ಬೆಂಗಳೂರು(ಸೆ.11): ಜಲಮಂಡಳಿಯು ಕೋರಮಂಗಲದಲ್ಲಿ ತ್ಯಾಜ್ಯ ನೀರನ್ನು ಪಂಪ್‌ ಮಾಡಲು ನಿರ್ಮಿಸಿರುವ 210 ದಶಲಕ್ಷ ಲೀಟರ್‌ ಸಾಮರ್ಥ್ಯದ ಪಂಪ್‌ಹೌಸ್‌ನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆನ್‌ಲೈನ್‌ ಮೂಲಕ ಉದ್ಘಾಟಿಸಿದ್ದಾರೆ. 

ಕೋರಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರನ್ನು 210 ಎಂಎಲ್‌ಡಿ ಸಾಮರ್ಥ್ಯದ ಮಧ್ಯಂತರ ಪಂಪ್‌ಹೌಸ್‌ ಮೂಲಕ ಪಂಪ್‌ ಮಾಡಿ 150 ಎಂಎಲ್‌ಡಿ ಸಾಮರ್ಥ್ಯ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಸಾಗಿಸಲಾಗುವುದು. ಅಲ್ಲಿಂದ ಸಂಸ್ಕರಿಸಿದ ನೀರನ್ನು ಆನೇಕಲ್‌ ಹಾಗೂ ಹೊಸಕೋಟೆಯ ಕೆರೆಗಳಿಗೆ ನೀರುಣಿಸಲು ಜಲಮಂಡಳಿ ಯೋಜನೆ ರೂಪಿಸಿದೆ.

ಜನರ ಅಪೇಕ್ಷೆಯಂತೆ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರಚನೆ: ಅಶ್ವತ್ಥ ನಾರಾಯಣ

ಯೋಜನೆಯ ಅಂಗವಾಗಿ ನಿರ್ಮಿಸಿರುವ 210 ಎಂಎಲ್‌ಡಿ ಸಾಮರ್ಥ್ಯದ ಮಧ್ಯಂತರ ಪಂಪ್‌ಹೌಸ್‌ನ್ನು ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುಯಲ್‌ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. 
ಈ ವೇಳೆ ಮಾತನಾಡಿದ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಎನ್‌.ಜಯರಾಮ್‌, ಕೋರಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ಪತ್ತಿಯಾದ ತ್ಯಾಜ್ಯ ನೀರನ್ನು 210 ಎಂಎಲ್‌ಡಿ ಸಾಮರ್ಥ್ಯದ ಪಂಪ್‌ಹೌಸ್‌ ಮೂಲಕ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಸಾಗಿಸಲಾಗುವುದು. ಬಳಿಕ ಸಂಸ್ಕರಿಸಿದ ನೀರನ್ನು ಆನೆಕಲ್‌ ತಾಲೂಕುಗಳಿಗೆ ಕಳುಹಿಸಿ ಕೆರೆಗಳ ಪುನರುಜ್ಜೀವನಗೊಳಿಸಲಾಗುವುದು ಎಂದರು.

ಕೋರಮಂಗಲದ ರಾಷ್ಟ್ರೀಯ ಕ್ರೀಡಾಗ್ರಾಮದ ಬಳಿ ಇರುವ ಪಂಪ್‌ಹೌಸ್‌ ಬಳಿಯಿಂದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಳಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರಾದ ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಸೇರಿ ಹಲವರು ಭಾಗವಹಿಸಿದ್ದರು.