ಬೆಂಗಳೂರು(ಜ.09): ಪ್ರತಿ ವರ್ಷದಂತೆ ಈ ವರ್ಷವೂ ವಿವಿ ಪುರಂನ ಸಜ್ಜನರಾವ್‌ ವೃತ್ತದಲ್ಲಿರುವ ಶ್ರೀ ವಾಸವಿ ಕಾಂಡಿಮೆಂಟ್ಸ್‌ನಿಂದ ಅವರೆಕಾಯಿ ಮೇಳ ಪ್ರಾರಂಭವಾಗಿದ್ದು, ಇದೇ ತಿಂಗಳ 17ರವರೆಗೆ ನಡೆಯಲಿದೆ.

ಕೊರೋನಾ ಹಿನ್ನೆಲೆ ಈ ವರ್ಷ ಸರಳವಾಗಿ ಅವರೆಕಾಯಿ ಮೇಳ ನಡೆಸಲಾಗುತ್ತಿದೆ. ಎಲ್ಲಾ ರೀತಿಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಮೂಲಕ ವಾಸವಿ ಕಾಂಡಿಮೆಂಟ್ಸ್‌ ಹಮ್ಮಿಕೊಂಡಿದ್ದು, ಶುಕ್ರವಾರ ಮೇಳಕ್ಕೆ ಚಾಲನೆ ನೀಡಲಾಯಿತು.

ಡ್ರಗ್ಸ್‌ ಮಾರುತ್ತಿದ್ದ ಕಾಂಗೋ, ನೈಜೀರಿಯಾ ಪ್ರಜೆಗಳ ಬಂಧನ

ಮೇಳದ ಕುರಿತು ಮಾಹಿತಿ ನೀಡಿದ ಕಾಂಡಿಮೆಂಟ್ಸ್‌ನ ಗೀತಾ ಶಿವಕುಮಾರ್‌, ಕಳೆದ 20 ವರ್ಷಗಳಿಂದ ಅವರೆಕಾಯಿ ಮೇಳ ಆಯೋಜಿಸುತ್ತಿದ್ದೇವೆ. ಕೋವಿಡ್‌ ಇರುವುದರಿಂದ ಈ ಬಾರಿ ಅವರೆಕಾಯಿ ಮೇಳವನ್ನು ಹಿಂದಿನಂತೆ ನಡೆಸಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಸಜ್ಜನರಾವ್‌ ವೃತ್ತದಲ್ಲಿರುವ ಅಂಗಡಿಯ ಒಳ ಭಾಗದಲ್ಲೇ ವ್ಯಾಪಾರ ನಡೆಸಲಾಗುತ್ತಿದೆ. ಎಂದಿನಂತೆ ಬೆಳಗ್ಗೆ 10ರಿಂದ ರಾತ್ರಿ 10ರ ತನಕ ಅಂಗಡಿ ತೆರೆದಿರುತ್ತದೆ. ಸಂಜೆ 3ರಿಂದ ರಾತ್ರಿ 10ರ ತನಕ ಮಾತ್ರ ವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿ ದೊರೆಯಲಿದೆ ಎಂದು ಹೇಳಿದರು.

ಮಳಿಗೆಯ ಸದಸ್ಯರು ಹ್ಯಾಂಡ್‌ ಗ್ಲೌಸ್‌, ಮಾಸ್ಕ್‌ ಸೇರಿದಂತೆ ಸಂಪೂರ್ಣ ಮುಂಜಾಗ್ರತೆ ವಹಿಸಲಿದ್ದಾರೆ. ಅಂಗಡಿಗೆ ಬರುವರಿಗೆ ಸ್ಯಾನಿಟೈಸ್‌ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಮಾಗಡಿ ತಾಲೂಕಿನ ರೈತರು ಬೆಳೆದ ಅವರೆಕಾಯಿಯನ್ನು ವಾಸವಿ ಕಾಂಡಿಮೆಂಟ್ಸ್‌ ನೇರವಾಗಿ ಖರೀದಿಸುತ್ತದೆ. ಈ ಬಾರಿ ಖರೀದಿದಾರರು ಆನ್‌ಲೈನ್‌ ಮೂಲಕವೂ ಪದಾರ್ಥಗಳನ್ನು ಖರೀದಿ ಮಾಡಬಹುದು ಎಂದರು.