ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ, ಕ್ರಯ ಪತ್ರ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ!
* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಾಲುಮರದ ತಿಮ್ಮಕ್ಕಳಿಗೆ ಬಿಡಿಎ ನಿವೇಶನ ಮಂಜೂರು
* ಕೆಲ ದಿನಗಳ ಹಿಂದಷ್ಟೇ ಸಿಎಂ ಅವರನ್ನು ಭೇಟಿ ಮಾಡಿದ್ದ ತಿಮ್ಮಕ್ಕ..
* ಸಿಎಂ ಸೂಚನೆ ಮೇರೆಗೆ ನಿವೇಶನ ಹಂಚಿಕೆ ಪತ್ರವನ್ನು ತಿಮ್ಮಕ್ಕನಿಗೆ ನೀಡಿದ್ದ ಬಿಡಿಎ
ಬೆಂಗಳೂರು(ಜೂ.25): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಮಂಜೂರು ಮಾಡಿದ್ದಾರೆ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಸಾಲುಮರದ ತಿಮ್ಮಕ್ಕನಿಗೆ ನಿವೇಶನ ಕ್ರಯ ಪತ್ರ ಹಸ್ತಾಂತರಿಸಿದ್ದಾರೆ. ಒಟ್ಟು 50#80 ಚದರ ಅಡಿಯ ನಿವೇಶನ ಹಂಚಿಕೆಯಾಗಿದೆ.
ಹೌದು ಕೆಲ ದಿನಗಳ ಹಿಂದಷ್ಟೇ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ, ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ನಿವೇಶನ ದದೊರಕಿಸಿಕೊಡುವಣತೆ ಮನವಿ ಮಾಡಿದ್ದರು. ಹೀಗಿರುವಾಗ ಸಿಎಂ ಸೂಚನೆ ಮೇರೆಗೆ ಬಿಡಿಎ ನಿವೇಶನ ಹಂಚಿಕೆ ಪತ್ರವನ್ನು ತಿಮ್ಮಕ್ಕನಿಗೆ ನೀಡಿದ್ದರು. ಈ ನಿಟ್ಟಿನಲ್ಲಿ ಇಂದು, ಶನಿವಾರ ಮುಂಜಾನೆ ರೇಸ್ ಕೋರ್ಸ್ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಆಕೆಯ ಸಾಕು ಪುತ್ರನಿಗೆ ಕರಾರು ಪತ್ರ ನೀಡಿದ್ದಾರೆ.
ಸಾಲು ಮರದ ತಿಮ್ಮಕ್ಕಗೆ ಒಟ್ಟು 50#80 ಚದರ ಅಡಿಯ ನಿವೇಶನ ಹಂಚಿಕೆಯಾಗಿದ್ದು, ನಾಡಪ್ರಭು ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್ ಜೆ ಸೆಕ್ಟರ್ ನಲ್ಲಿ ನಿವೇಶನ ಹಂಚಿಕೆಯಾಗಿದೆ.
ತಿಮ್ಮಕ್ಕನಿಗೆ ಜಮೀನು ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದ ಸಿಎಂ
ವೃಕ್ಷ ಮಾತೆ ಖ್ಯಾತಿಯ ಸಾಲುಮರದ ತಿಮ್ಮಕ್ಕ ಅವರು ಬೆಂಗಳೂರಿನಲ್ಲಿ ಮಂಗಳವಾರ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದರು. ಶತಾಯುಷಿ ಆಗಿರುವ ತಿಮ್ಮಕ್ಕ ಅವರ ಕಾಲಿಗೆ ನಮಸ್ಕರಿಸಿ ಆಶೀವಾರ್ದ ಪಡೆದ ಸಿಎಂ ಬೊಮ್ಮಾಯಿ ಅವರ ತಲೆ ಮುಟ್ಟಿದ ತಿಮ್ಮಕ್ಕ, ರಾಷ್ಟ್ರಪತಿಗಳಿಗೆ ಆಶೀರ್ವದಿಸಿದಂತೆ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಇದೇ ವೇಳೆ ತಿಮ್ಮಕ್ಕ ಅವರ ಯೋಗ ಕ್ಷೇಮ ವಿಚಾರಿಸಿದ ಸಿಎಂ, ಒಂದು ಸೈಟು ಹಾಗೂ ಮರಗಳನ್ನು ಬೆಳೆಸಲು ತಿಮ್ಮಕ್ಕ ಅವರಿಗೆ ಸೂಕ್ತ ಜಮೀನು ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೆಂಬುವುದು ಉಲ್ಲೇಖನೀಯ.
ತಿಮ್ಮಕ್ಕನಿಗೆ ಮರಗಳೇ ಮಕ್ಕಳು
ಸಾಲು ಮರದ ತಿಮ್ಮಕ್ಕ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರು. ಬಿಕ್ಕಲುಚಿಕ್ಕಯ್ಯರನ್ನು ಮದುವೆಯಾಗಿದ್ದ ತಿಮ್ಮಕ್ಕನಿಗೆ ಮಕ್ಕಳಾಗಿರಲಿಲ್ಲ. ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ನೆಟ್ಟು ತಮ್ಮ ಮಕ್ಕಳೆಂತೆ ಪೋಷಿಸಿ ಹೆಮ್ಮರವಾಗಿಸಿದ್ದರು. ವೃಕ್ಷ ಮಾತೆ , ನಾಡೋಜ ನಾಲು ಮರದ ತಿಮ್ಮಕ್ಕನಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿವೆ.