ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ಕೊನೆಗೂ ಅರೆಸ್ಟ್‌

ಮತದಾರರ ಮಾಹಿತಿ ಕಳವು ಪ್ರಕರಣದ ಪ್ರಮುಖ ಆರೋಪಿ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್‌ನನ್ನು ಹಲಸೂರುಗೇಟ್‌ ಠಾಣೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. 

Police Arrests Voter ID Scam Kingpin And Chilume Society director Ravi kumar In Bengaluru gvd

ಬೆಂಗಳೂರು (ನ.21): ಮತದಾರರ ಮಾಹಿತಿ ಕಳವು ಪ್ರಕರಣದ ಪ್ರಮುಖ ಆರೋಪಿ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್‌ನನ್ನು ಹಲಸೂರುಗೇಟ್‌ ಠಾಣೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಆರೋಪ ಕೇಳಿ ಬಂದ ಬೆನ್ನಲ್ಲೇ ಕಳೆದ ಮೂರು ದಿನಗಳಿಂದ ರವಿಕುಮಾರ್‌ ತಲೆಮರೆಸಿಕೊಂಡಿದ್ದ. ರವಿಕುಮಾರ್‌ ಸೇರಿದಂತೆ ಕೆಲವರ ಬಂಧನಕ್ಕೆ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಬಂಧನಕ್ಕೆ ಹಗಲಿರುಳು ಲೆಕ್ಕಿಸದೆ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು, ನಗರದ ಹೊರವಲಯದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ರವಿಕುಮಾರ್‌ನನ್ನು ಭಾನುವಾರ ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪರಿಷ್ಕರಣೆ ಹಾಗೂ ಜಾಗೃತಿ ಮೂಡಿಸಲು ಚಿಲುಮೆ ಸಂಸ್ಥೆ ಅನುಮತಿ ಪಡೆದುಕೊಂಡಿತ್ತು. ಚಿಲುಮೆ ಸಂಸ್ಥೆ ಸಿಬ್ಬಂದಿ ಸಂಗ್ರಹಿಸಿದ ಮತದಾರರ ಮಾಹಿತಿಯನ್ನು ಪ್ರಮುಖ ಆರೋಪಿ ರವಿಕುಮಾರ್‌ ಅಕ್ರಮವಾಗಿ ಅನ್ಯರಿಗೆ ಹಂಚಿಕೆ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಚಿಲುಮೆ ಸಂಸ್ಥೆಯ ಕಚೇರಿಯನ್ನು ಖಾಲಿ ಮಾಡಿದ್ದ ಪ್ರಮುಖ ಆರೋಪಿ ರವಿಕುಮಾರ್‌ ಸೇರಿದಂತೆ ಸಂಸ್ಥೆಯ ನಿರ್ದೇಶಕರು ಹಾಗೂ ಅಧಿಕಾರಿಗಳು ತಲೆಮರೆಸಿಕೊಂಡಿದ್ದರು. ಈ ಪ್ರಕರಣವನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ್ದ ಪೊಲೀಸರು, ಸಂಸ್ಥೆಯ ನಿರ್ದೇಶಕ ಕೆಂಪೇಗೌಡ, ಸಂಸ್ಥೆಯ ಅಧಿಕಾರಿಗಳಾದ ರೇಣುಕಾಪ್ರಸಾದ್‌ ಹಾಗೂ ಧರ್ಮೇಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 8 ದಿನ ಕಸ್ಟಡಿಗೆ ಪಡೆದುಕೊಂಡಿದ್ದರು.

ಚಿಲುಮೆಗೆ ಅನುಮತಿ ನೀಡಿದ್ದು ಸರ್ಕಾರವಲ್ಲ: ಅನುಮೋದನೆ ಕೊಟ್ಟಿದ್ದು ಚುನಾವಣಾಧಿಕಾರಿ

ಸಾಫ್ಟ್‌ವೇರ್‌ ಡೆವಲಪರ್‌ ವಶಕ್ಕೆ: ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇಂದ್ರ ವಿಭಾಗದ ಪೊಲೀಸರು ‘ಚಿಲುಮೆ’ ಸಂಸ್ಥೆಗೆ ಆ್ಯಪ್‌ ಅಭಿವೃದ್ಧಿಪಡಿಸಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಸಂಜೀವ್‌ ಶೆಟ್ಟಿಎಂಬಾತನನ್ನು ಭಾನುವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಜೀವ್‌ ಶೆಟ್ಟಿಚಿಲುಮೆ ಸಂಸ್ಥೆಗೆ ಡಿಜಿಟೆಲ್‌ ಸಮೀಕ್ಷಾ ಆ್ಯಪ್‌ ಅಭಿವೃದ್ಧಿಪಡಿಸಿ ನೀಡಿದ್ದರು. ಸದ್ಯ ಸಂಸ್ಥೆಯ ಆ್ಯಪ್‌ ಸರ್ವರ್‌ ಡೌನ್‌ ಆಗಿದೆ. ಹೀಗಾಗಿ ಆ್ಯಪ್‌ ಅಭಿವೃದ್ಧಿಪಡಿಸಿದ್ದ ಸಂಜೀವ್‌ ಶೆಟ್ಟಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಸಂಜೀವ್‌ ಶೆಟ್ಟಿ ಅವರಿಂದ ಆ್ಯಪ್‌ ಓಪನ್‌ ಮಾಡಿಸಿರುವ ಪೊಲೀಸರು, ಯಾವ ಕ್ಷೇತ್ರದ ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ. ಈ ಮಾಹಿತಿಗೂ ಚುನಾವಣಾ ಆಯೋಗದ ಮತದಾರರ ಪಟ್ಟಿಗೂ ಏನಾದರೂ ಸಂಬಂಧವಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಜತೆಗೆ ಆ್ಯಪ್‌ ಅಭಿವೃದ್ಧಿಪಡಿಸುವ ಹಿಂದಿನ ಉದ್ದೇಶವೇನು, ಆ್ಯಪ್‌ನಲ್ಲಿ ಏನೆಲ್ಲಾ ಮಾಹಿತಿ ಸಂಗ್ರಹಿಸಲು ಅವಕಾಶವಿದೆ, ಇಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂಜೀವ್‌ ಶೆಟ್ಟಿಅವರಿಂದ ಮಾಹಿತಿ ಪಡೆಯುತ್ತಿದ್ದಾರೆ.

ದತ್ತಾಂಶದ ಬಗ್ಗೆ ಮಾಹಿತಿ: ಈಗಾಗಲೇ ಬಂಧನಕ್ಕೆ ಒಳಗಾಗಿರುವ ಚಿಲುಮೆ ಸಂಸ್ಥೆಯ ನಿರ್ದೇಶಕ ಕೆಂಪೇಗೌಡನಿಂದ ಸಂಸ್ಥೆಯ ಹಣಕಾಸು ವ್ಯವಹಾರದ ಬಗ್ಗೆ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಂತೆಯೆ ಆ್ಯಪ್‌ನಲ್ಲಿ ಸಂಗ್ರಹಿಸಿದ ದತ್ತಾಂಶಗಳ ಬಗ್ಗೆ ಕೆಂಪೇಗೌಡ ಮಾಹಿತಿ ನೀಡಿದ್ದಾನೆ. ಸಮೀಕ್ಷೆ ವೇಳೆ ಮತ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಕಲೆ ಹಾಕಿರುವುದು ಗೊತ್ತಾಗಿದೆ. ಮತದಾರರ ಜಾತಿ, ಉಪಜಾತಿ, ಲಿಂಗ ಸೇರಿದಂತೆ ಮತ ಕ್ಷೇತ್ರದ ಸಂಪೂರ್ಣ ಮಾಹಿತಿ ಕಲೆ ಹಾಕಲಾಗಿದೆ. ಈ ಮಾಹಿತಿಯನ್ನು ರವಿಕುಮಾರ್‌ ಯಾವ ರೀತಿ ಬಳಸಿಕೊಳ್ಳುತ್ತಿದ್ದ ಎಂಬುದು ಮುಂದಿನ ತನಿಖೆಯಲ್ಲಿ ಬೆಳಕಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತದಾರರ ಮಾಹಿತಿ ಕಳವು: ಚಿಲುಮೆ ವಿರುದ್ಧ ಬಿಬಿಎಂಪಿ ದೂರು

28 ಆರ್‌ಒಗಳಿಗೆ ನೋಟಿಸ್‌: ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ಬಿಬಿಎಂಪಿಯ 28 ಕಂದಾಯ ಅಧಿಕಾರಿಗಳಿಗೆ (ಮತಗಟ್ಟೆಅಧಿಕಾರಿ) ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ. ಸೋಮವಾರ ಪ್ರತಿಯೊಬ್ಬರನ್ನೂ ಕರೆದು ವಿಚಾರಣೆ ಮಾಡಲಾಗುವುದು. ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ. 15 ಮಂದಿಯನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ತನಿಖೆ ಭಾಗವಾಗಿ ಬಂಧಿತರ ಲ್ಯಾಪ್‌ಟಾಪ್‌ ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದ್ದು, ತನಿಖೆ ಮುಂದುವರೆದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios