ಸುಳ್ಳು ಅಫಿಡವಿಟ್: ಚಿಕ್ಕಪೇಟೆ ಶಾಸಕ ಗರುಡಾಚಾರ್‌ಗೆ ಜಾಮೀನು ಮಂಜೂರು
ಚುನಾವಣೆಗೆ ಸ್ಪರ್ಧಿಸಿದ ವೇಳೆ ಸಲ್ಲಿಕೆ ಮಾಡಿದ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪ ಸಂಬಂಧ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ತಿಂಗಳ ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರು (ಅ.14): ಚುನಾವಣೆಗೆ ಸ್ಪರ್ಧಿಸಿದ ವೇಳೆ ಸಲ್ಲಿಕೆ ಮಾಡಿದ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪ ಸಂಬಂಧ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ ಗರುಡಾಚಾರ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ತಿಂಗಳ ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ. ಇದೇ ವೇಳೆ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆ ಪ್ರಮಾಣ ಇರುವುದರಿಂದ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ಗುರುವಾರ ವಿಚಾರಣೆ ನಡೆಸಿದ ನ್ಯಾಯಾಲಯವು, 25 ಸಾವಿರ ರು. ಬಾಂಡ್, ಶ್ಯೂರಿಟಿ ಒದಗಿಸಲು ಸೂಚಿಸಿದೆ. ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುವುದರಿಂದ ಜೈಲಿಗೆ ಹೋಗುವುದರಿಂದ ಶಾಸಕಗೆ ರಿಲೀಫ್ ಸಿಕ್ಕಂತಾಗಿದೆ.
ಉದಯ್ ಗರುಡಾಚಾರ್ ವಿರುದ್ಧ ಪ್ರಕಾಶ್ ಎಂ.ಶೆಟ್ಟಿಎಂಬಾತ ಅಶೋಕ್‌ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಇದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ, 2018ರಲ್ಲಿ ಚಿಕ್ಕಪೇಟೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ವೇಳೆ ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣದ ಕುರಿತು ಪ್ರಮಾಣಪತ್ರದಲ್ಲಿ ಉಲ್ಲೇಖ ಮಾಡದೆ ಚುನಾವಣಾಧಿಕಾರಿಗೆ ಉದಯ್ ಸಲ್ಲಿಕೆ ಮಾಡಿದ್ದರು. ಅಲ್ಲದೇ, ಪತ್ನಿ ಬ್ಯಾಂಕ್ ಖಾತೆಯ ವಿವರವನ್ನು ಸ್ಪಷ್ಟವಾಗಿ ನೀಡಿರಲಿಲ್ಲ.
ಜನಸಂಕಲ್ಪ ಯಾತ್ರೆ ಆರಂಭಿಸಿ ಜನರ ಬಳಿ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ: ಎಚ್.ಸಿ.ಮಹದೇವಪ್ಪ
ಈ ಮಾಹಿತಿ ಸಂಗ್ರಹಿಸಿದ ಪ್ರಶಾಂತ್ ಎಂಬುವವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಕುರಿತು ದೂರು ನೀಡಿದ್ದರು. ಜತೆಗೆ ಮೇವರಿಕ್ ಹೋಲ್ಡಿಂಗ್ಸ್‌ನಲ್ಲಿ ಶಾಸಕರು ವ್ಯವಸ್ಥಾಪಕ ನಿರ್ದೇಶಕರಾಗಿದ್ದರೂ ಹೂಡಿಕೆದಾರ ಎಂದು ನಮೂದು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದರು. ಇದನ್ನು ಪರಿಶೀಲಿಸಿದ ಆಯೋಗವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯವು ಇದರ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಯಾರೂ ಸಿಗದಿದ್ದಾಗ ವಿಶ್ವನಾಥ್ ಆತ್ಮೀಯರಿಗೆ ಮದ್ದಾಕುತ್ತಾರೆ: ಸಚಿವ ಸೋಮಶೇಖರ್
ವಕೀಲರು ಹೇಳಿದಂತೆ ಕೇಳಿದ್ದೆ: ಚುನಾವಣೆ ವೇಳೆ ಪ್ರಮಾಣ ಪತ್ರ ಸಲ್ಲಿಸುವ ವೇಳೆ ವಕೀಲರು ಹೇಳಿದ್ದ ಹಾಗೆ ಕೇಳಿದ್ದೇನೆ ಎಂದು ಶಾಸಕ ಉದಯ ಗರುಡಾಚಾರ್ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ನಿ ಖಾತೆಯಲ್ಲಿ ಎಷ್ಟುಹಣ ಇತ್ತೋ ಅಷ್ಟುಮಾಹಿತಿ ನೀಡಿದ್ದೇನೆ. ಜಮೀನು ವಿಚಾರವಾಗಿ ಕೆಲವು ಪ್ರಕರಣಗಳಿವೆ. ಉದ್ಯಮಿಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ಹಾಕಿದ್ದಾರೆ. ಈಗ ತೀರ್ಪು ಬಂದಿದ್ದು, ಎರಡು ತಿಂಗಳು ಜೈಲು ಎಂದು ನ್ಯಾಯಾಲಯವು ಹೇಳಿದೆ. ಒಂದು ತಿಂಗಳು ಕಾಲಾವಕಾಶ ಇದ್ದು, ಮೇಲ್ಮನವಿ ಸಲ್ಲಿಸುತ್ತೇನೆ. ರಾಜಕೀಯವಾಗಿ ನನಗೆ ಶತ್ರುಗಳಿದ್ದಾರೆ ಎಂದು ಹೇಳಿದರು.