Deemed Forests: ರಾಜ್ಯದಲ್ಲಿ ಡೀಮ್ಡ್ ಅರಣ್ಯ ಮರು ಸಮೀಕ್ಷೆ‌ ನಡೆಸಲು ಡೀಸಿಗಳಿಗೆ ಸಿಎಂ ಸೂಚನೆ!

*ಅರಣ್ಯ ಇಲಾಖೆ, ಕಂದಾಯ ಇಲಾಖೆ ತಿಕ್ಕಾಟದಿಂದ ರೈತರಿಗೆ ಸಂಕಷ್ಟ
*ತಹಸೀಲ್ದಾರ್‌, ಎ.ಸಿ. ಕೋರ್ಟ್‌ ಪ್ರಕರಣ 1 ವರ್ಷದಲ್ಲಿ ಇತ್ಯರ್ಥ
*20 ಕೋಟಿ ವೆಚ್ಚದಲ್ಲಿ ಡ್ರೋನ್‌ ಸರ್ವೆ: ಅಕ್ರಮ-ಸಕ್ರಮಕ್ಕೆ ಕಾನೂನು ತಿದ್ದುಪಡಿ

CM Basavaraj Bommai instructs DCs to re survey deemed forest in the Karnataka mnj

ಬೆಂಗಳೂರು (ಜ. 1):  ಡೀಮ್ಡ್ ಫಾರೆಸ್ಟ್‌ (Deemed Forests) ವಿವಾದದಿಂದ ಲಕ್ಷಾಂತರ ರೈತರು (Farmers) ಸಂಕಷ್ಟದಲ್ಲಿದ್ದು, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವಿನ ತಿಕ್ಕಾಟ ಬಗೆಹರಿಸುವ ಸಲುವಾಗಿ ಡೀಮ್ಡ್ ಫಾರೆಸ್ಟ್‌ನ ಮರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ  ಡೀಮ್ಡ್ ಫಾರೆಸ್ಟ್‌ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ (Supreme Court). ರೈತರು ಸಾಗುವಳಿ ಮಾಡಿರುವ ಭೂಮಿಯನ್ನು ಈ ಹಿಂದೆ  ಡೀಮ್ಡ್ ಫಾರೆಸ್ಟ್‌ ಎಂದು ಘೋಷಿಸಲಾಗಿದೆ. ಈ ಜಮೀನು ಅರಣ್ಯ ಇಲಾಖೆಗೆ ಸೇರಬೇಕೆ ಅಥವಾ ಕಂದಾಯ ಇಲಾಖೆಗೆ ಸೇರಬೇಕೆ ಎಂಬ ಗೊಂದಲ ಮುಂದುವರೆದಿದ್ದು, ಪ್ರಕರಣ ಸುಪ್ರೀಂಕೋರ್ಟ್‌ ವಿಚಾರಣೆಯಲ್ಲಿದೆ.

ಇನ್ನು ಕಂದಾಯ ಇಲಾಖೆಗೆ ಸೇರಿದ ಸೂಕ್ತ ಜಮೀನನ್ನು ಬಿಟ್ಟುಕೊಟ್ಟು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಅರಣ್ಯ ಇಲಾಖೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ  ಡೀಮ್ಡ್ ಫಾರೆಸ್ಟ್‌ ಕುರಿತು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ತಹಸೀಲ್ದಾರ್‌, ಎ.ಸಿ. ಕೋರ್ಟ್‌ ಪ್ರಕರಣ 1 ವರ್ಷದಲ್ಲಿ ಇತ್ಯರ್ಥ

ರಾಜ್ಯದಲ್ಲಿತಹಸೀಲ್ದಾರ ಹಾಗೂ ಸಹಾಯಕ ಆಯುಕ್ತರ (ಉಪ ವಿಭಾಗಾಧಿಕಾರಿ) ಕಂದಾಯ ನ್ಯಾಯಾಲಯಗಳಲ್ಲಿ 10-15 ವರ್ಷಗಳಿಂದ ಕಂದಾಯ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದು, ಹೆಚ್ಚುವರಿ ತಹಸೀಲ್ದಾರ್‌ ಹಾಗೂ ಉಪ ವಿಭಾಗಾಧಿಕಾರಿಗಳನ್ನು ನೇಮಿಸಿ ಒಂದು ವರ್ಷದಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣ ಇತ್ಯರ್ಥ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕಳೆದ 10-15 ವರ್ಷಗಳಿಂದಲೂ ಕಂದಾಯ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಈಗಲೂ 10ರಿಂದ 15 ಸಾವಿರ ಪ್ರಕರಣಗಳು ಬಾಕಿ ಇದ್ದು, ಇವೆಲ್ಲವೂ ವಿಲೇವಾರಿಯಾಗಲು ಇನ್ನೂ ಐದು ವರ್ಷ ಕಾಲಾವಕಾಶ ಬೇಕು. ಇದರಿಂದ ಜಮೀನು ವ್ಯಾಜ್ಯ ಹಾಗೂ ನ್ಯಾಯಾಲಯದ ಪ್ರಕರಣಗಳನ್ನು ಎದುರಿಸುತ್ತಿರುವ ರೈತರ ಆರ್ಥಿಕ ಸ್ಥಿತಿ ತೀರ ಹದಗೆಟ್ಟಿದೆ. ಹೀಗಾಗಿ ತಹಸೀಲ್ದಾರ, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಬಾಕಿಯಿರುವ ಕೋರ್ಟ್‌ ಪ್ರಕರಣಗಳು ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಇದಕ್ಕೆ ಅವಶ್ಯಕತೆಯಿದ್ದಲ್ಲಿ ಹೆಚ್ಚುವರಿ ತಹಸೀಲ್ದಾರ್‌, ಉಪವಿಭಾಗಾಧಿಕಾರಿಗಳ ನಿಯೋಜನೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಒಟ್ಟಾರೆ ಕನಿಷ್ಠ ಒಂದು ವರ್ಷದೊಳಗೆ ಎಲ್ಲಾ ಕಂದಾಯ ನ್ಯಾಯಾಲಯದ ಪ್ರಕರಣಗಳು ವಿಲೇವಾರಿ ಆಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

20 ಕೋಟಿ ವೆಚ್ಚದಲ್ಲಿ ಡ್ರೋನ್‌ ಸರ್ವೆ

ಗ್ರಾಮೀಣ ಭಾಗದಲ್ಲಿರುವ ರೈತರ ಪೋಡಿ ಮತ್ತಿತರ ಕಂದಾಯ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರವು ಸ್ವಾಮಿತ್ವ ಎಂಬ ಯೋಜನೆ ಜಾರಿಗೆ ತಂದಿದೆ. ಯೋಜನೆಯಡಿ ಎಲ್ಲಾ ಕಂದಾಯ ಸಮಸ್ಯೆಗಳಿರುವ ಭೂಮಿಯನ್ನು ಡ್ರೋನ್‌ ಮೂಲಕ ಸರ್ವೆ ನಡೆಸಲು ತಿಳಿಸಲಾಗಿದೆ. ಈಗಾಗಲೇ ಶೇ.59ರಷ್ಟುಸಾಧನೆ ನಡೆಸಿದ್ದು, ತ್ವರಿತಗತಿಯಲ್ಲಿ ಸರ್ವೆ ಪೂರ್ಣಗೊಳಿಸಲು 20 ಕೋಟಿ ರು. ವೆಚ್ಚದಲ್ಲಿ ಹೆಚ್ಚುವರಿ ಡ್ರೋನ್‌ಗಳ ಮೂಲಕ ಸಮೀಕ್ಷೆ ನಡೆಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಅಕ್ರಮ-ಸಕ್ರಮಕ್ಕೆ ಕಾನೂನು ತಿದ್ದುಪಡಿ

ಗೋಮಾಳ, ಬಗರ್‌ಹುಕುಂ ಪ್ರದೇಶಗಳ ವ್ಯಾಜ್ಯಗಳಿಗೆ ಕಾನೂನು ಪರಿಹಾರ ನೀಡಬೇಕು. 53 ಹಾಗೂ 57ನೇ ನಮೂನೆಯಡಿ ಅರ್ಜಿ ಸಲ್ಲಿಸಿರುವ ಅಕ್ರಮ ಗೋಮಾಳ ಹಾಗೂ ಬಗರ್‌ಹುಕುಂ ಸಾಗುವಳಿದಾರರ ಜಮೀನು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡಲಾಗುವುದು. ಈ ಬಗ್ಗೆ ಕಾನೂನು ಇಲಾಖೆಯೊಂದಿಗೆ ಸಭೆ ನಡೆಸಿ ಚರ್ಚಿಸಿ ಅಂತಿಮ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸ್ಮಶಾನ ಭೂಮಿ ಮಂಜೂರಿಗೆ ಕ್ರಮ

ರಾಜ್ಯದಲ್ಲಿ 4,370 ಊರುಗಳಲ್ಲಿ ಸ್ಮಶಾನ ಇಲ್ಲ. ಹೀಗಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸ್ಮಶಾನ ಭೂಮಿ ಮೀಸಲಿಡಲು ನಿರ್ಧರಿಸಲಾಗಿದೆ. ಇನ್ನು ಪರಿಶಿಷ್ಟಜಾತಿ ಹಾಗೂ ಪಂಗಡಗಳಿಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಸ್ಮಶಾನ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:

1) Basvaraj Bommai Loses Cool: ಬಾಸಿಸಂ ಬಿಡಿ ಕೆಲಸ ಮಾಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲಾಸ್‌!

2) Bengaluru Police Commissioner: ಕನ್ನಡಿಗ ಕಮಿಷನರ್‌..ಪಂತ್ ಜಾಗಕ್ಕೆ ಸಿಎಂ ತವರಿನ ಅಧಿಕಾರಿ!

3) Free Hindu Temples: ದೇವಾಲಯಗಳನ್ನು ಸಂಘ ಪರಿವಾರದ ಕಾರ‍್ಯಕರ್ತರಿಗೆ ಹಂಚಲು ಹೊರಟಿದೆ: ಡಿಕೆಶಿ!

Latest Videos
Follow Us:
Download App:
  • android
  • ios