ಬೆಂಗಳೂರು(ಜು.16): ಲಾಕ್‌ಡೌನ್‌ ವೇಳೆ ಪೊಲೀಸರ ಜತೆ ಕೈ ಜೋಡಿಸುವಂತೆ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಅವರ ಕರೆಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ದಿನದಲ್ಲಿ ಸಿವಿಲ್‌ ಪೊಲೀಸ್‌ ವಾರ್ಡನ್‌ ಹುದ್ದೆಗೆ ಸುಮಾರು 8 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಕೊರೋನಾ ಸೋಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬಾಧಿತರಾಗಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಸಿಬ್ಬಂದಿ ಕೊರತೆಗೆ ಆಯುಕ್ತರು, ಲಾಕ್‌ಡೌನ್‌ ನಿರ್ವಹಣೆ ಕೆಲಸಗಳಿಗೆ ಸ್ವಯಂ ಸೇವಕರ ನೇಮಕಕ್ಕೆ ಯೋಜಿಸಿದ್ದರು. ಇದಕ್ಕಾಗಿ ವೆಬ್‌ ಸೈಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಆಯುಕ್ತರು ಕೋರಿದ್ದರು.

ಲಾಕ್‌ಡೌನ್‌ ವೇಳೆ ಸೇವೆ ಸಲ್ಲಿಸುವ ಬಿಎಂಟಿಸಿ ಸಿಬ್ಬಂದಿಗೆ ವಿಶೇಷ ಭತ್ಯೆ

ಈ ಮನವಿಗೆ ಸ್ಪಂದಿಸಿದ ಸುಮಾರು ಎಂಟು ಸಾವಿರ ಜನರು, ಸ್ವಯಂ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇವುಗಳನ್ನು ಪರಿಶೀಲಿಸಿ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರತಿ ಠಾಣೆಗೆ ತಲಾ 100 ಸಿವಿಲ್‌ ಪೊಲೀಸ್‌ ವಾರ್ಡನ್‌ಗಳನ್ನು ನಿಯೋಜಿಸಲು ಆಯುಕ್ತರು ಯೋಜಿಸಿದ್ದಾರೆ. ಈ ವಾರ್ಡನ್‌ಗಳಿಗೆ ಲಾಠಿ ನೀಡುವುದಿಲ್ಲ. ಜಾಕೆಟ್‌ ಹಾಗೂ ಕ್ಯಾಪ್‌ ವಿತರಿಸಲಾಗುತ್ತದೆ. ವಾಹನ ತಪಾಸಣೆ, ರಾತ್ರಿ ಗಸ್ತು ಹಾಗೂ ಠಾಣೆಗಳಲ್ಲಿ ಹೆಲ್ಪ್‌ ಡೆಸ್ಕ್‌ ಸೇರಿದಂತೆ ಇನ್ನಿತರ ಕೆಲಸಗಳಿಗೆ ಅವರನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.