ಹಾಲು ಕರೆಯುವ ಹಸುಗಳಿಗೆ ಚಿಪ್‌ಗಳನ್ನು ಅಳವಡಿಸುವ ಕಾರ್ಯ ಪ್ರಾರಂಭವಾಗಿದೆ. ರಾಜ್ಯದಲ್ಲಿ 71 ಲಕ್ಷ ಹಾಲು ಕರೆಯುವ ಹಸುಗಳಿದ್ದು, ಈಗಾಗಲೇ 56 ಲಕ್ಷದಷ್ಟುಹಸುಗಳಿಗೆ ಚಿಪ್‌ಗಳನ್ನು ಅಳವಡಿಕೆ ಮಾಡಲಾಗಿದೆ.
ಬೆಂಗಳೂರು : ರಾಸುಗಳ ರೋಗ ಪತ್ತೆಗಾಗಿ ಮತ್ತು ಅವುಗಳ ಅಕ್ರಮ ಮಾರಾಟವನ್ನು ತಡೆಯುವುದಕ್ಕಾಗಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದ್ದು, ರಾಜ್ಯದಲ್ಲಿನ ಹಾಲು ಕರೆಯುವ ಹಸುಗಳಿಗೆ ಚಿಪ್ ಅಳವಡಿಕೆ ಕಾರ್ಯ ಆರಂಭಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನೂತನ ತಂತ್ರಜ್ಞಾನದಿಂದ ರಾಸುಗಳಿಗೆ ಬರುವ ಕಾಲುಬಾಯಿ ರೋಗ ಸೇರಿದಂತೆ ಇತರೆ ಕಾಯಿಲೆಗಳನ್ನು ಪತ್ತೆ ಹಚ್ಚಬಹುದಾಗಿದೆ. ಹಾಲು ಕರೆಯುವ ಹಸುಗಳಿಗೆ ಚಿಪ್‌ಗಳನ್ನು ಅಳವಡಿಸುವ ಕಾರ್ಯ ಪ್ರಾರಂಭವಾಗಿದೆ. ರಾಜ್ಯದಲ್ಲಿ 71 ಲಕ್ಷ ಹಾಲು ಕರೆಯುವ ಹಸುಗಳಿದ್ದು, ಈಗಾಗಲೇ 56 ಲಕ್ಷದಷ್ಟುಹಸುಗಳಿಗೆ ಚಿಪ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಪ್ರತಿ ಚಿಪ್‌ಗೆ 6.20 ರು. ವೆಚ್ಚವಾಗಲಿದೆ. ಶೀಘ್ರದಲ್ಲಿಯೇ ಎಲ್ಲಾ ಹಾಲು ಕರೆಯುವ ಹಸುಗಳಿಗೂ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.
ರೈತರ ಬಳಿಗೆ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹೋಗಿ ಚಿಪ್‌ಗಳನ್ನು ಅಳವಡಿಸುತ್ತಿದ್ದಾರೆ. ಚಿಪ್ ಅಳವಡಿಕೆಯಿಂದ ಅಕ್ರಮವಾಗಿ ನಡೆಯುವ ಹಸುಗಳ ಮಾರಾಟವನ್ನು ತಡೆಯಬಹುದಾಗಿದೆ. ಅಲ್ಲದೇ, ಅವುಗಳು ಎಲ್ಲಿ, ಯಾರ ಬಳಿ ಇವೆ ಎಂಬುದನ್ನು ಚಿಪ್ ಮೂಲಕ ಪತ್ತೆ ಹಚ್ಚಬಹುದಾಗಿದೆ. ಪಶುಭಾಗ್ಯ ಯೋಜನೆಯು ದುರ್ಬಳಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಪಶುಸಂಗೋಪನೆ ಇಲಾಖೆ ಮತ್ತು ಪಶು ಆಸ್ಪತ್ರೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಅನಾರೋಗ್ಯಕ್ಕೊಳಗಾಗುವ ಪಶುಗಳಿಗೆ ಔಷಧಿ ಮತ್ತು ಚಿಕಿತ್ಸೆಯನ್ನು ಈ ವ್ಯವಸ್ಥೆ ಮೂಲಕ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಾಲುಬಾಯಿ ರೋಗವು ನಿಯಂತ್ರಣದಲ್ಲಿದ್ದು, ಪ್ರಸಕ್ತ ವರ್ಷದಲ್ಲಿ ಈ ರೋಗಕ್ಕೆ ತುತ್ತಾಗಿ ಜಾನುವಾರುಗಳು ಮೃತಪಟ್ಟಿಲ್ಲ. ಕೃಷಿ ಮೇಳದ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬರುವ ಜಾನುವಾರುಗಳಿಂದ ಕಾಲುಬಾಯಿ ರೋಗ ಸಹಜವಾಗಿ ಹರಡುತ್ತದೆ. ಇದನ್ನು ತಡೆಯಲು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಧಾರವಾಡ, ಕೋಲಾರ ಜಿಲ್ಲೆಯಲ್ಲಿ ಅಧಿಕವಾಗಿದ್ದು, ಇದೀಗ ಅಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ ಎಂದು ಸ್ಪಷ್ಟಪಡಿಸಿದರು.
ಹೊರರಾಜ್ಯಗಳಿಗೆ ಮೇವು ಸಾಗಣೆ ನಿಷೇಧ
ರಾಜ್ಯದಲ್ಲಿ ಅತಿವೃಷ್ಟಿಮತ್ತು ಅನಾವೃಷ್ಟಿಯಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಹೊರ ರಾಜ್ಯಗಳಿಗೆ ಮೇವು ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದೆ. ಕೊಪ್ಪಳ, ರಾಯಚೂರು ಸೇರಿದಂತೆ ರಾಜ್ಯದಿಂದ ಮೇವು ಹೊರ ರಾಜ್ಯಗಳಿಗೆ ಸಾಗಣೆ ಮಾಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದಾಗಿ ಅದನ್ನು ನಿಷೇಧಿಸಲಾಗಿದೆ ಎಂದು ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ಭತ್ತವು ಕಟಾವಿಗೆ ಬಂದಿದೆ. ಕಟಾವು ಬಳಿಕ ಹುಲ್ಲನ್ನು ಕತ್ತರಿಸಿ ಕಂತೆಗಳನ್ನಾಗಿ ಮಾಡಿ ಸಂಗ್ರಹಿಸಲಾಗುವುದು. ಮೇವು ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮೇವು ಉತ್ಪಾದನೆಗೆ ರೈತರಿಗೆ 15 ಕೋಟಿ ರು. ಮೊತ್ತದ ಮೇವು ಬೀಜಗಳನ್ನು ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
5 ಸಾವಿರ ರು.ಗೆ 25 ಸಾವಿರ ರು. ಟಗರು
‘ನಾರಿ ಸುವರ್ಣ’ ಎಂಬ ಹೊಸ ತಳಿಯ ಟಗರನ್ನು ಪಶುತಜ್ಞರು ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿದ್ದಾರೆ. ಟ್ವೀನ್ಸ್, ಹೆಚ್ಚಿನ ಮಾಂಸ, ಹೆಚ್ಚಿನ ತೂಕ, ಇಸ್ರೇಲ್ ಜೀನ್ಸ್ ಸೇರಿದಂತೆ ಐದು ಮಾದರಿಯ ವಂಶವಾಹಿನಿಗಳನ್ನು ಸಂಶೋಧಿಸಲಾಗಿದೆ. ಈ ಟಗರಿನ ಮೌಲ್ಯವು 25 ಸಾವಿರ ರು. ಆಗಿದ್ದು, ಕುರಿಗಾಹಿಗಳು ಐದು ಸಾವಿರ ರು. ನೀಡಿದರೆ ಉಳಿದ ಮೊತ್ತವನ್ನು ಇಲಾಖೆ ವತಿಯಿಂದ ಭರಿಸಿ ಟಗರನ್ನು ನೀಡಲಾಗುತ್ತದೆ. ಅಲ್ಲದೇ, ಕುರಿ ಮತ್ತು ಮೇಕೆಯ ಮಾಂಸ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ತುಮಕೂರಿನ ಸಿರಾ ಬಳಿ ಕುರಿಗಳ ಕಸಾಯಿಖಾನೆ ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು.
