ಕೆಲ ಚಟುವಟಿಕೆಗೆ ತಡೆ ನೀಡಲು ಆಗಲ್ಲ: ನಗರ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌| ಬೆಂಗಳೂರಿನಲ್ಲಿ ಎಲ್ಲ ವಲಯದ ಕಾರ್ಯಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ| ವಿಮಾನ ಹಾಗೂ ರೈಲುಗಳು ಕಾರ್ಯನಿರ್ವಹಿಸುತ್ತಿವೆ| ಲಾಕ್‌ಡೌನ್‌ ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ|

ಬೆಂಗಳೂರು(ಜು.16): ನಗರವನ್ನು ನಿದ್ರೆ ಮಾಡಿಸಬಹುದು. ಆದರೆ ಸ್ಮಶಾನ ಮಾಡಲಾಗುವುದಿಲ್ಲ. ಎಲ್ಲದಕ್ಕೂ ಲಾಠಿಯೇಟು ಪರಿಹಾರವಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಮಾರ್ಮಿಕವಾಗಿ ಹೇಳಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಲಾಠಿ ಬೀಸಿದರೆ ಕಾಯಿಲೆ ಹೋಗಲ್ಲ. ಜನರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಲಾಕ್‌ಡೌನ್‌ ಜಾರಿಯಾದರೂ ಕೆಲವು ವಲಯದ ಜನರಿಗೆ ಕೆಲಸಗಳಿರುತ್ತವೆ. ಪೀಣ್ಯದಲ್ಲಿ ಆರೋಗ್ಯ ಸಂರಕ್ಷಕ ಕಿಟ್‌ (ಪಿಪಿಇ)ಗಳ ತಯಾರಿಕೆ ನಡೆದಿದೆ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲೇಬೇಕಿದೆ ಎಂದು ಸ್ಪಷ್ಟಪಡಿಸಿದರು.

ಲಾಕ್‌ಡೌನ್‌ ವೇಳೆ ಸ್ವಯಂ ಸೇವಕರಾಗಿ ಸೇವೆ: ಸಿವಿಲ್‌ ವಾರ್ಡನ್‌ ಹುದ್ದೆಗೆ 8 ಸಾವಿರ ಅರ್ಜಿಗಳು!

ಜಾಗತಿಕ ಮಟ್ಟದ ಸಂಪರ್ಕ ಹೊಂದಿರುವ ದೇಶದ ಮಹಾನಗರಗಳ ಪೈಕಿ ಬೆಂಗಳೂರು ಸಹ ಒಂದಾಗಿದೆ. ಇಲ್ಲಿ ಒಂದೂವರೆ ಕೋಟಿ ಜನ ಸಂಖ್ಯೆ ಇದೆ. ಕೆಲವು ಅವಶ್ಯಕ ಚಟುವಟಿಕೆಗಳನ್ನು ನಡೆಸಲೇಬೇಕಾಗುತ್ತದೆ. ಹಾಗಾಗಿ ಬೆಂಗಳೂರ ಅನ್ನು ಪೂರ್ತಿ ಮಲಗಿಸಬಹುದು. ಆದರೆ ಸ್ಮಶಾನ ಮಾಡಲಾಗುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.

ಬೆಂಗಳೂರಿನಲ್ಲಿ ಎಲ್ಲ ವಲಯದ ಕಾರ್ಯಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ವಿಮಾನ ಹಾಗೂ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಕೆಲವು ಜನರು ಮನೆಯಿಂದ ಹೊರ ಬಂದಿದ್ದಾರೆ. ಲಾಕ್‌ಡೌನ್‌ ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ. ಜನರಿಗೆ ಕೂಡಾ ಜಾಗೃತಿ ಮೂಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.