ಬೆಂಗಳೂರು(ಸೆ.11): ನಗರದ ಜನರ ಅಪೇಕ್ಷೆಯಂತೆ ರಾಜ್ಯ ಸರ್ಕಾರ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರಚನೆ ಮಾಡುತ್ತಿದ್ದು, ಜೊತೆ ಜೊತೆಗೆ ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯ ಗೊಂಡಿರುವುದರಿಂದ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಗುರುವಾರ ಬಿಬಿಎಂಪಿಯ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯ ಚುನಾವಣೆ ನಡೆಸುವುದಕ್ಕೆ ಈಗಾಗಲೇ ರಾಜ್ಯ ಚುನಾವಣಾ ಆಯೋಗ ತಯಾರಿ ಮಾಡಿಕೊಳ್ಳುತ್ತಿದೆ. ಜೊತೆಗೆ ಬೆಂಗಳೂರಿಗೆ ಹೊಸ ಪ್ರತ್ಯೇಕ ಕಾಯ್ದೆ ರಚನೆ ಮಾಡಬೇಕು ಎಂಬ ಬೇಡಿಕೆ ಇತ್ತು. ಕಳೆದ ಅಧಿವೇಶನದಲ್ಲಿ ವರದಿ ಮಂಡಿಸಲಾಗಿತ್ತು. ಜಂಟಿ ಸದನ ಸಮಿತಿಯಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿದೆ. ಅದನ್ನು ಜಾರಿಗೆ ತರಬೇಕೆಂಬ ಪ್ರಯತ್ನ ಸಹ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಬೆಂಗಳೂರಲ್ಲಿ ಮಳೆಗಾಲದ ಪ್ರವಾಹ ಪರಿಸ್ಥಿತಿಗೆ ಶಾಶ್ವತ ಪರಿಹಾರ ಅಗತ್ಯ, ಅಶ್ವತ್ಥ ನಾರಾಯಣ

ಈಗಾಗಲೇ ಬಿಬಿಎಂಪಿಯ 198 ವಾರ್ಡ್‌ ಮರು ವಿಂಗಡಣೆ ಮಾಡಲಾಗಿದೆ. ಅದರ ಪ್ರಕಾರ ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ತದ ನಂತರ ಮುಂದಿನ ಪ್ರಕ್ರಿಯೆ ಕಾಲಕ್ಕೆ ಅನುಗುಣವಾಗಿ ನಡೆಯಲಿದೆ. ಸದ್ಯ ಕೆಎಂಸಿ ಕಾಯ್ದೆ ಪ್ರಕಾರ ಮುಂದಿನ ಚುನಾವಣೆ 198 ವಾರ್ಡ್‌ಗಳಿಗೆ ನಡೆಯಲಿದೆ. ಆದರೆ, ಹೊಸ ಕಾಯ್ದೆ ಜಾರಿಯಾದರೆ ಅದರಲ್ಲಿ ಸೂಚಿಸಿದಂತೆ ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.