ಚಂದ್ರಯಾನ-3: ಇಸ್ರೋದಲ್ಲಿ 20 ನಿಮಿಷ ಆತಂಕ, ಬಳಿಕ ಹರ್ಷ, ಕೇಕೆ
ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ನ ಅಂತಿಮ 20 ನಿಮಿಷ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಸೇರಿ ಇಸ್ರೋ ವಿಜ್ಞಾನಿಗಳ ತಂಡ ಖುಷಿ, ಕಾತರ, ಆತಂಕಗಳ ಮಿಶ್ರ ಭಾವದಲ್ಲಿ ಮಿಂದೇಳುವಂತೆ ಮಾಡಿತು.

ಬೆಂಗಳೂರು (ಆ.24): ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ನ ಅಂತಿಮ 20 ನಿಮಿಷ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಸೇರಿ ಇಸ್ರೋ ವಿಜ್ಞಾನಿಗಳ ತಂಡ ಖುಷಿ, ಕಾತರ, ಆತಂಕಗಳ ಮಿಶ್ರ ಭಾವದಲ್ಲಿ ಮಿಂದೇಳುವಂತೆ ಮಾಡಿತು. ಎಎಲ್‌ಎಸ್ ಹತೋಟಿಯಲ್ಲಿ ಲ್ಯಾಂಡರ್ ಹಂತ-ಹಂತವಾಗಿ ಚಂದಿರನ ದಕ್ಷಿಣ ಕೆನ್ನೆಗೆ ಮುತ್ತಿಡಲು ಧಾವಿಸುತ್ತಿದ್ದಂತೆ ವಿಜ್ಞಾನಿಗಳ ಎದೆಯಲ್ಲಿ ಢವ ಢವ ಜೋರಾಗುತ್ತಲೇ ಇತ್ತು. ಅಂತಿಮವಾಗಿ 6.01 ನಿಮಿಷಕ್ಕೆ ಸುರಕ್ಷಿತ ಲ್ಯಾಂಡಿಂಗ್ ಮುನ್ಸೂಚನೆಯಿಂದ ಸಂಭ್ರಮಾಚರಣೆ ಶುರುವಾಗಿ, ಲ್ಯಾಂಡರ್ ಅಂತಿಮ ಸ್ಪರ್ಶ ಮಾಡುತ್ತಿದ್ದಂತೆಯೇ ವಿಜ್ಞಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
- ಚಂದ್ರಯಾನ-3 ಸಾಫ್ಟ್‌ಲ್ಯಾಂಡಿಂಗ್‌ನ್ನು ನಿರ್ವಹಣೆ ಮಾಡಿದ ಬೆಂಗಳೂರಿನ ಪೀಣ್ಯದ ಇಸ್ರೋ ಇಸ್ಟ್ರಾಕ್ ಕೇಂದ್ರದಲ್ಲಿ ಬುಧವಾರ ಸಂಜೆ ಕಂಡು ಬಂದ ರೋಮಾಂಚನ ಕ್ಷಣಗಳಿವು. ಇಸ್ರೋದ ಟೆಲಿಮೆಟ್ರಿ ಅಂಡ್ ಕಮಾಂಡ್ ನೆಟ್‌ವರ್ಕ್ ಕೇಂದ್ರದಲ್ಲಿ ಸಾಫ್‌್ಟಲ್ಯಾಂಡಿಂಗ್‌ನ ಅಂತಿಮ ಕ್ಷಣಗಳಲ್ಲಿ ಜಗತ್ತನ್ನೇ ನಿಬ್ಬೆರಗಾಗಿಸುವ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳು ಅಕ್ಷರಶಃ ಮಕ್ಕಳಂತೆ ಖುಷಿ ಪಟ್ಟರು. ದೇಶದ ಕೀರ್ತಿ ಪತಾಕೆ ಮತ್ತಷ್ಟು ಎತ್ತರಕ್ಕೆ ಹಾರಿಸಿದ ಹೆಮ್ಮೆಯಿಂದ ಬೀಗಿದರು.
ಈಗ ನಮ್ಮ ಕರ್ನಾಟಕಕ್ಕೂ ಚಂದ್ರನಿಗೂ ನೇರ ನಂಟು: ಪೀಣ್ಯದಿಂದ ಚಂದ್ರಯಾನ ನಿರ್ವಹಣೆ
ಮೊದಲು ಆತಂಕ, ನಂತರ ಹರ್ಷ: ಇಸ್ಟ್ರಾಕ್ ಕೇಂದ್ರದಲ್ಲಿ 5.43 ಗಂಟೆಗೆ ಲ್ಯಾಂಡರ್‌ನ ಡಿಸೆಂಡಿಂಗ್ ಪವರ್‌ಗೆ ಆಟೋಲ್ಯಾಂಡಿಂಗ್ ಪ್ರಕ್ರಿಯೆ ಮೂಲಕ ಚಾಲನೆ ದೊರೆತಿರುವುದಾಗಿ ಘೋಷಿಸಲಾಯಿತು. ಮುಂದಿನ 20 ನಿಮಿಷ ಗುಂಡು ಸೂಜಿ ಕೆಳಗೆ ಬಿದ್ದರೂ ಕೇಳುವಷ್ಟುನಿಶ್ಯಬ್ಧ. 48 ಗಂಟೆ ಮೊದಲೇ ಎಲ್ಲಾ ವ್ಯವಸ್ಥೆ ಪೂರ್ಣಗೊಂಡಿತ್ತು. ಹೀಗಾಗಿ ಯಾವುದೇ ಮ್ಯಾನುಯಲ್ ಇಂಟರ್ವೆನ್ಷನ್ ಇಲ್ಲದ ಕಾರಣ ಕೇವಲ ಅನಾಲಿಸಿಸ್‌ಗಷ್ಟೇ ವಿಜ್ಞಾನಿಗಳು ಸೀಮಿತಗೊಂಡರು. ಸಂಜೆ 5.55 ನಿಮಿಷಕ್ಕೆ ಲ್ಯಾಂಡರ್ ಚಂದಿರನಿಂದ ಇನ್ನು 5 ಕಿ.ಮೀ.ನಷ್ಟುಮಾತ್ರ ಅಂತರದಲ್ಲಿದ್ದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದ ಜೋಹಾನ್‌ಬರಗ್‌ರ್ಸನಿಂದ ವಿಡಿಯೋ ಲಿಂಕ್‌ನಲ್ಲಿ ಜತೆಯಾದರು.
ಈ ವೇಳೆಗೆ ವಿಜ್ಞಾನಿಗಳಿಗೂ ವಿಶ್ವಾಸ ಇಮ್ಮಡಿಗೊಂಡು ಮುಖದಲ್ಲಿ ನಗು ಅರಳಿತ್ತು. 6.01 ಗಂಟೆಗೆ 150 ಮೀಟರ್‌ಗಿಂತ ಕಡಿಮೆ ಅಂತರಕ್ಕೆ ಬಂದು ರಿ ಟಾರ್ಗೆಟಿಂಗ್ ಪೂರ್ಣವಾಗಿ ಸುರಕ್ಷಿತ ಲ್ಯಾಂಡಿಂಗ್ ಮುನ್ಸೂಚನೆ ದೊರೆಯುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಂತಿಮವಾಗಿ 6.02 ರಿಂದ 6.03 ರ ನಡುವೆ ಸಾಫ್‌್ಟಲ್ಯಾಂಡಿಗ್ ಬಹುತೇಕ ಯಶಸ್ವಿ ಎನ್ನುತ್ತಿದ್ದಂತೆಯೇ ಚಪ್ಪಾಳೆ ತಟ್ಟಿ, ಸೀಟಿ ಹೊಡೆದು ವಿಜ್ಞಾನಿಗಳು ಸಂಭ್ರಮಿಸಿದರು. ಪರಸ್ಪರ ತಬ್ಬಿ, ಕೈ ಕುಲುಕಿ ಶುಭಾಷಯ ವಿನಿಮಯ ಮಾಡಿಕೊಂಡರು.
ಮೊಳಗಿದ ಭಾರತ್ ಮಾತಾ ಕಿ ಜೈ ಘೋಷ: ಈ ವೇಳೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು, ‘ಭಾರತ ಚಂದಿರನ ಮೇಲಿದೆ ಸರ್’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಜಯ ಘೋಷಗಳು ಶುರುವಾದವು. ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿ, ಸಾಫ್ಟ್ ಲ್ಯಾಂಡಿಂಗ್ ಯಶಸ್ಸಿಗೆ ಮನದುಂಬಿ ಅಭಿನಂದಿಸಿದರು. ಈ ವೇಳೆ ಭಾರತದ ಧ್ವಜವನ್ನು ಬೀಸುತ್ತಾ ವಿಜ್ಞಾನಿಗಳು ಭಾರತ್ ಮಾತಾ ಕಿ ಜೈ, ವಂದೇ ಮಾತರಂ, ಜೈ ಇಸ್ರೋ ಎಂಬ ಘೋಷಣೆಗಳು ಮೊಳಗಿಸಿದರು. ಇಸ್ಟ್ರಾಕ್ ಕೇಂದ್ರದ ಆವರಣದಲ್ಲಿ ಭದ್ರತಾ ಸಿಬ್ಬಂದಿ, ಕಿರಿಯ ವಿಜ್ಞಾನಿಗಳು, ತಾಂತ್ರಿಕ ಸಿಬ್ಬಂದಿಯ ಸಂಭ್ರಮದಲ್ಲಿ ತಲ್ಲೀನರಾದರು. ಇದೇ ವೇಳೆ ಇಸ್ರೋ ಹೊರ ಭಾಗದಲ್ಲಿ ಸಾರ್ವಜನಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
20 ನಿಮಿಷ ಸಮ್ಮಿಶ್ರ ಭಾವ: ನಾಲ್ಕು ಹಂತಗಳಲ್ಲಿ ಅಂತಿಮ ಲ್ಯಾಂಡಿಂಗ್ ಮಾಡಲಾಯಿತು. 5.43 ಗಂಟೆಗೆ ಲ್ಯಾಂಡರ್‌ನ ವೇಗ ಕಡಿತಗೊಳಿಸಲು ರಫ್ ಬ್ರೇಕಿಂಗ್ ಶುರುವಾಗುತ್ತಿದ್ದಂತೆ ವಿಜ್ಞಾನಿಗಳು ಹಾಗೂ ಇಸ್ರೋ ಸಿಬ್ಬಂದಿಯಲ್ಲಿ ತಲ್ಲಣ ಶುರುವಾಯಿತು. ಒಂದೊಂದು ಹಂತ ಪೂರ್ಣಗೊಂಡಾಗಲೂ ಆತಂಕ ಕರಗುತ್ತಿತ್ತು. ಲ್ಯಾಂಡರ್ 6.03 ನಿಮಿಷಕ್ಕೆ ಚಂದಿರನ ಸ್ಪರ್ಷಿಸಿದ ಕೂಡಲೇ ಇಸ್ರೋದಲ್ಲಿ ಹರ್ಷ ಮುಗಿಲುಮುಟ್ಟಿತ್ತು.
30 ಕಿ.ಮೀ. ದೂರವಿರುವ ಈ ಹಂತದಲ್ಲಿ ಲ್ಯಾಂಡರ್ ಅಡ್ಡ ಹಾಗೂ ನೆಲ ಮುಖವಾಗಿ ಸಂಚಾರ ಆರಂಭಿಸಿತು. ಸೆಕೆಂಡಿಗೆ 1.68 ಕಿ.ಮೀ.ನಷ್ಟಿದದ ವೇಗ 358 ಮೀಟರ್‌ಗೆ ಇಳಿಯಿತು. ಈ ಹಂತದಲ್ಲಿ 7.4 ಕಿ.ಮೀ.ನಷ್ಟು ಕ್ರಮಿಸಿ ಶೇ.20 ರಷ್ಟು ಸಾಫ್ಟ್‌ಲ್ಯಾಂಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿತು. ಬಳಿಕ ಕ್ಷಣ ಕ್ಷಣಕ್ಕೂ ಅಂತರ ಕಡಿಮೆಯಾಗುತ್ತಾ ಬಳಿಕ ಆಲ್ಟಿಟ್ಯೂಡ್ ಹೋಲ್ಡ್ ಹಂತಕ್ಕೆ ಕಾಲಿಟ್ಟಿತು. 5.56 ಗಂಟೆ ವೇಳೆಗೆ 3.45 ಕಿ.ಮೀ. ಮಾತ್ರ ಬಾಕಿ ಇತ್ತು. 5.57ಕ್ಕೆ 2 ಕಿ.ಮೀ.ಗಿಂತ ಕಡಿಮೆ ಅಂತರಕ್ಕೆ ಬಂತು. 5.58 ಗಂಟೆಗೆ ಕೇವಲ 812 ಮೀಟರ್ ಅಂತರಕ್ಕೆ ಬರುವ ಮೂಲಕ ಮೂರನೇ ಹಂತವನ್ನು ಯಶಸ್ವಿಯಾಗಿ ಮುಗಿಸಲಾಯಿತು.
ಬಳಿಕ ನಿಧಾನವಾಗಿ ಚಂದಿರನತ್ತ ಚಲಿಸಿದ ಲ್ಯಾಂಡರ್ 5.59 ಗಂಟೆ ವೇಳೆಗೆ ಕೇವಲ 600 ಮೀಟರ್ ಅಂತರ, 6 ಗಂಟೆ ವೇಳೆಗೆ ಅಂತಿಮ ಲೋಕಲ್ ನೇವಿಗೇಷನ್ ಹಂತಕ್ಕೆ ತಲುಪಿ ಸುರಕ್ಷಿತ ಸ್ಥಳವನ್ನು ಹುಡುಕಿಕೊಂಡಿತು. ಈ ವೇಳೆಗೆ 150 ಮೀಟರ್ ಅಂತರದಲ್ಲಿದ್ದ ಲ್ಯಾಂಡರ್ ರಿ ಟಾರ್ಗೆಂಟಿಂಗ್ ಪೂರ್ಣಗೊಂಡು ಸುರಕ್ಷಿತವಾಗಿ ಲ್ಯಾಂಡ್ ಆಗುವ ಮುನ್ಸೂಚನೆ ಲಭ್ಯವಾಗುತ್ತಿದ್ದಂತೆ ಬಹುತೇಕ ಆಪರೇಷನ್ ಸಕ್ಸಸ್ ಎಂಬಂತಾಯಿತು. ಎರಡು ನಿಮಿಷದಲ್ಲೇ 115 ಮೀಟರ್ ಕ್ರಮಿಸಿದ ಲ್ಯಾಂಡರ್ 6.03 ನಿಮಿಷಕ್ಕೆ ಚಂದಿರನ ಸ್ಪರ್ಷಿಸಿತು.
ತಿಂಗಳನ ಅಂಗಳದಲ್ಲಿ ಭಾ'ರಥ': ಇಸ್ರೋ ಮುಂದಿನ ಗುರಿ ಸೂರ್ಯ
ಈ ಕ್ಷಣಗಳನ್ನು ಖುದ್ದು ಚಂದ್ರಯಾನ-3 ಯೋಜನೆಯ ಪ್ರಮುಖ ಸೂತ್ರದಾರರಾದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಯು.ಆರ್. ಸ್ಯಾಟಲೈಟ್ ಸೆಂಟರ್‌ನ ನಿರ್ದೇಶಕರಾದ ಎಂ. ಶಂಕರನ್, ಯೋಜನಾ ನಿರ್ದೇಶಕ ಪಿ. ವೀರಮುತ್ತುವೇಲ್, ಸಹ ಯೋಜನಾ ನಿರ್ದೇಶಕಿ ಕಲ್ಪನಾ, ಮಿಷನ್ ನಿರ್ದೇಶಕ ಶ್ರೀಕಾಂತ್ ಸಾಕ್ಷಿಯಾದರು. ಜತೆಗೆ ಇಸ್ರೋ ಮಾಜಿ ಅಧ್ಯಕ್ಷರಾದ ಕೆ. ಶಿವನ್, ಎ.ಎಸ್. ಕಿರಣ್‌ಕುಮಾರ್ ಸೇರಿದಂತೆ ಹಲವರು ಹಿರಿಯ ವಿಜ್ಞಾನಿಗಳು ಭಾಗಿಯಾಗಿದ್ದರು.