Kodagu: ವಿರಾಜಪೇಟೆಯ ಮೊಗರಗಲ್ಲಿಯಲ್ಲಿ 'ನಮ್ಮ ಕ್ಲಿನಿಕ್' ಪ್ರಾರಂಭ
ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‍ಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾಯೋಗಿಕವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಮ್ಮ ಕ್ಲಿನಿಕ್‍ಗಳನ್ನು ಆರಂಭಿಸುತ್ತಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ನ.24): ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‍ಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾಯೋಗಿಕವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಮ್ಮ ಕ್ಲಿನಿಕ್‍ಗಳನ್ನು ಆರಂಭಿಸುತ್ತಿದ್ದಾರೆ. ಅದರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲೂ ಒಂದು ನಮ್ಮ ಕ್ಲಿನಿಕ್ ಆರಂಭಿಸುತ್ತಿದ್ದಾರೆ. ಸ್ಲಮ್ ಏರಿಯಾಗಳಲ್ಲಿ ಬದುಕುತ್ತಿರುವ ಬಡಬರ ಉಚಿತ ಚಿಕಿತ್ಸೆ ಕೊಡಲು ಕೊಡಗಿನಲ್ಲೂ ಒಂದು ಕ್ಲಿನಿಕ್ ಸಿದ್ಧವಾಗಿದೆ. ಹಾಗಾದರೆ ಏನು ಈ ನಮ್ಮ ಕ್ಲಿನಿಕ್ ನಲ್ಲಿ, ಏನಿಲ್ಲಾ ಚಿಕಿತ್ಸಾ ಸೌಲಭ್ಯಗಳಿರುತ್ತವೆ, ಯಾರಿಗೆಲ್ಲಾ ಇದರಿಂದ ಅನುಕೂಲ ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ ನೀವು ಈ ಸುದ್ಧಿಯನ್ನು ನೋಡಲೇಬೇಕು.
30 ಸಾವಿರ ಜನಸಂಖ್ಯೆ ಹೊಂದಿರುವ ಅದರಲ್ಲೂ ಸ್ಲಂ ಏರಿಯಾಗಳಲ್ಲಿನ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ನಮ್ಮ ಕ್ಲಿನಿಕ್‍ಗಳನ್ನು ಸಿದ್ಧಗೊಳಿಸಿದೆ. ಅದರಲ್ಲಿ ಮೊದಲ ಹಂತದಲ್ಲಿ ಕೊಡಗು ಜಿಲ್ಲೆಯಲ್ಲೂ ಒಂದು ಕೇಂದ್ರವನ್ನು ಮಂಜೂರು ಮಾಡಿರುವುದು ಖುಷಿ ವಿಚಾರ. ವಿರಾಜಪೇಟೆ ಪಟ್ಟಣದ ಮೊಗರಗಲ್ಲಿ ಮತ್ತು ಅದರ ಪಕ್ಕದ ಎರಡು ವಾರ್ಡುಗಳ ಜನರಿಗೆ ಉಚಿತ ಚಿಕಿತ್ಸೆ ನೀಡಲು ನಮ್ಮ ಕೇಂದ್ರ ಸಿದ್ಧವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ ಇದು ಹಗಲು ಹೊತ್ತಿನಲ್ಲಿ ಅಂದರೆ ಬೆಳಿಗ್ಗೆ ಒಂಭತ್ತರೆಯಿಂದ ಸಂಜೆ ನಾಲ್ಕುವರೆವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದೆ.
ವ್ಯಾಪಾರಿ ಮೇಲೆ ಪುರಸಭೆ ಸದಸ್ಯನಿಂದ ಹಲ್ಲೆ: ವಿಡಿಯೋ ವೈರಲ್‌ನಿಂದ ಮಾನ ಹರಾಜು
ಒಟ್ಟು 13 ಆರೋಗ್ಯ ಸೇವೆಗಳು ಈ ನಮ್ಮ ಕ್ಲಿನಿಕ್‌ನಲ್ಲಿ ಉಚಿತವಾಗಿ ದೊರೆಯಲಿವೆ. ಜತೆಗೆ ರಕ್ತ, ಮೂತ್ರ ಮತ್ತು ಕಫ ಪರೀಕ್ಷೆ ಸೇರಿದಂತೆ ವಿವಿಧ 14 ಪರೀಕ್ಷೆಗಳನ್ನು ಇಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಅದಕ್ಕೆ ಬೇಕಾದ ಪ್ರಯೋಗಾಲವೂ ಸಿದ್ಧವಾಗಿದೆ. ಅದಕ್ಕಾಗಿ ಒಬ್ಬರು ಎಂಬಿಬಿಎಸ್ ಡಾಕ್ಟರ್, ಒಬ್ಬರು ದಾದಿ, ಪ್ರಯೋಗಾಲಯ ಸಿಬ್ಬಂದಿ, ಒಬ್ಬರು ಫಾರ್ಮಾಸಿಸ್ಟ್ ಸೇರಿದಂತೆ ಹಲವು ಸಿಬ್ಬಂದಿ ಇರಲಿದ್ದಾರೆ. ಇನ್ನು ಒಂದು ವಿಷಯ ಅಂದ್ರೆ ಇಲ್ಲಿ ಎಪಿಎಲ್ ಅಥವಾ ಬಿಪಿಎಲ್ ಎಂಬ ತಾರತಮ್ಯ ಇರುವುದಿಲ್ಲ. ಯಾರೇ ಆದರೂ ಬಂದ ರೋಗಿಗಳಿಗೆ ಇಲ್ಲಿ ಲಭ್ಯ ಇರುವ 14 ರೀತಿಯ ಯಾವುದೇ ಚಿಕಿತ್ಸೆ ಪಡೆದರು ಅದು ಸಂಪೂರ್ಣ ಉಚಿತವಾಗಿರುತ್ತದೆ.
ತಾಲ್ಲೂಕು ಆಸ್ಪತ್ರೆಯಲ್ಲಿ ಸಹಜವಾಗಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಸ್ಲಂ ಏರಿಯಾಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ದುಡಿಯುವ ವರ್ಗದ ಜನರು ತಮ್ಮ ಕೂಲಿ ಕೆಲಸಗಳನ್ನು ಬಿಟ್ಟು ತಾಲ್ಲೂಕು ಆಸ್ಪತ್ರೆಗಳಲ್ಲಿ ಕಾದು ಚಿಕಿತ್ಸೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಅವರು ಅವರಿಗೆ ಸರಿಹೊಂದುವ ಸಮಯದಲ್ಲಿ ಬೇಕಾದರೂ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗಲೆಂದು ಎನ್‍ಎಚ್‍ಎಂ ಯೋಜನೆ ಅಡಿಯಲ್ಲಿ ಇಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಸಿಎಂ ಅವರು ಬೆಂಗಳೂರಿನಿಂದಲೇ ಉದ್ಘಾಟನೆಗೊಳಿಸಿದ ಬಳಿಕ ಇದು ಕಾರ್ಯಾರಂಭ ಮಾಡಲಿದೆ ಎಂದು ಕೊಡಗು ಜಿಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಹೇಳಿದ್ದಾರೆ. ಇನ್ನು ತಮ್ಮ ವಾರ್ಡಿನಲ್ಲಿ ನಮ್ಮ ಕ್ಲಿನಿಕ್ ಆರಂಭವಾಗಿರುವುದು ಸಂತಸದ ವಿಚಾರ.
ಕಾಡಾನೆ ಹಿಮ್ಮೆಟ್ಟಿಸಲು 4 ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ರಚನೆ
ಇದರಿಂದ ನಮ್ಮ ವಾರ್ಡಿನ ಜನರು ಸ್ವಲ್ಪವೇ ಆರೋಗ್ಯ ಸರಿಯಿಲ್ಲದಿದ್ದರೂ ಶೀಘ್ರವೇ ಚಿಕಿತ್ಸೆ ಪಡೆದು ಗುಣಮುಖರಾಗುವುದಕ್ಕೆ ಅನುಕೂಲವಾಗಲಿದೆ ಎಂದು ವಿರಾಜಪೇಟೆ ಪುರಸಭೆಯ ಈ ವಾರ್ಡಿನ ಸದಸ್ಯರಾಗಿರುವ ಮತಿನ್ ಮತ್ತು ದೇಚಮ್ಮ ಕಾಳಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನ ಈ ಆರೋಗ್ಯ ಕೇಂದ್ರದ ಮೂಲಕ ಒಂದೇ ಸೂರಿನಡಿ ಹಲವು ಸೌಲಭ್ಯಗಳು ಸಾರ್ವಜನಿಕರಿಗೆ ಸಿಗಲಿವೆ. ಆದ್ರೆ ಈ ಕ್ಲಿನಿಕ್‍ಗೆ ವೈದ್ಯರನ್ನು ಹೊಸದಾಗಿ ನೇಮಕ ಮಾಡಿಕೊಳ್ಳುವ ಬದಲು ತಾಲೂಕು ಆಸ್ಪತ್ರೆಯಿಂದಲೇ ಎಂಬಿಬಿಎಸ್ ವೈದ್ಯರನ್ನು ನಿಯೋಜನೆ ಮಾಡುತ್ತಿರುವುದರಿಂದ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದುರಾಗುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಹೀಗಾಗಿ ಆದಷ್ಟು ಬೇಗ ಇಲ್ಲಿಗೆ ಪ್ರತ್ಯೇಕ ವೈದ್ಯರು ಮತ್ತು ಸಿಬ್ಬಂದಿ ನೇಮಿಸಲಿ ಎಂಬುದು ಜನರ ಆಗ್ರಹ.