ರಾಜ್ಯಾದ್ಯಂತ ಅಪಾರ ಭಕ್ತರನ್ನು ಹೊಂದಿರುವ ಪುರಾಣ ಪ್ರಸಿದ್ಧ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬೆಯ ದೇಗುಲದಲ್ಲಿ ಕಳವಿಗೆ ವಿಫಲ ಯತ್ನ ನಡೆ​ಸಿ​ರುವ ಘಟನೆ ಬುಧವಾರ ರಾತ್ರಿ ಜರು​ಗಿದೆ. ಕಳ್ಳರು ದೇವಿಯ ಬೆಳ್ಳಿ ಮುಖ​ವಾ​ಡವನ್ನೇ ಕಿತ್ತು​ಹಾ​ಕಿ​ದ್ದಾರೆ.

ಸೊರಬ (ಆ.4) :  ರಾಜ್ಯಾದ್ಯಂತ ಅಪಾರ ಭಕ್ತರನ್ನು ಹೊಂದಿರುವ ಪುರಾಣ ಪ್ರಸಿದ್ಧ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬೆಯ ದೇಗುಲದಲ್ಲಿ ಕಳವಿಗೆ ವಿಫಲ ಯತ್ನ ನಡೆ​ಸಿ​ರುವ ಘಟನೆ ಬುಧವಾರ ರಾತ್ರಿ ಜರು​ಗಿದೆ. ಕಳ್ಳರು ದೇವಿಯ ಬೆಳ್ಳಿ ಮುಖ​ವಾ​ಡವನ್ನೇ ಕಿತ್ತು​ಹಾ​ಕಿ​ದ್ದಾರೆ.

ಹುಣ್ಣಿಮೆ, ಅಮವಾಸ್ಯೆ ಸೇರಿದಂತೆ ವಿಶೇಷ ದಿನಗಳು ಹೊರತಾಗಿ ಉಳಿದ ದಿನಗಳಲ್ಲಿ ಸಂಜೆಯ ಹೊತ್ತಿಗೆ ಶ್ರೀ ದೇವಿಯ ಪೂಜಾ ಕೈಂಕರ್ಯಗಳು ಮುಗಿದು, ಸಂಜೆ 6ರ ಸುಮಾರಿಗೆ ಪುರೋಹಿತರು ಮನೆಗೆ ತೆರಳುತ್ತಾರೆ. ಆನಂತರ ರೇಣುಕಾಂಬೆ ದೇವಸ್ಥಾನದ ಆವರಣ ನಿರ್ಜನ ಪ್ರದೇಶವಾಗುತ್ತದೆ. ಈ ಸಮಯದಲ್ಲಿ ಅಂದರೆ ರಾತ್ರಿ ಸುಮಾರು 7 ರಿಂದ 8 ಗಂಟೆಯೊಳಗೆ ದೇಗು​ಲ​ದಲ್ಲಿ ಕಳವಿಗೆ ಯತ್ನ ನಡೆ​ಸಲಾ​ಗಿದೆ.

ಹಾಡಹಗಲೇ ನಡುರಸ್ತೆಯಲ್ಲಿ ಬೈಕ್‌ ಅಡ್ಡಗಟ್ಟಿ ಬಟ್ಟೆವ್ಯಾಪಾರಿ ಸುಲಿಗೆ!

ಬೆಳ್ಳಿ ಮುಖ​ವಾಡ ಕಿತ್ತ ದುರು​ಳ​ರು:

ದೇವಸ್ಥಾನದ ಪ್ರಧಾನ ಬಾಗಿಲಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಗರ್ಭಗುಡಿಗೆ ಪ್ರವೇಶಿಸಿ, ಗುಹೆಯಲ್ಲಿರುವ ದೇವಿಯ ಬೆಳ್ಳಿ ಮುಖವಾಡ ಕಿತ್ತು ದೇವಸ್ಥಾನದ ಆವರಣದಲ್ಲಿ ಎಸೆದಿದ್ದಾರೆ. ಅಲ್ಲದೇ, ಕಾಣಿಕೆ ಹುಂಡಿ ಒಡೆಯುವ ಮತ್ತು ಅಪಹರಿಸುವ ಪ್ರಯತ್ನ ನಡೆಸಿದ್ದಾರೆ. ಅನಂತರ ದೇವಸ್ಥಾನದ ಕೆಳಭಾಗದಲ್ಲಿರುವ ತ್ರಿಶೂಲದ ಬೈರಪ್ಪನ ದೇವಸ್ಥಾನದ ಬಾಗಿಲು ಬೀಗ ಮುರಿದು ಅಲ್ಲಿಯೂ ಕಳ್ಳತನ ಮಾಡಲು ಮುಂದಾಗಿದ್ದಾರೆ. ಅಲ್ಲಿ ಬೆಲೆ ಬಾಳುವ ವಸ್ತುಗಳು ಯಾವುದೂ ಇರಲಿಲ್ಲ ಎಂದು ತಿಳಿದುಬಂದಿದೆ. ಆಗಸ್ಟ್‌ 1ರಂದು ಅಧಿಕ ಹುಣ್ಣಿಮೆಯ ಪ್ರಯುಕ್ತ ದೇವಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸಿತ್ತು. ಈ ಸಂದರ್ಭ ಕಾಣಿಕೆ ಹುಂಡಿಗೆ ಹಣ ಮತ್ತು ಹರಕೆ ರೂಪದಲ್ಲಿ ಬೆಳ್ಳಿ, ಬಂಗಾರ ಸಂದಾಯ ಆಗಿರುತ್ತದೆ ಎಂದುಕೊಂಡು ಕಳ್ಳರು ಕಳವಿಗೆ ಸಂಚು ಹೂಡಿದ್ದರೆಂಬುದು ಇದ​ರಿಂದ ಬಯ​ಲಾ​ಗಿದೆ.

ದೇವ​ಸ್ಥಾನ ಸಮಿ​ತಿಗೆ ಮಾಹಿ​ತಿ:

ಪ್ರತಿನಿತ್ಯ ದೇವಸ್ಥಾನದ ಮುಂಭಾಗ ಮಲಗಲು ಬರುವ ಮಂಜಪ್ಪ ನೆಲಬಾಗಿಲು ಎಂಬ ವ್ಯಕ್ತಿ ಬುಧವಾರ ಎಂದಿನಂತೆ ರಾತ್ರಿ 8 ಗಂಟೆ ಸುಮಾರಿಗೆ ದೇವಸ್ಥಾನದ ಆವರಣಕ್ಕೆ ತೆರಳಿದ್ದಾರೆ. ಆಗ ದುಷ್ಕರ್ಮಿಗಳು ಕಳ​ವಿಗೆ ಪ್ರಯ​ತ್ನಿ​ಸಿ​ರು​ವುದು ತಿಳಿದುಬಂದಿದೆ. ತಕ್ಷಣ ದೇವಸ್ಥಾನದ ಅರ್ಚಕರು ಮತ್ತು ಸಂಬಂಧಪಟ್ಟದೇವಸ್ಥಾನ ಸಮಿತಿಗೆ ಮಾಹಿತಿ ತಿಳಿಸಿದ್ದಾರೆ.

ಅಧಿ​ಕಾ​ರಿ​ಗಳ ಭೇಟಿ, ಪರಿ​ಶೀ​ಲ​ನೆ:

ತಾಲೂಕು ದಂಡಾಧಿಕಾರಿ ಹುಸೇನ್‌ ಸರಕಾವಸ್‌ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್‌, ಗ್ರಾ.ಪಂ. ಸದಸ್ಯರಾದ ರೇಣುಕಾಪ್ರಸಾದ್‌, ಎಂ.ಪಿ. ರತ್ನಾಕರ, ತಾ.ಪಂ. ಮಾಜಿ ಸದಸ್ಯ ಸುನಿಲ್‌ಗೌಡ, ರಕ್ಷಣಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ ಶಿವಮೊಗ್ಗದಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಆಗಮಿಸಿ, ಕಳ್ಳತನ ಪ್ರಯತ್ನದ ಕಿಡಿ​ಗೇ​ಡಿ​ಗಳ ಪತ್ತೆಗೆ ಪೂರಕ ಕಾರ್ಯಾಚರಣೆ ನಡೆಸಿದ್ದಾರೆ.

ಸೊರಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಬೆಳಿಗ್ಗೆ ದೇಗುಲ ಸೇರಿದಂತೆ ಆವರಣವನ್ನು ಪುರೋಹಿತರು ಶುದ್ಧಗೊಳಿಸಿ, ಭಕ್ತರಿಗೆ ದೇವಿ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಪೂಜಾ ಕೈಂಕರ್ಯಗಳು ನೆರವೇರಿದವು.

ರೇಣುಕಾಂಬೆ ದೇವಸ್ಥಾನಕ್ಕೆ ರಕ್ಷಣೆಯೇ ಇಲ್ಲ

ರಾಜ್ಯ ಬೊಕ್ಕ​ಸಕ್ಕೆ ವರ್ಷಕ್ಕೆ ಕೋಟ್ಯಂತರ ರು. ಆದಾಯ ತರುವ ಈ ದೇವಸ್ಥಾನಕ್ಕೆ ಯಾವುದೇ ರೀತಿಯ ರಕ್ಷಣೆ ಇಲ್ಲ. ಜೊತೆಗೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಇಂಥ ಕಳವು ಯತ್ನದ ಘಟ​ನೆ​ಗಳು ಆಗಾಗ್ಗೆ ನಡೆಯುತ್ತಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗಿದೆ. ಮುಜರಾಯಿ ಮತ್ತು ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸಂಬಂಧಪಡುವ ಈ ದೇವಸ್ಥಾನಕ್ಕೆ ರಾಜ್ಯಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿದೆ. ದೇವಸ್ಥಾನದ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಗನ್‌ ಮ್ಯಾನ್‌, ವಾಚ್‌ ಮ್ಯಾನ್‌ ಯಾರನ್ನೂ ನೇಮಿಸಿಲ್ಲ. ಇದೇ ದುಷ್ಕ​ರ್ಮಿ​ಗ​ಳಿಗೆ ಕಳವು ಕೃತ್ಯ ನಡೆ​ಸಲು ದಾರಿ ಮಾಡಿಕೊಟ್ಟಂತಾಗಿದೆ ಎನ್ನುವುದು ಗ್ರಾಮಸ್ಥರು ಹಾಗೂ ಭಕ್ತರ ಆರೋಪ.

Shivamogga: ಚಂದ್ರಗುತ್ತಿಯ ರೇಣುಕಾಂಬ ದೇವಾಲಯದ ಹುಂಡಿ​ಯ​ಲ್ಲಿ 70.60 ಲಕ್ಷ ಕಾಣಿಕೆ ಸಂಗ್ರಹ

ಶ್ರೀ ರೇಣುಕಾಂಬಾ ದೇವಸ್ಥಾನ ಅಲ್ಲದೇ ಗ್ರಾಮದಲ್ಲಿಯೂ ಇಂಥಹ ಅವಘಡಗಳ ಆಗಾಗ್ಗೆ ನಡೆಯುತ್ತಿದ್ದರೂ ಸಂಬಂಧಪಟ್ಟಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರೇಣುಕಾಂಬಾ ದೇವಸ್ಥಾನ ಗ್ರೇಡ್‌-1ಗೆ ಸೇರುತ್ತದೆ. ದೇವಸ್ಥಾನದ ಸುತ್ತು-ಮುತ್ತ ಸಿಸಿ ಕ್ಯಾಮರಾ ಅಳವಡಿಸಬೇಕು. 24 ಗಂಟೆಯೂ ಕಾವಲುಗಾರರನ್ನು ನೇಮಿಸಬೇಕು. ತಹಸೀಲ್ದಾರರು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕು

- ರೇಣುಕಾಪ್ರಸಾದ್‌, ಗ್ರಾಪಂ ಸದಸ್ಯ, ಚಂದ್ರಗುತ್ತಿ