ಚಂದ್ರನನ್ನು ಸಂಬಂಧಿಯಾಗಿ ಭಾವಿಸುವುದು ನಮ್ಮತನ - ಸದ್ಯೋಜಾತ ಭಟ್ಟ
ಚಂದ್ರಮಾ ಮನಸೋ ಜಾತಃ ಎನ್ನುವಲ್ಲಿ ಚಂದ್ರ ಶಬ್ದಕ್ಕೆ "ಚದಿ ಆಹ್ಲಾದನೇ, ಚಂದತೀತಿ ಚಂದ್ರಃ" ಎನ್ನಲಾಗುತ್ತದೆ. ಅಂದರೆ ಮೊದಲನೆಯದಾಗಿ ಮನಸ್ಸಿಗೆ ಆಹ್ಲಾದವನ್ನು ದೊರಕಿಸಿಕೊಡುವವನು, ಇನ್ನೊಂದು ಇವನನ್ನು ನೋಡುವವರ ಮನಸ್ಸಿಗೆ ಆಹ್ಲಾದವನ್ನು ಕೊಡುವವನು ಎನ್ನುವ ಅರ್ಥವನ್ನು ಕೊಡಲಾಗಿದೆ. ಚಂದ್ರ ಮನುಷ್ಯನ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಾನೆ.

- ಸದ್ಯೋಜಾತ ಭಟ್ಟ
ಚಂದ್ರ ಎಂದಾಕ್ಷಣ ಅದೇಕೋ ಮನಸ್ಸು ಆನಂದದಿಂದ ಕುಣಿದಾಡುತ್ತದೆ. ಚಂದ್ರನನ್ನು ಕಂಡಷ್ಟೂ ಸಾಲುವುದಿಲ್ಲ. ಚಂದ್ರನಲ್ಲಿ ಕಾಣುವ ಮೊಲದ ಆಕಾರವನ್ನು ಚಂದ್ರೋದಯಕ್ಕೆ ನೋಡಿದಾಗ ನಿಂತಂತೆ ಕಂಡರೂ ಚಂದ್ರನ ಅಸ್ತಮಾನದಲ್ಲಿ ತಲೆಕೆಳಗಾಗಿ ಕಾಣುತ್ತದೆ. ಹೀಗೇ ಬರಿಗಣ್ಣಿನ ಸೋಜಿಗದ ಆಗರ ಚಂದ್ರನೇ.
ಚಂದ್ರನನ್ನು ನಮ್ಮ ಸಂಬಂಧಿಯಾಗಿ ಪರಿಗಣಿಸುತ್ತೇವೆ, ಚಂದಮಾಮ ಎಂದು ಕರೆಯುತ್ತೇವೆ. ಚಿಕ್ಕ ಮಕ್ಕಳನ್ನು ಊಟಮಾಡಿಸುವಾಗ ಸಹ ಚಂದ್ರನನ್ನು ತೋರಿಸಿ ಊಟಮಾಡಿಸುತ್ತಿದ್ದರು. ಈಗ ಚಂದ್ರನನ್ನು ತೋರಿಸುತ್ತಿಲ್ಲ ಕೈಗೊಂದು ಮೊಬೈಲ್ ಕೊಟ್ಟರೆ ಊಟ ನಡೆಯುತ್ತದೆ. ಇನ್ನು ರಾಮನನ್ನು ರಾಮಚಂದ್ರ ಎನ್ನುತ್ತೇವೆ. ಶಿವನನ್ನು ಚಂದ್ರಶೇಖರ ಎನ್ನುತ್ತೇವೆ. ಆದರೆ ಈ ಚಂದ್ರ ಅತ್ರಿ ಮುನಿಯಿಂದ ಸೃಷ್ಟಿಸಲ್ಪಟ್ಟವನು ಎನ್ನುವುದು ಪುರಾಣಗಳಿಂದ ತಿಳಿದು ಬರುತ್ತದೆ. ಅದಕ್ಕೆ ಪೂರಕವಾಗಿ ಅನೇಕ ವೇದಮಂತ್ರಗಳು ದೊರಕುತ್ತವೆ. ಚಂದ್ರಮಾ_ಮನಸೋಜಾತಃ ಎನ್ನುವಲ್ಲಿಯೂ ಆತನ ಸೃಷ್ಟಿಯನ್ನು ತೋರಿಸಿಕೊಡುತ್ತದೆ. ಭಾರತೀಯ ವಿಜ್ಞಾನಿಗಳ ಸಾಧನೆಯ ಫಲಿತಾಂಶವನ್ನು ಕಿವಿಯಿಂದ ಕೇಳುವ, ಕಣ್ಣಿಂದ ನೋಡುವ ಭಾಗ್ಯ ನಮ್ಮದಾಗಿದೆ. ಮನಸ್ಸು ತುಂಬಿ ಬಂದಿದೆ..
ADITYA-L1: ಚಂದ್ರಯಾನದ ಬಳಿಕ ಇಸ್ರೋದ ‘ಸೂರ‍್ಯಯಾನ!
ಚಂದ್ರ ಎನ್ನುವ ಆ ಎರಡು ಅಕ್ಷರವನ್ನು ಕೇಳುತ್ತಿದ್ದಂತೆ ತುಂಬಾ ಆನಂದವಾಗುತ್ತದೆ. ಯಾಕೋ ಚಂದ್ರನ ಗುಣ ಸ್ವಭಾವವೇ ಹಾಗೇ ಪ್ರಶಾಂತ, ಸೌಮ್ಯ, ಸುಂದರ ಮತ್ತು ತಂಪಾದ ಭಾವನೆ ಹುಟ್ಟಿಸುವ ಗುಣ. ಜ್ಯೋತಿಷ್ಯ ಶಾಸ್ತ್ರದಲ್ಲಿಯಂತೂ ನವಗ್ರಹಗಳಲ್ಲಿ ಒಬ್ಬ. ಹನ್ನೆರಡು ರಾಶಿಗಳಲ್ಲಿ ಕರ್ಕಾಟಕ ರಾಶಿಯನ್ನು ಚಂದ್ರನ ಮನೆ ಎಂದು ಹೇಳಲಾಗುತ್ತದೆ.
ಸ ಚಂದ್ರೋ ವಿಪ್ರ ಮರ್ತ್ಯೋ ಮಹೋ ವ್ರಾಧನ್ತಮೋ ದಿವಿ |
ಪ್ರಪ್ರೇತ್ತೇ ಅಗ್ನೇ ವನುಷಃ ಸ್ಯಾಮ ||
ಅಗ್ನಿ ದೇವನೇ, ಮಾನವನಲ್ಲಿ ಯಾರು ನಿನ್ನನ್ನು ಸರಿಯಾದ ಯಜ್ಞ ಯಾಗಾದಿಗಳಿಂದ ಪೂಜಿಸುತ್ತಾನೆಯೋ, ಅಂತಹ ಮಾನವನು ದೇವಲೋಕದಲ್ಲಿ ಆಹ್ಲಾದಕರನಾದ ಚಂದ್ರನ ಸ್ಥಾನವನ್ನು ಪಡೆಯುತ್ತಾನೆ. ಶ್ರೇಷ್ಠತ್ವವನ್ನು ದೊರಕಿಸಿಕೊಂಡ ದೇವತೆಗಳಿಗಿಂತಲೂ ಅಧಿಕನಾಗುತ್ತಾನೆ. ಆದುದರಿಂದ ಅಗ್ನಿದೇವನೆ ನಾವು ಸಹ ನಿನ್ನನ್ನು ಅತ್ಯುತ್ಕೃಷ್ಠ ರೀತಿಯಲ್ಲಿ ಆರಾಧಿಸಿಕೊಂಡು ಉತ್ಕೃಷ್ಟವಾದ ಸ್ಥಾನವನ್ನು ಪಡೆಯುವಂತೆ ಅನುಗ್ರಹಿಸು. ಎನ್ನುವುದು ಈ ಋಕ್ಕಿನ ಅರ್ಥ. ಚಂದ್ರನ ಗುಣವನ್ನು ಇಲ್ಲಿ ಆಹ್ಲಾದಕರ ಎಂದು ಹೇಳಲಾಗಿದೆ. "ಚಂದ್ರಃ ಸರ್ವೇಷಾಂ ಆಹ್ಲಾದಕಃ" ಎನ್ನುವ ಯಾಸ್ಕರ ಅಭಿಮತ ಚಂದ್ರನ ಗುಣವನ್ನು ನಿರ್ದೇಶಿಸುತ್ತದೆ.
ಚಂದ್ರನ ಕುರಿತು ಬರೆಯ ಬೇಕಾದರೆ ಅನೇಕ ವಿಷಯಗಳು ಬಂದು ಹೋಗುತ್ತವೆ. ತ್ರಿಸಾಂವತ್ಸರಿಕಂ ಸತ್ತ್ರಂ ಪ್ರಜಾಕಾಮಃ ಪ್ರಜಾಪತಿಃ ಎನ್ನುವ ಬೃಹದ್ದೇವತಾದ ಕಥೆಯನ್ನು ಗಮನಿಸಿಕೊಂಡು ಮುಂದುವರಿಯುವೆ. ಹಿಂದೆ ಪ್ರಜಾಪತಿಯು ಮೂರು ಸಂವತ್ಸರಗಳ ತನಕ ನಡೆಯುವ ಯಾಗವೊಂದನ್ನು ನಡೆಸಲು ಯೋಜಿಸುತ್ತಾನೆ. ಯಾಗಕ್ಕೆ ಅನೇಕ ದೇವತೆಗಳು, ಋಷಿಗಳು ಬಂದಿರುತ್ತಾರೆ. ಸಶರೀರಯುಕ್ತೆಯಾಗಿ ವಾಗ್ದೇವತೆಯು ಬರುತ್ತಾಳೆ. ವಾಗ್ದೇವತೆಯ ಸೌಂದರ್ಯವನ್ನು ನೋಡಿದ ಪ್ರಜಾಪತಿಗೆ ತನ್ನ ಮನಸ್ಸನ್ನು ಸ್ಥಿಮಿತದಲ್ಲಿಡಲು ಸಾಧ್ಯವಾಗುವುದೇ ಇಲ್ಲ. ಪ್ರಜಾಪತಿಯ ಮನೋವಿಕಲ್ಪದ ಫಲವಾಗಿ ವಾಗ್ದೇವತೆಯಲ್ಲಿ ಭೃಗು ಮತ್ತು ಅಂಗಿರಸ್ಸೂ ಹುಟ್ಟುತ್ತಾರೆ. ಆಗ ವಾಗ್ದೇವತೆ ಪ್ರಜಾಪತಿಯಲ್ಲಿ ತನ್ನ ಇಷ್ಟವನ್ನು ನೆರವೇರಿಸಿಕೊಡಬೇಕೆನ್ನುವ ಇಚ್ಚೆಯನ್ನು ಪ್ರಕಟಿಸುತ್ತಾಳೆ. ಆಗ ಪ್ರಜಾಪತಿಯು ಸೂರ್ಯನಿಗೂ ಮತ್ತು ಅಗ್ನಿಗೂ ಸಮಾನವಾದ ತೇಜಸ್ಸುಳ್ಳ ಇನ್ನೊಬ್ಬ ಪುತ್ರನನ್ನು ಕೊಡುತ್ತಾನೆ ಅವನೇ ಅತ್ರಿ.
ಹೌದು ಅತ್ರಿಯ ಕುರಿತು ಯಾಕೆ ನಾನು ಇಲ್ಲಿ ಹೇಳಿದೆ ಎಂದರೆ. ಅತ್ರಿ ಕೇವಲ ಋಷಿಯಾಗಿರಲಿಲ್ಲ ಖಗೋಲ ವಿಜ್ಞಾನವನ್ನು ಅರೆದು ಕುಡಿದ ವಿಜ್ಜಾನಿಯಾಗಿದ್ದ. ಅತ್ರಿಯ ಸೃಷ್ಟಿಯ ನಂತರದಲ್ಲಿ ಶುಕ್ರ ಗ್ರಹವನ್ನು ನೇರವಾಗಿ ಪ್ರಜಾಪತಿಯು ಸೃಷ್ಟಿಸಿದ ಅಂದರೆ ಬ್ರಹ್ಮಾಂಡದಲ್ಲಿ ಶುಕ್ರ ಕಾಣಿಸಿಕೊಂಡ ಜೊತೆಗೆ ಅಥವಾ ಸ್ವಲ್ಪ ಸಮಯದಲ್ಲಿ ಅತ್ರಿಯಿಂದ ಚಂದ್ರ ಹುಟ್ಟುತ್ತಾನೆ. ಇದನ್ನೇ ಮಹಾಭಾರತ ಮತ್ತು ಭಾಗವತದಲ್ಲಿ ಹೇಳಲಾಗಿದೆ. ಭಾಗವತದಲ್ಲಿ ಚಂದ್ರ ಅತ್ರಿಯ ಮಗ, ಈತ ಸ್ವಾಯಂಭುವ ಮನ್ವಂತರದವನು ಎನ್ನಲಾಗಿದ್ದರೆ ಬ್ರಹ್ಮಾಂಡ ಪುರಾಣದಲ್ಲಿ ಬ್ರಹ್ಮನು ಸೃಷ್ಟಿಕಾರ್ಯದಲ್ಲಿ ಒಮ್ಮೆ ಅತ್ರಿಯನ್ನು ನಿಯಮಿಸುತ್ತಾನೆ. ಆಗ ಅತ್ರಿಯು ತಪೋ ನಿರತನಾಗಿದ್ದಾಗ ಆತನ ಕಣ್ಣಿನಿಂದ ತೇಜಸ್ಸು ಹೋರಬರುತ್ತದೆ. ಆಗ ಆ ತೇಜಸ್ಸನ್ನು ದಿಕ್ಕುಗಳೇ ಹಿಡಿದಿಡುತ್ತವೆ. ಆದರೆ ಅದರ ವೇಗವನ್ನು ತಡೆಯಲು ಅಸಾಧ್ಯವಾದಾಗ ಅದನ್ನು ಸಮುದ್ರದಲ್ಲಿ ಬಿಡಲಾಗುತ್ತದೆ. ಆಗ ಆ ತೇಜಸ್ಸನ್ನೆಲ್ಲಾ ಒಂದು ಗೂಡಿಸಿ ಬ್ರಹ್ಮನು ಅದಕ್ಕೆ ಚಂದ್ರ ಎನ್ನುವ ಹೆಸರಿಟ್ಟು ಆಕಾಶದಲ್ಲಿ ಬಿಟ್ಟು ಗ್ರಹಗಳಲ್ಲಿ ಒಬ್ಬನಾಗಿರುವಂತೆ ನಿಯಮಿಸುತ್ತಾನೆ ಎನ್ನುವ ಕಥೆ ಬರುತ್ತದೆ. ಅಂದರೆ ಚಂದ್ರ ಎನ್ನುವವನು ಸೃಷ್ಟಿಸಲ್ಪಟ್ಟವನು ಎನ್ನುವ ಅಂಶ ಕಾಣಸಿಗುತ್ತದೆ. ಈತನ ತಾಯಿ ವಸುಮ್ನಿ ಎನ್ನುವ ವಿಷಯವೂ ಆದಿಪುರಾಣದಲ್ಲಿ ಸಿಗುತ್ತದೆ. ಹೀಗೇ ಸೋಮ ಎನ್ನುವ ಇನ್ನೊಂದು ಹೆಸರನ್ನು ಪಡೆದ ಚಂದ್ರ ಸಹ ಮುನಿಗಳ ಸೃಷ್ಟಿ ಎಂದು ಸಹ ನೋಡಬೇಕಾದದ್ದು ಮುಖ್ಯ.
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಯಾತ್ರಿಗಳಿಗೆ ಸಲಾಂ, ಕಾಂಗ್ರೆಸ್ ಕ್ರೀಡಾ ಸಚಿವರ ಎಡವಟ್ಟು ವೈರಲ್!
ಚಂದ್ರನಿಗೆ 27 ಜನ ಪತ್ನಿಯರಂತೆ ಅಶ್ವಿನಿಯಿಂದ ಹಿಡಿದು ರೇವತಿಯ ತನಕದ ನಕ್ಷತ್ರಗಳನ್ನು ಹೇಳಲಾಗಿದೆ.
ಚಂದ್ರಮಾಮನಸೋಜಾತಶ್ಚಕ್ಷೋ ಸೂರ್ಯೋ ಅಜಾಯತ |
ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ವಾಯುರಜಾಯತ ||
ಚಂದ್ರಮಾ ಮನಸೋ ಜಾತಃ ಎನ್ನುವಲ್ಲಿ ಚಂದ್ರ ಶಬ್ದಕ್ಕೆ "ಚದಿ ಆಹ್ಲಾದನೇ, ಚಂದತೀತಿ ಚಂದ್ರಃ" ಎನ್ನಲಾಗುತ್ತದೆ. ಅಂದರೆ ಮೊದಲನೆಯದಾಗಿ ಮನಸ್ಸಿಗೆ ಆಹ್ಲಾದವನ್ನು ದೊರಕಿಸಿಕೊಡುವವನು, ಇನ್ನೊಂದು ಇವನನ್ನು ನೋಡುವವರ ಮನಸ್ಸಿಗೆ ಆಹ್ಲಾದವನ್ನು ಕೊಡುವವನು ಎನ್ನುವ ಅರ್ಥವನ್ನು ಕೊಡಲಾಗಿದೆ. ಚಂದ್ರ ಮನುಷ್ಯನ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಾನೆ. ಕೆಲವೊಂದು ಕಾಯಿಲೆಗಳು ಸಹ ಚಂದ್ರನ ರಶ್ಮಿಗಳಿಂದ ಗುಣವಾಗುತ್ತವಂತೆ. ಅದೇನೇ ಇರಲಿ ಅತ್ರಿಯ ಒಂದು ಪ್ರಸಂಗವನ್ನು ಗಮನಿಸಿದರೆ ಚಂದ್ರನೂ ಸಹ ಕೃತಕವಾಗಿ ಸೃಷ್ಟಿಯಾದವನೋ ಎನ್ನಿಸುತ್ತದೆ. ಇಂದಿನ ಖಗೋಲಶಾಸ್ತ್ರವೂ ಸಹ ಉಪಗ್ರಹ ಎಂದು ಚಂದ್ರನನ್ನು ಕರೆಯುತ್ತದೆ. ಈ ಭವ್ಯ ಭಾರತದ ಋಷಿಗಳೆಲ್ಲಾ ಇಂದಿನ ವಿಜ್ಞಾನಿಗಳಂತೆ ಸಂಶೋಧನೆಯಲ್ಲಿ ತೊಡಗಿದ್ದಂತೂ ನಿಜ. ಅಂದರೆ ಇಂದಿನ ವಿಜ್ಞಾನಿಗಳ ಹಗಲಿರುಳಿನ ಶ್ರಮದ ಫಲವನ್ನು ಇಂದು ಕಾಣುತ್ತಿದ್ದೇವೆ. ಇಂದಿನ ವಿಜ್ಞಾನಿಗಳಿಗೆ ಎಲ್ಲರ ನಮನವಿರಲಿ ಸುಕ್ತದ್ರಷ್ಟಾರ ಋಷಿಗಲಮತೆ ಅವಿರತ ಶ್ರಮಿಗಳು, ಸಾಧಕರು. ನಮೋನಮಃ
ಚಂದ್ರಮಾಮನಸೋಜಾತಃ