ವಿಶ್ವದ ಮುಂಚೂಣಿ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾದ ಇಸ್ರೋದ ಕೇಂದ್ರ ಕಚೇರಿ ಹೊಂದಿರುವ ಬೆಂಗಳೂರು, ಚಂದ್ರಯಾನ -3 ಯಶಸ್ಸಿನಲ್ಲೂ ತನ್ನದೇ ಪಾತ್ರ ಹೊಂದಿದೆ. 

ಬೆಂಗಳೂರು (ಆ.24): ವಿಶ್ವದ ಮುಂಚೂಣಿ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾದ ಇಸ್ರೋದ ಕೇಂದ್ರ ಕಚೇರಿ ಹೊಂದಿರುವ ಬೆಂಗಳೂರು, ಚಂದ್ರಯಾನ -3 ಯಶಸ್ಸಿನಲ್ಲೂ ತನ್ನದೇ ಪಾತ್ರ ಹೊಂದಿದೆ. ಯೋಜನೆಗೆ ಅಗತ್ಯವಾದ ರಾಕೆಟ್‌, ನೌಕೆ ಅಭಿವೃದ್ಧಿಯಿಂದ ಹಿಡಿದು ಅದರ ಸಂಪೂರ್ಣ ನಿರ್ವಹಣೆ, ಬಾಹ್ಯಾಕಾಶದಲ್ಲಿ ನೌಕೆಯ ಮೇಲೆ ನಿಗಾ ಎಲ್ಲವೂ ಆಗುತ್ತಿರುವುದು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ಟ್ರಾಕ್‌ (ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಆ್ಯಂಡ್‌ ಕಮಾಂಡ್‌ ನೆಟ್‌ವರ್ಕ್) ಮತ್ತು ಮೋಕ್ಸ್‌ (ಮಿಷನ್‌ ಆಪರೇಷನ್ಸ್‌ ಕಾಂಪ್ಲೆಕ್ಸ್‌) ಕೇಂದ್ರದಿಂದಲೇ.

ಇಸ್ಟ್ರಾಕ್‌ ಕೇಂದ್ರವು ರಾಕೆಟ್‌ ಉಡ್ಡಯನದಿಂದ ಹಿಡಿದು, ಉಪಗ್ರಹ ಕಕ್ಷೆಗೆ ಸೇರಿಸುವುದು ಮತ್ತು ಉಪಗ್ರಹ ಜೀವಿತಾವಧಿಯ ಅಷ್ಟೂವರ್ಷ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಮತ್ತು ಕಮ್ಯಾಂಡ್‌ ಸೇವೆಯನ್ನು ನೀಡುತ್ತದೆ. ಇಸ್ಟ್ರಾಕ್‌ ಕೇಂದ್ರವು ಬೆಂಗಳೂರು, ಲಖನೌ, ಮಾರಿಷಸ್‌, ಶ್ರೀಹರಿಕೋಟ, ಪೋರ್ಟ್‌ಬ್ಲೇರ್‌, ತಿರುವನಂತಪುರ, ಬ್ರೂನೈ, ಬಿಯಾಕ್‌ (ಇಂಡೋನೇಷ್ಯಾ) ಮತ್ತು ಡೀಪ್‌ ಸ್ಪೇಸ್‌ ನೆಟ್‌ವರ್ಕ್ನಲ್ಲಿ ತನ್ನ ಕೇಂದ್ರಗಳನ್ನು ಹೊಂದಿದ್ದು ಅವುಗಳ ಮೂಲಕ ಸತತವಾಗಿ ಉಪಗ್ರಹ ಮತ್ತು ರಾಕೆಟ್‌ಗಳ ಮೇಲೆ ನಿಗಾ ಇಟ್ಟಿರುತ್ತದೆ. ಇನ್ನು ಮೋಕ್ಸ್‌ ಕೇಂದ್ರವು ಉಡ್ಡಯನದ ಎಲ್ಲಾ ಮಾಪನಾಂಕಗಳ ಮೇಲೆ ಸತತವಾಗಿ ನಿಗಾ ಇಡುವ ಮೂಲಕ ಅವುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಇಲ್ಲವೇ ಎಂಬುದರ ಮಾಹಿತಿಯನ್ನು ಕಲೆ ಹಾಕುವ ಕೆಲಸ ಮಾಡುತ್ತಿದೆ.

ಚಂದ್ರಯಾನ-3 ಇಸ್ರೋ ತಂಡದಲ್ಲಿ ಬಾಳೆಹೊನ್ನೂರಿನ ಯುವತಿ: ರಂಭಾಪುರಿ ಶ್ರೀ ಶುಭಹಾರೈಕೆ

ಇತ್ತೀಚೆಗೆ ಚಂದ್ರಯಾನ ಎಲ್‌ವಿಎಂ ರಾಕೆಟ್‌ ಉಡ್ಡಯನ, ಬಳಿಕ ಭೂಮಿ ಕಕ್ಷೆ, ಚಂದ್ರನ ಕಕ್ಷೆ ಸೇರಿದ್ದು, ನೌಕೆಯಿಂದ ಲ್ಯಾಂಡರ್‌ ಪ್ರತ್ಯೇಕಗೊಂಡಾಗ, ಚಂದ್ರಯಾನ-2ರ ಆರ್ಬಿಟರ್‌ನೊಂದಿಗೆ ಸಂಪರ್ಕ ಸಾಧಿಸಿದಾಗ ಮತ್ತು ಚಂದ್ರನ ಮೇಲೆ ಇಳಿದ ಕೂಡಲೇ ಲ್ಯಾಂಡರ್‌ನಿಂದ ಹೊರಟ ಮೊದಲ ಸಂದೇಶ ತಲುಪಿದ್ದು ಇದೇ ಕೇಂದ್ರಕ್ಕೆ. ಇದು ಇಸ್ರೋದ ನೌಕೆಗಳ ಮಾರ್ಗವನ್ನು ನಿರ್ವಹಿಸುವ ಮತ್ತು ನೌಕೆಗೆ ಬೇಕಾದ ಸೂಚನೆಗಳನ್ನು ಕಳುಹಿಸುವ ಕೇಂದ್ರವಾಗಿದೆ. ಇಲ್ಲಿ ಹಲವು ವಿಜ್ಞಾನಿಗಳು ಪ್ರತಿ ಕ್ಷಣವೂ ಕಂಪ್ಯೂಟರ್‌ ಮೇಲೆ ಕಣ್ಣಿಟ್ಟು, ನೌಕೆ ಯೋಗಕ್ಷೇಮವನ್ನು ನೋಡಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ನೌಕೆಯ ಕಕ್ಷೆಯನ್ನು ಎತ್ತರಿಸುವ ಕಾರ್ಯ, ಚಂದ್ರನ ಕಕ್ಷೆಯತ್ತ ಬೂಸ್ಟ್‌ ಮಾಡುವ ಕಾರ್ಯ ಮತ್ತು ಚಂದ್ರನ ಕಕ್ಷೆಯಲ್ಲಿ ಎತ್ತರ ತಗ್ಗಿಸುವ ಕಾರ್ಯಗಳನ್ನು ಇಲ್ಲಿಂದಲೇ ನಿರ್ವಹಣೆ ಮಾಡಲಾಗಿದೆ.

ಚಂದ್ರಯಾನ-3 ಯಶಸ್ವಿಯಾಗಲಿ: ರಾಯಚೂರಿನ ಪುಟಾಣಿ ಮಕ್ಕಳಿಂದ ಶಿವಲಿಂಗಕ್ಕೆ ಹಾಲಿನ ಅಭಿಷೇಕ

ಇಸ್ರೋದ ನೌಕೆಗಳನ್ನು ನಿಯಂತ್ರಣ ಮಾಡಲು ಬೆಂಗಳೂರಿನ ದೊಡ್ಡ ಆಲದಮರ ಸಮೀಪದ ಬ್ಯಾಲಾಳು ಬಳಿ ನಿರ್ಮಾಣ ಮಾಡಲಾಗಿರುವ 36 ಮೀ. ಅಗಲದ ಆ್ಯಂಟೆನಾಗಳ ಸಹಾಯವನ್ನು ಪಡೆದುಕೊಂಡು ನೌಕೆಗೆ ಸಂದೇಶಗಳನ್ನು ಕಳುಹಿಸಲಾಗಿದೆ. ಚಂದ್ರ ಮತ್ತು ಭೂಮಿಯ ನಡುವೆ ಸುಮಾರು 3.84 ಲಕ್ಷ ಕಿ.ಮೀ. ಅಂತರವಿದ್ದು, ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುವ ನೌಕೆಗಳಿಗೆ ಸಂದೇಶ ಕಳುಹಿಸಲು ರೇಡಿಯೋ ಅಲೆಗಳು ಮಾತ್ರ ಬಳಕೆಯಾಗಲಿವೆ. ಇದು ನೌಕೆಯನ್ನು ತಲುಪಲು 2.6 ಸೆಕೆಂಡ್‌ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ನೌಕೆಯಿಂದ ಬರುವ ಸಂದೇಶ ಸಹ ಇಷ್ಟೇ ಕಾಲಾವಧಿಯನ್ನು ತೆಗೆದುಕೊಳ್ಳಲಿದ್ದು, ಈ ಸಂದೇಶ ತಲುಪಿದ ಕೂಡಲೇ ಅದನ್ನು ವರ್ಗೀಕರಿಸಿ, ಅದರ ಗುಣಮಟ್ಟವನ್ನು ಉತ್ತಮಗೊಳಿಸಿ ಪೀಣ್ಯದಲ್ಲಿರುವ ಕೇಂದ್ರ ಅದನ್ನು ಘೋಷಣೆ ಮಾಡುತ್ತಿದೆ. ಹಲವಾರು ರೇಡಿಯೋ ತರಂಗಗಳನ್ನು ಸ್ವೀಕರಿಸುತ್ತಿದ್ದರೂ ಅದರಲ್ಲಿ ಚಂದ್ರಯಾನ ನೌಕೆಯಿಂದ ಬಂದ ಸಂದೇಶವನ್ನು ಗುರುತಿಸಿ ನೀಡಬೇಕಾದ ಸಾಹಸ ಕಾರ್ಯವನ್ನು ನಮ್ಮ ಪೀಣ್ಯ ಕೇಂದ್ರ ಯಶಸ್ವಿಯಾಗಿ ಮಾಡಿದೆ.