ಬೆಂಗಳೂರು(ಡಿ.31): ಸಾಲ ನೀಡುವ ನೆಪದಲ್ಲಿ ಗ್ರಾಹಕರ ಮಾಹಿತಿ ಕದಿಯುತ್ತಿದ್ದ ಚೀನಾ ಮೂಲದ ಸುಮಾರು 100ಕ್ಕೂ ಹೆಚ್ಚು ಆ್ಯಪ್‌ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಗೃಹ ಇಲಾಖೆ ಹಾಗೂ ಗೂಗಲ್‌ ಸಂಸ್ಥೆಗೆ ಸಿಐಡಿ ಪ್ರಸ್ತಾವನೆ ಸಲ್ಲಿಸಿದೆ.

ಇತ್ತೀಚಿಗೆ ಸಾಲದ ನೆಪದಲ್ಲಿ ಜನರಿಗೆ ವಂಚಿಸುತ್ತಿದ್ದ ಚೀನಾ ಮೂಲದ ಕಂಪನಿಯ ಮೂವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಈ ಪ್ರಕರಣದ ತನಿಖೆ ಮುಂದುವರೆಸಿದಾಗ ಗೂಗಲ್‌ ಸ್ಟೋರ್‌ನಲ್ಲಿ 100ಕ್ಕೂ ಅಧಿಕ ಆ್ಯಪ್‌ಗಳು ಆರ್ಥಿಕ ನೆರವು ಸೋಗಿನಲ್ಲಿ ಜನರಿಗೆ ವಂಚಿಸುವುದು ಮಾತ್ರವಲ್ಲದೆ ಗೌಪ್ಯ ಮಾಹಿತಿ ಕಳವು ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಿಐಡಿ ಅಧಿಕಾರಿಗಳು, ಸದರಿ ಆ್ಯಪ್‌ಗಳನ್ನು ಗೂಗಲ್‌ ಸ್ಟೋರ್‌ನಿಂದ ನಿರ್ಬಂಧಿಸಲು ಮುಂದಾಗಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ಹಾಗೂ ಗೂಗಲ್‌ ಸಂಸ್ಥೆಗೆ ಸವಿವರವಾದ ವರದಿಯನ್ನು ಸಹ ಸಿಐಡಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ ಸದ್ಯಕ್ಕೆ ಸ್ಟಾಪ್

‘ಲೋನ್‌ ಆ್ಯಪ್‌ಗಳ ಬಳಕೆ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಈ ರೀತಿಯ ಏನಾದರೂ ತೊಂದರೆ ಅನುಭವಿಸಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಸಿಐಡಿ ಸೈಬರ್‌ ಕ್ರೈಂ ವಿಭಾಗವು ಟ್ವೀಟರ್‌ ಮೂಲಕ ಮನವಿ ಮಾಡಿದೆ.

‘ಲೋನ್‌ ಆ್ಯಪ್‌ಗಳಿಗೆ ಚೀನಾದ ಕಂಪನಿಗಳು ಬಂಡಾವಳ ಹೂಡಿಕೆ ಮಾಡಿದ್ದಾರೆ. ಡಿಜಿಟಲ್‌ ಸಾಲ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನುಮತಿಯನ್ನು ಪಡೆದುಕೊಂಡಿರಲಿಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಈ ವಂಚಕ ಕಂಪನಿಗಳು ಆನ್‌ಲೈನ್‌ ವ್ಯವಹಾರ ಹಾಗೂ ವಹಿವಾಟು ನಡೆಸುವ ಗ್ರಾಹಕರ ಫೋನ್‌ ನಂಬರ್‌ಗಳನ್ನು ಸಂಗ್ರಹಿಸಿದ್ದರು. ‘ಒಂದು ನಿಮಿಷದೊಳಗೆ ಸಾಲ ಬೇಕೆ? ಹಾಗಿದ್ದಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ’ ಎಂಬ ಸಂದೇಶ ಕಳುಹಿಸುತ್ತಿದ್ದರು. ಇದನ್ನು ನಂಬಿ ನೂರಾರು ಜನ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಸಾಲ ಕೋರಿದವರಿಂದ ಪಾನ್‌ಕಾರ್ಡ್‌, ಆಧಾರ್‌, ಫೋಟೋ ಪಡೆದುಕೊಳ್ಳುತ್ತಿದ್ದರು. ಸಾಲದ ಹಣ ವರ್ಗಾವಣೆಯಾಗುತ್ತಿದ್ದಂತೆ, ಗ್ರಾಹಕರ ಮೊಬೈಲ್‌ನಿಂದ ನೇರವಾಗಿ ಗೌಪ್ಯ ಮಾಹಿತಿಯನ್ನು ಕದ್ದು ಸಂಗ್ರಹಿಸುತ್ತಿದ್ದರು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

750 ಲ್ಯಾಪ್‌ಟಾಪ್‌ಗಳು ಜಪ್ತಿ

ವಂಚಕ ಲೋನ್‌ ಆ್ಯಪ್‌ಗಳ ಪ್ರಕರಣ ಸಂಬಂಧ ಕಂಪನಿಯ ದಕ್ಷಿಣ ಭಾರತದ ಮುಖ್ಯಸ್ಥ, ಸಿಇಓ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು. ಈ ಆರೋಪಿಗಳಿಂದ 750 ಕಂಪ್ಯೂಟರ್‌, ಮೊಬೈಲ್‌ ಹಾಗೂ ಇನ್ನಿತರ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.