ಬೆಂಗಳೂರು ವಿಮಾನ ನಿಲ್ದಾಣದಿಂದ ದರ್ಶನ್ ಸಿಐಎಸ್‌ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಭದ್ರತೆಯಲ್ಲಿ ನಟ ದರ್ಶನ್ ಹೊರಬಂದಿರುವುದು ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು (ಜು.27): ‘ಡೆವಿಲ್’ ಸಿನಿಮಾ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್‌ಗೆ ತೆರಳಿದ್ದ ನಟ ದರ್ಶನ್ ಅಲ್ಲಿ 10ಕ್ಕೂ ಹೆಚ್ಚು ದಿನ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ವೇಳೆ ಬೆಂಗಳೂರು ವಿಮಾನ ನಿಲ್ದಾಣದಿಂದ ದರ್ಶನ್ ಸಿಐಎಸ್‌ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಭದ್ರತೆಯಲ್ಲಿ ಅವರು ಹೊರಬಂದಿರುವುದು ವಿವಾದಕ್ಕೆ ಕಾರಣವಾಗಿದೆ.
‘ಕೊಲೆ ಆರೋಪಿಯಾದರೂ ದರ್ಶನ್‌ಗೆ ವಿವಿಐಪಿ ಭದ್ರತೆ ಏಕೆ?’ ಎಂದು ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್, ‘ದರ್ಶನ್‌ಗೆ ಸಿಐಎಸ್‌ಎಫ್ ಭದ್ರತೆ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ’ ಎಂದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರ ಬೇಲ್ ರದ್ದತಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ. ಇದೀಗ ದರ್ಶನ್ ಭಾರತಕ್ಕೆ ವಾಪಸಾಗಿದ್ದು, ಜಾಮೀನು ತೀರ್ಪಿನ ಕುರಿತು ಕುತೂಹಲ ಉಂಟಾಗಿದೆ.
ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಆಕ್ರೋಶ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದ ರಮ್ಯಾ ಕುರಿತು ಸೋಷಲ್ ಮೀಡಿಯಾದಲ್ಲಿ ಟೀಕೆ ಮಾಡುತ್ತಿದ್ದ ದರ್ಶನ್ ಅಭಿಮಾನಿಗಳಿಗೆ ರಮ್ಯಾ ತಿರುಗೇಟು ನೀಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಪೋಸ್ಟ್ ಹಾಕಿರುವ ರಮ್ಯಾ, ‘ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಿಮ್ಮ ಕಮೆಂಟ್‌ಗಳೇ ಸಾಕ್ಷಿ’ ಎಂದು ಹೇಳಿದ್ದಾರೆ.
ರಮ್ಯಾ ಈ ಹಿಂದೆ, ‘ಸುಪ್ರೀಂ ಕೋರ್ಟ್ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಭರವಸೆ ಇದೆ’ ಎಂದಿದ್ದರು. ಅದನ್ನು ನೋಡಿ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್‌ಗಳನ್ನು ಮಾಡಿದ್ದರು.
