ಮುರುಘಾ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರ: ವಕೀಲ ಉಮೇಶ್ ಮಾಹಿತಿ
ಫೋಕ್ಸೋ ಕಾಯ್ದೆಯಡಿಯಲ್ಲಿ ಬಂಧನವಾಗಿರುವ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗ, (ಸೆಪ್ಟೆಂಬರ್.02): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳನ್ನು ಇಂದು(ಸೆ.02) ಜೈಲಿನಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಎದೆ ನೋವು ಕಾಣಿಸಿಕೊಂಡು ಶ್ರೀಗಳು ಜೈಲಿನಲ್ಲೇ ಕುಸಿದುಬಿದ್ದಿದ್ದಾರೆ. ಇದರಿಂದ ಅವರನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಪಿ, ಶುಗರ್, ಇಸಿಜೆ ಹಾಗೂ MRI ಸ್ಕ್ಯಾನ್ ಮಾಡಲಾಗಿದ್ದು, ಇದರಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಶ್ರೀಗಳನ್ನು ಜಿಲ್ಲಾಸ್ಪತ್ರೆಯ ಐಸಿಯುಗೆ ಶಿಫ್ಟ್ ಮಾಡಲಾಗಿದೆ.
ಆರೋಗ್ಯದಲ್ಲಿ ಏರುಪೇರು: ಆಂಬ್ಯುಲೆನ್ಸ್ ಮೂಲಕ ಮುರುಘಾ ಶರಣರು ICU ಗೆ ಶಿಫ್ಟ್
ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರ
ಇನ್ನು ಸ್ವಾಮೀಜಿಗಳ ಆರೋಗ್ಯದ ಬಗ್ಗೆ ಮುರುಘಾ ಶ್ರೀಗಳ ಪರ ವಕೀಲ ಉಮೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮುರುಘಾ ಶ್ರೀಗಳ ಸ್ಥಿತಿ ಗಂಭೀರವಾಗಿದೆ. ಶ್ರೀಗಳು ಮಾತಾನಾಡುವ ಸ್ಥಿಯಲ್ಲಿ ಇಲ್ಲ. ಸೆಕೆಂಡ್ ಒಪಿನಿಯನ್‌ಗಾಗಿ ದಾವಣಗೆರೆಯಿಂದ ವೈದ್ಯರು ಬರ್ತಾ ಇದ್ದಾರೆ. ಅವರ ಒಪಿನಿಯನ್ ಮೇಲೆ ನಿರ್ಧಾರ ಆಗಲಿದೆ. ಯಾವ ಆಸ್ಪತ್ರೆಗೆ ಅಂತ ನಾವು ಚಾಯ್ಸ್ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ಶ್ರೀಗಳಿಗೆ ತುಂಬಾ ಸುಸ್ತಾಗಿದ್ದು ಮಾತಾಡುವ ಸ್ಥಿತಿಯಲ್ಲಿ ಇಲ್ಲ. ವೈದ್ಯರು ಹೇಳುವ ಆಸ್ಪತ್ರೆಗೆ ನಾವು ಶಿಫ್ಟ್ ಮಾಡುತ್ತೇವೆ. ಇಂದು(ಶುಕ್ರವಾರ) ಇಲ್ಲೇ ಬ್ಯುಸಿ ಇದ್ದಿದ್ದರಿಂದ ಜಾಮೀನು ಅರ್ಜಿ ಸಲ್ಲಿಕೆ ಮಾಡಿಲ್ಲ.ನಾಳೆ(ಸೆಪ್ಟೆಂಬರ್ 03) ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಹೆಚ್ಓ ರಂಗನಾಥ್ ಹೇಳಿಕೆ
ಇನ್ನು ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರ ಆರೋಗ್ಯದ ಬಗ್ಗೆ ಚಿತ್ರದುರ್ಗ ಡಿಹೆಚ್ಓ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಗಳ ಕಂಡಿಷನ್ ಬಗ್ಗೆ ತಪಾಸಣೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಇಬ್ಬರು ಹೃದಯ ತಜ್ಞರನ್ನ ಕರೆಸಲಾಗುತ್ತಿದೆ. ಶ್ರೀಗಳ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ನಮ್ಮಲ್ಲಿರು ಎಲ್ಲಾ ತಪಾಸಣೆಗಳನ್ನ ಮಾಡಲಾಗಿದೆ. ಹೃದಯ ಸಂಬಂಧಿ ತಪಾಸಣೆ ನಂತರ ನಿರ್ಧಾರ ಆಗಲಿದೆ ಎಂದು ಹೇಳಿದರು.
ಬಂಧನದ ಬಳಿಕ ಮುರುಘಾ ಮಠದಲ್ಲಿ ಮೌನ
ಮುರುಘಾ ಮಠದಲ್ಲಿ ಶರಣರ ಬಂಧನದ ಬಳಿಕ ನೀರವ ಮೌನ ಆವರಿಸಿದೆ. ಮಠದ ಆವರಣ ಬಿಕೋ ಎನ್ನುತ್ತಿದೆ. ಮಠದ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಭಕ್ತಾದಿಗಳು ಆಸ್ಪತ್ರೆಯ ಬಳಿ ಜಮಾಯಿಸುತ್ತಿದ್ದಾರೆ. ಜತೆಗೆ ಕೆಲವೇ ಕ್ಷಣಗಳಲ್ಲಿ ಶರಣರಿಗೆ MRI ಸ್ಕ್ಯಾನಿಂಗ್ ಮಾಡಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಸ್ಪತ್ತೆಯ ಹಿಂಭಾಗದಲ್ಲಿರುವ MRI ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಸ್ಕ್ಯಾನಿಂಗ್ ಮತ್ತು ಇಸಿಜಿ ಮಾಡಲಿದ್ದಾರೆ.
ಏನಿದು ಪ್ರಕರಣ?:
ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಬಳಿಕ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಪ್ರಕರಣ ದಾಖಲಾಗಿ ವಾರ ಕಳೆದರೂ ಬಂಧನವಾಗದಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಶ್ರೀಗಳ ಪರ ಹೇಳಿಕೆ ನೀಡಿದ್ದರು. ಇದಕ್ಕೂ ಆಕ್ರೋಶ ಕೇಳಿ ಬಂದಿತ್ತು. ಸದ್ಯ ಆಸ್ಪತ್ರೆಯಲ್ಲಿರುವ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ.