ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನೂರಾರು ಎಕರೆ ಅರಣ್ಯ ಹಾಗೂ ಅಸಂಖ್ಯಾತ ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಚಿಕ್ಕಮಗಳೂರು (ಜ.18): ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಾಟಿಯ ಸಮೀಪವಿರುವ ಮಲಯ ಮಾರುತ ಗುಡ್ಡದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಕ್ಷಣಕ್ಕೂ ಅರಣ್ಯದ ಒಳಭಾಗಕ್ಕೆ ವ್ಯಾಪಿಸುತ್ತಿದೆ. ಮುಖ್ಯ ರಸ್ತೆಯಿಂದ ಸುಮಾರು 2 ಕಿ.ಮೀ ದೂರದ ಅರಣ್ಯದೊಳಗೆ ಬೆಂಕಿ ಹೊತ್ತಿಕೊಂಡಿರುವುದರಿಂದ ನೂರಾರು ಎಕರೆ ಹಸಿರು ಅರಣ್ಯ ಬೆಂಕಿಗಾಹುತಿಯಾಗುತ್ತಿದೆ.

ನೂರಾರು ಪ್ರಾಣಿ-ಪಕ್ಷಿಗಳು ಬೆಂಕಿಗೆ ಬಲಿ

ಬೆಂಕಿಯ ಕೆನ್ನಾಲಿಗೆಗೆ ಅರಣ್ಯ ಪ್ರದೇಶ ಹೊತ್ತಿ ಉರಿಯುತ್ತಿದ್ದು, ಅರಣ್ಯದೊಳಗಿದ್ದ ನೂರಾರು ಅಪರೂಪದ ಪ್ರಾಣಿ ಮತ್ತು ಪಕ್ಷಿಗಳು ಸ್ಥಳದಲ್ಲೇ ಸಜೀವ ದಹನವಾಗಿವೆ. ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲಾಗದೆ ಪ್ರಾಣಿಗಳು ಅಸಹಾಯಕವಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ಮರುಕ ಹುಟ್ಟಿಸುವಂತಿದೆ. ಗಾಳಿಯ ವೇಗ ಹೆಚ್ಚಿರುವುದರಿಂದ ಬೆಂಕಿಯ ಜ್ವಾಲೆಗಳು ಇಡೀ ಗುಡ್ಡವನ್ನು ಆವರಿಸಿಕೊಳ್ಳುತ್ತಿದ್ದು, ಅರಣ್ಯ ಸಂಪತ್ತು ಸಂಪೂರ್ಣವಾಗಿ ನಾಶವಾಗುವ ಭೀತಿ ಎದುರಾಗಿದೆ.

ಬೆಂಕಿ ನಂದಿಸಲು ಅಧಿಕಾರಿಗಳು, ಸ್ಥಳೀಯರ ಹರಸಾಹಸ

ಘಟನೆ ನಡೆದ ಕೂಡಲೇ ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಧಿಕಾರಿಗಳ ಜೊತೆಗೆ ಸ್ಥಳೀಯ ಸಾರ್ವಜನಿಕರು ಕೈಜೋಡಿಸಿದ್ದು, ಬೆಂಕಿ ಇನ್ನಷ್ಟು ಹರಡದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಗಾಳಿಯ ರಭಸಕ್ಕೆ ಬೆಂಕಿಯ ಜ್ವಾಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.

ಬೆಂಕಿ ಹೊತ್ತಲು ಕಾರಣವೇನು?

ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆಕಸ್ಮಿಕವಾಗಿ ಬೆಂಕಿ ತಗುಲಿದೆಯೇ ಅಥವಾ ಕಿಡಿಗೇಡಿಗಳು ಯಾರಾದರೂ ಬೆಂಕಿ ಹಚ್ಚಿದ್ದಾರೆಯೇ ಎಂಬ ಬಗ್ಗೆ ಅರಣ್ಯ ಅಧಿಕಾರಿಗಳು ತನಿಖೆ ಬಳಿಕವೇ ತಿಳಿಯಲಿದೆ.