Ambareesh ಸ್ಮಾರಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ!
ಎಷ್ಟೇ ಕಷ್ಟ ಬಂದರೂ, ಯಾರೇ ವಿರೋಧ ಮಾಡಿದರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ದಿನವೂ ನಡೆದುಕೊಳ್ಳದ ನಟ ಅಂಬರೀಷ್ ಅವರ ಸ್ಮಾರಕವನ್ನು ರಾಜ್ಯದ ಜನತೆ ಮಾತ್ರವಲ್ಲದೆ, ಸುತ್ತಮುತ್ತಲಿನ ರಾಜ್ಯಗಳ ಜನರು ಬಂದು ನೋಡುವಂತೆ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಫೆ.28): ಎಷ್ಟೇ ಕಷ್ಟ ಬಂದರೂ, ಯಾರೇ ವಿರೋಧ ಮಾಡಿದರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ದಿನವೂ ನಡೆದುಕೊಳ್ಳದ ನಟ ಅಂಬರೀಷ್ (Ambareesh) ಅವರ ಸ್ಮಾರಕವನ್ನು ರಾಜ್ಯದ ಜನತೆ ಮಾತ್ರವಲ್ಲದೆ, ಸುತ್ತಮುತ್ತಲಿನ ರಾಜ್ಯಗಳ ಜನರು ಬಂದು ನೋಡುವಂತೆ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ (Kanteerava Studio) ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ನಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದು ಎಷ್ಟುಕಷ್ಟಎಂಬುದು ಎಲ್ಲರಿಗೂ ಗೊತ್ತಿದೆ.
ಆದರೆ, ಅಂಬರೀಷ್ ಮಾತ್ರ ಏನೇ ಬಂದರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ದಿನವೂ ಬದುಕಲಿಲ್ಲ. ತನ್ನ ಸ್ವಂತ ಇಚ್ಛಾಶಕ್ತಿಯ ಮೇಲೆ ಬದುಕಿದಂತಹ ಒಬ್ಬ ಮೇರು ನಟ. ಇದು ಅವರಿಗೆ ದೈವದತ್ತ ಕೊಡುಗೆಯಾಗಿ ಬಂದಿತ್ತು ಎಂದು ಬಣ್ಣಿಸಿದರು. ಅಂಬರೀಷ್ ತೆರೆದ ಪುಸ್ತಕವಿದ್ದಂತೆ. ಯಾವುದನ್ನೂ ಮುಚ್ಚಿಡುತ್ತಿರಲಿಲ್ಲ. ಯಾರು ತಮ್ಮ ಮನದಾಳದ ಇಚ್ಛೆಯಂತೆ ಜೀವನ ನಡೆಸಲು ಸಾಧ್ಯವಾಗುತ್ತದೆಯೋ ಅವರು ನಿಜವಾದ ಧೀರ. ಅಂಬರೀಷ್ ಮತ್ತು ನನ್ನದು 40 ವರ್ಷಗಳಿಗೂ ಮಿಗಿಲಾದ ಸ್ನೇಹ. ಒಟ್ಟಿಗೆ ಓಡಾಡಿ ಸಮಯ ಕಳೆದಿದ್ದೇವೆ. ಊಟ ಮಾಡಿದ್ದೇವೆ.
Ambareesh ಸ್ಮಾರಕ ನಿರ್ಮಾಣಕ್ಕೆ 12 ಕೋಟಿ: ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ
ರಾಜ್ಯಾದ್ಯಂತ ಸುತ್ತಾಡಿದ್ದೇವೆ. ಮಾಡಬಹುದಾದ್ದನ್ನು, ಮಾಡಬಾರದ್ದನ್ನು ಮಾಡಿದ್ದೇವೆ ಎಂದು ತಮ್ಮಿಬ್ಬರ ಒಡನಾಟವನ್ನು ಸ್ಮರಿಸಿದರು. ಆತನ ಬಾಯಲ್ಲಿ ‘ಲೇ’ ಎಂದು ಕರೆಸಿಕೊಳ್ಳುವ ಬಯಕೆ ಅವರ ಸ್ನೇಹಿತರಲ್ಲಿತ್ತು. ಅವರು ಗೌರವ ನೀಡಿ ಮಾತನಾಡಿದರೆ ಆ ವ್ಯಕ್ತಿ ಆತ್ಮೀಯರಲ್ಲವೆಂದು ಅನಿಸುತ್ತಿತ್ತು. ಬಾಲ್ಯ, ಚಿತ್ರರಂಗ, ರಾಜಕೀಯದಲ್ಲಿಯೂ ಹಾಗೆಯೇ ಇದ್ದವರು. ಸಿನಿಮಾದಿಂದ ನಾಯಕರಾಗಿಲ್ಲ, ಹುಟ್ಟಿನಿಂದ ನಾಯಕತ್ವದ ಗುಣಗಳು ಅವರಲ್ಲಿತ್ತು. ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡಿದರೂ, ನಾಯಕನ ಪಾತ್ರ ಅವರಿಗೆ ಶೋಭೆಯನ್ನು ತಂದು ಕೊಟ್ಟಿತು ಎಂದರು.
ಅಧಿಕಾರ ಧಿಕ್ಕರಿಸಿ ರಾಜಕಾರಣ: ಬಡವರಿಗೆ, ರೈತರಿಗೆ ಹೃದಯ ಮಿಡಿಯುತ್ತಿತ್ತು. ಕರ್ನಾಟಕವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬೇಕೆಂಬ ತುಡಿತ ಅವರಲ್ಲಿತ್ತು. ಆದರೆ, ಅಂಬರೀಶನಿಗೆ ಅಧಿಕಾರಕ್ಕೆ ಅಂಟಿಕೊಳ್ಳುವ ಗುಣವಿರಲಿಲ್ಲ. ಅಧಿಕಾರವಿರಲಿ, ಇಲ್ಲದಿರಲಿ ಅದನ್ನು ಧಿಕ್ಕರಿಸಿಯೇ ರಾಜಕಾರಣ ಮಾಡಿದವರು. ಅಂತಹ ವ್ಯಕ್ತಿಗಳು ಬಹಳ ಕಡಿಮೆ. ಕೇಂದ್ರ ಸಚಿವರಿದ್ದಾಗ ಕಾವೇರಿ ವಿವಾದ ತಲೆದೋರಿದಾಗ ಒಂದು ಕ್ಷಣವೂ ಯೋಚಿಸದೆ ರಾಜೀನಾಮೆ ನೀಡಿ ಬಂದರು. ಕಾವೇರಿ ಹೋರಾಟದಲ್ಲಿ ಅಧಿಕಾರ ತ್ಯಾಗ ಮಾಡಿದ್ದು ಅಂಬರೀಶ್ ಮಾತ್ರ. ಕನ್ನಡ ಚಿತ್ರರಂಗದ ಹೆಸರನ್ನು ಇತರೆ ರಾಜ್ಯಗಳಲ್ಲಿಯೂ ಅಭಿಮಾನ ಪೂರ್ವಕವಾಗಿ ತೆಗೆದುಕೊಳ್ಳುವಂತೆ ಮಾಡಿದ್ದರು. ಅಜಾತಶತ್ರು ಎಂದು ಅವರನ್ನು ಕರೆಯಲಾಗುತ್ತಿತ್ತು. ಯಾರೊಂದಿಗೂ ದ್ವೇಷ ಸಾಧಿಸುತ್ತಿರಲಿಲ್ಲ ಎಂದು ನುಡಿದರು.
ಅಂಬರೀಶ್ ಯಾವುದೇ ತರಬೇತಿ ಇಲ್ಲದೆ ಅಲ್ಲಿಯೇ ಮಾಡಿ ತೋರಿಸುವ ನೈಜ ನಟನೆ ಇತ್ತು. ಅತ್ಯಂತ ಗಟ್ಟಿಯಾದ ಬಳಸಂಗಾತಿ ಸುಮಲತಾ. ಅವರದ್ದು, ಅನ್ಯೋನ್ಯ ದಾಂಪತ್ಯ. ಅಂಬರೀಶ್ ಅವರ ಗುಣಧರ್ಮಗಳನ್ನು ಸುಮಲತಾ ಅವರು ರೂಢಿಸಿಕೊಂಡಿದ್ದಾರೆ. ಪುತ್ರ ಅಭಿಷೇಕ್ ಸಹ ತಂದೆಯ ಗುಣಗಳನ್ನು ಪಡೆದು ಆದಷ್ಟುಬೇಗ ಮತ್ತೊಮ್ಮೆ ಅಂಬರೀಶ್ ಅವರನ್ನು ಪರಿಚಯಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿಗಳು ಆಶಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಗೌಡ, ಸಂಸದೆ ಸುಮಲತಾ ಅಂಬರೀಷ್, ನಟರಾದ ದರ್ಶನ್, ಅಭಿಷೇಕ್ ಅಂಬರೀಷ್ ಇತರರು ಉಪಸ್ಥಿತರಿದ್ದರು.
James 2022: ಮಹಾಶಿವರಾತ್ರಿಗೆ ಪವರ್ ಪ್ಯಾಕ್ಡ್ 'ಟ್ರೇಡ್ಮಾರ್ಕ್'ನಲ್ಲಿ ಬರಲಿದ್ದಾರೆ ಪುನೀತ್ ರಾಜ್‌ಕುಮಾರ್!
ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ ದಿನಾಂಕ ಶೀಘ್ರ ಘೋಷಣೆ: ಅಗಲಿದ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna Award) ಪ್ರದಾನ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ನಟರಾದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಪುನೀತ್‌ರಾಜ್‌ಕುಮಾರ್‌ನಂತಹ ಮೇರುನಟರನ್ನು ನಾಡು ಕಳೆದುಕೊಂಡಿದೆ. ಪುನೀತ್ ರಾಜ್‌ಕುಮಾರ್ ಅವರ ಅಭಿಮಾನ ಬಳಗ ಬಹಳ ದೊಡ್ಡದಿದೆ. ಅವರನ್ನು ನೋಡಲು ಜನಸಾಗರ ಹರಿದುಬಂತು. ಪುನೀತ್ ಅವರ ಸ್ಮಾರಕವನ್ನು ಸದ್ಯದಲ್ಲಿಯೇ ನಿರ್ಮಿಸಲಾಗುವುದು. ಅವರಿಗೆ ಘೋಷಿಸಿರುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನದ ದಿನಾಂಕವನ್ನೂ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದರು.