ಮುರುಘಾ ಶರಣರು ಮೊದಲ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ಸಲ್ಲಿಸಿದ ಜಾಮೀನು ಅರ್ಜಿ ಸಹ ವಜಾಗೊಂಡಿದೆ. ಇನ್ನು ಎರಡನೇ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ 761 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.14): ಮುರುಘಾ ಶರಣರು ಮೊದಲ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ಸಲ್ಲಿಸಿದ ಜಾಮೀನು ಅರ್ಜಿ ಸಹ ವಜಾಗೊಂಡಿದೆ. ಇನ್ನು ಎರಡನೇ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದರು. ಇದೀಗ ಈ ಚಾರ್ಜ್ ಶೀಟ್ ಗೆ ಕೋರ್ಟ್ ನಂಬರ್ ನೀಡಿದ್ದು ಮಾಹಿತಿ ಲಭ್ಯವಾಗಿವೆ. 

ಮಠದ ಅಡುಗೆ ಸಹಾಯಕಿ ಮಹಿಳೆ ತನ್ನ ಮಕ್ಕಳಲ್ಲದೆ, ಇತರೆ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದ್ದರು. ಮುರುಘಾ ಶರಣರ ವಿರುದ್ಧ ಮೊದಲ ಪ್ರಕರಣದ ನಂತರ ಈ ಎರಡನೇ ದೂರು ದಾಖಲಾಗಿತ್ತು. ಒಟ್ಟು ಏಳು ಜನರ ಮೇಲೆ ಅಕ್ಟೋಬರ್ 13, 2022ರಂದು ದಾಖಲಾಗಿದ್ದ ಈ ಕೇಸ್ ನ ಚಾರ್ಜಶೀಟ್ ಜನೇವರಿ 10, 2023ರಂದು ಚಿತ್ರದುರ್ಗ ಎರಡನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು. ಒಟ್ಟು 761 ಪುಟಗಳ ಚಾರ್ಜಶೀಟ್ ಪಿಐ ಬಾಲಚಂದ್ರ ನಾಯಕ್ ನೇತೃತ್ವದಲ್ಲಿ ಕೋರ್ಟಿಗೆ ಎ ಮತ್ತು ಬಿ ಎಂಬ ಎರಡು ಭಾಗವಾಗಿ ಸಲ್ಲಿಕೆಯಾಗಿತ್ತು.

ಮುರುಘಾ ಶರಣರು ಹಾಸ್ಟೇಲ್ ವಾರ್ಡನ್ ರಶ್ಮಿ ಮೂಲಕ ಮಕ್ಕಳನ್ನು ರೂಮಿಗೆ ಕರೆಸಿಕೊಳ್ಳುತ್ತಿದ್ದರು. ಮತ್ತು ಬರಿಸುವ ಚಾಕಲೇಟ್ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಸಂತ್ರಸ್ತರು ನೀಡಿದ ಸಿಆರ್ ಪಿಸಿ 161,164 ಹೇಳಿಕೆ ಆಧಾರದ ಮೇಲೆ ಚಾರ್ಜಶೀಟ್ ಸಲ್ಲಿಕೆಯಾಗಿತ್ತು‌. ಈ ಪ್ರಕರಣದ ತನಿಖೆ ಕಲಂ 173(8) ಅಡಿಯಲ್ಲಿ ತನಿಖೆಯಲ್ಲಿದೆ ಎಂಬ ಮಾಹಿತಿ ಸಹ ಚಾರ್ಜ್ ಶೀಟಿನಲ್ಲಿದೆ. ವಾರ್ಡನ್ ರಶ್ಮಿ ಮುರುಘಾ ಶರಣರ ಬಳಿ ಹೋಗಲು ಟೈಂ ಟೇಬಲ್ ಹಾಕಿದ್ದರು. ಪ್ರತಿದಿನ ಹಾಸ್ಟೇಲಿನ ಇಬ್ಬರು ಮಕ್ಕಳು ಮುರುಘಾ ಶರಣರ ಬಳಿ ಹೋಗಬೇಕಿತ್ತು. ಮೊದಲ ಭಾನುವಾರ ಹೋದಾಗ ಸ್ವಾಮೀಜಿ ನೀಡಿದ ಚಾಕ್ಲೇಟ್ ತಿಂದಾಗ ನಿದ್ದೆ ಬಂದು ಮಲಗಿದ್ದೆ. ಎಚ್ಚರವಾದಾಗ ಸುಸ್ತು, ಕಾಲು ತೊಡೆ ಭಾಗದಲ್ಲಿ ನೋವಿತ್ತು. ಮತ್ತೊಂದು ಭಾನುವಾರ ಹೋದಾಗ ಮತ್ತೆ ಚಾಕ್ಲೇಟ್ ನೀಡಿದ್ದರು. ಎಚ್ಚರವಾದಾಗ ಮುರುಘಾಶ್ರೀ ಏನೋ ಮಾಡಿದ್ದಾರೆ ಎಂದು ತಿಳಿಯಿತು. ಇದು ಸಂತ್ರಸ್ತ ಬಾಲಕಿಯೊಬ್ಬಳ ಹೇಳಿಕೆಯಾದರೆ ಮತ್ತೊಬ್ಬ ಸಂತ್ರಸ್ತ ಬಾಲಕಿ ಒಬ್ಬರು ತಪ್ಪು ಮಾಡಿದರೆ ವಾರ್ಡನ್ ರಶ್ಮಿ ಎಲ್ಲರಿಗೂ ಹೊಡೆಯುತ್ತಿದ್ದರು. ಮುರುಘಾಶ್ರೀ ಬಳಿ ಹೋಗಲು ಅವರೇ ಸೂಚಿಸುತ್ತಿದ್ದರು. ಒಮ್ಮೆ ಮುರುಘಾಶ್ರೀ ರೂಮಿಗೆ ಹೋದಾಗ ಅವರು ರೇಪ್ ಮಾಡಿದರು ಎಂದು ಹೇಳಿಕೆ ನೀಡಿದ್ದಾಳೆ. 

ಇನ್ನು ಈ ವಿಚಾರವಾಗಿ ನಡೆದ ವಿಚಾರಣೆಯಲ್ಲಿ ವಾರ್ಡನ್ ರಶ್ಮಿ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಆರು ವರ್ಷಗಳಿಂದ ಹಾಸ್ಟೇಲ್ ವಾರ್ಡನ್ ಆಗಿ ಕೆಲಸ ಮಾಡಿದ್ದೇನೆ. ಮುರುಘಾ ಶರಣರ ಬಳಿ ಮಕ್ಕಳನ್ನು ಕಳಿಸಲು ಯಾವುದೇ ಟೈಂ ಟೇಬಲ್ ಮಾಡಿಲ್ಲ. ಅವರ ಬಳಿಗೆ ಮಕ್ಕಳನ್ನು ಸಹ ಕಳಿಸಿಲ್ಲ. ತಪ್ಪು ಮಾಡಿದಾಗ ಬುದ್ಧಿ ಹೇಳಿ ಎರಡೇಟು ಹೊಡೆದಿದ್ದೇನೆ. ದೂರುದಾರ ಮಹಿಳೆ ಹಾಗೂ ಆ ಇಬ್ಬರು ಮಕ್ಕಳು ನನಗೆ ಗೊತ್ತು. ಇದು ಸುಳ್ಳು ಆರೋಪವಾಗಿದೆ. ಶರಣರು ಮಠದ ಹಾಲ್ ನಲ್ಲಿ ಮಕ್ಕಳಿಗೆ ಡ್ರೈ ಫ್ರೂಟ್ಸ್, ಹಣ್ಣು ನೀಡುತ್ತಿದ್ದರು. ಸ್ವಾಮೀಜಿ ನೀಡುತ್ತಿದ್ದ ಹಣ್ಣಿನಲ್ಲಿ ಮತ್ತು ಬರುವ ಔಷಧಿ ಇರುತ್ತಿತ್ತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಅವರ ಖಾಸಗಿ ಕೊಠಡಿ ಸಹ ನನಗೆ ಗೊತ್ತಿಲ್ಲ ಎಂಬುದು ಎ2 ರಶ್ಮಿ ಹೇಳಿಕೆ.

ಮುರುಘಾಶ್ರೀ ಬಾಲಕಿಯರ ಜತೆ ಲೈಂಗಿಕ ಕ್ರಿಯೆ ನಡೆಸಿಲ್ಲ: 2ನೇ ಪೋಕ್ಸೋ ಕೇಸ್‌​ನ​ಲ್ಲಿ ತಜ್ಞ ವೈದ್ಯರ ಹೇಳಿಕೆ

ಇನ್ನು ಇದೇ ವಿಚಾರಣೆಯಲ್ಲಿ ಮುರುಘಾ ಶರಣರ ಹೇಳಿಕೆ ಸಹ ದಾಖಲಾಗಿದ್ದು, ತಮ್ಮ ಮೇಲಿನ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ. ಸಂತ್ರಸ್ತ ಬಾಲಕಿಯರಿಬ್ಬರು ಎಂದೂ ನನ್ನ ಕೊಠಡಿಗೆ ಬಂದಿಲ್ಲ. ದರ್ಬಾರ ಹಾಲ್ ನಲ್ಲಿ ಟ್ಯೂಷನ್ ನಡೆಸುತ್ತಿದ್ದೆ. ಪ್ರಸಾದದ ರೂಪದಲ್ಲಿ ಹಣ್ಣು, ಡ್ರೈ ಫ್ರೂಟ್ಸ್ ನೀಡುತ್ತಿದ್ದೆ. ವಿದೇಶಕ್ಕೆ ಹೋದಾಗ ತಂದ ಚಾಕಲೇಟ್ ಗಳನ್ನು ಮಕ್ಕಳಿಗಷ್ಟೇ ಅಲ್ಲ ಮಠದ ಎಲ್ಲರಿಗೂ ನೀಡುತ್ತಿದ್ದದ್ದು ವಾಡಿಕೆ. ಇದರಲ್ಲಿ ಯಾವುದೇ ಮತ್ತು ಬರಿಸುವ ಔಷಧಿಗಳಿರುತ್ತಿರಲಿಲ್ಲ. ಮಕ್ಕಳನ್ನು ಲೈಂಗಿಕವಾಗಿ ನಾನು ಬಳಸಿಕೊಂಡಿಲ್ಲ, ಇದು ಸುಳ್ಳು ಆರೋಪ ಎಂಬುದು ಮುರುಘಾ ಶರಣರ ಹೇಳಿಕೆಯಾಗಿದೆ.

ಮುರುಘಾಮಠಕ್ಕೆ ಸರ್ಕಾರ ನೀಡಿದ ಹಣದ ವಿವರ ಕೇಳಿದ ಹೈಕೋರ್ಟ್

ಇನ್ನು ಚಾರ್ಜ್ ಶೀಟ್ ಜೊತೆಗೆ ಅಡಕ ಮಾಡಲಾಗಿರುವ ಮೆಡಿಕಲ್ ರಿಪೋರ್ಟ ಸಹ ತನಿಖೆ ಮತ್ತೊಂದು ದಿಕ್ಕಿನಲ್ಲಿ ಸಾಗಬಹುದು ಎಂಬುದಕ್ಕೆ ಪುರಾವೆಯಾಗಿದೆ. ಸಂತ್ರಸ್ತ ಬಾಲಕಿಯರಿಬ್ಬರ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಸಂತ್ರಸ್ತ ಬಾಲಕಿಯರ ಜತೆಗೂ ಲೈಂಗಿಕ ಕ್ರಿಯೆ ನಡೆದಿಲ್ಲ. ಆದರೆ ಲೈಂಗಿಕ ದೌರ್ಜನ್ಯವನ್ನಿ ಅಲ್ಲಗಳೆಯುವಂತಿಲ್ಲ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ.ಉಮಾ ಹಾಗೂ ಡಾ.ರೂಪಾ ಅವರಿಂದ ವೈದ್ಯಕೀಯ ವರದಿ ಸಲ್ಲಿಕೆಯಾಗಿದೆ. ಹಾಗಾಗಿ ಈ ಎರಡ‌ನೇ ಪ್ರಕರಣದ ತನಿಖೆ ನಡೆಯುತ್ತಿದ್ದು ಆ ಬಗ್ಗೆ ತನಿಖೆಯ ಬಳಿಕವೇ ಸತ್ಯಾಂಶ ತಿಳಿಯಬೇಕಿದೆ.