Asianet Suvarna News Asianet Suvarna News

Chitra Santhe 2023: ಜ.8ಕ್ಕೆ ಬೆಂಗಳೂರು ಚಿತ್ರಸಂತೆ: ಬಿ.ಎಲ್‌. ಶಂಕರ್‌

ರಾಜ್ಯದ ಹೆಮ್ಮೆಯ ‘ಕರ್ನಾಟಕ ಕಲಾ ಚಿತ್ರಕಲಾ ಪರಿಷತ್‌’ ಆಯೋಜಿಸಿಕೊಂಡು ಬರುತ್ತಿರುವ, ಕಲಾವಿದರು​-ಕಲಾಭಿಮಾನಿಗಳ ಬಹುನಿರೀಕ್ಷೆಯ ‘ಚಿತ್ರಸಂತೆ 2023’ ಬರುವ ಜನವರಿ 8ರಂದು ಪರಿಷತ್‌ನ ಆವರಣದಲ್ಲಿ ನಡೆಯಲಿದೆ. 

Chitrakala Parishat Chitra Santhe To Be Held In Bengaluru On january 8th says BL Shankar gvd
Author
First Published Nov 25, 2022, 2:15 AM IST

ಬೆಂಗಳೂರು (ನ.25): ರಾಜ್ಯದ ಹೆಮ್ಮೆಯ ‘ಕರ್ನಾಟಕ ಕಲಾ ಚಿತ್ರಕಲಾ ಪರಿಷತ್‌’ ಆಯೋಜಿಸಿಕೊಂಡು ಬರುತ್ತಿರುವ, ಕಲಾವಿದರು​-ಕಲಾಭಿಮಾನಿಗಳ ಬಹುನಿರೀಕ್ಷೆಯ ‘ಚಿತ್ರಸಂತೆ 2023’ ಬರುವ ಜನವರಿ 8ರಂದು ಪರಿಷತ್‌ನ ಆವರಣದಲ್ಲಿ ನಡೆಯಲಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ಅವರು, 20ನೇ ಚಿತ್ರಸಂತೆ ಇದಾಗಿದ್ದು, ಈ ವರ್ಷ ಭೌತಿಕ ಮತ್ತು ಆನ್‌ಲೈನ್‌ ರೂಪದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಜ.8ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರಸಂತೆಯನ್ನು ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕಲಾ ಪ್ರದರ್ಶನ ಉದ್ಘಾಟಿಸುವರು. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಸಂಸದ ಪಿ.ಸಿ.ಮೋಹನ್‌, ಶಾಸಕ ರಿಜ್ವಾನ್‌ ಅರ್ಷದ್‌ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು.

ಡಿಸೆಂಬರ್‌ ವೇಳೆಗೆ 438 ನಮ್ಮ ಕ್ಲಿನಿಕ್‌ ಆರಂಭ: ಸಚಿವ ಸುಧಾಕರ್‌

1500 ಕಲಾವಿದರ ಕೃತಿ ಪ್ರದರ್ಶನ: ದೇಶ, ವಿದೇಶಗಳಿಂದ ಆಗಮಿಸಲಿರುವ 1500 ಕಲಾವಿದರ ಕಲಾಕೃತಿಗಳು ಚಿತ್ರಸಂತೆಯಲ್ಲಿ ಪ್ರದರ್ಶನಗೊಳ್ಳಲಿವೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್‌, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್‌, ಸಿಕ್ಕಿಂ ಸೇರಿದಂತೆ ವಿವಿಧ ರಾಜ್ಯಗಳಿಂದ ಕಲಾವಿದರು ಭಾಗವಹಿಸಲಿದ್ದಾರೆ. ಪರಿಷತ್ತಿನ ಕಲಾ ಗ್ಯಾಲರಿಗಳಲ್ಲಿ ಮೈಸೂರು ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳು ಹಾಗೂ ತೊಗಲು ಬೊಂಬೆ ಕಲಾಕೃತಿಗಳು, ಪ್ರಶಸ್ತಿಗೆ ಭಾಜನರಾಗುವ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.

ನಾಲ್ವರು ಕಲಾವಿದರಿಗೆ ಪ್ರಶಸ್ತಿ ಪ್ರದಾನ: ಚಿತ್ರಸಂತೆಯಲ್ಲಿ ವಾರ್ಷಿಕ ಚಿತ್ರಕಲಾ ಸಮ್ಮಾನ್‌ ಪ್ರಶಸ್ತಿಯನ್ನು ನಾಲ್ವರು ಕಲಾವಿದರಿಗೆ ಪ್ರದಾನ ಮಾಡಲಾಗುವುದು. ಹಿರಿಯ ಕಲಾವಿದರು, ಅಂಗವಿಕಲ ಕಲಾವಿದರಿಗೆ ಪರಿಷತ್ತಿನ ಆವರಣದಲ್ಲೇ ಮಳಿಗೆಗಳ ಅವಕಾಶ ಇರಲಿದೆ. ಆವರಣದ ಹೊರಗೆ ಕೆನರಾ ಬ್ಯಾಂಕಿನ ಸಂಚಾರಿ ಎಟಿಎಂ ವ್ಯವಸ್ಥೆ ಮಾಡಲಾಗುವುದು. ಚಿತ್ರಸಂತೆಯಲ್ಲಿ ಕಲಾಪ್ರೇಮಿಗಳಿಗೆ ನೂರು ರು.ಗಳಿಂದ ಹಿಡಿದು ಹಲವು ಲಕ್ಷದವರೆಗಿನ ಮೌಲ್ಯದ ಕಲಾಕೃತಿಗಳು ದೊರೆಯಲಿವೆ. ಮೈಸೂರು ಸಾಂಪ್ರದಾಯಿಕ ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ, ತೈಲ ಹಾಗೂ ಜಲವರ್ಣಗಳ ಕಲಾಕೃತಿಗಳು ಲಭ್ಯವಿರುತ್ತವೆ. ಅಲ್ಲದೆ ಅಕ್ರಿಲಿಕ್‌, ಕೊಲಾಜ್‌, ಲಿಥೋಗ್ರಾಫ್‌ ಮೊದಲಾದ ಪ್ರಕಾರಗಳ ಕಲಾಕೃತಿಗಳು ಸಿಗಲಿವೆ. ಕಲಾಕೃತಿಗಳ ವಹಿವಾಟಿನ ಮೇಲೆ ಪರಿಷತ್ತು ಯಾವುದೇ ಕಮಿಷನ್‌ ಪಡೆಯುವುದಿಲ್ಲ ಎಂದು ತಿಳಿಸಿದರು.

ವಾಹನ ನಿಲುಗಡೆ ವ್ಯವಸ್ಥೆ: ಕುಮಾರಕೃಪಾ ರಸ್ತೆಯಲ್ಲಿರುವ ಭಾರತ ಸೇವಾದಳದ ಆವರಣ, ಕ್ರೆಸೆಂಟ್‌ ಮತ್ತು ರೇಸ್‌ಕೋರ್ಸ್‌ ರಸ್ತೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುವುದು. ಕುಮಾರಕೃಪಾ, ಕ್ರೆಸೆಂಟ್‌ ರಸ್ತೆಯ ಸುತ್ತಮುತ್ತ ವಾಸಿಸುವ ನಿವಾಸಿಗಳ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅವರಿಗೆ ವಿಶೇಷ ಪಾಸ್‌ ವ್ಯವಸ್ಥೆ ಮಾಡಲಾಗುವುದು ಎಂದರು.

ಪ್ರಶಸ್ತಿಗಳು: ಪ್ರೊ.ಎಂ.ಎಸ್‌.ನಂಜುಂಡರಾವ್‌ ಪ್ರಶಸ್ತಿ, ಎಚ್‌.ಕೆ.ಕೇಜ್ರಿವಾಲ್‌ ಪ್ರಶಸ್ತಿ, ಎಂ.ಆರ್ಯಮೂರ್ತಿ ಪ್ರಶಸ್ತಿ, ಡಿ.ದೇವರಾಜ ಅರಸು ಪ್ರಶಸ್ತಿ ಹಾಗೂ ವೈ.ಸುಬ್ರಮಣ್ಯರಾಜು ಪ್ರಶಸ್ತಿಗಳನ್ನು ಚಿತ್ರಸಂತೆಯಲ್ಲಿ ಪ್ರದಾನ ಮಾಡಲಾಗುವುದು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಪ್ರೊ.ನಂಜುಂಡರಾವ್‌ ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಹಿರಿಯ ಕಲಾವಿದರಿಗೆ ಒಂದು ಲಕ್ಷ ರು. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಉಳಿದ ಪ್ರಶಸ್ತಿಗಳಿಗೆ ತಲಾ 50 ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಗುವುದು. ಪ್ರಸ್ತುತ ಪ್ರಶಸ್ತಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಶೀಘ್ರವೇ ಸಾಧಕರ ಹೆಸರನ್ನು ಘೋಷಿಸಲಾಗುವುದು ಎಂದು ಬಿ.ಎಲ್‌.ಶಂಕರ್‌ ತಿಳಿಸಿದರು.

Kodagu: ವಿರಾಜಪೇಟೆಯ ಮೊಗರಗಲ್ಲಿಯಲ್ಲಿ 'ನಮ್ಮ ಕ್ಲಿನಿಕ್' ಪ್ರಾರಂಭ

ವೆಬ್‌ಪೋರ್ಟಲ್‌: ಚಿತ್ರಸಂತೆಯನ್ನು ಆನ್‌ಲೈನ್‌ ಮೂಲಕವೂ ಆಯೋಜಿಸಲು ಚಿಂತನೆ ನಡೆದಿದೆ. ಅದಕ್ಕಾಗಿ ಪ್ರಾಯೋಗಿಕವಾಗಿ ನೂತನ ವೆಬ್‌ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಕಲಾವಿದರು ತಮ್ಮ ಕಲಾಕೃತಿಗಳನ್ನು ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡುವ ಮೂಲಕ ಅಪ್‌ಲೋಡ್‌ ಮಾಡಬಹುದು. ಜೊತೆಗೆ ತಮಗೆ ಇಷ್ಟವಾದ ಕಲಾಕೃತಿಗಳನ್ನು ಖರೀದಿ ಮಾಡಲು ಸಹ ಅವಕಾಶ ಮಾಡಲಾಗುವುದು. ಕಲಾಕೃತಿಗಳ ಗುಣಮಟ್ಟಪರೀಕ್ಷಿಸಲು ಸಮಿತಿಯೊಂದನ್ನು ನೇಮಕ ಮಾಡಲಾಗುವುದು. ದೇಶ, ವಿದೇಶಗಳ ಕಲಾವಿದರು, ಕಲಾಭಿಮಾನಿಗಳು ಆನ್‌ಲೈನ್‌ ಮೂಲಕ ಕಲಾಕೃತಿ ಅಪ್‌ಲೋಡ್‌ ಮಾಡುವ ಮತ್ತು ಖರೀದಿಸಲು ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ವೆಬ್‌ ಪೋರ್ಟಲ್‌ ಅನ್ನು ಚಿತ್ರಸಂತೆ ಅಥವಾ ಸಂಕ್ರಾಂತಿ ವೇಳೆಗೆ ಬಿಡುಗಡೆ ಮಾಡುವುದಾಗಿ ತಂತ್ರಜ್ಞ ಶಶಿಧರ ರಾವ್‌ ತಿಳಿಸಿದರು.

Follow Us:
Download App:
  • android
  • ios