ಪಿಎಸ್‌ಐ ನೇಮಕಾತಿ ಹಗರಣದ ತನಿಖೆಗೆ ಸ್ವತಂತ್ರವಾದ  ಎಸ್‌ಐಟಿ ರಚನೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ವಿಭಾಗೀಯ ಪೀಠ ಹಿಂದೆ ಸರಿದಿದೆ.

ಬೆಂಗಳೂರು (ಜ.28): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ತನಿಖೆಗೆ ಸ್ವತಂತ್ರವಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ವಿಭಾಗೀಯ ಪೀಠ ಹಿಂದೆ ಸರಿದಿದೆ. ಈ ಕುರಿತಂತೆ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು, ಈ ಪೀಠದ ಮುಂದೆ ಅರ್ಜಿಯ ವಿಚಾರಣೆ ಬೇಡ. ನಾವಿಬ್ಬರೂ ಇಲ್ಲದಿರುವ ಪೀಠದ ಮುಂದೆ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಬೇಕು ಎಂದು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದರು.

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿ ಈವರೆಗೂ ರಾಜ್ಯದ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್‌ ಮತ್ತು ದೂರುಗಳಿಗೆ ಸಂಬಂಧಿಸಿದ ಸಂಪೂರ್ಣವಾದ ತನಿಖಾ ದಾಖಲೆಗಳನ್ನು ಹೈಕೋರ್ಟ್ ಗೆ ಸಲ್ಲಿಸಲು ಸಿಐಡಿಗೆ ಆದೇಶಿಸಬೇಕು. ಪ್ರಕರಣದ ತನಿಖೆ ನಡೆಸಿರುವ ಸಿಐಡಿಗೆ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಬಂಧನ ನಂತರದ ಸ್ಥಿತಿಗತಿಯ ಕುರಿತು ಮಾಹಿತಿ ನೀಡಲು ನಿರ್ದೇಶಿಸಬೇಕು. ಪ್ರಕರಣದ ಕುರಿತು ಸಿಐಡಿ ಈವರೆಗೂ ನಡೆಸಿರುವ ತನಿಖೆಯಲ್ಲಿ ಹಲವು ಸತ್ಯಗಳನ್ನು ಬಹಿರಂಗಪಡಿಸಿಲ್ಲ. ಆದ್ದರಿಂದ ಪ್ರಕರಣದ ತನಿಖೆಗೆ ಸ್ವತಂತ್ರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಬೇಕು. ಅದರ ತನಿಖೆ ಮೇಲೆ ನ್ಯಾಯಾಲಯ ನಿಗಾ ಇಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಬೆಳಗಾವಿ: ಪಿಎಸ್‌ಐ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು 50 ಜನ‌ ಮಹಿಳೆಯರಿಗೆ ವಂಚನೆ

ಪಿಎಸ್‌ಐ ನೇಮಕಾತಿಯಲ್ಲಿ ರಾಜ್ಯ ಪೊಲೀಸ್‌ ನೇಮಕಾತಿ ವಿಭಾಗದ ಕೆಲವು ಅಧಿಕಾರಿಗಳು, ರಾಜಕಾರಣಿಗಳು ಭಾಗಿಯಾಗಿದ್ದಾರೆ. ಅವರ ನೆರವಿನಿಂದ ಕೆಲ ಅಭ್ಯರ್ಥಿಗಳು ಅನುಕೂಲ ಪಡೆದುಕೊಂಡಿದ್ದಾರೆ. ಇಷ್ಟಾದರೂ ರಾಜ್ಯ ಗೃಹ ಇಲಾಖೆಯು ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ವಾದಿಸಿದೆ. ಪ್ರಕರಣ ಸಂಬಂಧ ಐವರು ಅಭ್ಯರ್ಥಿಗಳು ನೀಡಿರುವ ದೂರನ್ನು ಪರಿಶೀಲಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು 2022ರ ಫೆ.17 ಮತ್ತು ಮಾ.10ರಂದು ಗೃಹ ಸಚಿವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರ ಈ ಹೇಳಿಕೆಯ ಹೊರತಾಗಿಯೂ ಸಿಐಡಿ ತನಿಖೆ ನಡೆಸುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

PSI Recruitment Scam: ತನಿಖಾಧಿಕಾರಿಗಳ ವಿರುದ್ಧ ಆರ್‌ಟಿಐ ಕಾರ್ಯಕರ್ತ ಹಿರೇಮಠ ದೂರು

ಪ್ರಕರಣ ಸಂಬಂಧ ಸಿಐಡಿ ಈವರೆಗೂ ನಡೆಸಿರುವ ತನಿಖೆಯಲ್ಲಿ ಅಭ್ಯರ್ಥಿಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಸಂಬಂಧ ಬಹಿರಂಗಗೊಂಡಿಲ್ಲ. ಹಗರಣದ ಪ್ರಮುಖ ಆರೋಪಿಯಾದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ಡಿವೈಎಸ್ಪಿ ಶಾಂತಕುಮಾರ್‌ ಬಂಧನದ ಬಳಿಕ ಏನಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಗೃಹ ಸಚಿವರ ನಿರ್ದೇಶನದಂತೆ ಸಿಐಡಿಯು ಸತ್ಯ ಮುಚ್ಚಿಟ್ಟಿದೆ. ಕ್ಯಾಬಿನೆಟ್‌ ಸಚಿವರೊಬ್ಬರು ಹಗರಣದಲ್ಲಿ ಭಾಗಿಯಾಗಿದ್ದು, ತಮ್ಮ ಕೆಲವು ಅಭ್ಯರ್ಥಿಗಳು ಕಾನೂನು ಬಾಹಿರವಾಗಿ ಆಯ್ಕೆಯಾಗುವಂತೆ ನೋಡಿಕೊಂಡಿದ್ದರು ಎಂಬ ಬಗ್ಗೆ ಆರೋಪ ಕೇಳಿಬಂದಿದ್ದರೂ, ಈ ಕುರಿತೂ ತನಿಖೆಯಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.