನು ಬಿಟ್ಟು ತಿಂಗಳಿಗೊಮ್ಮೆಯಾದರೂ ತಾಲೂಕುಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಬೇಕು. ಇನ್ನು, ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡುತ್ತಿದ್ದು, ರೋಗ ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ? ಲಸಿಕೆ ಹಾಕುವುದು, ಪರಿಹಾರ ಪಾವತಿಸುವ ಕೆಲಸ ಮಾಡಿಲ್ಲ ಎಂದು ಚುರುಕು ಮುಟ್ಟಿಸಿದರು.

ಒಂದು ತಿಂಗಳಲ್ಲಿ ಕೇಂದ್ರ ಸ್ಥಾಪಿಸಬೇಕು: ಮನೆಹಾನಿ ಮಾಹಿತಿ ದಾಖಲಿಸಲು ಅ.30ರವರೆಗೆ ಗಡುವು ವಿಸ್ತರಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಎಲ್ಲಾ ಸರ್ಕಾರಿ ಆದೇಶಗಳನ್ನು ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳು ತ್ವರಿತವಾಗಿ ಮಾಹಿತಿ ದಾಖಲಿಸಬೇಕು. ವಿಪತ್ತು ನಿರ್ವಹಣೆಯನ್ನು ಇನ್ನಷ್ಟುಪರಿಣಾಮಕಾರಿಯಾಗಿ ನಿರ್ವಹಿಸಲು ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರ ಸ್ಥಾಪನೆಗೆ ತಲಾ ಒಂದು ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಈ ಕೇಂದ್ರವನ್ನು ಒಂದು ತಿಂಗಳೊಳಗೆ ಸ್ಥಾಪಿಸಿ, ಕಾರ್ಯಾರಂಭ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಸೂಚಿಸಿದರು.

ವಿಪತ್ತು ನಿರ್ವಹಣೆಗೆ ಪರಿಹಾರ ಕ್ರಮಗಳ ಮಾರ್ಗಸೂಚಿಗಳನ್ನು ರೂಪಿಸಿ, ಸಿಬ್ಬಂದಿಗೆ ತರಬೇತಿ, ಮಾರ್ಗದರ್ಶನ ನೀಡಿ ವಿಪತ್ತು ನಿರ್ವಹಣೆಗೆ ಸಜ್ಜುಗೊಳಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಸ್ವಯಂ ಸೇವಾ ಸಂಸ್ಥೆಗಳನ್ನು ಜತೆಗೂಡಿಸಿ, ಸ್ಥಳೀಯರ ಸಹಯೋಗದೊಂದಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹ ಪರಿಸ್ಥಿತಿ ಮುಂದುವರಿಯುತ್ತಿದ್ದು, ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಹಾನಿಯ ಪ್ರಮಾಣವನ್ನು ತಗ್ಗಿಸಬೇಕು. ಕೆರೆಗಳು ಒಡೆದು ಪ್ರವಾಹ ಸಂಭವಿಸುವ ಬಗ್ಗೆ ಎಚ್ಚರ ವಹಿಸಿ, ಇದಕ್ಕೆ ಮಾರ್ಗಸೂಚಿಗಳನ್ನು ನಿಗದಿ ಪಡಿಸಬೇಕಾಗಿದೆ. 

ತಗ್ಗು ಪ್ರದೇಶದಲ್ಲಿ ಮಳೆಯಿಂದ ಬಾಧಿತ ಮನೆಗಳನ್ನು ಹಳ್ಳಿಗಳಿಗೆ ಹೊಂದಿಕೊಂಡಂತೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಕಂದಾಯ ಸಚಿವ ಆರ್‌.ಅಶೋಕ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌, ವಸತಿ ಸಚಿವ ವಿ.ಸೋಮಣ್ಣ. ಸಾರಿಗೆ ಸಚಿವ ಶ್ರೀರಾಮುಲು ಸೇರಿದಂತೆ ಇತರೆ ಸಚಿವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಡೀಸಿಗಳಿಗೆ ಸಿಎಂ ಸಲಹೆ: ಜಿಲ್ಲಾಧಿಕಾರಿಗಳು ಸಮಯೋಚಿತ ತೀರ್ಮಾನಗಳ ಮೂಲಕ ಜನರಿಗೆ ನೆರವಾಗಬೇಕು ಮತ್ತು ಸಮಯ ಪ್ರಜ್ಞೆ, ಸ್ಥಿತ ಪ್ರಜ್ಞತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು. ಒಬ್ಬ ಐಎಎಸ್‌ ಅಧಿಕಾರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಮಹತ್ವಪೂರ್ಣ ಅವಕಾಶ. ಜಿಲ್ಲೆಯಲ್ಲಿ ನೀವು ಯಾವ ರೀತಿ ಹೆಜ್ಜೆ ಗುರುತು ಬಿಡುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ. 

ಈಗ ಬಹಳಷ್ಟುಅಧಿಕಾರಿಗಳು ಜಿಲ್ಲಾಧಿಕಾರಿ ಹುದ್ದೆಯ ಅಧಿಕಾರ ಭಾಗವನ್ನಷ್ಟೇ ನೋಡುತ್ತಾರೆ. ಆ ಹುದ್ದೆಯ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳವುದಿಲ್ಲ. ಆದರೆ, ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದರು ಹೇಳಿದರು. ಅಧಿಕಾರಿಗಳು ಮುಕ್ತವಾಗಿ ತಮ್ಮ ಅನುಭವ ಹಂಚಿಕೊಳ್ಳಬೇಕು. ಆಗ ಸರ್ಕಾರವು ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯ. ಬಜೆಟ್‌ ಅನುಷ್ಠಾನ ಕುರಿತಂತೆ ಸರ್ಕಾರಿ ಆದೇಶಗಳಾಗಿವೆ. ತಳಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಂಡು ವರ್ಷಾಂತ್ಯದಲ್ಲಿ ಗುರಿ ಸಾಧಿಸಬೇಕು ಎಂದು ಸೂಚಿಸಿದರು.

ಪ್ರವಾಹ ಅನಾಹತ ನಿರ್ವಹಿಸದ್ದಕ್ಕೆ ಅಧಿಕಾರಿಗಳಿಗೆ ಬೊಮ್ಮಾಯಿ ತರಾಟೆ: ರಾಜ್ಯದಲ್ಲಿ ತೀವ್ರ ಮಳೆಯಿಂದಾಗಿ ಉಂಟಾಗಿರುವ ಅನಾಹುತಗಳನ್ನು ಸಮರ್ಪಕವಾಗಿ ನಿಭಾಯಿಸದಿರುವುದು, ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಸೇರಿದಂತೆ ಅತಿವೃಷ್ಟಿಪರಿಸ್ಥಿತಿಯನ್ನು ಸಮಂಜಸವಾಗಿ ನಿರ್ವಹಿಸದಿರುವುದಕ್ಕೆ ಅಧಿಕಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಕೆಲಸ ಮಾಡಬೇಕು. ಇಲ್ಲದಿದ್ದರೆ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ನಿಮ್ಮ ಬದಲು ಬೇರೊಬ್ಬರನ್ನು ಕೂರಿಸುವುದು ಗೊತ್ತಿದೆ. ಮಳೆ ಅವಾಂತರಕ್ಕೆ ಸಮರ್ಪಕ ಪರಿಹಾರ ವಿತರಣೆ ಮಾಡಿಲ್ಲ ಎಂಬ ಆರೋಪಗಳು ಬಂದಿವೆ. ಪರಿಹಾರ ಹಂಚಿಕೆಯಲ್ಲಿಯೂ ವಿಳಂಬವಾಗುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಹರಿಹಾಯ್ದರು.

ಗೋವು ದತ್ತು ಸ್ಕೀಂಗೆ ಸರ್ಕಾರಿ ನೌಕರರಿಂದ 100 ಕೋಟಿ : ‘ಪುಣ್ಯಕೋಟಿ ದತ್ತು ಯೋಜನೆ’ಗೆ ಬಲ

ಪ್ರವಾಹ ಪರಿಸ್ಥಿತಿ ಮುಂದುವರಿಯುತ್ತಿದ್ದು, ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಹಾನಿಯ ಪ್ರಮಾಣವನ್ನು ತಗ್ಗಿಸಬೇಕು. ಕೆರೆಗಳು ಒಡೆದು ಪ್ರವಾಹ ಸಂಭವಿಸುವ ಬಗ್ಗೆ ಎಚ್ಚರ ವಹಿಸಿ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ