ಬೆಂಗಳೂರು(ಆ.09): ಠಾಣಾ ಮಟ್ಟದಲ್ಲೇ ಡ್ರಗ್ಸ್‌ ದಂಧೆ ಹಾಗೂ ರೌಡಿಸಂ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕದೆ ಹೋದರೆ ಆಯಾ ಠಾಣಾಧಿಕಾರಿಗಳು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದ ನಿಮ್ಹಾನ್ಸ್‌ ಸಂಸ್ಥೆ ಸಭಾಂಗಣದಲ್ಲಿ ನಗರದ ಇನ್‌ಸ್ಪೆಕ್ಟರ್‌ ಹಂತ ಮೇಲ್ಮಟ್ಟದ ಹಿರಿಯ ಪೊಲೀಸ್‌ ಅಧಿಕಾರಿಗಳ ಮೊದಲ ಸಭೆ ನಡೆಸಿದ ಅವರು, ಆಡಳಿತ ಹಾಗೂ ತನಿಖೆ ವ್ಯವಸ್ಥೆಯ ಸುಧಾರಣೆ ಕುರಿತು ಎರಡು ತಾಸು ಸುದೀರ್ಘವಾಗಿ ಮಾತನಾಡಿ ಕಾನೂನು ಪಾಲನೆ ಪಾಠ ಹೇಳಿದರು.

ಠಾಣೆಗಳ ವಾತಾವರಣ ಬದಲಾಗಬೇಕು. ಸ್ವಚ್ಛತೆಗೆ ಆದ್ಯತೆ ಇರಲಿ. ಠಾಣೆಗಳಿಗೆ ಸಮಸ್ಯೆ ಹೊತ್ತು ಬರುವ ಜನರಿಗೆ ಸೂಕ್ತವಾಗಿ ಪೊಲೀಸರು ಸ್ಪಂದಿಸಬೇಕು. ಹಾಗೆ ಸಿಬ್ಬಂದಿ ವರ್ಗದ ದುಃಖ ದುಮ್ಮಾನಗಳಿಗೂ ಅಧಿಕಾರಿಗಳು ಕಿವಿಗೊಡಬೇಕು ಎಂದು ಆಯುಕ್ತರು ಸೂಚಿಸಿದರು.

ಬೆಂಗಳೂರಲ್ಲಿ ಫಸ್ಟ್‌ ರೆಸ್ಪಾನ್ಸ್‌ ವ್ಯವಸ್ಥೆ ಜಾರಿ ಮಾಡುವೆ: ನೂತನ ಆಯುಕ್ತ ಕಮಲ್‌ ಪಂತ್‌

ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಕೃತ್ಯಗಳ ನಿಯಂತ್ರಣ ಹಾಗೂ ತನಿಖೆ ಪ್ರಕ್ರಿಯೆ ವಿಭಾಗಗಳು ಸುಧಾರಣೆಯಾಗಬೇಕಿದೆ. ಇತ್ತೀಚೆಗೆ ನ್ಯಾಯಾಲಯಗಳಲ್ಲಿ ಆರೋಪಿಗಳು ದೋಷಮುಕ್ತರಾಗುತ್ತಿರುವುದಕ್ಕೆ ತನಿಖಾ ವೈಫಲ್ಯ ಸಹ ಪ್ರಮುಖ ಕಾರಣವಾಗಿದೆ. ಹೀಗಾಗಿ ತನಿಖೆಯಲ್ಲಿ ಲೋಪವಾಗದಂತೆ ಎಚ್ಚರಿಕೆವಹಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚುವರಿ ಆಯುಕ್ತರು, ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ಗಳು ಹೀಗೆ ಪ್ರತಿಯೊಬ್ಬರು ತಮ್ಮ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು.

ಡ್ರಗ್ಸ್‌ ಮುಕ್ತ ಬೆಂಗಳೂರು ಮಾಡುವ ಧ್ಯೇಯ ಹೊಂದಲಾಗಿದೆ. ಠಾಣಾ ಮಟ್ಟದಲ್ಲಿ ತಂಡ ರಚಿಸಿಕೊಂಡು ಪೆಡ್ಲರ್‌ಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಡ್ರಗ್ಸ್‌ ಮಾರಾಟ ಜಾಲ ಹಾಗೂ ರೌಡಿಸಂ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಈ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಠಾಣಾಧಿಕಾರಿಗಳು ಒತ್ತುಕೊಡಬೇಕು. ಇಲ್ಲದೆ ಹೋದರೆ ಮುಂದೆ ಅನಾಹುತಗಳು ವರದಿಯಾದರೆ ಆಯಾ ಠಾಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಆಯುಕ್ತರಾದ ಸೌಮೆಂದು ಮುಖರ್ಜಿ, ಎಸ್‌.ಮುರುಗನ್‌, ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಿಂಗಳಿಗೊಮ್ಮೆ ಡಿಸಿಪಿ ಜನಸ್ಪಂದನ ಕಡ್ಡಾಯ

ಠಾಣೆಗಳಿಗೆ ಸಮಸ್ಯೆ ಹೊತ್ತು ನಾಗರಿಕರು ಬರದಂತೆ ತಡೆಗಟ್ಟಬೇಕು. ಠಾಣೆ ವ್ಯಾಪ್ತಿಯಲ್ಲಿ ದೆಹಲಿ ಮಾದರಿ ‘ಫಸ್ಟ್‌ ರೆಸ್ಪಾನ್ಸ್‌’ ವ್ಯವಸ್ಥೆ ಜಾರಿಗೊಳಿಸುವ ಕಡೆಗೆ ಗಮನಹರಿಸಬೇಕು. ಇದಕ್ಕಾಗಿ ತಿಂಗಳಿಗೊಮ್ಮೆ ಡಿಸಿಪಿಗಳು ಕಡ್ಡಾಯವಾಗಿ ಜನಸ್ಪಂದನ ಸಭೆ ನಡೆಸಬೇಕು ಎಂದು ಆಯುಕ್ತ ಕಮಲ್‌ ಪಂತ್‌ ಸಲಹೆ ನೀಡಿದರು. ಅಲ್ಲದೆ, ತಾವು ಪ್ರತಿ ದಿನ ಠಾಣೆಗಳಿಗೆ ಡಿಸಿಪಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಹಾಗೆಯೇ ತಾವು ಭೇಟಿ ನೀಡುವ ಪ್ರದೇಶದಲ್ಲಿ ಜನರಿಂದ ಕೂಡಾ ಅಹವಾಲು ಸ್ವೀಕರಿಸಬೇಕು. ಪ್ರತಿ ತಿಂಗಳಿಗೊಮ್ಮೆ ಡಿಸಿಪಿ ಕಚೇರಿಯಲ್ಲಿ ನಾವು ಕೂಡಾ ಜನರ ಸಮಸ್ಯೆ ಅಲಿಸುತ್ತೇನೆ ಎಂದು ಎಂದು ಹೇಳಿದರು.

ಇಂದು ಸಂಚಾರ ಪೊಲೀಸರ ಸಭೆ

ನಗರದ ಸಂಚಾರ ಕಾರ್ಯನಿರ್ವಹಣೆ ಕುರಿತು ಚರ್ಚಿಸಲು ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ಹಂತ ಮೇಲ್ಮಟ್ಟದ ಹಿರಿಯ ಅಧಿಕಾರಿಗಳ ಸಭೆಯನ್ನು ಆಯುಕ್ತ ಕಮಲ್‌ ಪಂತ್‌ ಅವರು ಭಾನುವಾರ ಕರೆದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದ ಪೊಲೀಸರ ಅಧಿಕಾರಿಗಳ ಸಭೆಯನ್ನು ಶನಿವಾರ ಆಯುಕ್ತರು ನಡೆಸಿದ್ದರು.