ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. ಈ ಘಟನೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜೂ.05): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 'ವಿಜಯೋತ್ಸವ ಆಚರಣೆಗೆ ಬಂದು 11 ಜನರು ಉಸಿರು ಚೆಲ್ಲಿದ್ದಾರೆ. ಅವರ ಕುಟುಂಬಗಳನ್ನು ನೋಡಿ ನನಗೆ ಹೊಟ್ಟೆ ಉರಿಯುತ್ತಿದೆ. ಆ ಮಕ್ಕಳ ತಾಯಿ ಮಾತನಾಡೋದನ್ನ ಸಹಿಸೋಕೆ ಆಗ್ತಾ ಇಲ್ಲ' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಿನ್ನೆ ಮಧ್ಯಾಹ್ನ ನಡೆದ ಕಾಲ್ತುಳಿತಕ್ಕೆ ಬಲಿಯಾದ 11 ಜನರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದರು. 'ನನಗೆ ಹೊಟ್ಟೆ ಉರಿಯುತ್ತಿದೆ. ಆ ಮಕ್ಕಳ ತಾಯಂದಿರು ಮಾತನಾಡುತ್ತಿರುವದು ನನಗೆ ನೋಡಿ ಸಹಿಸಿಕೊಳ್ಳಲಾಗುತ್ತಿಲ್ಲ' ಎಂದು ಭಾವುಕರಾದರು.
ಪೊಲೀಸ್ ಎಚ್ಚರಿಕೆ, ತಕ್ಷಣದ ಕ್ರಮ
ಈ ದುರಂತವಾಗುವುದಕ್ಕೂ ಮುನ್ನವೇ ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚರಿಸಿದ್ದು, 'ಪೊಲೀಸ್ ಇಲಾಖೆ ಕೂಡಲೇ ಹೇಳಿತ್ತು, ಇದನ್ನ ತಡೆಯಿರಿ ಅಂತ. ನಾನೂ ಕೂಡಲೇ ಮ್ಯಾನೇಜ್ಮೆಂಟ್‌ಗೆ ಸೂಚನೆ ನೀಡಿದೆ. ಆದರೆ ಅವರು ಹೊರಡುವುದಕ್ಕೆ ಅಲ್ಲಿ ಜಾಗವೇ ಇರಲಿಲ್ಲ. ನಾನು ಅವರನ್ನ ನಾನೇ ಕಾರಿನಲ್ಲಿ ಕೂರಿಸಿಕೊಂಡು ಅವರನ್ನು ಹೊರಗೆ ಕರೆದುಕೊಂಡು ಬಂದೆ ಎಂದರು.
ಪೂರ್ವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, 'ಅವರು ಟೀಕೆ ಮಾಡುತ್ತಲೇ ಇರಲಿ. ಡರ್ಟಿ ಪಾಲಿಟಿಕ್ಸ್ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜ್ ಕುಮಾರ್ ಸತ್ತಾಗ ಏನಾಯ್ತು ಅಂತ ಗೊತ್ತಿದೆ. ಆಗ ನಾನು ದೆಹಲಿಯಲ್ಲಿ ಇದ್ದೆ. 'ಈ ಘಟನೆ ನಮ್ಮ ಮನೆಯ ನೋವಾಗಿದೆ. ಇದು ಇಮೇಜ್ ಆಫ್ ಕರ್ನಾಟಕ. ಯಾರೇ ತಪ್ಪು ಮಾಡಿದರೂ ಸರಕಾರ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಈ ಘಟನೆಯಲ್ಲಿ ರಾಜಕೀಯ ಮಾಡುವುದು ಬೇಡ. ಒಬ್ಬ ತಾಯಿ ಹೇಳುತ್ತಾರೆ ಪೋಸ್ಟ್ ಮಾರ್ಟಮ್ ಮಾಡಬೇಡಿ ಅಂತ. ಎಷ್ಟು ಹೊಟ್ಟೆ ಉರಿಯಬೇಕು ಅಲ್ವಾ? ಎಂದು ಭಾವುಕರಾಗಿ ಹೇಳಿದರು.
ಭವಿಷ್ಯದಲ್ಲಿ ತಪ್ಪು ಪುನರಾವೃತ್ತಿ ಆಗದಂತೆ ಕ್ರಮ
ಡಿಕೆಶಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾ, 'ಸದನದಲ್ಲಿ ಎಲ್ಲವೂ ಬರುತ್ತದೆ. ಯಾರವರ ಕಾಲದಲ್ಲಿ ಏನಾಯ್ತು ಎಂಬದು ಎಲ್ಲರಿಗೂ ಗೊತ್ತಿದೆ. ಆದರೆ ಇಂತಹ ಘಟನೆ ಪುನಃ ನಡೆಯಬಾರದು ಎಂಬುದಕ್ಕೆ ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.
