ಮತದಾರರ ಪಟ್ಟಿ ಡಿಲೀಟ್ ಪ್ರಕರಣ ತನಿಖೆಗೆ ಆಗಮಿಸಿದ ಕೇಂದ್ರ ತಂಡ
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿನ 6 ಲಕ್ಷ ಮತದಾರರ ಡಿಲೀಟ್ ಮಾಡಿರುವ ಪ್ರಕರಣ ಮತ್ತು ಚಿಲುಮೆ ಸಂಸ್ಥೆಯ ಮತದಾರರ ಮಾಹಿತಿ ಕಳವು ಹಗರಣ ಕುರಿತು ವಿಸ್ತೃತ ಮಾಹಿತಿ ಸಂಗ್ರಹಿಸಲು ಕೇಂದ್ರ ಚುನಾವಣಾ ಆಯೋಗದ ತಂಡವೊಂದು ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಆಗಮಿಸಿದೆ.
ಬೆಂಗಳೂರು (ನ.22) : ರಾಜ್ಯ ರಾಜಧಾನಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿನ 6 ಲಕ್ಷ ಮತದಾರರ ಡಿಲೀಟ್ ಮಾಡಿರುವ ಪ್ರಕರಣ ಮತ್ತು ಚಿಲುಮೆ ಸಂಸ್ಥೆಯ ಮತದಾರರ ಮಾಹಿತಿ ಕಳವು ಹಗರಣ ಕುರಿತು ವಿಸ್ತೃತ ಮಾಹಿತಿ ಸಂಗ್ರಹಿಸಲು ಕೇಂದ್ರ ಚುನಾವಣಾ ಆಯೋಗದ ತಂಡವೊಂದು ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಆಗಮಿಸಿದೆ. ಈಗ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಇಲ್ಲಿಗೆ ಭೇಟಿ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ರಾಜ್ಯದಲ್ಲಿ 2023ರ ಚುನಾವಣಾ ಕಾವು ಜೋರಾಗಿದ್ದು, ಈ ವಿಚಾರಕ್ಕೆ ಸಂಬಂಧಪಟ್ಟ ಎಲ್ಲ ಘಟನೆಗಳೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇತ್ತೀಚೆಗೆ ಬಿಬಿಎಂಪಿ (BBMP) ಮತದಾರರ ಪಟ್ಟಿಯಿಂದ 6 ಲಕ್ಷ ಮತದಾರರನ್ನು (Voters) ಕೈಬಿಡಲಾಗಿತ್ತು. ಇದನ್ನು ಬೇಕಂತಲೇ ಮಾಡಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಚಿಲುಮೆ (Chlilume) ಸಂಸ್ಥೆಯ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಮತಗಟ್ಟೆ ಅಧಿಕಾರಿಗಳ ನಕಲಿ ಗುರುತಿನ ಚೀಟಿ (Fake Identity card) ಮಾಡಿಸಿಕೊಂಡು ಮತದಾರರಿಗೆ ಮೋಸ ಮಾಡಿಸುವ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಇದರ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷ ಸೇರಿ ವಿವಿಧ ಪಕ್ಷಗಳಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಚಿಲುಮೆ ಸಂಸ್ಥೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಅನುಮತಿ ಕೊಡಲಾಗಿದೆ ಎಂದು ತಿರುಗೇಟು (Boomerang) ನೀಡಿದೆ. ಈಗ ಚಿಲುಮೆ ಸಂಸ್ಥೆಯ ಹಗರಣ ಮತ್ತು ಇದಕ್ಕೆ ಬೆಂಬಲ (Support) ನೀಡಿದವರ ಪತ್ತೆ ಕುರಿತು ದೂರು ಕೇಂದ್ರ ಚುನಾವಣಾ ಆಯೋಗಕ್ಕೆ ತಲುಪಿದೆ.
ರಾಜ್ಯಾದ್ಯಂತ ಮತದಾರರ ವಿವರಕ್ಕೆ 'ಚಿಲುಮೆ' ಕನ್ನ!
ರಾಜ್ಯ ಆಯುಕ್ತರೊಂದಿಗೆ ಚರ್ಚೆ: ಮತದಾರರ ಪಟ್ಟಿಯ ಮಾಹಿತಿ ಕಳವು ಮತ್ತು ಡಿಲೀಟ್ ಪ್ರಕರಣದ ಜಾಲ ಬೇಧಿಸಲು ಕೇಂದ್ರ ಚುನಾವಣಾ ಆಯೋಗ (Central Election Commission) ದಿಂದ ಸೀನಿಯರ್ ಡೆಪ್ಯೂಟಿ ಎಲೆಕ್ಷನ್ ಕಮಿಷನರ್ ಅಜಯ್ ಬಾದು (Ajay badu) ನೇತೃತ್ವದ ತಂಡ ರಾಜ್ಯಕ್ಕೆ ಆಗಮಿಸಿ ತನಿಖೆ ಕೈಗೊಂಡಿದೆ. ರಾಜ್ಯ ಚುನಾವಣಾ ಆಯೋಗದ ಕಛೇರಿಗೆ ಭೇಟಿ ನೀಡಿರುವ ತಂಡ ಮೊದಲನೆಯದಾಗಿ ಚಿಲುಮೆ ಸಂಸ್ಥೆಯ ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ಹೆಸರು ಡಿಲೀಟ್ ವಿಚಾರವಾಗಿ ಮಾಹಿತಿ ಪಡೆದುಕೊಳ್ಳುತ್ತಿದೆ. ರಾಜ್ಯ ಆಯೋಗದ ಆಯುಕ್ತ ಮನೋಜ್ ಕುಮಾರ್ ಮೀನಾ (Manoj Kumar Meena) ಅವರೊಂದಿಗೆ ಚರ್ಚೆ ಮಾಡುತ್ತಿದೆ.
ಕುತೂಹಲ ಕೆರಳಿಸಿದ ನಗರ ಪೊಲೀಸ್ ಆಯುಕ್ತರ ಭೇಟಿ: ಕೇಂದ್ರ ಚುನಾವಣಾ ಅಧಿಕಾರಿಗಳ ತಂಡದಿಂದ ರಾಜ್ಯ ಮುಖ್ಯಚುನಾವಣಾಧಿಕಾರಿಗಳ ಭೇಟಿಯ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Prathap Reddy) ಆಗಮಿಸಿದ್ದಾರೆ. ಶೇಷಾದ್ರಿಪುರದಲ್ಲಿರುವ ರಾಜ್ಯ ಮುಖ್ಯ ಚುನಾವಣಾ ಕಚೇರಿಗೆ ಆಗಮಿಸಿ, ಮನೋಜ್ ಕುಮಾರ್ ಮೀನಾ ಅವರೊಂದಿಗೆ ಕೆಲವು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಈಗಾಗಲೇ ಮತದಾರರ ಮಾಹಿತಿ ಕಳವು (Information theft) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯನಿರ್ದೇಶಕ ರೇಣುಕಾ ಪ್ರಸಾದ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಧರ್ಮೇಶ್ ಬಂಧಿತರಾಗಿದ್ದು ಹಾಗೂ ಮುಖ್ಯಸ್ಥ (Chief) ರವಿಕುಮಾರ್ (Ravikumar) ಅವರನ್ನು ಬಂಧಿಸಲಾಗಿದೆ. ಜತೆಗೆ ಸಾಪ್ಟ್‌ವೇರ್ (Software) ಡೆವಲಪ್ ಮಾಡಿಕೊಟ್ಟ ವ್ಯಕ್ತಿಯನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಂದ ಚುನಾವಣಾ ಆಯೋಗ ಮಾಹಿತಿ ಪಡೆದುಕೊಳ್ಳುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಕೊನೆಗೂ ಅರೆಸ್ಟ್
ನ್ಯಾಯಾಂಗ ತನಿಖೆಗೆ ಎಎಪಿ ಆಗ್ರಹ: ಚಿಲುಮೆ ಸಂಸ್ಥೆಯಿಂದ ಮತದಾರರ ಪಟ್ಟಿ ಅಕ್ರಮ (Illegal) ತಿದ್ದುಪಡಿ ಕುರಿತ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (High court judge) ನೇತೃತ್ವದಲ್ಲಿ ತನಿಖೆಗೆ ವಹಿಸಬೇಕು ಎಂದು ಆಮ್ ಆದ್ಮಿ ಪಕ್ಷದಿಂದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಮನೋಜ್ ಕುಮಾರ್ ಮೀನಾ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಈ ಕುರಿತು ಎಎಪಿ ಮುಖಂಡ ಬ್ರಿಜೇಶ್ ಕಾಳಪ್ಪ (Brijesh Kalappa) ಮಾತನಾಡಿ, ಚಿಲುಮೆ ಅಕ್ರಮದ ಬಗ್ಗೆ ಕೋರ್ಟ್ ಮೂಲಕ ಸೂಕ್ತ ತನಿಖೆ ಆಗಬೇಕು. ಸಾಕಷ್ಟು ಹೆಸರನ್ನ ಮತದಾರರ ಪಟ್ಟಿಯಲ್ಲಿ ಕಾಣೆಯಾಗುವಂತೆ ಮಾಡಿದ್ದಾರೆ. ಪ್ರಮಾಣಿಕವಾಗಿ ಚುನಾವಣೆ ಎದುರಿಸಲು ಆಗದೇ ಇರುವವರು ಖಾಸಗಿ ಸಂಸ್ಥೆಯ ಮೂಲಕ (ಎನ್‌ಜಿಒ) ಮೂಲಕ ಅಕ್ರಮ ಮಾಡುತ್ತಿದ್ದಾರೆ. ಎಲ್ಲಾ ಅಕ್ರಮಗಳು ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆ (Punishment) ಆಗಬೇಕಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.