Asianet Suvarna News Asianet Suvarna News

ಬಿಜೆಪಿ ಟಿಕೆಟ್ ಡೀಲ್‌': ದೊಡ್ಡವರ ಹೆಸರು ಬರಲಿದೆ, ಚೈತ್ರಾ ಬಾಂಬ್‌

ಕಳೆದ ವಿಧಾನಸಭಾ ಚುನಾವಣೆ ವೇಳೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ 5 ಕೋಟಿ ರು. ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ಚೈತ್ರಾ ಕುಂದಾಪುರ ಹಾಗೂ ಚಿಕ್ಕಮಗಳೂರು ಜಿಲ್ಲೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರ್‌ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದರು. 

Chaitra Kundapura React to BJP Ticket Deal Case grg
Author
First Published Sep 15, 2023, 6:59 AM IST

ಬೆಂಗಳೂರು(ಸೆ.15):  ಉಡುಪಿ ಜಿಲ್ಲೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಸೆ ತೋರಿಸಿ 5 ಕೋಟಿ ರು. ವಂಚಿಸಿದ ಪ್ರಕರಣದ ಷ್ಯಡಂತ್ರದ ಹಿಂದೆ ಇಂದಿರಾ ಕ್ಯಾಂಟೀನ್ ಬಾಕಿ ಹಣದ ವಿಚಾರವಿದ್ದು, ಇದರಲ್ಲಿ ದೊಡ್ಡ ದೊಡ್ಡವರ ಹೆಸರುಗಳಿವೆ ಎಂದು ಪ್ರಕರಣದ ಪ್ರಮುಖ ಆರೋಪಿ ಹಿಂದೂ ಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಗುರುವಾರ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಸಿಬಿ ಕಸ್ಟಡಿಯಲ್ಲಿರುವ ಚೈತ್ರಾ ಕುಂದಾಪುರ, ವಿಚಾರಣೆಗೆ ತೆರಳುವಾಗ ಸಿಸಿಬಿ ಕಚೇರಿ ಬಳಿ ಮಾಧ್ಯಮಗಳ ಮುಂದೆ ''ಸ್ವಾಮೀಜಿ (ಬಳ್ಳಾರಿ ಜಿಲ್ಲೆ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ) ಬಂಧನವಾದರೆ ಸತ್ಯ ಹೊರಗೆ ಬರಲಿದೆ. ಎಲ್ಲ ದೊಡ್ಡ ದೊಡ್ಡವರ ಹೆಸರುಗಳು ಹೊರಗೆ ಬರುತ್ತವೆ'' ಎಂದು ಸ್ಫೋಟಕ ಹೇಳಿಕೆ ನೀಡಿದ್ದಾಳೆ. ಈ ಆರೋಪವನ್ನು ನಿರಾಕರಿಸಿರುವ ದೂರುದಾರ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು, ''ವಂಚನೆ ಪ್ರಕರಣದ ದಿಕ್ಕು ತಪ್ಪಿಸಲು ಇಂದಿರಾ ಕ್ಯಾಂಟೀನ್ ವಿಚಾರವನ್ನು ಚೈತ್ರಾ ಪ್ರಸ್ತಾಪಿಸಿದ್ದಾಳೆ. ಇಂದಿರಾ ಕ್ಯಾಂಟೀನ್‌ಗೂ ವಂಚನೆ ಕೃತ್ಯಕ್ಕೂ ಯಾವುದೇ ಸಂಬಂಧವಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌: ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

ಕಳೆದ ವಿಧಾನಸಭಾ ಚುನಾವಣೆ ವೇಳೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ 5 ಕೋಟಿ ರು. ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ಚೈತ್ರಾ ಕುಂದಾಪುರ ಹಾಗೂ ಚಿಕ್ಕಮಗಳೂರು ಜಿಲ್ಲೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರ್‌ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದರು. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಹಾಲಶ್ರೀ ಹಾಗೂ ಪ್ರಸಾದ್ ಬೈಂದೂರು ಸೇರಿದಂತೆ ಮತ್ತಿರರ ಪತ್ತೆಗೆ ತನಿಖೆ ನಡೆದಿದೆ. ಬಂಧಿತ ಆರೋಪಿಗಳನ್ನು ಸಿಸಿಬಿ ಕಸ್ಟಡಿಗೆ ಪಡೆದಿದೆ.

ದೊಡ್ಡ ದೊಡ್ಡವರ ಹೆಸರು ಬರಲಿದೆ:

ವಂಚನೆ ಪ್ರಕರಣದಲ್ಲಿ ಬುಧವಾರ ಬಂಧಿತಳಾಗಿದ್ದ ಚೈತ್ರಾ ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾತ್ರಿ ಕಳೆದಳು. ಪ್ರಕರಣದ ವಿಚಾರಣೆ ಸಲುವಾಗಿ ಗುರುವಾರ ಬೆಳಗ್ಗೆ 9 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಕೆಯನ್ನು ಅಧಿಕಾರಿಗಳು ಕರೆತಂದರು. ಆ ವೇಳೆ ಜೀಪಿಳಿದ ಕೂಡಲೇ ತನಗೆ ಎದುರಾದ ಮಾಧ್ಯಮಗಳ ಜತೆ ಮಾತನಾಡಿದ ಚೈತ್ರಾ, ತನ್ನ ವಿರುದ್ಧ ಷ್ಯಡಂತ್ರ ನಡೆದಿದೆ ಎಂದಿದ್ದಾಳೆ.

''ಸ್ವಾಮೀಜಿ (ಹಾಲಶ್ರೀ) ಸಿಕ್ಕಿ ಹಾಕಿಕೊಳ್ಳಲಿ. ಆಗ ಸತ್ಯ ಹೊರಗೆ ಬರುತ್ತದೆ. ಎಲ್ಲ ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತದೆ. ಸ್ವಾಮೀಜಿ ಸಿಕ್ಕಿ ಹಾಕಿಕೊಳ್ಳಲಿ ಸರ್ ಗೊತ್ತಾಗುತ್ತೆ. ಇಂದಿರಾ ಕ್ಯಾಂಟೀನ್‌ನದು ಬಿಲ್‌ ಪೆಂಡಿಂಗ್ ಇದೆ. ಅದಕ್ಕೊಸ್ಕರ ಈ ಷಡ್ಯಂತ್ರದ ಪ್ಲ್ಯಾನ್ ಮಾಡಿದ್ದಾರೆ. ನಾನು ಎ1 ಆರೋಪಿಯಾದರೂ ಆಗಿರಲಿ. ಸತ್ಯ ಹೊರ ಬರುತ್ತೆ'' ಎಂದು ನಗುತ್ತಲೇ ಹೊಸ ಬಾಂಬ್ ಸಿಡಿಸಿ ಸಿಸಿಬಿ ಕಚೇರಿಗೆ ಚೈತ್ರಾ ತೆರಳಿದ್ದಾಳೆ.

Follow Us:
Download App:
  • android
  • ios