ಬಾಲರಾಮ ವಿಗ್ರಹ ಆಯ್ಕೆ ಅಂತಿಮವಾಗಿಲ್ಲ: ಪೇಜಾವರ ಶ್ರೀ ಸ್ಪಷ್ಟನೆ
ಅಯೋಧ್ಯೆ ರಾಮಮಂದಿರದಲ್ಲಿ 22ರಂದು ಪ್ರಾಣಪ್ರತಿಷ್ಠೆಯಾಗುವ ಬಾಲರಾಮನ ವಿಗ್ರಹ ಯಾವುದು ಎಂದು ಇನ್ನೂ ಅಂತಿಮವಾಗಿಲ್ಲ. ಜ.17ರಂದು ಅದರ ಘೋಷಣೆಯಾಗಲಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ವಿಶ್ವಸ್ಥರಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಉಡುಪಿ (ಜ.4) : ಅಯೋಧ್ಯೆ ರಾಮಮಂದಿರದಲ್ಲಿ 22ರಂದು ಪ್ರಾಣಪ್ರತಿಷ್ಠೆಯಾಗುವ ಬಾಲರಾಮನ ವಿಗ್ರಹ ಯಾವುದು ಎಂದು ಇನ್ನೂ ಅಂತಿಮವಾಗಿಲ್ಲ. ಜ.17ರಂದು ಅದರ ಘೋಷಣೆಯಾಗಲಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ವಿಶ್ವಸ್ಥರಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪ್ರಾಣ ಪ್ರತಿಷ್ಠೆಗೆ ಮೊದಲು ಜ.17ರಂದು ಬಾಲರಾಮನ ವಿಗ್ರಹವನ್ನು ಮೆರವಣಿಗೆಯಲ್ಲಿ ಸರಯೂ ನದಿಗೆ ತೆಗೆದುಕೊಂಡ ಹೋಗಿ ಜಲಾಭಿಷೇಕ ನಡೆಸಲಾಗುತ್ತದೆ, ಅಂದು ಈಗಾಗಲೇ ತಯಾರಾಗಿರುವ 3 ವಿಗ್ರಹಗಳಲ್ಲಿ ಅದು ಯಾವ ವಿಗ್ರಹ ಎಂದು ಬಹಿರಂಗ ಆಗುತ್ತದೆ. ಟ್ರಸ್ಟ್ ನ ವಿಶ್ವಸ್ಥರೆಲ್ಲರೂ ವಿಗ್ರಹಗಳನ್ನು ನೋಡಿ ನಮ್ಮ ಆಯ್ಕೆಯನ್ನು ತಿಳಿಸಿದ್ದೇವೆ. ಮೂರೂ ಮೂರ್ತಿಗಳೂ ಬಹಳ ಉತ್ತಮವಾಗಿದೆ. ಎರಡು ಕರಿಕಲ್ಲಿನಲ್ಲಿ, ಒಂದು ಅಮೃತಶಿಲೆಯಲ್ಲಿ ಕೆತ್ತಲಾಗಿವೆ. ಅಂತಿಮ ತೀರ್ಮಾನ ಆಗಬೇಕಾಗಿದೆ ಎಂದು ಗೊಂದಲಕ್ಕೆ ತೆರೆ ಎಳೆದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ; ಎಡಪಕ್ಷಗಳ ಟೀಕೆಗೆ ಪೇಜಾವರಶ್ರೀ ತಿರುಗೇಟು
ಆಹ್ವಾನದ ಗೊಂದಲ ಬೇಡ;
ರಾಮಮಂದಿರ ಲೋಕಾರ್ಪಣೆ, ಪ್ರಾಣಪ್ರತಿಷ್ಠೆಗೆ ಆಹ್ವಾನದ ಗೊಂದಲಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ದೇಶದಲ್ಲಿ ರಾಮನ ಭಕ್ತರು, ಸಂತರು, ಮಹಂತರು ಬಹಳ ಇದ್ದಾರೆ, ಭಕ್ತರೆಲ್ಲರೂ ಆಮಂತ್ರಿತರೇ. ಪ್ರಾಣಪ್ರತಿಷ್ಠೆಯ ಕಾರ್ಯಕ್ರಮವನ್ನು ಮೈದಾನದಲ್ಲಿ ಮಾಡುವುದು ಸಾಧ್ಯವಿಲ್ಲ, ಮಂದಿರದೊಳಗೆ ಸ್ಥಳಾವಕಾಶ ಕೊರತೆ ಇದೆ. ಆದ್ದರಿಂದ ಎಲ್ಲರೂ ಭಾಗವಹಿಸುವುದು ಕಷ್ಟಸಾಧ್ಯ. ಪ್ರಾತಿನಿಧ್ಯತೆಯ ಮೇರೆಗೆ ಆಹ್ವಾನ ಕೊಡಲಾಗಿದೆ, ಹೊರತು ಅನ್ಯಥಾ ಕಾರಣವಿಲ್ಲ. ಯಾರೂ ತಪ್ಪು ತಿಳಿಯಬಾರದು ಎಂದು ಶ್ರೀಗಳು ಹೇಳಿದರು.
ಪ್ರತಿಷ್ಠಾಪನೆ ನಂತರ ಕೋಟ್ಯಾಂತರ ಭಕ್ತರು ಬಾಲರಾಮನ ದರ್ಶನಕ್ಕೆ ಅವಕಾಶ ಇದೆ. ಭಕ್ತರೆಲ್ಲರೂ ಮುಂದಿನ ದಿನದಲ್ಲಿ ಅಯೋಧ್ಯೆಗೆ ಬರಬೇಕು. ಅದಕ್ಕೂ ವ್ಯವಸ್ಥೆ ಮಾಡಲಾಗಿದೆ. ಉಳಿದುಕೊಳ್ಳುವುದಕ್ಕೆ ಟೆಂಟ್, ಶೆಡ್ ತಯಾರಾಗಿದೆ. ಈ ಬಗ್ಗೆ ಗೊಂದಲ ಬೇಡ ಎಂದರು.
ಕಾಶಿ, ಮಥುರಾಗಳ ವಿಮೋಚನೆಯಾಗಲೇಬೇಕು: ಪೇಜಾವರ ಶ್ರೀ
ಉಡುಪಿಯಲ್ಲಿ ಜ.18ರಂದು ಪುತ್ತಿಗೆ ಮಠದ ಪರ್ಯಾಯೋತ್ಸವ ನಡೆಯುತ್ತದೆ. ಆದರೆ 17ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಕಾರ್ಯಕ್ರಮಗಳು ಇರುವುದರಿಂದ ತಾವು ಅಲ್ಲಿರಲೇಬೇಕು. ಆದ್ದರಿಂದ 15ರಂದು ಕೃಷ್ಣಮಠದಲ್ಲಿ ನಡೆಯುವ ಚೂರ್ಣೋತ್ಸವ ಮುಗಿಸಿ ಹೊರಡುತ್ತೇವೆ ಎಂದವರು ಹೇಳಿದರು.