ಬೆಂಗಳೂರು(ಆ.08):  ಮುಖ್ಯಮಂತ್ರಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಲ್ಕು ದಿನಗಳು ಕ್ವಾರಂಟೈನ್‌ಗೊಳಗಾಗಿದ್ದ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು, ಶುಕ್ರವಾರದಿಂದ ಕಚೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸಿದ್ದಾರೆ.

ಬೆಳಗ್ಗೆಯೇ ಕಚೇರಿಗೆ ಆಗಮಿಸಿದ ಕಮಲ್‌ ಪಂತ್‌ ಅವರು, ಬಳಿಕ ವಿಧಾನಸೌಧಕ್ಕೆ ತೆರಳಿ ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿ ಟಿ.ಎನ್‌.ವಿಜಯ್‌ ಭಾಸ್ಕರ್‌ ಹಾಗೂ ಹೆಚ್ಚುವರಿ ಮುಖ್ಯಕಾರ್ಯದರ್ಶಿಯೂ ಆಗಿರುವ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರನ್ನು ಭೇಟಿಯಾದರು. ಈ ವೇಳೆ ಕೊರೋನಾ ಸಂಕಷ್ಟದ ವೇಳೆ ಪೊಲೀಸರ ಪರಿಸ್ಥಿತಿ ಕುರಿತು ಅಧಿಕಾರಿಗಳಿಗೆ ಆಯುಕ್ತರು ವಿವರಿಸಿದರು.

ಬೆಂಗಳೂರಲ್ಲಿ ಫಸ್ಟ್‌ ರೆಸ್ಪಾನ್ಸ್‌ ವ್ಯವಸ್ಥೆ ಜಾರಿ ಮಾಡುವೆ: ನೂತನ ಆಯುಕ್ತ ಕಮಲ್‌ ಪಂತ್‌

ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಮಲ್‌ ಪಂತ್‌ ಭೇಟಿಯಾಗಿದ್ದರು. ಹೀಗಾಗಿ ಮುಖ್ಯಮಂತ್ರಿಗಳಿಗೆ ಸೋಂಕು ದೃಢವಾದ ಕಾರಣಕ್ಕೆ ಪ್ರಾಥಮಿಕ ಸಂಪರ್ಕದಲ್ಲಿದ್ದರಿಂದ ಆಯುಕ್ತರು ಸಹ ಕ್ವಾರಂಟೈನ್‌ಗೊಳಗಾಗಿದ್ದರು.

ಇಂದು ಪೊಲೀಸರ ಸಭೆ:

ಆಯುಕ್ತರಾದ ಬಳಿಕ ಕಮಲ್‌ ಪಂತ್‌ ಅವರು, ನಗರದ ಹಿರಿಯ ಪೊಲೀಸ್‌ ಅಧಿಕಾರಿಗಳ ಮೊದಲ ಸಭೆಯನ್ನು ನಿಮ್ಹಾನ್ಸ್‌ ಸಂಸ್ಥೆಯಲ್ಲಿ ಶನಿವಾರ ಕರೆದಿದ್ದಾರೆ.
ಈ ಸಭೆಯಲ್ಲಿ ಇನ್ಸ್‌ಪೆಕ್ಟರ್‌ ಮೇಲ್ಮಟ್ಟದ ಎಲ್ಲ ಹಿರಿಯ-ಕಿರಿಯ ಅಧಿಕಾರಿಗಳು ಆಹ್ವಾನಿತರಾಗಿದ್ದಾರೆ. ಸ್ವಾತಂತ್ರೋತ್ಸವ ದಿನಾಚರಣೆ ಸಿದ್ಧತೆ ಹಾಗೂ ಕೊರೋನಾ ನಿರ್ವಹಣೆ ಬಗ್ಗೆ ಅಧಿಕಾರಿಗಳ ಜತೆ ಆಯುಕ್ತರು ಸಮಾಲೋಚಿಸಲಿದ್ದಾರೆ.