Asianet Suvarna News Asianet Suvarna News

ಮಂತ್ರ ಮಾಂಗಲ್ಯದ ಮೂಲಕ ಮದುವೆಯಾದ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ!

ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ನಗರದ ಖಾಸಗಿ ಹೋಟೆಲಿನಲ್ಲಿ ಭಾನುವಾರ ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹಾಗೂ ಎಲ್.ಎಲ್.ಬಿ ಓದುತ್ತಿರುವ ಎಂ.ಆರ್.ಹರೀಶ್ ಕುಮಾರ್ ಅವರ ಅಂತರಜಾತಿಯ ಪ್ರೇಮ ವಿವಾಹವು ಕುವೆಂಪು ಅವರ ಮಂತ್ರ ಮಾಂಗಲ್ಯ ಮೂಲಕ ನೆರವೇರಿತು. 

Chamarajanagar ADC Geetha Hudeda Married Through Mantra Mangalya At Mysuru gvd
Author
First Published Nov 27, 2023, 11:30 PM IST

ಮೈಸೂರು (ನ.27): ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ನಗರದ ಖಾಸಗಿ ಹೋಟೆಲಿನಲ್ಲಿ ಭಾನುವಾರ ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹಾಗೂ ಎಲ್.ಎಲ್.ಬಿ ಓದುತ್ತಿರುವ ಎಂ.ಆರ್. ಹರೀಶ್ ಕುಮಾರ್ ಅವರ ಅಂತರಜಾತಿಯ ಪ್ರೇಮ ವಿವಾಹವು ಕುವೆಂಪು ಅವರ ಮಂತ್ರ ಮಾಂಗಲ್ಯ ಮೂಲಕ ನೆರವೇರಿತು. ಇದಕ್ಕೂ ಮೊದಲು ಅವರು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಭಾವಚಿತ್ರಗಳಿಗೆ ಪುಷ್ಪಾರ್ಪಣೆ ನೆರವೇರಿಸಿದ ನಂತರ ಹಾರ ಬದಲಾಯಿಸಿಕೊಂಡರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕೆಂಗಲ್ ಗ್ರಾಮದಲ್ಲಿ ಶಿಕ್ಷಕರಾಗಿದ್ದ ಈ ಇಬ್ಬರ ಪರಿಚಯ ಸ್ನೇಹವಾಗಿ, ಪ್ರೇಮಿಗಳಾಗಿ ಮದುವೆಯಾಗುವ ಮೂಲಕ ಒಂದಾದರು. ಗೀತಾ ಅವರ ಹೆತ್ತವರಿಲ್ಲದ ಕಾರಣ ಅವರ ಚಿಕ್ಕಪ್ಪ, ನಿವೃತ್ತ ಸೈನಿಕ ಚೆನ್ನಬಸಪ್ಪ ಹುಡೇದ ಹಾಗೂ ಅವರ ಚಿಕ್ಕಮ್ಮ ಲಕ್ಷ್ಮಿ, ಹರೀಶ್ ಕುಮಾರ್ ಅವರ ತಂದೆ ಜಿ. ರುದ್ರಪ್ಪ ಹಾಗೂ ತಾಯಿ ಪಾರ್ವತಮ್ಮ ವೇದಿಕೆ ಮೇಲಿದ್ದು ಮದುಮಕ್ಕಳನ್ನು ಆಶೀರ್ವದಿಸಿದರು. 

ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರು ಮಂತ್ರ ಮಾಂಗಲ್ಯದ ಪ್ರತಿಜ್ಞಾವಿಧಿಯನ್ನು ಮದುಮಕ್ಕಳಿಗೆ ಹಾಗೂ ನೆರೆದವರಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ವಚನ ಇಲ್ಲವೆ ಮಂತ್ರ ಮಾಂಗಲ್ಯ ಮದುವೆ ಮಾಡಿ: ನಂತರ ಕುಂ. ವೀರಭದ್ರಪ್ಪ ಮಾತನಾಡಿ, 1983ರಲ್ಲಿ ಪುರೋಹಿತರ ನೆರವಿಲ್ಲದೆ ರಾಹುಕಾಲದಲ್ಲಿ ಮದುವೆಯಾದೆ. ನನ್ನ ಮೂರು ಮಕ್ಕಳ ಮದುವೆಯನ್ನು ವಚನ ಹಾಗೂ ಮಂತ್ರ ಮಾಂಗಲ್ಯ ಮೂಲಕ ಮದುವೆ ಮಾಡಿದೆ. ಎಲ್ಲರೂ ಚೆನ್ನಾಗಿದ್ದೇವೆ. ವಚನ ಇಲ್ಲವೆ ಮಂತ್ರ ಮಾಂಗಲ್ಯ ಮೂಲಕ ಮದುವೆ ಮಾಡಿ. ಈ ಮೂಲಕ ವೈದಿಕ ಪರಂಪರೆ ಧಿಕ್ಕರಿಸಿ ಎಂದು ಕರೆ ನೀಡಿದರು. 

ಅದ್ಧೂರಿ ವಿವಾಹ ಬದಲು ಮಂತ್ರಮಾಂಗಲ್ಯಕ್ಕೆ ಮುಂದಾದ ಸರ್ಕಾರಿ ಅಧಿಕಾರಿ!

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಂಚಗೇರಿ ಗ್ರಾಮದ ಗೀತಾ ಹುಡೇದ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮರಡಿಹಳ್ಳಿಯ ಹರೀಶ್ ಕುಮಾರ್ ಅವರು ಮದುವೆಯಾಗುವ ಮೂಲಕ ಪ್ರಾದೇಶಿಕ ಅಂತರ ಕಡಿಮೆ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು. ಜಿ. ಪ್ರಭು ಹಾಗೂ ‌ವಸಂತ್ ಮಾಧವ ಅವರು ಮದುವೆಗೆ ಸಂಬಂಧಿಸಿದ ಹಾಡುಗಳನ್ನು ಹಾಡಿದರು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ಎನ್. ಮಹೇಶ್, ಎಸ್. ಬಾಲರಾಜ್, ನಿರಂಜನ್, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಮೈಸೂರು ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಶಂಕರ ದೇವನೂರ, ಡಾ. ಮಾದೇವ ಭರಣಿ, ಡಾ. ಎಂ.ಎನ್. ತಳವಾರ ಮೊದಲಾದವರು ಇದ್ದರು.

Follow Us:
Download App:
  • android
  • ios