ಆರ್ ಸಿಬಿ ವಿಜಯೋತ್ಸವದಲ್ಲಿ ನಡೆದ ದುರ್ಘಟನೆಗೆ ಕಾರಣಗಳ ಹುಡುಕಾಟ ಮುಂದುವರೆದಿದೆ. ಅನೇಕರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಅದ್ರಲ್ಲಿ ಅನುಷ್ಕಾ- ಕೊಹ್ಲಿ ಆಪ್ತರಲ್ಲಿ ಒಬ್ಬರಾಗಿರುವ ನಿಖಿಲ್ ಸೇರಿದ್ದಾರೆ. ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಯಾರು?
ಆರ್ ಸಿಬಿ (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಘಟನೆಗೆ ಆರ್ ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಕಾರಣ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಆರ್ ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ (RCB Marketing Head Nikhil Sosele)ಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈಗೆ ಹಾರುವ ಪ್ಲಾನ್ ನಲ್ಲಿದ್ದ ನಿಖಿಲ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅಲ್ಲದೆ ಕಾರ್ಯಕ್ರಮದ ಪ್ಲಾನ್ ನಲ್ಲಿ ಭಾಗಿಯಾಗಿದ್ದ ಇನ್ನೂ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಿಖಿಲ್ ಸೋಸಲೆ ಯಾರು? : ಲಿಂಕ್ಡ್ ಇನ್ ಪ್ರೋಫೈಲ್ ಪ್ರಕಾರ, 1986, ಆಗಸ್ಟ್ 18 ರಂದು ಜನಿಸಿರುವ ನಿಖಿಲ್ ಸೋಸಲೆ ಕಳೆದ ಎರಡು ವರ್ಷಗಳಿಂದ ಆರ್ ಸಿಬಿ ಮಾರ್ಕೆಟಿಂಗ್ ಮತ್ತು ರೆವೆನ್ಯೂ ಮುಖ್ಯಸ್ಥರಾಗಿ ಕೆಲ್ಸ ಮಾಡ್ತಿದ್ದಾರೆ. ಸೋಸಲೆ ವಾಸ್ತವವಾಗಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL)ನ ಡಯಾಜಿಯೊ ಇಂಡಿಯಾದಲ್ಲಿ 13 ವರ್ಷಗಳಿಂದ ಕೆಲ್ಸ ಮಾಡ್ತಿದ್ದಾರೆ. ಯುಎಸ್ ಎಲ್ ಆರ್ ಸಿಬಿಯ ಮೂಲ ಕಂಪನಿಯಾಗಿದೆ. ನಿಮಗೆ ತಿಳಿದಿರುವಂತೆ ಆರ್ ಸಿಬಿ ಮೊದಲು ವಿಜಯ್ ಮಲ್ಯ ಮಾಲೀಕತ್ವದಲ್ಲಿತ್ತು. ಮಲ್ಯ ದೇಶ ಬಿಡ್ತಿದ್ದಂತೆ ಯುಎಸ್ ಎಲ್, ಆರ್ ಸಿಬಿ ಸಂಪೂರ್ಣ ಹೊಣೆ ಹೊತ್ತುಕೊಂಡಿದೆ. ನಿಖಿಲ್ ಮೊದಲು ಬ್ಯುಸಿನೆಸ್ ಪಾರ್ಟನರ್ ಶಿಪ್ ಹೆಡ್ ಆಗಿದ್ದರು. ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿರುವ ಜೇಮ್ಸ್ ಕುಕ್ ವಿಶ್ವವಿದ್ಯಾಲಯದಿಂದ ಡಬಲ್ ಮೇಜರ್ ಪದವಿ ಪಡೆದಿದ್ದಾರೆ.
ಕೊಹ್ಲಿ(Kohli) – ಅನುಷ್ಕಾ (Anushka) ಜೊತೆ ಸಂಬಂಧ : ನಿಖಿಲ್ ಸೋಸಲೆ, ಬಹುತೇಕ ಐಪಿಎಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಬರುವ ಪ್ರತಿಯೊಂದು ಮ್ಯಾಚ್ ಗೆ ನಿಖಿಲ್ ಹಾಜರಾಗ್ತಾರೆ. ಅವರಿಗೆ ನೆರಳಾಗಿ ನಿಂತಿರ್ತಾರೆ. ಫೈನಲ್ ಪಂದ್ಯದಲ್ಲಿ ಕೂಡ ಅನುಷ್ಕಾ ಜೊತೆಗಿದ್ದ ನಿಖಿಲ್, ಮೈದಾನಕ್ಕೂ ಅನುಷ್ಕಾ ಜೊತೆ ಬಂದಿದ್ದರು. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಗೆ ನಿಖಿಲ್ ಬಹಳ ಆಪ್ತರು ಎನ್ನಲಾಗ್ತಿದೆ. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಸಾಕ್ಷಿ ಧೋನಿ, ಯುಜ್ವೇಂದ್ರ ಚಾಹಲ್, ದೀಪಿಕಾ ಪಲ್ಲಿಕಲ್, ಟ್ರಾವಿಸ್ ಹೆಡ್, ಜಹೀರ್ ಖಾನ್, ಹೇಜಲ್ ಕೀಚ್ (ಯುವರಾಜ್ ಸಿಂಗ್ ಅವರ ಪತ್ನಿ), ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ ಮುಂತಾದ ಅನೇಕ ದೊಡ್ಡ ಸ್ಟಾರ್ಸ್ ಇವರ ಸೋಶಿಯಲ್ ಮೀಡಿಯಾ ಫಾಲೋ ಮಾಡ್ತಿದ್ದಾರೆ.
ನಿಖಿಲ್ ಬಂಧನಕ್ಕೆ ಕಾರಣ : ಆರ್ಸಿಬಿಯ ಪ್ರಚಾರ ಮತ್ತು ಮಾರ್ಕೆಟಿಂಗ್ನಲ್ಲಿ ನಿಖಿಲ್ ದೊಡ್ಡ ಪಾತ್ರ ವಹಿಸಿದ್ದಾರೆ. ಆರ್ಸಿಬಿ ಮೊದಲ ಐಪಿಎಲ್ ಗೆಲುವಿನ ನಂತ್ರ, ಬೆಂಗಳೂರಿನ ಬಸ್ ಪೆರೇಡ್ ಪ್ಲಾನ್ ಮೊದಲು ಮಾಡಿದ್ದು ನಿಖಿಲ್ ಎನ್ನಲಾಗ್ತಿದೆ. ಸರ್ಕಾರ ಹಾಗೂ ಪೊಲೀಸ್ ಒಪ್ಪಿಗೆ ಇಲ್ಲದೆ ನಿಖಿಲ್ ಬಸ್ ಪರೇಡ್ ಘೋಷಣೆ ಮಾಡಿದ್ದರು. ಅವರ ಪೋಸ್ಟನ್ನು ಆರ್ ಸಿಬಿ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಪರೇಡ್ ಸಾಧ್ಯವಿಲ್ಲ ಎಂಬುದು ತಿಳಿದ್ರೂ ಪೋಸ್ಟ್ ಡಿಲಿಟ್ ಆಗಿರಲಿಲ್ಲ. ಜೊತೆಗೆ ಉಚಿತ ಪ್ರವೇಶದ ಘೋಷಣೆಯನ್ನೂ ನಿಖಿಲ್ ಮಾಡಿದ್ದರು ಎನ್ನಲಾಗಿದೆ. ನಿಖಿಲ್ ಸೂಚನೆಯನ್ನು ಡಿಎನ್ ಎ ಮ್ಯಾನೇಜ್ಮೆಂಟ್ ಪಾಲನೆ ಮಾಡಿತ್ತು. ಇದೇ ಯಡವಟ್ಟಿಗೆ ಕಾರಣ ಎನ್ನಲಾಗ್ತಿದೆ. ನಿಖಿಲ್ ಜೊತೆ ಡಿಎನ್ಎ ಕಂಪನಿಯ ಕಿರಣ್, ಸುಮಂತ್ ಮತ್ತು ಸುನಿಲ್ ಮ್ಯಾಥ್ಯೂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
