'2018ರಲ್ಲಿ ಶ್ರೀಕಿಯನ್ನು ಬಿಟ್ಟಿದ್ದು ಕಾಂಗ್ರೆಸ್ ಸರ್ಕಾರ: Bitcoin Scam ಬಯಲು ಮಾಡಿದ್ದೇ ನಾವು'
* ಕೇಸಲ್ಲಿ ಯಾರೇ ಶಾಮೀಲಾಗಿದ್ದರೂ ಬಿಡಲ್ಲ, ಬಲಿ ಹಾಕುತ್ತೇವೆ
* 2018ರಲ್ಲಿ ಶ್ರೀಕಿಯನ್ನು ಬಿಟ್ಟಿದ್ದು ಕಾಂಗ್ರೆಸ್ ಸರ್ಕಾರ-
* ಬಿಟ್ ಹಗರಣ ಬಯಲು ಮಾಡಿದ್ದೇ ನಾವು: ಸಿಎಂ
* ಟ್ವೀಟ್ ಆಧರಿಸಿ ಆರೋಪ ಸರಿಯಲ್ಲ, ದಾಖಲೆ ಇದ್ದರೆ ಕೊಡಲಿ
ಬೆಂಗಳೂರು(ನ.15): ‘ಬಿಟ್ ಕಾಯಿನ್ ಪ್ರಕರಣದ (Bitcoin Scam)ಪ್ರಮುಖ ಆರೋಪಿ ಶ್ರೀಕಿಯನ್ನು ಬಂಧಿಸಿ ಎಫ್‌ಐಆರ್ ಹಾಕಿ ತನಿಖೆ ನಡೆಸಿದ್ದು ನಾವು. ಹಿಂದೆ 2018ರಲ್ಲಿ ಶ್ರೀಕಿಯನ್ನು (Shreeki) ಬಂಧಿಸಿ ವಿಚಾರಣೆ ಮಾಡದೆ ಬಿಟ್ಟು ಕಳುಹಿಸಿದ ಕಾಂಗ್ರೆಸ್‌ನವರಿಂದ ನಾವು ಪಾಠ ಕಲಿಯಬೇಕಿಲ್ಲ. ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ದರೂ ಬಿಡಲ್ಲ. ಬಲಿ ಹಾಕುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಗುಡುಗಿದ್ದಾರೆ.
ಹಗರಣದಲ್ಲಿ ಬಿಜೆಪಿಯವರು ಭಾಗಿಯಾಗಿದ್ದರೆ ಅವರ ಹೆಸರು ಹೇಳಲಿ. ದಾಖಲೆಗಳಿದ್ದರೆ ನಮಗಾದರೂ ಕೊಡಲಿ ಅಥವಾ ತನಿಖಾ ಸಂಸ್ಥೆಗಳಿಗಾದರೂ ಕೊಡಲಿ ಎಂದೂ ಅವರು ಕಾಂಗ್ರೆಸ್ ನಾಯಕರಿಗೆ (Congress Leaders) ಸವಾಲು ಹಾಕಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣ ಬಯಲಿಗೆ ತಂದು ಇದರ ತನಿಖೆ ಮಾಡಿದ್ದೇ ನಾವು. ತನಿಖೆಯನ್ನು ಇ.ಡಿ., ಸಿಬಿಐಗೆ (Enforcement Directorate and CBI) ವಹಿಸಿದ್ದೇವೆ. ತನಿಖಾಧಿಕಾರಿಗಳು ಕೇಳಿರುವ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಹಿಂದೆ ಬಂಧಿಸಿದ ವೇಳೆ ತನಿಖೆ ನಡೆಸಿದ್ದರೆ ಎಲ್ಲವೂ ಬಹಿರಂಗವಾಗುತ್ತಿತ್ತು. ರಾಜ್ಯದಲ್ಲಿ ಈ ಹಗರಣ ಇಷ್ಟುದೊಡ್ಡದಾಗಿ ಬೆಳೆಯಲು ಕಾಂಗ್ರೆಸ್ಸೇ (Congress) ಕಾರಣ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಪ್ರಕರಣದಲ್ಲಿ ಇಲ್ಲದವರ ಮೇಲೆ ಆರೋಪ ಮಾಡುತ್ತಿದೆ ಎಂದು ಹರಿಹಾಯ್ದರು.
ಬೌದ್ಧಿಕವಾಗಿ ದಿವಾಳಿ:
ಒಂದು ಟ್ವೀಟ್ ಆಧಾರದ ಮೇಲೆ ಐದು ಸಾವಿರ ಬಿಟ್ ಕಾಯಿನ್ (Bitcoin) ವರ್ಗಾಯಿಸಲಾಗಿದೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಾರೆ ಎಂದರೆ ಕಾಂಗ್ರೆಸ್ ಬೌದ್ಧಿಕವಾಗಿ ಎಷ್ಟುದಿವಾಳಿಯಾಗಿರಬೇಕು. ಈ ರೀತಿ ಆರೋಪ ಮಾಡುವುದು ಒಂದು ರಾಷ್ಟ್ರೀಯ ಪಕ್ಷದ ವಕ್ತಾರರಿಗೆ ಶೋಭೆ ತರುವಂತಹದ್ದಲ್ಲ. ಟ್ವೀಟ್ ಮೇಲೆ ಮಾಡಿರುವ ಆರೋಪಕ್ಕೆ ಸಾಕ್ಷಿ, ದಾಖಲೆ ಇಟ್ಟು ಮಾತನಾಡಲಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾಗೆ (Randeep Singh Surjewala) ತಿರುಗೇಟು ನೀಡಿದರು.
ಕಾಂಗ್ರೆಸ್ಸೇ ಕಾರಣ:
2016ರಿಂದ ಬಿಟ್ ಕಾಯಿನ್ ಪ್ರಕರಣ ಅನ್ನುತ್ತಾರೆ. ಆಗಿನಿಂದಲೂ ಇದ್ದ ಮೇಲೆ ಕಾಂಗ್ರೆಸ್ ಯಾಕೆ ಅದರ ಮೇಲೆ ಗಮನ ಹರಿಸಲಿಲ್ಲ? 2018ರಲ್ಲಿ ಶ್ರೀಕಿಯನ್ನು ಬಂಧಿಸಿದಿರಿ. ನಂತರ ಬಿಟ್ಟು ಕಳಿಸಿದಿರಿ. ಆತನ ಹಿನ್ನೆಲೆ ಬಗ್ಗೆ ಯಾಕೆ ಆಗಲೇ ವಿಚಾರಣೆ ಮಾಡಲಿಲ್ಲ? ಆಗಲೇ ಕಾಂಗ್ರೆಸ್ ಶ್ರೀಕಿಯನ್ನು ವಿಚಾರಣೆ ಮಾಡಿದ್ದರೆ ಎಲ್ಲವೂ ಬಹಿರಂಗ ಆಗುತ್ತಿತ್ತು. ಆತನ ವಿಚಾರಣೆಯನ್ನೇ ಕಾಂಗ್ರೆಸ್ ಮಾಡಲಿಲ್ಲ. ಎಲ್ಲವನ್ನೂ ಮುಕ್ತವಾಗಿ ಬಿಟ್ಟು ಬಿಟ್‌ಕಾಯಿನ್ ಹಗರಣ ದೊಡ್ಡದಾಗಿ ಬೆಳೆಯಲು ಕಾರಣರಾಗಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಶ್ರೀಕಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಹಿಡಿದು ವಿಚಾರಣೆ ಮಾಡಿದಾಗ ಎಲ್ಲವೂ ಬಹಿರಂಗವಾಗಿದೆ. ಆದರೆ, ನೀವು ನಮಗೇ ಪ್ರಶ್ನೆ ಮಾಡ್ತೀರಾ ಎಂದು ಏರಿದ ಧ್ವನಿಯಲ್ಲಿ ಕಾಂಗ್ರೆಸ್ ಅನ್ನು ಪ್ರಶ್ನಿಸಿದ ಬೊಮ್ಮಾಯಿ, ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ನಾವು ಬಿಡುವುದಿಲ್ಲ. ತನಿಖೆ ಮಾಡುತ್ತೇವೆ. ಈ ಪ್ರಕರಣದಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ, ಯಾವುದೇ ವ್ಯಕ್ತಿಗಳಿಗೆ ಮೋಸವಾಗಿದ್ರೆ ಮೋಸ ಮಾಡಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇವೆ ಎಂದರು.
ಪೊಲೀಸರಿಗೆ ಶ್ರೀಕಿ ಏಮಾರಿಸಿದ್ದಾನೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಆತ ತನ್ನ ಅಕೌಂಟ್ ಅಂತ ಯಾವುದೋ ಎಕ್ಸ್‌ಚೇಂಜ್ ಅಕೌಂಟ್ ತೋರಿಸಿದ್ದಾನೆ. ಯಾರಿಗೂ ವೈಯಕ್ತಿಕವಾಗಿ ಎಕ್ಸ್‌ಚೇಂಜ್ ಅಕೌಂಟ್ ಇರಲ್ಲ. ಇಷ್ಟೇ ಆಗಿರೋದು ಎಂದು ಸ್ಪಷ್ಟಪಡಿಸಿದರು.
ಬೊಮ್ಮಾಯಿ ವಾದ
1. 2018ರಲ್ಲಿ ಶ್ರೀಕಿಯನ್ನು ಬಂಧಿಸಿದ್ದ ಕಾಂಗ್ರೆಸ್ ಸರ್ಕಾರ ಆಗಲೇ ವಿಚಾರಣೆ ಮಾಡಬೇಕಿತ್ತು
2. ಕಾಂಗ್ರೆಸ್ ಸರ್ಕಾರ ಹಿಂದೆಯೇ ತನಿಖೆ ಮಾಡಿದ್ದರೆ ಎಲ್ಲವೂ ಆಗಲೇ ಬಹಿರಂಗವಾಗುತ್ತಿತ್ತು
3. ಆ ಕೆಲಸ ಮಾಡದೆ ಹಗರಣ ದೊಡ್ಡದಾಗಿ ಬೆಳೆಯಲು ಬಿಟ್ಟು ಈಗ ನಮ್ಮನ್ನೇ ಪ್ರಶ್ನೆ ಮಾಡ್ತಿದೆ
4. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಈಗ ಪ್ರಕರಣದಲ್ಲಿ ಇಲ್ಲದವರ ಮೇಲೆ ಆರೋಪ ಹೊರಿಸುತ್ತಿದೆ
5. ಕೇವಲ ಟ್ವೀಟ್ ಆಧರಿಸಿ ಆರೋಪ ಮಾಡುತ್ತಿರುವ ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ