ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಯಾತ್ರಿಗಳಿಗೆ ಸಲಾಂ, ಕಾಂಗ್ರೆಸ್ ಕ್ರೀಡಾ ಸಚಿವರ ಎಡವಟ್ಟು ವೈರಲ್!
ಭಾರತ ಇದೀಗ ಚಂದ್ರನ ಮೇಲೆ ಕಾಲಿಟ್ಟಿದೆ. ಇಸ್ರೋ ವಿಜ್ಞಾನಿಗಳ ಸಾಹಸದಿಂದ ಚಂದ್ರಯಾನ 3 ಚಂದ್ರನ ಮೇಲೆ ಯಶಸ್ವಯಾಗಿ ಲ್ಯಾಂಡ್ ಆಗಿದೆ. ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ನಡುವೆ ಕಾಂಗ್ರೆಸ್ ಕ್ರೀಡಾ ಸಚಿವರು ಅಭಿನಂದನೆ ಸಲ್ಲಿಸುವಾಗ ಎಡವಟ್ಟು ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಜೈಪುರ(ಆ.23) ಭಾರತದ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದೆ. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಭಾರತ ವಿಶ್ವವನ್ನೇ ತನ್ನತ್ತ ತಿರುಗಿಸಿದೆ. ಇದೀಗ ಭಾರತ ಚಂದ್ರನ ಮೇಲಿದೆ. ಇಸ್ರೋ ಹಾಗೂ ಭಾರತದ ಸಾಧನೆಗೆ ದೇಶ ವಿದೇಶಗಳಿಂದ ಅಭಿನಂದನೆಗಳು ಹರಿದು ಬರುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚಂದ್ರಯಾನ3 ಅಭಿನಂದನೆಗಳು ತುಂಬಿದೆ. ಇನ್ನು ವಿವಿಧ ಕ್ಷೇತ್ರದ ಗಣ್ಯರು, ಸಚಿವರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದರ ನಡುವೆ ರಾಜಸ್ಥಾನ ಕ್ರೀಡಾಸಚಿವ ಅಶೋಕ್ ಚಾಂದ್ನಾ ಹೇಳಿಕೆ ವೈರಲ್ ಆಗಿದೆ. ಚಂದ್ರಲೋಕದಲ್ಲಿ ಯಶಸ್ವಿಯಾಗಿ ಇಳಿದ ಯಾತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಾಜಸ್ಥಾನ ಕ್ರೀಡಾ ಸಚಿವ ಅಶೋಕ್ ಚಾಂದ್ನಾ, ಸಂತಸ ಹಂಚಿಕೊಂಡಿದ್ದಾರೆ. ಈ ಕಠಿಣ ಕಾರ್ಯದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಚಂದ್ರನ ಮೇಲೆ ನಾವು ಯಶಸ್ವಿಯಾಗಿ ಲ್ಯಾಂಡ್ ಆಗಿದ್ದೇವೆ. ಇದೇ ವೇಳೆ ಚಂದ್ರಯಾನಕ್ಕೆ ತೆರಳಿದ ಯಾತ್ರಿಗಳಿಗೆ ನಾನು ಸಲಾಂ ಹೇಳುತ್ತೇನೆ. ನಾವು ವಿಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಹೆಜ್ಜೆ ಇಟ್ಟಿದ್ದೇವೆ. ಸಮಸ್ತ ಭಾರತೀಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಶೋಕ್ ಚಾಂದ್ನಾ ಹೇಳಿದ್ದಾರೆ.
ಬಾಹ್ಯಾಕಾಶದಲ್ಲಿ ಭಾರತ ವಿಶ್ವಗುರು, ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಲ್ಯಾಂಡರ್!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕ್ರೀಡಾ ಸಚಿವರು ತಮ್ಮ ಉನ್ನತ ನಾಯಕರ ದಾರಿಯಲ್ಲಿ ಸಾಗುತ್ತಿದ್ದಾರೆ. ಅವರನ್ನೇ ಆದರ್ಶವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಇಂತಹ ಮಾತುಗಳು ಬಂದರೆ ಅಚ್ಚರಿ ಪಡಬೇಕಾಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಈ ಹೇಳಿಕೆ ನೀಡಿದ ನಿಮಗೆ ಸಲ್ಯೂಟ್ ಎಂದು ಕಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಚಿವರು ಇಂಡಿಯಾದವರಲ್ಲ, ಇವರು ಐಎನ್‌ಡಿಐಎ(I-N-D-I-A) ನಾಯಕರು ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ಇದುವರೆಗೂ ಯಾವುದೇ ದೇಶ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ. ಅಲ್ಲಿ ಇಳಿವ ರಷ್ಯಾದ ಪ್ರಯತ್ನ ಇತ್ತೀಚೆಗೆ ವಿಫಲವಾಗಿದೆ. ಹೀಗಾಗಿ ಚಂದ್ರಯಾನ 3 ನೌಕೆಯ ಮೂಲಕ ಲಭ್ಯವಾಗಬಹುದಾದ ಅಮೂಲ್ಯ ಮಾಹಿತಿಯು ಭಾರತಕ್ಕೆ ಮಾತ್ರವಲ್ಲದೇ, ಮುಂದಿನ ದಿನಗಳಲ್ಲಿ ಜಾಗತಿಕ ಬಾಹ್ಯಾಕಾಶ ಉಡ್ಡಯನ ಕ್ಷೇತ್ರ, ರಾಕೆಟ್‌ಗಳ ಇಂಧನ, ಬೇರೆ ಬೇರೆ ಗ್ರಹಗಳಲ್ಲಿ ಸುಸ್ಥಿರ ಜೀವನಕ್ಕೆ ನೆರವಾಗಬಲ್ಲದು. ಹೀಗಾಗಿಯೇ ಈ ಯೋಜನೆಯ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ.
ಚಂದ್ರ ಬಹಳ ದೂರದಲ್ಲಿಲ್ಲ, ಚಂದ್ರನ ಮೇಲೆ ನಾವಿದ್ದೇವೆ, ಇಸ್ರೋ ಸಾಧನೆಗೆ ಮೋದಿ ಅಭಿನಂದನೆ!
2019ರಲ್ಲಿ ಚಂದ್ರಯಾನ-2 ನೌಕೆ ಯೋಜನೆಯಡಿ ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ಅನ್ನು ಕಳುಹಿಸಲಾಗಿತ್ತು. ಆದರೆ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ಸಂಪರ್ಕ ಕಡಿದುಕೊಂಡು ಚಂದ್ರನ ಒಡಲಿಗೆ ಅಪ್ಪಳಿಸಿತ್ತು. ಒಂದು ವರ್ಷ ಮಾತ್ರ ಜೀವಿತಾವಧಿ ಹೊಂದಿದ್ದ ಆರ್ಬಿಟರ್, ಇಸ್ರೋ ವಿಜ್ಞಾನಿಗಳು ಮಾಡಿದ ನಿಖರ ಉಡಾವಣೆ ಹಾಗೂ ಸೂಕ್ತ ರೀತಿಯ ಕಕ್ಷೆ ಬದಲಾವಣೆ ಪ್ರಕ್ರಿಯೆಯಿಂದಾಗಿ ತನ್ನ ಜೀವಿತಾವಧಿಯನ್ನು 7 ವರ್ಷಗಳಿಗೆ ಹೆಚ್ಚಿಸಿಕೊಂಡಿದೆ. ಚಂದ್ರಯಾನ 3 ಜತೆ ಹೋಗಿರುವ ಲೂನಾರ್ ಮಾಡ್ಯೂಲ್ ಕೂಡ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಅಮೂಲ್ಯ ಮಾಹಿತಿಯನ್ನು ಭೂಮಿಗೆ ಕಳುಹಿಸಿಕೊಡಲಿದೆ.