ವೃತ್ತಿ ಶಿಕ್ಷ​ಣ​ದಲ್ಲಿ ಕನ್ನಡ ಬೋಧನೆ ಕಡ್ಡಾ​ಯ​ಗೊ​ಳಿ​ಸಿ|ವಿವಿ ಕುಲ​ಪ​ತಿ​ಗ​ಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್‌.ನಾಗಾಭರಣ ಸೂಚ​ನೆ| ಎಲ್ಲ ಕೃಷಿ ವಿವಿಗಳು ಆಡಳಿತದಲ್ಲಿ ಶೇ. 100 ರಷ್ಟು ಕನ್ನಡ ಅನುಷ್ಠಾನಗೊಳಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ನಾಗಾಭರಣ|  

ಬೆಂಗಳೂರು(ಸೆ.20): ರಾಜ್ಯ ಸರ್ಕಾರದ ಆದೇಶದಂತೆ ವಿಶ್ವ​ವಿ​ದ್ಯಾ​ಲ​ಯ​ಗ​ಳಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಶೇ.5ರಷ್ಟುಸೀಟು ಕಾಯ್ದಿರಿಸಬೇಕು ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡ ಬೋಧನೆ ಕಡ್ಡಾಯಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್‌.ನಾಗಾಭರಣ ಹೇಳಿದ್ದಾರೆ. 

ಶನಿವಾರ ವಿಧಾನಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಮಾತನಾಡಿದ ಅವರು, ವಿವಿಯಲ್ಲಿ ವೃತ್ತಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಕನ್ನಡ ಬೋಧನೆ ಕಡ್ಡಾಯಗೊಳಿಸಿ. ಈ ಕುರಿತು ಉನ್ನತ ಶಿಕ್ಷಣ ಪರಿಷತ್ತು ಆದೇಶಿಸಿದ್ದರೂ ಕನ್ನಡ ಪಠ್ಯ ಬೋಧನೆ ಮಾಡದಿರುವುದು ಎಷ್ಟಸರಿ ಎಂಬುದನ್ನು ಆತ್ಮಶೋಧನೆ ಮಾಡಿಕೊಳ್ಳಿ ಎಂದರು.

ಮೆಟ್ರೋದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ: ನಾಗಾಭರಣ

ರಾಜ್ಯದ ಕೃಷಿ ವಿವಿಗಳ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬೆಂಗಳೂರು, ಶಿವಮೊಗ್ಗ, ಧಾರವಾಡ ಹಾಗೂ ರಾಯಚೂರು ಕೃಷಿ ವಿವಿಗಳಲ್ಲಿ ಎರಡು ಸೆಮಿಸ್ಟರ್‌ಗಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಬೋಧಿಸುವಂತೆ ಸೂಚಿಸಿದರು. ಕನ್ನಡ ಭಾಷೆಯಾಗಿ ಕಲಿಸುವಲ್ಲಿ ಪ್ರೊ.ಹಿ.ಚಿ.ಬೋರಲಿಂಗಯ್ಯನವರ ವರದಿ ಹಾಗೂ ಸರ್ಕಾರ ನಿರ್ದೇಶನ ಪಾಲಿಸದಿದ್ದಕ್ಕೆ ಬೇಸರ ಹೊರಹಾಕಿದರು. ಇನ್ನು ಎಲ್ಲ ಕೃಷಿ ವಿವಿಗಳು ಆಡಳಿತದಲ್ಲಿ ಶೇ. 100 ರಷ್ಟು ಕನ್ನಡ ಅನುಷ್ಠಾನಗೊಳಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಧಾರವಾಡ ಕೃಷಿ ವಿವಿಯಲ್ಲಿ ಕೂಡಲೇ ಪಠ್ಯಪುಸ್ತಕ ರಚನಾ ಸಮಿತಿ ಸಭೆ ಕರೆಯುವಂತೆ ಸೂಚಿಸಿದರು.

ಜಾಲತಾಣ ಕನ್ನಡೀಕರಿಸಿ ಆ ಕುರಿತು ವರದಿಯನ್ನು ಮುಂದಿನ ಮೂರು ತಿಂಗಳಲ್ಲಿ ಪ್ರಾಧಿಕಾರಕ್ಕೆ ನೀಡುವುದಾಗಿ ಸಭೆಯಲ್ಲಿದ್ದ ಎಲ್ಲ ವಿವಿಗಳ ಕುಲಪತಿಗಳು ಭರವಸೆ ನೀಡಿದರು. ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ್‌ ಮತ್ತಿತರರು ಪಾಲ್ಗೊಂಡಿದ್ದರು.