ರಾಜ್ಯಾದ್ಯಂತ ಮತದಾರರ ವಿವರಕ್ಕೆ 'ಚಿಲುಮೆ' ಕನ್ನ!

  • ರಾಜ್ಯದೆಲ್ಲೆಡೆ ಮತದಾರರ ಮಾಹಿತಿಗೆ ‘ಚಿಲುಮೆ’ ಕನ್ನ!
  • ಟಾಪ್‌- ಹೊಸ ತಿರುವು
  •  ಜಾತಿವಾರು, ಗುರುತಿನ ಚೀಟಿ ಇಲ್ಲದ ಮತದಾರರ ವಿವರ ಅಭ್ಯರ್ಥಿಗಳಿಗೆ ಹಸ್ತಾಂತರ
  • ಪೊಲೀಸರಿಂದ ರವಿಕುಮಾರ್‌ ತೀವ್ರ ವಿಚಾರಣೆ
Chilume Enterprises stole voter information bengaluru rav

ಬೆಂಗಳೂರು (ನ.22) : ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆ ತೀವ್ರಗೊಳಿಸಿರುವ ಬೆಂಗಳೂರಿನ ಹಲಸೂರು ಗೇಟ್‌ ಠಾಣೆ ಪೊಲೀಸರು, ಪ್ರಮುಖ ಆರೋಪಿ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿ ರವಿಕುಮಾರ್‌, ಡಿಜಿಟಲ್‌ ಸಮೀಕ್ಷಾ ಆ್ಯಪ್‌ ಮುಖಾಂತರ ಬಿಬಿಎಂಪಿ ವ್ಯಾಪ್ತಿಯ ಮತ ಕ್ಷೇತ್ರಗಳು ಮಾತ್ರವಲ್ಲದೆ, ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮಾಹಿತಿ ಸಂಗ್ರಹಿಸಿ ಇರಿಸಿದ್ದ. ಕ್ಷೇತ್ರದ ಒಟ್ಟು ಜನಸಂಖ್ಯೆ, ಮಹಿಳೆಯರ ಸಂಖ್ಯೆ, ಪುರುಷರ ಸಂಖ್ಯೆ, ಜಾತಿವಾರು ಮತದಾರರ ಸಂಖ್ಯೆ, ಯುವ ಮತದಾರರ ಸಂಖ್ಯೆ, ಮತದಾನದ ಗುರುತಿನ ಚೀಟಿ ಇಲ್ಲದವರ ಮಾಹಿತಿ, ಗುರುತಿನ ಚೀಟಿ ಇದ್ದು ಕ್ಷೇತ್ರದಿಂದ ಹೊರಗಿರುವ ಮತದಾರರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಈ ಮತದಾರರ ಮಾಹಿತಿಯನ್ನು ಚುನಾವಣಾ ಅಭ್ಯರ್ಥಿಗಳಿಗೆ ಗೌಪ್ಯವಾಗಿ ನೀಡುತ್ತಿದ್ದ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Bengaluru: ಚಿಲುಮೆಗೆ ಅನುಮತಿ ನೀಡಿದ್ದು ಸರ್ಕಾರವಲ್ಲ: ಅನುಮೋದನೆ ಕೊಟ್ಟಿದ್ದು ಚುನಾವಣಾಧಿಕಾರಿ

ಚಿಲುಮೆ ಸಂಸ್ಥೆಯ ಸ್ಥಾಪನೆ, ಕಾರ್ಯ ಕ್ಷೇತ್ರ, ನಿರ್ದೇಶಕರು, ಹಣಕಾಸು ವ್ಯವಹಾರ ಸೇರಿದಂತೆ ಪ್ರತಿ ಚಟುವಟಿಕೆಗಳ ಬಗ್ಗೆ ಪೊಲೀಸರು ಆರೋಪಿಯನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲೆಲ್ಲಿ ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ. ಸಂಗ್ರಹ ಮಾಹಿತಿಯನ್ನು ಯಾರೊಂದಿಗೆ ಹಂಚಿಕೊಳ್ಳಲಾಗಿದೆ. ಯಾವ ರಾಜಕಾರಣಿಗಳೊಂದಿಗೆ ಸಂಪರ್ಕವಿದೆ ಎಂಬುದರ ಬಗ್ಗೆಯೂ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಆಡಳಿತಾಧಿಕಾರಿಗೆ ಶೋಧ:

ಚಿಲುಮೆ ಸಂಸ್ಥೆಯ ಆಡಳಿತಾಧಿಕಾರಿ ಲೋಕೇಶ್‌ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರ ವಿಶೇಷ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿವೆ. ಈತ ಚಿಲುಮೆ ಸಂಸ್ಥೆಯ ಸಿಬ್ಬಂದಿಗೆ ‘ಬ್ಲಾಕ್‌ ಲೆವಲ್‌ ಆಫೀಸರ್‌’(ಬಿಎಲ್‌ಓ) ಎಂದು ಗುರುತಿನ ಚೀಟಿ ನೀಡಿ, ಮತದಾರರ ಮಾಹಿತಿ ಸಂಗ್ರಹಿಸಿದ್ದ ಎನ್ನಲಾಗಿದೆ. ಈತನ ಬಂಧನದ ಬಳಿಕ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಯಾರಿಗೆಲ್ಲಾ ನೀಡಲಾಗಿತ್ತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಚುನಾವಣಾ ಆಯೋಗದ ಗುರುತಿನ ಚೀಟಿ ಪತ್ತೆ

ಬಂಧಿತ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ಬಳಿ ಕೇಂದ್ರ ಚುನಾವಣಾ ಆಯೋಗದ ಐಡಿ ಕಾರ್ಡ್‌ (ಗುರುತಿನ ಚೀಟಿ) ಪತ್ತೆಯಾಗಿದೆ. ಮತದಾರರ ಮಾಹಿತಿ ಸಂಗ್ರಹಕ್ಕೆ ಚಿಲುಮೆ ಸಂಸ್ಥೆಯ ಸಿಬ್ಬಂದಿಗೆ ಬಿಎಲ್‌ಓ ಗುರುತಿನ ಚೀಟಿ ನೀಡಲಾಗಿತ್ತು. ಈ ಗುರುತಿನ ಚೀಟಿ ಹಾಕಿಕೊಂಡು ಮತದಾರರ ಮನೆಗೆ ನೇರವಾಗಿ ತೆರಳಿ ಮತದಾರರ ಮಾಹಿತಿ, ಆಧಾರ್‌ ಮಾಹಿತಿ ಸಂಗ್ರಹಿಸಿದ್ದಾರೆ. ನಗರದ ಕ್ಷೇತ್ರ ಚುನಾವಣಾಧಿಕಾರಿಗಳೇ ಮತದಾರರ ಮಾಹಿತಿ ಸಂಗ್ರಹಕ್ಕೆ ಚಿಲುಮೆ ಸಂಸ್ಥೆಗೆ ಸಾಥ್‌ ನೀಡಿದ್ದಾರೆ. ಚಿಲುಮೆ ಸಂಸ್ಥೆ ಸಿಬ್ಬಂದಿ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸುವ ವಿಚಾರ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದರು ಎನ್ನಲಾಗಿದೆ. ಹೀಗಾಗಿ ನಗರದ 28 ಚುನಾವಣಾಧಿಕಾರಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಂಬಂಧ ಈಗಾಗಲೇ ನೋಟಿಸ್‌ ಜಾರಿ ಮಾಡಿದ್ದಾರೆ. ಸೋಮವಾರ ಐವರು ಆರ್‌ಓಗಳ ವಿಚಾರಣೆ ಮಾಡಲಾಗಿದೆ.

ವಕೀಲರ ಭೇಟಿಗೆ ಬಂದಾಗ ಪೊಲೀಸರ ಬಲೆಗೆ !

ಮತದಾರರ ಮಾಹಿತಿ ಕಳವು ಆರೋಪದಡಿ ಚಿಲುಮೆ ಸಂಸ್ಥೆ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ತಲೆಮರೆಸಿಕೊಂಡಿದ್ದ. ಕಳೆದ ನಾಲ್ಕು ದಿನಗಳಿಂದ ಪೊಲೀಸರು ಆರೋಪಿಯ ಬಂಧನಕ್ಕೆ ಶೋಧಿಸುತ್ತಿದ್ದರು. ಭಾನುವಾರ ರಾತ್ರಿ ರವಿಕುಮಾರ್‌ ವಕೀಲರನ್ನು ಭೇಟಿಯಾಗಲು ಲಾಲ್‌ಬಾಗ್‌ ಬಳಿ ಬರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಹಲಸೂರು ಗೇಟ್‌ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಆರೋಪಿಯು ಮೊಬೈಲ್‌ ಕಳೆದು ಹೋಗಿದೆ ಎಂದು ವಿಚಾರಣೆ ವೇಳೆ ಡ್ರಾಮಾ ಮಾಡುತ್ತಿದ್ದು, ಪೊಲೀಸರು ಮೊಬೈಲ್‌ ಬಗ್ಗೆ ಬಾಯಿ ಬಿಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತದಾರರ ಮಾಹಿತಿ ಕಳ್ಳತನ, ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್‌, ಚುನಾವಣಾ ಆಯೋಗದಿಂದ ಸ್ಪಷ್ಟನೆ!

ಮತ್ತೊಬ್ಬ ಆರೋಪಿ ಬಂಧನ

ಮತದಾರರ ಮಾಹಿತಿ ಕಳವು ಪ್ರಕರಣ ಚುರುಕುಗೊಳಿಸಿರುವ ಕೇಂದ್ರ ವಿಭಾಗದ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಚಿಲುಮೆ ಸಂಸ್ಥೆಯ ಪ್ರಾಜೆಕ್ಟ್ ಎಕ್ಸಿಕ್ಯುಟಿವ್‌ ಪ್ರಜ್ವಲ್‌ ಬಂಧಿತ. ಈತನ ಬಂಧನದೊಂದಿಗೆ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಈ ನಡುವೆ ಪೊಲೀಸರು ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌, ನಿರ್ದೇಶಕ ಕೆಂಪೇಗೌಡ ಹಾಗೂ ಪ್ರಾಜೆಕ್ಟ್ ಎಕ್ಸಿಕ್ಯುಟಿವ್‌ ಪ್ರಜ್ವಲ್‌ನನ್ನು ಸೋಮವಾರ 4ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 12 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

Latest Videos
Follow Us:
Download App:
  • android
  • ios